ನವದೆಹಲಿ : ನೋವು ನಿವಾರಕ (Painkiller) ಹಾಗೂ ಆ್ಯಂಟಿಬಯೋಟಿಕ್ ಔಷಧಗಳ (Antibiotic medicines) ಅತಿಯಾದ ಮತ್ತು ಬೇಕಾಬಿಟ್ಟಿ ಬಳಕೆಯ ವಿರುದ್ಧ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇಂತಹ ಮಾತ್ರೆಗಳ ನಿರಂತರ ಮತ್ತು ದೀರ್ಘಕಾಲೀನ ಸೇವನೆಯು ಗಂಭೀರ ಕಿಡ್ನಿ ಸಮಸ್ಯೆಗಳಿಗೆ ಹಾಗೂ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್‌ಗೆ (ರೋಗಾಣು ಪ್ರತಿರೋಧಕತೆ) ಕಾರಣವಾಗಬಹುದು ಎಂದು ನಿಯಂತ್ರಣ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ 2026ರ ಸೆಪ್ಟೆಂಬರ್ 21ರಂದು ಸುತ್ತೋಲೆ ಹೊರಡಿಸಿರುವ ಸಿಡಿಎಸ್‍ಸಿಒ, ಈ ಔಷಧಿಗಳನ್ನು ಕೇವಲ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು ಎಂದು ಸಾರ್ವಜನಿಕರು, ವೈದ್ಯರು, ಔಷಧ ವಿತರಕರು ಹಾಗೂ ಆಸ್ಪತ್ರೆಗಳಿಗೆ ನೆನಪಿಸಿದೆ.
ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟಕ್ಕೆ ನಿಷೇಧ
ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940 ಹಾಗೂ ಅದರ ನಿಯಮಾವಳಿಗಳ ಪ್ರಕಾರ ಔಷಧಗಳ ಆಮದು, ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿ, ನೋವು ನಿವಾರಕಗಳಾದ ಎನ್‌ಎಸ್‌ಎಐಡಿ (NSAIDs) ಮತ್ತು ಆ್ಯಂಟಿಬಯೋಟಿಕ್‌ಗಳು ಸೇರಿದಂತೆ ಎಲ್ಲಾ ಔಷಧಗಳನ್ನು ನೋಂದಾಯಿತ ವೈದ್ಯರ ಲಿಖಿತ ಚೀಟಿ ಇದ್ದರೆ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ವೈದ್ಯರ ಸಲಹೆಯಿಲ್ಲದೆ ಕೌಂಟರ್‌ನಲ್ಲಿ ನೇರವಾಗಿ ಮಾತ್ರೆಗಳನ್ನು ನೀಡುವುದು ನಿಯಮಬಾಹಿರವಾಗಿದೆ.

ಸಾರ್ವಜನಿಕರಿಗೆ ಸಿಡಿಎಸ್‍ಸಿಒ ನೀಡಿದ ಮಹತ್ವದ ಸಲಹೆಗಳು
ಯಾವುದೇ ಕಾರಣಕ್ಕೂ ವೈದ್ಯರ ಸಮಾಲೋಚನೆ ಇಲ್ಲದೆ ನೋವು ನಿವಾರಕಗಳು ಮತ್ತು ಆ್ಯಂಟಿಬಯೋಟಿಕ್‌ಗಳನ್ನು ಪದೇಪದೇ ಅಥವಾ ದೀರ್ಘಕಾಲದವರೆಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಲಾಗಿದೆ. ಸಾಮಾನ್ಯ ವೈರಲ್ ಸೋಂಕುಗಳಂತಹ ಸಂದರ್ಭಗಳಲ್ಲಿ ಆ್ಯಂಟಿಬಯೋಟಿಕ್‌ಗಳ ಅಗತ್ಯವಿರುವುದಿಲ್ಲ, ಆದ್ದರಿಂದ ಸ್ವಯಂ ಚಿಕಿತ್ಸೆಯಿಂದ ದೂರವಿರಬೇಕು. ವೈದ್ಯರು ಸೂಚಿಸಿದ ಆ್ಯಂಟಿಬಯೋಟಿಕ್ ಕೋರ್ಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಹಾಗೂ ಉಳಿದ ಔಷಧಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಲಿ ಅಥವಾ ನಂತರದ ದಿನಗಳಲ್ಲಿ ಸ್ವತಃ ಬಳಸುವುದಾಗಲಿ ಮಾಡಬಾರದು. ಈಗಾಗಲೇ ಮೂತ್ರಪಿಂಡದ ಕಾಯಿಲೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ನೋವು ನಿವಾರಕಗಳನ್ನು ಬಳಸುವ ಮುನ್ನ ವೈದ್ಯರಿಗೆ ಮಾಹಿತಿ ನೀಡಬೇಕು. ನೋವು ಅಥವಾ ಜ್ವರ ಮರುಕಳಿಸುತ್ತಿದ್ದರೆ ತಾವೇ ಸ್ವತಃ ಮಾತ್ರೆ ನುಂಗುವ ಬದಲು ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ
ರೋಗಿಯ ವಯಸ್ಸು, ಆರೋಗ್ಯ ಪರಿಸ್ಥಿತಿ, ಇತರ ಕಾಯಿಲೆಗಳು ಮತ್ತು ಪ್ರಸ್ತುತ ಸೇವಿಸುತ್ತಿರುವ ಇತರೆ ಔಷಧಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ನೋವು ನಿವಾರಕ ಹಾಗೂ ಆ್ಯಂಟಿಬಯೋಟಿಕ್‌ಗಳನ್ನು ಶಿಫಾರಸು ಮಾಡಬೇಕು ಎಂದು ವೈದ್ಯರಿಗೆ ಸೂಚಿಸಲಾಗಿದೆ. ಮೂತ್ರಪಿಂಡದ ಸಮಸ್ಯೆ ಇರುವವರು, ನಿರ್ಜಲೀಕರಣ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೋವು ನಿವಾರಕಗಳನ್ನು ನೀಡುವಾಗ ಅತ್ಯಂತ ಕಡಿಮೆ ಪ್ರಮಾಣದ ಡೋಸ್ ಅನ್ನು ಅತಿ ಕಡಿಮೆ ಅವಧಿಗೆ ಮಾತ್ರ ಸೂಚಿಸಬೇಕು. ಆ್ಯಂಟಿಬಯೋಟಿಕ್‌ಗಳನ್ನು ಸೂಚಿಸುವಾಗ ಸೋಂಕಿನ ತೀವ್ರತೆ ಮತ್ತು ಪ್ರಯೋಗಾಲಯದ ವರದಿಗಳನ್ನು ಗಮನಿಸಬೇಕು. ಅನಗತ್ಯ ಸಂಯೋಜಿತ ಚಿಕಿತ್ಸೆಗಳು, ತಪ್ಪು ಔಷಧ ಆಯ್ಕೆ ಮತ್ತು ಅನಗತ್ಯ ದೀರ್ಘಾವಧಿಯ ಕೋರ್ಸ್‌ಗಳನ್ನು ಕಡ್ಡಾಯವಾಗಿ ತಪ್ಪಿಸಬೇಕು ಎಂದು ತಿಳಿಸಲಾಗಿದೆ.

ಕಿಡ್ನಿಯ ಮೇಲೆ ನೋವು ನಿವಾರಕಗಳ ಗಂಭೀರ ಅಡ್ಡಪರಿಣಾಮಗಳು
ಅಮೆರಿಕನ್ ಜರ್ನಲ್ ಆಫ್ ಕಿಡ್ನಿ ಡಿಸೀಸಸ್ ಪ್ರಕಾರ, ನೋವು ನಿವಾರಕಗಳ ಅತಿಯಾದ ಬಳಕೆಯು ಮೂತ್ರಪಿಂಡದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗುವುದು, ದೇಹದಲ್ಲಿ ರಕ್ತಪರಿಚಲನೆಯ ಏರುಪೇರಾಗಿ ದಿಢೀರ್ ಕಿಡ್ನಿ ವೈಫಲ್ಯ ಸಂಭವಿಸುವುದು ಮತ್ತು ಮೂತ್ರಪಿಂಡದ ಸೂಕ್ಷ್ಮ ನಾಳಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ರಕ್ತದಲ್ಲಿ ಪೊಟ್ಯಾಶಿಯಂ ಮಟ್ಟ ಹೆಚ್ಚಾಗುವುದು, ಸೋಡಿಯಂ ಪ್ರಮಾಣ ಕುಸಿಯುವುದು ಅಥವಾ ದೇಹದಲ್ಲಿ ಅನಗತ್ಯ ನೀರು ಶೇಖರಣೆಯಾಗಿ ಊತ ಹಾಗೂ ಹೃದಯ ವೈಫಲ್ಯ ಉಂಟಾಗಬಹುದು. ಇಷ್ಟೇ ಅಲ್ಲದೆ, ಮೂತ್ರಪಿಂಡದ ಅಂಗಾಂಶಗಳು ನಶಿಸುವುದು, ನೆಫ್ರೋಟಿಕ್ ಸಿಂಡ್ರೋಮ್‌ನಂತಹ ಗಂಭೀರ ಅಸ್ವಸ್ಥತೆಗಳು ಕಾಣಿಸಿಕೊಳ್ಳುವುದು ಹಾಗೂ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವವರಲ್ಲಿ ರೋಗ ಮತ್ತಷ್ಟು ಉಲ್ಬಣಗೊಳ್ಳುವ ಅಪಾಯವಿದೆ.






