• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನ್ಯಾಯ ವ್ಯವಸ್ಥೆಯಲ್ಲಿನ ಪಿತೃಪ್ರಧಾನ ಧೋರಣೆ ಸರಿಪಡಿಸಬೇಕಿದೆ!

ನಾ ದಿವಾಕರ by ನಾ ದಿವಾಕರ
September 18, 2022
in ಅಂಕಣ, ಅಭಿಮತ
0
ಅತ್ಯಾಚಾರ ಸಂತ್ರಸ್ತೆಯ ಫೋಟೊ ಹರಿಬಿಟ್ಟ ಬಿಜೆಪಿ ಶಾಸಕ: ಪ್ರಕರಣ ದಾಖಲು!
Share on WhatsAppShare on FacebookShare on Telegram

ಕಾನೂನು ಪಠ್ಯಕ್ರಮದಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರವನ್ನು ತುರ್ತಾಗಿ ಅಳವಡಿಸಬೇಕಿದೆ

ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೇರಳದ ಸೆಷನ್ಸ್‌ ನ್ಯಾಯಾಲಯವು, ಅರ್ಜಿದಾರ ವ್ಯಕ್ತಿಯು ಲೈಂಗಿಕವಾಗಿ ಪ್ರಚೋದನಕಾರಿ ಉಡುಪು ಧರಿಸಿದ್ದುದರಿಂದ, ಮೊದಲ ನೋಟಕ್ಕೆ , ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354ಎ ಅಡಿಯಲ್ಲಿ ( ಮಹಿಳೆಯ ಶೀಲ ಹರಣ ಮಾಡಲು ಆಕೆಯ ಮೇಲೆ ಬಲಾತ್ಕಾರ ಅಥವಾ ಹಲ್ಲೆ ನಡೆಸುವುದು) ಅಪರಾಧಕ್ಕೆ ಅನ್ವಯಿಸಲಾಗುವುದಿಲ್ಲ ಎಂದು ಹೇಳಿತ್ತು (ಆನಂತರ ಕೇರಳ ಹೈಕೋರ್ಟ್‌ ಸೆಷನ್ಸ್‌ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ).  ಸೆಷನ್ಸ್‌ ನ್ಯಾಯಾಲಯವು ತನ್ನ ತೀರ್ಪು ನೀಡುವ ಮುನ್ನ, ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕೆಲವು ಫೋಟೋಗಳನ್ನು ಆಧಾರವಾಗಿ ಪರಿಗಣಿಸಿತ್ತು.  ದೂರುದಾರ ವ್ಯಕ್ತಿಯು ಫೋಟೋಗಳಲ್ಲಿರುವಂತೆ ಲೈಂಗಿಕವಾಗಿ ಪ್ರಚೋದನಕಾರಿಯಾದ ಉಡುಪು ಧರಿಸಿದ್ದುದರಿಂದ ಆರೋಪಿಯ ವಿರುದ್ಧ ಸೆಕ್ಷನ್‌ 354ಎ ಬಳಸಲಾಗುವುದಿಲ್ಲ ಎಂದು ವಾದ ಮಂಡಿಸಲಾಗಿತ್ತು. ಈ ಪ್ರತಿಪಾದನೆಯು ಮಹಿಳೆಯ ಘನತೆ, ಜೀವನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುವಂತಿದೆ.

ADVERTISEMENT

ನ್ಯಾಯಾಂಗದ ಪರಿಭಾಷೆಯಲ್ಲಿ ಸೆಷನ್ಸ್‌ ನ್ಯಾಯಾಲಯದ ಪ್ರತಿಪಾದನೆಯನ್ನು ಫ್ರಾಯ್ಡಿಯನ್ ಸ್ಲಿಪ್‌ ಎಂದು ಕರೆಯಲಾಗುತ್ತದೆ. ಫ್ರಾಯ್ಡಿಯನ್ ಸ್ಲಿಪ್‌ ಎಂದರೆ ಮನಶ್ಶಾಸ್ತ್ರ ವಿಶ್ಲೇಷಣೆಯ ಪರಿಭಾಷೆಯಲ್ಲಿ, ಅಪ್ರಜ್ಞಾಪೂರ್ವಕವಾದ, ಅಡಗಿಸಲ್ಪಟ್ಟ ಅಪೇಕ್ಷೆ ಅಥವಾ ಆಂತರಿಕ ಚಿಂತನಾಲಹರಿಯ ಅಂತರ್‌ಕ್ರಿಯೆಯ ಪರಿಣಾಮವಾಗಿ ಮೂಡುವ ಮಾತು ಅಥವಾ ಸ್ಮರಣೆ ಅಥವಾ ಚಟುವಟಿಕೆಗಳಲ್ಲಿ ಉಂಟಾಗುವ ಪ್ರಮಾದ ಎಂದು ವ್ಯಾಖ್ಯಾನಿಸಲಾಗುತ್ತದೆ. ಮಹಿಳೆಯೊಬ್ಬರ ಉಡುಪನ್ನು ಲೈಂಗಿಕವಾಗಿ ಪ್ರಚೋದನಕಾರಿ ಎಂದು ಗುರುತಿಸುವುದು, ಮಹಿಳೆಯನ್ನು ಕಾಮಪ್ರಚೋದಕ ಸ್ವಲಕ್ಷಣವುಳ್ಳ ಭೋಗದ ವಸ್ತುವನ್ನಾಗಿ ನೋಡುವ ವಿಧಾನವೇ ಆಗಿದೆ. ಈ ಪ್ರಕರಣದಲ್ಲಿ ವ್ಯಕ್ತಿಗತ ನ್ಯಾಯಿಕ ಅಧಿಕಾರಿ ಮಾತ್ರವೇ ಅಲ್ಲದೆ ಇಡೀ ಸಾಮಾಜಿಕ-ಕಾನೂನು ವ್ಯವಸ್ಥೆಯಲ್ಲಿರುವ ಪಿತೃಪ್ರಧಾನ ಧೋರಣೆಯನ್ನು ಗಮನಿಸಬಹುದಾಗಿದೆ.

ಅಪರ್ಣ ಭಟ್‌ ವರ್ಸಸ್‌ ಮಧ್ಯಪ್ರದೇಶ ರಾಜ್ಯ ಸರ್ಕಾರ (2021) ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು “ಅಪರಾಧವನ್ನು ಕ್ಷೀಣಗೊಳಿಸುವಂತಹ ಮತ್ತು ಸಂತ್ರಸ್ತರನ್ನು (ಲಿಂಗತ್ವ ಹಿಂಸೆಯ ಪ್ರಕರಣಗಳಲ್ಲಿ) ಕ್ಷುಲ್ಲಕವಾಗಿಸುವಂತಹ ತರ್ಕ ಅಥವಾ ಭಾಷೆಯನ್ನು ಯಾವುದೇ ಸಂದರ್ಭದಲ್ಲೂ ಬಳಸಕೂಡದು. ಹೀಗಾಗಿ ಈ ರೀತಿಯ ವರ್ತನೆಗಳು, ಚಟುವಟಿಕೆಗಳು ಮತ್ತು ಸನ್ನಿವೇಶಗಳು ಅಪ್ರಸ್ತುತ ಎಂದು ಪರಿಭಾವಿಸಲಾಗುತ್ತದೆ ; ಉದಾಹರಣೆಗೆ, ಸಂತ್ರಸ್ತೆಯು ಈ ಹಿಂದೆ ಇದೇ ರೀತಿಯ ಚಟುವಟಿಕೆಗೆ ಸಮ್ಮತಿಸಿದ್ದರು ಅಥವಾ ಆಕೆಯು ಸ್ವಚ್ಚಂದತೆಯಿಂದ ವರ್ತಿಸಿದ್ದಳು ಅಥವಾ ಆಕೆಯ ವರ್ತನೆಯ ಮೂಲಕ, ಉಡುಪುಗಳ ಮೂಲಕ ಆರೋಪಿಯ ಕೃತ್ಯವನ್ನು ಪ್ರಚೋದಿಸಿದ್ದಳು, ಆಕೆ ಭಾರತೀಯ ಮಹಿಳೆಯ ಶುದ್ಧತೆಗೆ ವ್ಯತಿರಿಕ್ತವಾಗಿ ವರ್ತಿಸಿದ್ದಳು ಅಥವಾ ಆಕೆ ತನ್ನ ವರ್ತನೆಯ ಮೂಲಕವೇ ಈ ಸನ್ನಿವೇಶಕ್ಕೆ ಎಡೆಮಾಡಿಕೊಟ್ಟಿದ್ದಳು ಇತ್ಯಾದಿ. ಈ ಸನ್ನಿವೇಶಗಳು ನ್ಯಾಯಾಂಗದ ಆದೇಶಗಳಲ್ಲಿ ಪ್ರವೇಶವೇ ಪಡೆಯಬಾರದಂತಹ ಕೆಲವು ವರ್ತನೆಗಳ, ನಡತೆಗಳ ನಿದರ್ಶನವಾಗಿವೆ.  ನ್ಯಾಯಾಂಗದ ತೀರ್ಪು ನೀಡುವ ಸಂದರ್ಭದಲ್ಲಿ ಇವುಗಳನ್ನು ಪ್ರಸ್ತುತ ಎಂದೂ ಪರಿಗಣಿಸಬಾರದು. ಜಾಮೀನು ಅಥವಾ ಮತ್ತಾವುದೇ ರೀತಿಯ ಪರಿಹಾರ ನೀಡಲು ಇವುಗಳನ್ನು ಕಾರಣವಾಗಿ ಪರಿಗಣಿಸಕೂಡದು ” ಎಂದು ಹೇಳಿತ್ತು.  ಸೆಷನ್ಸ್‌ ನ್ಯಾಯಾಧೀಶರ ವಿವಾದಾತ್ಮಕ ಅಭಿಪ್ರಾಯಗಳು ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನೀಡಿರುವ ಮಾರ್ಗದರ್ಶಿ ಸೂತ್ರಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಮಹಿಳೆಯರ ಹೋರಾಟ

ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರ “ ಲಿಸನ್‌ ಟು ಮೈ ಕೇಸ್-‌ ವೆನ್‌ ವುಮೆನ್‌ ಅಪ್ರೋಚ್‌ ದ ಕೋರ್ಟ್ಸ್‌ ಆಫ್‌ ತಮಿಳುನಾಡು ” ( ಇದು 20 ಮಹಿಳೆಯರ ನ್ಯಾಯಕ್ಕಾಗಿ ಹೋರಾಡುವ ಕತೆಗಳನ್ನು ಒಳಗೊಂಡಿದೆ) ಕೃತಿಯ ಪ್ರವೇಶಿಕೆಯಲ್ಲಿ ಪ್ರಶಸ್ತಿ ವಿಜೇತ ಲೇಖಕಿ ಗೀತಾ ಹರಿಹರನ್‌, ಮಹಿಳೆಯರು ನ್ಯಾಯಾಲಯಗಳ ಕದ ತಟ್ಟುವ ಪ್ರಕ್ರಿಯೆಯೇ ಕಷ್ಟಕರವಾಗಿದೆ ಎಂದು ಹೇಳುತ್ತಾ, ಮಹಿಳೆಗೆ ಕುಟುಂಬದವರಿಂದ ಹಣಕಾಸಿನ ಅಥವಾ ಭಾವನಾತ್ಮಕ ಬೆಂಬಲ ಇಲ್ಲದೆ ಹೋದರೆ , ಸಂಪ್ರದಾಯ ಅಥವಾ ಪ್ರಸಕ್ತ ಕಾನೂನುಗಳ ಅರಿವು ಇಲ್ಲದೆ ಹೋದರೆ ಇನ್ನೂ ಕಷ್ಟಕರವಾಗುತ್ತದೆ ಎಂದು ಹೇಳುತ್ತಾರೆ. ಭಾರತದ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ದುರ್ಬಲವಾಗಿದೆ. ಉದಾಹರಣೆಗೆ, ಈ ವರ್ಷದ ಮಾರ್ಚ್‌ ತಿಂಗಳಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿಯಾದ ಇಂದಿರಾ ಬ್ಯಾನರ್ಜಿ, ಹೇಗೆ ಭಾರತದಲ್ಲಿ 1950 ರಿಂದ ಈವರೆಗೆ ದೇಶದ ಉನ್ನತ ನ್ಯಾಯಾಲಯವು ಕೇವಲ 11 ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿದೆ ಎಂದು ಹೇಳಿದ್ದರು. “ ನ್ಯಾಯಾಂಗದಲ್ಲಿ ಮಹಿಳೆಯರನ್ನು ಒಳಗೊಳ್ಳುವುದರಿಂದ ತೀರ್ಪು ನೀಡುವ ಪ್ರಕ್ರಿಯೆಯು ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಎಲ್ಲ ಹಂತಗಳಲ್ಲೂ ಒಳಗೊಳ್ಳುವಿಕೆಯ ಮೂಲಕ ಸಹಭಾಗಿತ್ವವನ್ನು ಹೊಂದಿರುತ್ತದೆ ” ಎಂದು ಹೇಳಿದ್ದರು. ಆದರೆ ಇದು ಕನಸು ಮಾತ್ರ. ಅಷ್ಟೇನೂ ಸಮಾಧಾನಕರವಾಗಿಲ್ಲದ ಪ್ರಸ್ತುತ ನ್ಯಾಯಿಕ ವಾತಾವರಣದಲ್ಲಿ , ನ್ಯಾಯಾಂಗದ ಚೌಕಟ್ಟಿನಿಂದ ಆಗಿಂದಾಗ್ಗೆ ಪಿತೃಪ್ರಧಾನ ಲಕ್ಷಣಗಳು ಹೊರಬೀಳುವುದು ನಿರೀಕ್ಷಿತವೇ ಆಗಿದೆ.

ಮಹಿಳೆಯರ ಮಟ್ಟಿಗೆ ಮಾನವ ಘನತೆಯನ್ನು ಕಾಪಾಡುವ ಭರವಸೆಯು ಇನ್ನೂ ಪೊಳ್ಳಾಗಿಯೇ ಉಳಿದಿದೆ. ಬ್ರಾಡ್‌ವೆಲ್‌ ವರ್ಸಸ್‌ ಇಲಿನಾಯಿಸ್‌ ಸರ್ಕಾರ (1872)ದ ಪ್ರಕರಣವೊಂದರಲ್ಲಿ ಅಮೆರಿಕದ ಸರ್ವೋಚ್ಛ ನ್ಯಾಯಾಲಯವು “ ಭಗವಂತನು ಲಿಂಗತ್ವವನ್ನು ಚಟುವಟಿಕೆಗಳ ವಿಭಿನ್ನ ಸ್ತರಗಳಲ್ಲಿ ಬಳಸುವ ಸಲುವಾಗಿಯೇ ಸೃಷ್ಟಿಸಿರುತ್ತಾನೆ, ಹಾಗಾಗಿ ಕಾನೂನು ರೂಪಿಸಿ, ಅನ್ವಯಿಸಿ ಜಾರಿಗೊಳಿಸುವ ಹೊಣೆ ಪುರುಷರದ್ದಾಗಿರುತ್ತದೆ – ಇದು ಸ್ವಯಂವೇದ್ಯ  ಸತ್ಯ ” ಎಂದು ಹೇಳಿತ್ತು. ಈ ಪ್ರಕರಣದ ವಿಷಯ ಎಂದರೆ, ಇಲಿನಾಯಿಸ್‌ ರಾಜ್ಯದ ನಿವಾಸಿಯಾಗಿದ್ದ ಮೈರಾ ಬ್ರಾಡ್‌ವೆಲ್‌ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ, ಕಾನೂನು ವೃತ್ತಿಯನ್ನು ಕೈಗೊಳ್ಳಲು ಪರವಾನಗಿಯನ್ನು ಕೋರಿದ್ದರು. ಸರ್ವೋಚ್ಛ ನ್ಯಾಯಾಲಯವು ಆಕೆಗೆ ಅನುಮತಿಯನ್ನು ನಿರಾಕರಿಸಿದ್ದೇ ಅಲ್ಲದೆ “ ಮಹಿಳೆಯ ಪರಮೋಚ್ಛ ಧ್ಯೇಯ ಮತ್ತು ಗುರಿ ಪತ್ನಿಯಾಗಿ, ತಾಯಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವುದಷ್ಟೇ ಆಗಿರುತ್ತದೆ. ಇದು ಸೃಷ್ಟಿಕರ್ತನ ಕಾನೂನು ” ಎಂದು ಹೇಳಿತ್ತು.  ಮಹಿಳೆಯರು ಕೆಳಸ್ತರದ ದೇವರ ಸೃಷ್ಟಿ ಎಂಬ ಓಬಿರಾಯನ ಕಾಲದ ಮನೋಭಾವ ಭಾರತದ ನ್ಯಾಯವ್ಯವಸ್ಥೆಯಲ್ಲಿ ಇನ್ನೂ  ಜೀವಂತವಾಗಿದೆಯೇ ?

ಸಂವೇದನಾಶೀಲತೆಯ ಅವಶ್ಯಕತೆ

ಸಾಮಾಜಿಕ-ನ್ಯಾಯಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಪರಿಹಾರಾತ್ಮಕ ಮಾರ್ಗ ಎಂದರೆ ಕಾನೂನು ವಿದ್ಯಾರ್ಥಿಗಳ ಪಠ್ಯಕ್ರಮಗಳಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರವನ್ನು ಅಳವಡಿಸುವುದು ಮತ್ತು ಕಾನೂನು ವೃತ್ತಿಯಲ್ಲಿರುವವರಲ್ಲಿ, ನ್ಯಾಯಾಂಗದ ಅಧಿಕಾರಿಗಳಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರದ ಬಗ್ಗೆ  ಸಂವೇದನಾಶೀಲತೆಯನ್ನು ಉಂಟುಮಾಡುವುದು.

ಸ್ಟಾನ್‌ಫೋರ್ಡ್‌ ತತ್ವಶಾಸ್ತ್ರದ ವಿಶ್ವಕೋಶವು ಹೀಗೆ ಹೇಳುತ್ತದೆ : “ಕಾನೂನು ಸಂರಚನೆಗಳು ಪಿತೃಪ್ರಾಧಾನ್ಯತೆ ಮತ್ತು ಪುರುಷ ಪ್ರಧಾನ ನಿಯಮಗಳಿಂದ ಪ್ರಭಾವಿತವಾಗಿರುವುದನ್ನು ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು ಗುರುತಿಸುತ್ತದೆ. ಇದರ ಪರಿಣಾಮವನ್ನು ಮಹಿಳೆಯರ, ಬಾಲಕಿಯರ ಹಾಗೂ ಲಿಂಗತ್ವ ನಿಯಮಗಳಿಗೆ ಹೊಂದಿಕೊಳ್ಳದವರ, ಭೌತಿಕ ಸ್ಥಿತ್ಯಂತರಗಳಲ್ಲಿ ಗುರುತಿಸಬಹುದು. ಇದು ಲೈಂಗಿಕತೆ ಮತ್ತು ಕಾನೂನುಗಳ ಛೇದಕಗಳ ಸಮಸ್ಯೆಯನ್ನೂ ಪರಿಗಣಿಸಿದ್ದು, ಲಿಂಗತ್ವ ಶೋಷಣೆ, ಅನ್ಯಾಯ ಮತ್ತು ನಿರ್ಬಂಧಗಳ ಸುಧಾರಣೆಗಾಗಿ ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು, ಸ್ತ್ರೀವಾದಿ ಜ್ಞಾನಮೀಮಾಂಸೆಯ ಒಳನೋಟಗಳನ್ನು ಅಳವಡಿಸುವುದೇ ಅಲ್ಲದೆ, ಸಂಬಂಧಾತ್ಮಕ ಅಧ್ಯಾತ್ಮ, ಪುರೋಗಾಮಿ ಸಾಮಾಜಿಕ ಮೂಲ ತತ್ವಗಳು, ಸ್ತ್ರೀವಾದಿ ರಾಜಕೀಯ ತತ್ವಗಳು ಮತ್ತು ಸ್ತ್ರೀವಾದಿ ತತ್ವಶಾಸ್ತ್ರಗಳ ಇತರ ಬೆಳವಣಿಗೆಗಳನ್ನು ಅನ್ವಯಿಸುವ ಮೂಲಕ ಕಾನೂನು ಸಂಸ್ಥೆಗಳು ಹೇಗೆ ಪ್ರಧಾನವಾಗಿರುವ ಲಿಂಗತ್ವದ ಹಾಗೂ ಪುರುಷತ್ವದ ನಿಯಮಗಳನ್ನು ಹೇರುತ್ತವೆ ಎನ್ನುವುದನ್ನು ವಿವೇಚಿಸುತ್ತದೆ.,,,ಸ್ತ್ರೀವಾದಿ ಕಾನೂನು ತತ್ವಶಾಸ್ತ್ರವು ಕಾನೂನು ಮೀಮಾಂಸೆಯನ್ನು ಮರುಪರಿಶೀಲನೆಗೊಳಪಡಿಸಿ, ಮರು ರೂಪಿಸುವ ಒಂದು ಪ್ರಯತ್ನವಾಗಿದ್ದು ತನ್ಮೂಲಕ ಹೇರಲಾದ ಪ್ರಾಚೀನ ಅಸಮಾನತೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸುತ್ತದೆ, ಹಾಗೆಯೇ ಭವಿಷ್ಯತ್ತಿಗಾಗಿ ಮಾನವ ಪರಿಕಲ್ಪನೆಗಳನ್ನು ಮತ್ತು ಸಂಸ್ಥೆಗಳನ್ನು ರೂಪಿಸಲು ಯತ್ನಿಸುತ್ತದೆ ”. ಜಟಿಲ ಕಾನೂನು ಪ್ರಶ್ನೆಗಳನ್ನು ಸ್ತ್ರೀವಾದಿ ನ್ಯಾಯಶಾಸ್ತ್ರದ ನೆರವಿನೊಂದಿಗೆ ಅರ್ಥಮಾಡಿಕೊಳ್ಳುವುದರ ಮೂಲಕ ಖಂಡಿತವಾಗಿಯೂ ಔನ್ನತ್ಯದ ಪಿತೃಪ್ರಧಾನ ಭ್ರಾಂತಿಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ವ್ಯಕ್ತಿಗತ ಆಯ್ಕೆ

ಉಡುಗೆ ತೊಡುವ ಆಯ್ಕೆಯು ವ್ಯಕ್ತಿಯ ಘನತೆ ಮತ್ತು ಖಾಸಗಿತನ ಸ್ವಾತಂತ್ರ್ಯದ ಅಂಶಿಕ ಭಾಗವಾಗಿರುತ್ತದೆ.  ವ್ಯಕ್ತಿಯ ಉಡುಪನ್ನು ನಿರ್ಧರಿಸುವುದು ನ್ಯಾಯಾಧೀಶರ ಕೆಲಸ ಅಲ್ಲ. ಅಥವಾ ಮಹಿಳೆಯೊಬ್ಬರ ಉಡುಪಿನ ಶೈಲಿ ಆಕೆಯ ಶೀಲ ಭಂಗ ಮಾಡಲು ಪರವಾನಿಗೆ ನೀಡಿದಂತೆ ಎಂದು ಭಾವಿಸಲಾಗುವುದಿಲ್ಲ. ಉದಾರವಾದಿ ಪ್ರಜಾಸತ್ತಾತ್ಮಕ ಪ್ರಭುತ್ವದಲ್ಲಿ ಉಡುಗೆಯ ಆಯ್ಕೆಯು ಸ್ವಯಂ ನಿರ್ಣಯದ ವರ್ತನೆಯಾಗಿದ್ದು ಅಲ್ಲಿ ವ್ಯಕ್ತಿಯ ಸಾರ್ವಭೌಮತ್ವವೇ ಅಂತಿಮ ಎಂದು ಜಾನ್‌ ಸ್ಟುವರ್ಟ್‌ ಮಿಲ್‌ ಹೇಳುತ್ತಾರೆ. ಕ್ರಿಸ್ತಶಕ 1583ರಲ್ಲಿ ಫ್ರಾನ್ಸ್‌ನ ದೊರೆ ಹೆನ್ರಿ-೩,  ವೆಲ್ವೆಟ್‌, ಸ್ಯಾಟಿನ್‌ ಮತ್ತು ಡಮಾಸ್ಕ್‌ ಬಟ್ಟೆಗಳನ್ನು ಗಣ್ಯರು ಮಾತ್ರ ತೊಡತಕ್ಕದ್ದು ಎಂಬ ಆಜ್ಞೆಯನ್ನು ಹೊರಡಿಸಿದ್ದ.  ವ್ಯಕ್ತಿಯ ಸ್ಥಾನಮಾನವನ್ನು ಆತ/ಆಕೆ ತೊಟ್ಟಿರುವ ಉಡುಗೆಯ ಮೂಲಕ ಗುರುತಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಭಗವಂತನು ಕುಪಿತನಾಗಿದ್ದಾನೆ ಎಂದು ತನ್ನ ಆಜ್ಞೆಗೆ ಸಮಜಾಯಿಷಿ ನೀಡಿದ್ದ.  ಬ್ರಿಟಾನಿಕಾದಲ್ಲಿ ಹೇಳಿರುವಂತೆ, ಇದೇ ರೀತಿಯ ರಾಜಾಜ್ಞೆಯನ್ನು ಕ್ರಿಸ್ತಶಕ 1463ರಲ್ಲಿ ದೊರೆ ಕಿಂಗ್‌ ಎಡ್ವರ್ಡ್-‌೪ ಸಹ ಹೊರಡಿಸಿದ್ದ. ಭಗವಂತನು  ಅತಿರೇಕದ ಮತ್ತು ಮಿತಿಮೀರಿದ ಉಡುಗೆ ತೊಡುಗೆಯಿಂದ ಅಸಮಾಧಾನಗೊಂಡಿದ್ದಾನೆ ಎಂಬ ಕಾರಣವನ್ನೂ ನೀಡಿದ್ದ. ಕ್ರಿಸ್ತಶಕ 1429ರಲ್ಲಿ ಜೋನ್‌ ಆಫ್‌ ಆರ್ಕ್‌ ಪುರುಷರ ಉಡುಗೆ ತೊಟ್ಟಿದ್ದುದರಿಂದ, ಪುರುಷರ ಉಡುಗೆ ಧರಿಸಿದ್ದುದೇ ಆಕೆಯ ವಿರುದ್ಧ ಪ್ರಮುಖ ಆಪಾದನೆಯಾಗಿತ್ತು. ಬೀವಿಷ್‌ನ ಬಿಷಪ್‌ ಆಕೆಯ ವಿಚಾರಣೆ ನಡೆಸಿ ಪುರುಷರ ಉಡುಗೆಯನ್ನು ತೊಡುವುದು ಮಹಿಳೆಯರ ಸೌಶೀಲ್ಯಕ್ಕೆ ವ್ಯತಿರಿಕ್ತವಾದುದು ಇದನ್ನು ದೈವೀಕ ಕಾನೂನು ನಿಷೇಧಿಸುತ್ತದೆ ಎಂದು ಘೋಷಿಸಿದ್ದರು.

ಭಾರತದ ಗಣತಂತ್ರದ ನ್ಯಾಯಾಧೀಶರೊಬ್ಬರು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳಿಗೆ ಬದ್ಧರಾಗಿರಬೇಕೇ ಹೊರತು ಈ ಚರಿತ್ರೆಯನ್ನು ಅನುಸರಿಸಬಾರದು.

ಮೂಲ : ಸಿ ಕೆ ಫೈಸಲ್‌ Curing the patriarchal mindset of the legal system- ದ ಹಿಂದೂ 30 ಆಗಸ್ಟ್‌ 2022

Previous Post

ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Next Post

5ನೇ ದಿನಕ್ಕೆ ಮಂಕಾದ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ!

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

January 12, 2026
Next Post
ಮಹಾದೇವಪುರದಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್!

5ನೇ ದಿನಕ್ಕೆ ಮಂಕಾದ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ!

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada