ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೃಹನ್ ನಾಟಕಕ್ಕೆ ಕೊನೆಗೂ ತೆರೆಬೀಳೋ ಲಕ್ಷಣ ಕಾಣಿಸ್ತಿದೆ. ಕಳೆದ ನಾಲ್ಕುದಿನಗಳಿಂದ ರಾಜಾಕಾಲುವೆ ಒತ್ತುವರಿ ತೆರವಿನ ನಾಟಕವಾಡಿದ್ದ ಪಾಲಿಕೆ ಇಂದು ಸೈಲೆಂಟಾಗಿದೆ. ಬಡ ಬಗ್ಗರ ಮೇಲೆ ಆಟಾಟೋಪ ಮಾಡಿದ್ದ ಜೆಸಿಬಿಗಳೆಲ್ಲಾ ಇಂದು ಸೈಲೆಂಟಾಗಿದ್ವು. ಅತ್ತ ಪಾಲಿಕೆ ಅಧಿಕಾರಿಗಳು ಸರ್ವೆ, ನೋಟೀಸ್ ಅನ್ನೋ ಹೊಸ ನಾಟಕ ಆರಂಭಿಸಿದ್ದಾರೆ.
5ನೇ ದಿನ ಬಿಲದಿಂದ ಹೊರಬರಲೇ ಇಲ್ಲ ಪಾಲಿಕೆ ಅಧಿಕಾರಿಗಳು!
ಮೊದಲ ದಿನ ಪಾಲಿಕೆ ಜೆಸಿಬಿಗಳ ವೀರಾವೇಶ ನೋಡಿದ್ರೆ ಬೆಂಗಳೂರಲ್ಲಿ ಒತ್ತುವರಿದಾರರಿಗೆ ಉಳಿಗಾಲವೇ ಇಲ್ಲ ಅನಿಸಿತ್ತು. ಅದಕ್ಕೆ ಸರಿಯಾಗಿ ಪ್ರಭಾವಿಗಳ ಅಕ್ರಮ ಸಾಮ್ರಾಜ್ಯವನ್ನೂ ಕೆಡವೋದಾಗಿ ಮಂತ್ರಿ ಮಹೋದಯರೂ ರೋಷಾವೇಶದಲ್ಲಿ ಹೇಳಿಕೆ ಕೊಟ್ಟಿದ್ದೂ ಆಗಿತ್ತು. ಆದ್ರೆ ಆಗಿದ್ದೇ ಬೇರೆ. ಮೊದಲೆರಡು ದಿನ ಬಡಬಗ್ಗರ ಮನೆ ಮುಂದೆ ಪ್ರತಾಪ ತೋರಿದ್ದ ಪಾಲಿಕೆ ಅಧಿಕಾರಿಗಳು 5ನೇ ದಿನದ ಹೊತ್ತಿಗೆ ತಣ್ಣಗಾಗಿಹೋಗಿದ್ರು. ಎಷ್ಟರಮಟ್ಟಿಗಂದ್ರೆ ಬೆಂಗಳೂರಲ್ಲಿ ಇಂದು ರಾಜಕಾಲುವೆ ಒತ್ತುವರಿ ತೆರವು ಕಂಪ್ಲೀಟಾಗಿ ನಿಂತೇ ಹೋಗಿತ್ತು. ಬಿಲ ಸೇರಿದ ಬಿಬಿಎಂಪಿ ಅಧಿಕಾರಿಗಳು ಇಂದು ಹೊರಬರಲೇ ಇಲ್ಲ.

ರಾಜಕಾಲುವೆ ಒತ್ತುವರಿ ಬೃಹನ್ ನಾಟಕ ಇಂದಿಗೆ ಸಮಾಪ್ತಿ!
ನಿಜ. ಕಳೆದ 4 ದಿನಗಳಿಂದ ಬೆಂಗಳೂರಿನಲ್ಲಿ ನಡೆದಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಕಂಪ್ಲೀಟಾಗಿ ನಿಂತು ಹೋಗಿತ್ತು. ಮಹಾದೇವಪುರ, ದಾಸರಹಳ್ಳಿ ವಲಯದಲ್ಲಿ ಒತ್ತುವರಿ ತೆರವು ಸ್ಥಗಿತಗೊಂಡಿತ್ತು. ಇನ್ನು ಯಲಹಂಕದಲ್ಲಿ ಜಸ್ಟ್ ನಾಲ್ಕಡಿ ಗೋಡೆ ಕೆಡವಿದ್ದು ಬಿಟ್ರೆ ಒತ್ತುವರಿ ತೆರವಿಗೆ ಬ್ರೇಕ್ ಹಾಕಲಾಗಿದೆ. ಇನ್ನು ಇವತ್ತಿನಿಂದ ಪಾಲಿಕೆ ಅಧಿಕಾರಿಗಳು ಹೊಸ ಡ್ರಾಮವೊಂದನ್ನ ಶುರುಮಾಡಿದ್ದಾರೆ. ಒತ್ತುವರಿ ಬಗ್ಗೆ ಸರ್ವೆ ಮಾಡಿ ನೋಟೀಸ್ ಕೊಟ್ಟು ತೆರವು ಮಾಡೋದಾಗಿ ಹೇಳ್ತಿದ್ದಾರೆ. ಟೆಕ್ಪಾರ್ಕ್, ಬ್ಯುಸ್ನೆಸ್ ಪಾರ್ಕ್, ವಿಲ್ಲಾಗಳು ಒತ್ತುವರಿ ಲೀಸ್ಟ್ನಲ್ಲಿ ಬರ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಬಿಲ ಸೇರಿದ್ದಾರೆ. ಬಿಬಿಎಂಪಿಯ ಈ ನೌಟಂಕಿ ಆಟ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ತ ಗಣ್ಯ ಮಹೋದಯರೆಲ್ಲಾ ಕೋರ್ಟಿಂದ ಸ್ಟೀ ಆರ್ಡರ್ ತಂದು ಬಿಬಿಎಂಪಿ ಅಧಿಕಾರಿಗಳ ಮುಖ ನೋಡಿ ಕಿಲಕಿಲ ನಕ್ಕಿದ್ದಾರೆ. ಚಲಘಟ್ಟದಲ್ಲಿರುವ ನಲ್ಪಾಡ್ ಅಕಾಡೆಮಿ, ಮುನೇನಕೊಳಲಿನ ಕೆಲ ಗಣ್ಯರು, ಬಾಗೇಮನೆ ಟೆಕ್ ಪಾರ್ಕ್, ಸರ್ಜಾಪುರದ ರೈನ್ ಬೋ ಡ್ರೈಬ್ ಲೇಔಟ್ ನಿವಾಸಿಗಳೆಲ್ಲಾ ಸ್ಟೇ ತಂದಿದ್ದಾರೆ. ಆದರೆ ನಿನ್ನೆ, ಮೊನ್ನೆಯೆಲ್ಲಾ ಬಡ ಬಗ್ಗರ ಮನೆ ಗೋಡೆ, ಮರಗಳನ್ನೆಲ್ಲಾ ಕೆಡವಿ ಅದರ ಅವಶೇಷಗಳನ್ನು ತೆರವು ಮಾಡದೆ ಹೋದ ಅಧಿಕಾರಿಗಳು ಇಂದು ಸೈಲೆಂಟಾಗಿ ಮನೆಯಲ್ಲೇ ಬೆಚ್ಚಗೆ ಕೂತು ಬಿಟ್ಟಿದ್ದಾರೆ. ಇದು ಜನಾಕ್ರೋಶಕ್ಕೆ ಈಗ ಕಾರಣವಾಗಿದೆ.
ಒಟ್ಟಿನಲ್ಲಿ ರಾಜಕಾಲುವೆ ತೆರವು ಅಂತ ಗಲ್ಲಿಯಿಂದ ವಿಧಾನಸೌಧದ ವರೆಗೂ ಚರ್ಚೆ ನಡೆದಿತ್ತು. ಸರ್ಕಾರವೂ ನಾವು ಯಾರೂ ಮಾಡದ ಸಾಧನೆ ಮಾಡ್ತಿರೋದಾಗಿ ಬಡಾಯಿ ಕೊಚ್ಚಿಕೊಂಡಿತ್ತು. ಆದ್ರೆ ಒತ್ತುವರಿ ತೆರವು ಆರಂಭವಾದ ಐದೇ ದಿನಕ್ಕೆ ಸರ್ಕಾರ ಹಾಗೂ ಪಾಲಿಕೆಯ ನಿಜ ಬಣ್ಣ ಬಯಲಾಗಿದೆ. ಇವ್ರದ್ದು ಕೇವಲ ಆರಂಭಿಕ ಶೂರತ್ವ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.