ಕಾಂಗ್ರೆಸ್ ಪಕ್ಷದ ಭಾವೀ ಮುಖ್ಯಮಂತ್ರಿಯ ಚರ್ಚೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳತೊಡಗಿದೆ.
ಶಾಸಕ ಜಮೀರ್ ಅಹಮದ್ ತಮ್ಮ ಎಂದಿನ ಶೈಲಿಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬಹುಪರಾಕ್ ಹಾಕುವ ಭರದಲ್ಲಿ ಆಡಿದ ಮಾತೊಂದು ಕಾಂಗ್ರೆಸ್ ವಲಯದಲ್ಲಿ ಇಷ್ಟು ದೊಡ್ಡ ಬಿರುಗಾಳಿಗೆ ಕಾರಣವಾಗುತ್ತದೆ ಎಂದು ಬಹುಶಃ ಸ್ವತಃ ಸಿದ್ದರಾಮಯ್ಯ ಕೂಡ ಊಹಿಸಿರಲಿಕ್ಕಿಲ್ಲ.

ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿದ್ದಾಗ, ಅದರ ಶಾಸಕರಾಗಿ ಜಮೀರ್, ಎಚ್ ಡಿ ಕುಮಾರಸ್ವಾಮಿಯನ್ನು, ದಶಕದ ಹಿಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಶಾಸಕರ ರೆಸಾರ್ಟ್ ಯಾತ್ರೆಯ ಬಸ್ ಡ್ರೈವರ್ ಸೀಟಿನಲ್ಲಿ ಕೂತು ಬಿ ಎಸ್ ಯಡಿಯೂರಪ್ಪ ಪರವಾಗಿ ವಹಿಸಿದ ಹೊಗಳುಭಟರ ಪಾತ್ರವನ್ನೇ ಈಗ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಪರವೂ ವಹಿಸುತ್ತಿದ್ದಾರೆ. ಆದರೆ, ಅವರ ಅಂತಹ ವರಸೆ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದೊಡ್ಡ ವಿವಾದದ ಅಲೆಯನ್ನೇ ಎಬ್ಬಿಸಿರುವುದು ಮಾತ್ರ ಹೊಸ ಬೆಳವಣಿಗೆ.

ಕಳೆದ ಹದಿನೈದು ದಿನಗಳಿಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಶಾಸಕ ಜಮೀರ್ ಹಚ್ಚಿದ ಈ ಕಿಡಿಯ ತಾಪ, ಆರಂಭದಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವಿನ ಭಾವಿ ಮುಖ್ಯಮಂತ್ರಿ ಹುದ್ದೆಯ ಸೆಣಸಾಟವಾಗಿತ್ತು. ಕಳೆದ ಎರಡು ವರ್ಷಗಳಿಂದಲೂ ಕಾಂಗ್ರೆಸ್ಸಿನ ಈ ಇಬ್ಬರು ಪ್ರಮುಖರ ನಡುವೆ ಭಾವೀ ಮುಖ್ಯಮಂತ್ರಿ ಹುದ್ದೆ ಮತ್ತು ಪಕ್ಷದ ಮೇಲಿನ ಹಿಡಿತದ ವಿಷಯದಲ್ಲಿ ನಡೆಯುತ್ತಿರುವ ಹಣಾಹಣಿಯ ಹಿನ್ನೆಲೆಯಲ್ಲಿ ಜಮೀರ್ ಹೇಳಿಕೆಯ ಪರಿಣಾಮಗಳು ನಿರೀಕ್ಷಿತವೇ ಆಗಿದ್ದವು. ಆ ಹಿನ್ನೆಲೆಯಲ್ಲಿ ವಾರಗಟ್ಟಲೆ ನಡೆದ ಇಬ್ಬರು ನಾಯಕರು ಮತ್ತು ಅವರ ಪರವಿರೋಧಿ ಶಾಸಕರು, ಮುಖಂಡರ ಹೇಳಿಕೆ- ಪ್ರತಿ ಹೇಳಿಕೆಗಳ ಸಮರ ಇನ್ನೇನು ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ತಣ್ಣಗಾಗಲಿದೆ ಎನ್ನುಷ್ಟರಲ್ಲೇ ಇಡೀ ವಿವಾದ ಹೊಸ ತಿರುವು ಪಡೆದುಕೊಂಡಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಗೆ ಎಸ್ ಆರ್ ಪಾಟೀಲ್, ಡಾ ಜಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಾ ಎಂ ಬಿ ಪಾಟೀಲ್, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿದಂತೆ ಸಾಲು ಸಾಲು ಹಿರಿಯ ನಾಯಕರ ಹೆಸರುಗಳು ಭಾವೀ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಕಾದಿರುವ ನಾಯಕರ ದಂಡೇ ಚರ್ಚೆಯ ಭಾಗವಾಯಿತು. ಆ ಪೈಕಿ ಕೆಲವರು ಸ್ವತಃ ತಮ್ಮನ್ನು ತಾವೇ ಮುಖ್ಯಮುಂತ್ರಿ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿಕೊಂಡರೆ, ಮತ್ತೆ ಕೆಲವರ ಕುರಿತು ಅವರ ಹಿಂಬಾಲಕರು, ಅಭಿಮಾನಿಗಳು ಹಕ್ಕು ಮಂಡಿಸಿದರು. ಆ ಮೂಲಕ ಆರಂಭದಲ್ಲಿ ಇಬ್ಬರು ಮುಂಚೂಣಿ ನಾಯಕರ ನಡುವಿನ ಸಿಎಂ ಕುರ್ಚಿ ಕಾದಾಟವಾಗಿ ಕಂಡಿದ್ದ ವಿವಾದ, ಕ್ರಮೇಣ ಜಾತಿಗೊಬ್ಬ ಸಿಎಂ ಹುದ್ದೆಯ ಹಕ್ಕುದಾರರ ಹೆಸರು ಕೇಳಿಬರುತ್ತಲೇ ಕಾಂಗ್ರೆಸ್ಸಿನೊಳಗಿನ ಜಾತಿ ಸಂಘರ್ಷವಾಗಿ ಬದಲಾಯಿತು.

ಹಿಂದುಳಿದ ವರ್ಗಗಳ ಪರ ಸಿದ್ದರಾಮಯ್ಯ, ಒಕ್ಕಲಿಗರ ಪರ ಡಿ ಕೆ ಶಿವಕುಮಾರ್, ಲಿಂಗಾಯತರ ಪರ ಡಾ ಎಂ ಬಿ ಪಾಟೀಲ್, ಬ್ರಾಹ್ಮಣರ ಪರ ಆರ್ ವಿ ದೇಶಪಾಂಡೆ ಮತ್ತು ಒಕ್ಕಲಿಗರ ಪರ ಮಲ್ಲಿಕಾರ್ಜುನ ಖರ್ಗೆ ಹೆಸರುಗಳು ಕೇಳಿಬಂದವು. ಆ ಮೂಲಕ ಬಿಜೆಪಿಯಲ್ಲಿ ಸದ್ಯ ಬಿ ಎಸ್ ಯಡಿಯೂರಪ್ಪ ಹೊರತುಪಡಿಸಿ ಮತ್ತೊಬ್ಬ ಸಮರ್ಥ ನಾಯಕರೇ ಸಿಗುತ್ತಿಲ್ಲ. ಹಾಗಾಗಿ ನಾಯಕತ್ವ ಬದಲಾವಣೆಯ ಆ ಪಕ್ಷದ ಹೊಯ್ದಾಟ ಇನ್ನೂ ಬಗೆಹರಿದಿಲ್ಲ ಎಂಬ ಮಾತುಗಳ ನಡುವೆ, ಕಾಂಗ್ರೆಸ್ಸಿನಲ್ಲಿ ಜಾತಿಗೊಬ್ಬರು ಮುಖ್ಯಮಂತ್ರಿ ಆಕಾಂಕ್ಷಿಗಳಿರುವುದೇ ಸಮಸ್ಯೆ. ಬಿಜೆಪಿಯದ್ದು ನಾಯಕರಿಲ್ಲದ ಬಿಕ್ಕಟ್ಟು, ಕಾಂಗ್ರೆಸ್ಸಿನದ್ದು ಹಲವು ನಾಯಕರ ನಡುವೆ ಯಾರು ಎಂಬ ಆಯ್ಕೆಯ ಬಿಕ್ಕಟ್ಟು ಎಂಬ ಚರ್ಚೆಗೂ ಈ ಬೆಳವಣಿಗೆ ಕಾರಣವಾಗಿತ್ತು.
ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ವರ್ಸಸ್ ಡಿ ಕೆ ಶಿವಕುಮಾರ್ ಬಣಗಳ ಸಂಘರ್ಷವಾಗಿ ಇಷ್ಟು ದಿನ ಕಂಡಿದ್ದ ಈ ವಿವಾದಕ್ಕೆ ಮೂರನೇ ಆಯಾಮ ಸೇರ್ಪಡೆಯಾಗಿದ್ದು, ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಮತ್ತು ಮಾಜಿ ಸಚಿವ ಡಾ ಜಿ ಪರಮೇಶ್ವರ್ ಸಭೆ ನಡೆಸಿದ ಬಳಿಕ. ಹಲವು ವರ್ಷಗಳಿಂದ ಸಿದ್ದರಾಮಯ್ಯ ವಿರುದ್ಧದ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಈ ಇಬ್ಬರು ದಲಿತ ನಾಯಕರ ಜೊತೆ ಹಿಂದುಳಿದ ವರ್ಗಗಳ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಕೈಜೋಡಿಸಿ, ಜಂಟಿ ಸಭೆ ನಡೆಸಿರುವುದು ಮತ್ತು ತಮ್ಮನ್ನು ತಾವು ಮೂಲ ಕಾಂಗ್ರೆಸ್ಸಿಗರು ಎಂದು ಹೇಳಿಕೊಂಡು, ತಮ್ಮ ಒಲವು ದಲಿತ ಸಿಎಂ ಕಡೆಗೆ ಎಂದಿರುವುದು ಹೊಸ ಬೆಳವಣಿಗೆ.
ಆ ಮೂಲಕ ಭವಿಷ್ಯದ ಮುಖ್ಯಮಂತ್ರಿ ಯಾರು ಎಂಬ ಕುರಿತ ಕಾಂಗ್ರೆಸ್ ನಾಯಕರ ನಡುವಿನ ಬಿಸಿಬಿಸಿ ಚರ್ಚೆ ಇದೀಗ ದಲಿತ ಮುಖ್ಯಮಂತ್ರಿ ಕುರಿತ ದಶಕಗಳ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕಳೆದ ಒಂದು ದಶಕದಿಂದಲೂ ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್ ವಿಷಯದಲ್ಲಿ ಮತ್ತೆ ಮತ್ತೆ ಕೇಳಿಬಂದ ಪ್ರಶ್ನೆ ದಲಿತ್ ಸಿಎಂ ಕುರಿತದ್ದು. ಆದರೆ, ಅಂತಹ ಪ್ರಶ್ನೆ ಎದುರಾದಾಗೆಲ್ಲಾ ಕಾಂಗ್ರೆಸ್ ನಾಯಕರು, ದಲಿತರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಿದ್ದರೆ ಅದು ಕಾಂಗ್ರೆಸ್ಸಿನಿಂದ ಮಾತ್ರವೇ ಸಾಧ್ಯ ಎಂಬ ಹೇಳಿಕೆ ನೀಡುತ್ತಲೇ ಅಂತಹ ಅವಕಾಶಗಳನ್ನು ನಾಜೂಕಾಗಿ ಬದಿಗೆ ಸರಿಸುತ್ತಲೇ ಇದ್ದಾರೆ ಎಂಬುದು ದಲಿತ ನಾಯಕರ ಅಸಮಾಧಾನಕ್ಕೆ ಕಾರಣ. ಈಗಲೂ ಲೇಖಕ ಹಾಗೂ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಕೂಡ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಆದರೆ, ಸಿಎಂ ಕುರಿತ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದು ಹೇಳಿದ್ದಾರೆ.

ಹದಿನೈದು ದಿನಗಳಿಂದ ನಡೆದ ಮುಖ್ಯಮಂತ್ರಿ ಯಾರು ಎಂಬ ಕುರಿತ ವಾದ-ವಿವಾದದಲ್ಲಿ ಅಂತಿಮವಾಗಿ ದಲಿತ ಮುಖ್ಯಮಂತ್ರಿ ಪ್ರಶ್ನೆ ಏಳುತ್ತಲೇ ಸ್ವತಃ ಕಾಂಗ್ರೆಸ್ಸಿನ ದಲಿತ ನಾಯಕರೇ ಆ ಚರ್ಚೆ ಈಗ ಅಪ್ರಸ್ತತ ಎಂದು ಹೇಳುವ ಮೂಲಕ, ಇಡೀ ಚರ್ಚೆಯನ್ನೇ ಬದಿಗೆ ಸರಿಸುವ ಯತ್ನ ಮಾಡಿದ್ದಾರೆ. ಒಂದು ಕಡೆ, ಒಂದು ಬಣದ ದಲಿತ ನಾಯಕರೇ ಹೀಗೆ ಹೇಳುತ್ತಿದ್ದರೆ, ಮತ್ತೊಂದು ಕಡೆ ಜಿ ಪರಮೇಶ್ವರ್ ಮತ್ತು ಕೆ ಎಚ್ ಮುನಿಯಪ್ಪ ನೇತೃತ್ವದಲ್ಲಿ ಮತ್ತೊಂದು ಬಣ ದಲಿತ ಸಿಎಂ ಹಕ್ಕು ಮಂಡನೆಯ ಪೂರ್ವತಯಾರಿ ಆರಂಭಿಸಿದೆ. ಈಗಾಗಲೇ ಆ ಬಣ ದೆಹಲಿಗೂ ಹೋಗಿ, ಪಕ್ಷದ ಹೈಕಮಾಂಡ್ ಮುಂದೆ ಸಿಎಂ ವಿಷಯದಲ್ಲಿ ಆಗುತ್ತಿರುವ ಚರ್ಚೆ ಮತ್ತು ಅದರ ಪರಿಣಾಮಗಳನ್ನು ಮನವರಿಕೆ ಮಾಡಲು ಯತ್ನಿಸಿದೆ.
ಮತ್ತೊಂದು ಕಡೆ, ದಲಿತ ಮುಖ್ಯಮಂತ್ರಿ ವಿಷಯ ಮತ್ತು ಭಾವೀ ಸಿಎಂ ಕುರಿತ ಚರ್ಚೆಯ ವಿಷಯದಲ್ಲಿ ತಮ್ಮನ್ನು ಬದಿಗೆ ಸರಿಸುವ ಯತ್ನಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಆಪ್ತ ಎಚ್ ಸಿ ಮಹದೇವಪ್ಪ ಅವರ ಮನೆಯಲ್ಲಿ ಸಭೆ ನಡೆಸಿದ್ದು, ಈ ಹಿಂದೆ ಯೋಜಿಸಿದಂತೆ ಅಹಿಂದ ಸಮಾವೇಶಗಳಿಗೆ ಸದ್ಯದಲ್ಲೇ ಚಾಲನೆ ನೀಡಲು ಯೋಜಿಸಿದ್ದಾರೆ. ಸ್ವತಃ ದಲಿತ ಸಮುದಾಯಕ್ಕೆ ಸೇರಿದ ಮಹಾದೇವಪ್ಪ ನೇತೃತ್ವದಲ್ಲೇ ಆ ಸಮಾವೇಶಗಳನ್ನು ನಡೆಸುವ ಮೂಲಕ ಏಕ ಕಾಲಕ್ಕೆ ದಲಿತ ಸಿಎಂ ವಿಷಯವನ್ನೂ, ಇತರೆ ಸಮುದಾಯಗಳ ಸಿಎಂ ಸ್ಥಾನದ ಹಕ್ಕೊತ್ತಾಯವನ್ನೂ ವ್ಯವಸ್ಥಿತವಾಗಿ ಬದಿಗೆ ಸರಿಸುವುದು ಸಿದ್ದರಾಮಯ್ಯ ತಂತ್ರಗಾರಿಕೆ.

ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ವಿಷಯದಲ್ಲಿ ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ, ಭಾವೀ ಮುಖ್ಯಮಂತ್ರಿ ಕುರಿತ ಚರ್ಚೆ ತಮ್ಮ ಆ ಮಹತ್ವಾಕಾಂಕ್ಷೆಗೆ ತಿರುಗುಬಾಣವಾಗುತ್ತಿದೆ ಎಂಬುದನ್ನು ಗ್ರಹಿಸಿ, ಅಹಿಂದ ದಾಳ ಉರುಳಿಸಲು ಸಜ್ಜಾಗಿದ್ದಾರೆ. ಆ ಮೂಲಕ ಡಿ ಕೆ ಶಿವಕುಮಾರ್, ಕೆ ಎಚ್ ಮುನಿಯಪ್ಪ, ಜಿ ಪರಮೇಶ್ವರ್ ಸೇರಿ ತಮ್ಮ ವಿರೋಧಿ ಬಣದ ಎಲ್ಲರ ಲಾಬಿಯನ್ನೂ ಒಂದೇ ಏಟಿಗೆ ಬದಿಗೆ ಸರಿಸುವುದು ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.
ಆದರೆ, ವಿಧಾನಸಭಾ ಚುನಾವಣೆ ಇನ್ನೂ ಎರಡು ವರ್ಷವಿರುವಾಗಲೇ ಕಾಂಗ್ರೆಸ್ ನಲ್ಲಿ ಆರಂಭವಾಗಿರುವ ಈ ಗುಂಪುಗಾರಿಕೆ, ಈ ಸುದೀರ್ಘ ಅವಧಿಯಲ್ಲಿ ಪಡೆದುಕೊಳ್ಳಬಹುದಾದ ಸ್ವರೂಪ ಕುತೂಹಲವನ್ನು ಕಾದುನೋಡಬೇಕಿದೆ!





