ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ, ಈ ವಿಷಯದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸವಾಲು ಹಾಕುವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ದಲಿತರನ್ನು ಸಿಎಂ ಮಾಡುವ ಅವಕಾಶ ಈಗ ಬಿಜೆಪಿಗೆ ಬಂದಿದೆ ಎಂದರು. ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಕಟೀಲ್ ಅವರು ನನಗೆ ಹೇಳಿದ್ದರು. ನಮ್ಮಲ್ಲಿ ದಲಿತರು ಸಿಎಂ ಆಗಿದ್ದಾರೆ. ಹೀಗಾಗಿ ಸದ್ಯ ಅವರಿಗೆ ಆ ಅವಕಾಶ ಇದೆ, ಕಟೀಲ್ ದಲಿತರನ್ನ ಸಿಎಂ ಮಾಡಲಿ. ಯಡಿಯೂರಪ್ಪರನ್ನ ಹೇಗಿದ್ದರೂ ತೆಗೀತಾರೆ, ಈಗ ದಲಿತರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಿ. ದಲಿತರ ಬಗ್ಗೆ ಕಟೀಲ್ ಗೆ ಪ್ರೀತಿ ಇದೆ ಅಲ್ವಾ, ಹಾಗಾದ್ರೆ ಸಿಎಂ ಮಾಡಲಿ. ಸಾಮಾಜಿಕ ನ್ಯಾಯ ಇದೆ ಅಂತ ಹೇಳ್ತಾರೆ, ಹೀಗಾಗಿ ತಕ್ಷಣ ಬಿಜೆಪಿಯವರು ದಲಿತರನ್ನ ಸಿಎಂ ಮಾಡಲಿ ಎಂದಿದ್ದಾರೆ.
ಜನಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾದ್ಯವಿಲ್ಲ. 2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಯಡಿಯೂರಪ್ಪ ಪರಿಹಾರ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರು ಕೊಚ್ಚಿ ಹೋಗಿವೆ. ಮನೆಗಳು ಬಿದ್ದಿವೆ ಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಎಂದಿದ್ದಾರೆ.
ಈಗ ಯಡಿಯೂರಪ್ಪರನ್ನ ಚೇಂಜ್ ಮಾಡ್ತಾರೆ, ಆದ್ರೆ ಮುಂದೆ ಸಿಎಂ ಆಗುವವರೂ ಭ್ರಷ್ಟರೇ ಆಗಿರುತ್ತಾರೆ. ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರಕ್ಕೆ ಯಾರೂ ಕೈ ಹಾಕಬಾರದು.
ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರೋಪ ವಿಚಾರ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಇದಕ್ಕೂ ಮೊದಲು ಮಾಡಿದೆ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.

ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್ ಗಳು ಇವರು ಎಂದಿದ್ದಾರೆ.
ವಲಸಿಗ ಸಚಿವರನ್ನ ಮತ್ತೆ ಕಾಂಗ್ರೆಸ್ ಗೆ ಪಡೆದುಕೊಳ್ಳೋ ವಿಚಾರ, ಅವರು ನಮ್ಮಪಕ್ಷಕ್ಕೆ ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ಪಕ್ಕಕ್ಕೆ ಅವರನ್ನ ವಾಪಾಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ಈಗಲೂ ಬದ್ಧ ಎಂದಿದ್ದಾರೆ.
ಎಲ್ಲರೂ ಒಟ್ಟಾಗಿ ಭ್ರಷ್ಡ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗ್ತಾರೆ ಅಂದಿದ್ದೆ. ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದ್ರೆ ಯಾರು ಹೊಸದಾಗಿ ಸಿಎಂ ಆಗಲಿದ್ದಾರೆ ಅನ್ನೋ ಮಾಹಿತಿಯಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.














