ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಭಾಗದಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಉದ್ಭವವಾಗಿದ್ದು, ದೇಶದ ಕೆಲವು ರಾಜ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮೇ 23ರಿಂದ ಮೇ 27ರವರೆಗೂ ಈ ಚಂಡಮಾರುತದ ಆರ್ಭಟ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೇ. ಈಗಾಗಲೇ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಿದ್ದು, ಎರಡು ಮೂರು ದಿನಗಳಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದೆ.
ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಉತ್ತರ ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ . ಈ ಸಂಬಂಧ ಮೇ 23 ರ ಬೆಳಗ್ಗೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಹಾಗೂ ಉತ್ತರ ಒಡಿಶಾಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ.
ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ. ಮೇ 26 ರಂದು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆ, ಹಾದು ಪಾರದೀಪ್ ಮತ್ತು ಸಾಗರ ದ್ವೀಪ ಹಾಗು ಒಡಿಶಾದ ಪುರಿ, ಜಗತ್ಸಿಂಗ್ ಪುರ, ಖರ್ದಾ, ಕಟಕ್, ಕೇಂದ್ರಪಾರಾ, ಜೈಪುರ, ಭಾದ್ರಾಕ್, ಬಾಲಸೋರ್ ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಸೂಚನೆ ಕೊಡಲಾಗಿದೆ.
ಮುನ್ನೆಚ್ಚರಿಕೆಯ ದೃಷ್ಟಿಯಿಂದ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.