ಬೆಂಗಳೂರು :ಮಾ.25: ಚಿಕ್ಕಮಗಳೂರು BJP ಶಾಸಕ ಸಿ.ಟಿ ರವಿ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗಿದ್ದರು. ಆ ಬಳಿಕ ಸಚಿವ ಸ್ಥಾನವನ್ನು ವಾಪಸ್ ಪಡೆದು ಪಕ್ಷ ಸಂಘಟನೆಗೆ ಕಳುಹಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದ ಬಳಿಕ ಬಿ.ಎಲ್ ಸಂತೋಷ್ ನೇತೃತ್ವದ ಟೀಂ ಸೇರಿಕೊಂಡ ಸಿ.ಟಿ ರವಿ ರಾಜ್ಯದಲ್ಲಿ ಪ್ರಮುಖ ನಾಯಕರಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಕೆಲವು ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿಯೂ ನೇಮಕ ಆಗಿದ್ದರು. ಇನ್ನು ಪ್ರಮುಖ ವಿಚಾರಗಳ ಬಗ್ಗೆ ಮುಂಚೂಣಿಯಲ್ಲಿ ಮಾತನಾಡ್ತಿದ್ದ ಸಿ.ಟಿ ರವಿ ಇತ್ತೀಚಿಗೆ ಉರಿಗೌಡ ನಂಜೇಗೌಡ ಟಿಪ್ಪುವನ್ನು ಕೊಂದರು ಎನ್ನುವ ಮೂಲಕ ಸುಳ್ಳಿನ ಗೋಪುರ ಕಟ್ಟಿ ಮುಗ್ಗರಿಸಿದ್ದರು. ಪತ್ರಕರ್ತರು ಪ್ರಶ್ನೆಯನ್ನೇ ಮಾಡದಿದ್ದರೂ ಸಿಟಿ ರವಿ, ಬಿ.ಎಸ್ ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡುವುದು ಕಿಚನ್ನಲ್ಲಿ ಅಲ್ಲ, ಯಡಿಯೂರಪ್ಪ ಮಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡುವುದಿಲ್ಲ ಎಂದಿದ್ದರು. ಪತ್ರಕರ್ತರು ಮಾವು ಆ ಪ್ರಶ್ನೆಯನ್ನೇ ಕೇಳಲಿಲ್ಲ ಎಂದಾಗ, ಇಲ್ಲಿ ಪಕ್ಕದಲ್ಲಿ ಕೇಳಿದ್ರು ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದರು. ಇದೀಗ ಸಿಟಿ ರವಿ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ.
ಅಡುಗೆ ಮನೆಯಲ್ಲೇ ನಿರ್ಧಾರ ಆಯ್ತು ಟಿಕೆಟ್..!
ಅಮಿತ್ ಷಾ ನಿನ್ನೆ ಬೆಳಗ್ಗೆ (ಮಾರ್ಚ್ 24) ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಬೆಳಗ್ಗೆ ಉಪಹಾರವನ್ನು ಯಡಿಯೂರಪ್ಪ ಅವರ ಮನೆಯಲ್ಲೇ ಸೇವನೆ ಮಾಡಿದರು. ಆ ಬಳಿಕ ಬಿಜೆಪಿ ಟಿಕೆಟ್ ಹಂಚಿಕೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಯ್ತು ಎನ್ನಲಾಗಿದೆ. ಇನ್ನು ಯಡಿಯೂರಪ್ಪ ಮನೆ ಬಾಗಿಲಿಗೆ ಬರ್ತಿದ್ದ ಹಾಗೆ ಹೂ ಬೊಕ್ಕೆ ಹಿಡಿದು ನಿಂತಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಬೊಕ್ಕೆಯನ್ನು ವಿಜಯೇಂದ್ರ ಅವರಿಗೆ ಕೊಡುವಂತೆ ಸೂಚಿಸಿದ (ಯಡಿಯೂರಪ್ಪ ಕ್ಷಣಕಾಲ ಕಕ್ಕಾಬಿಕ್ಕಿ. ಅವಮಾನ ಆದಂತೆ ನೋಡಿದ ಯಡಿಯೂರಪ್ಪ) ಅಮಿತ್ ಷಾ, ವಿಜಯೇಂದ್ರ ಕೈಯಿಂದ ಪುಷ್ಪಗುಚ್ಚ ಪಡೆದುಕೊಂಡ್ರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂಧರ್ಭದಲ್ಲಿ ಯಡಿಯೂರಪ್ಪ ಮನೆಗೆ ಭೇಟಿ ನೀಡಿದ್ದ ವಿಶೇಷ ಅಂದರೆ, ವಿಜಯೇಂದ್ರ ಶಿಕಾರಿಪುರ ಬದಲು ವರುಣಾದಲ್ಲಿ ಸ್ಪರ್ಧೆ ಮಾಡಲಿ ಎನ್ನುವುದಾಗಿತ್ತು ಅನ್ನೋದು ಮಾಹಿತಿ. ಕಾರಣ ಏನಂದ್ರೆ ವರುಣಾದಲ್ಲಿ ಲಿಂಗಾಯತ ಸಮುದಾಯದ ಮತಗಳೇ ಅತ್ಯಧಿಕ ಆಗಿವೆ. ಹೀಗಿರುವಾಗ ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡಿದ್ರೆ ಸಿದ್ದರಾಮಯ್ಯಗೆ ಮಣ್ಣುಮುಕ್ಕಿಸಬಹುದು ಅನ್ನೋ ಲೆಕ್ಕಾಚಾರ.
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಗೆಲ್ತಾರಾ..?
ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಇರುವ ವರುಣಾ ಕ್ಷೇತ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಇಚ್ಛಾಶಕ್ತಿಯಿಂದ ಅಭಿವೃದ್ಧಿ ಆಗಿರುವ ವಿಧಾನಸಭಾ ಕ್ಷೇತ್ರ. ಕೆಆರ್ಎಸ್ನಿಂದ 90ರ ದಶಕದಲ್ಲೇ ನೀರಾವರಿ ಸೌಲಭ್ಯ ಕೊಡಿಸಿದ್ದ ಸಿದ್ದರಾಮಯ್ಯ ವರುಣಾದಲ್ಲಿ ಈಗಾಗಲೇ 2008 ಹಾಗು 2013ರಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಡೆಗೆ ಹೋಗಿದ್ದ ಸಿದ್ದರಾಮಯ್ಯ, ಆ ಬಳಿಕ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಚಾಮುಂಡೇಶ್ವರಿಯಲ್ಲಿ ಸೋಲುಂಡರೂ ಬಾದಾಮಿಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಸಿದ್ದರಾಮಯ್ಯ, ಈ ಬಾರಿ ಮತ್ತೆ ತನ್ನ ಕರ್ಮಭೂಮಿ ವರುಣಾಗೆ ಹೋಗುತ್ತಿದ್ದಾರೆ. ಈ ಬಾರಿ ವಿರೋಧ ಪಕ್ಷಗಳ ಜೊತೆಗೆ ಸ್ವಪಕ್ಷದವರ ಕಣ್ಣು ತಪ್ಪಿಸಿ ಗೆದ್ದು ಬರುವ ಸಾಹಸ ಮಾಡಬೇಕಿರುವ ಸಿದ್ದರಾಮಯ್ಯ ಕಟ್ಟ ಕಡೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. ತನ್ನ ಕ್ಷೇತ್ರದ ಜನತೆ ಕಡೆಯ ಚುನಾವಣೆ ಎನ್ನುವ ಕಾರಣದ ಜೊತೆಗೆ ಈ ಬಾರಿ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಆಗುವುದರಿಂದ ಅಭಿವೃದ್ಧಿ ಹಿತದೃಷ್ಟಿಯಿಂದಲೂ ಪಕ್ಷಭೇದ ಮರೆತು ಗೆಲ್ಲಿಸುತ್ತಾರೆ ಅನ್ನೋದು ಸಿದ್ದರಾಮಯ್ಯ ನಂಬಿಕೆ. ಆ ನಂಬಿಕೆಗೆ ಕೊಳ್ಳಿ ಇಡುವುದಕ್ಕೆ ಬಿಜೆಪಿ ಹೈಕಮಾಂಡ್ ಸ್ಕೆಚ್ ಹಾಕಿದೆ ಎನ್ನಲಾಗ್ತಿದೆ. ವಿಜಯೇಂದ್ರ ಗೆಲುವಿನ ಲೆಕ್ಕಾಚಾರಗಳು ಹೀಗಿವೆ.
ಸಿದ್ದರಾಮಯ್ಯ ವಿರುದ್ಧ ಬಿಎಸ್ವೈ ಅಖಾಡಕ್ಕಿಳಿದರೆ ಸೋಲು..!
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ 55 ಸಾವಿರ ಮತಗಳು ಇವೆ. ಬಿ.ಎಸ್ ಯಡಿಯೂರಪ್ಪ ಮನೆಸ್ಸು ಮಾಡಿದರೆ ಸಂಪೂರ್ಣ ಮತಗಳನ್ನು ಬಿಜೆಪಿಗೆ ಸೆಳೆಯುವ ಶಕ್ತಿಯನ್ನು ಹೊಂದಿದ್ದಾರೆ. ಕಳೆದ 2013ರಲ್ಲಿ ಬಿಎಸ್ ಯಡಿಯೂರಪ್ಪ ಕೆಜೆಪಿ ಪಕ್ಷ ಸ್ಥಾಪನೆ ಮಾಡಿದ್ದರು. ಆಗ ಕೆಜೆಪಿ ಅಭ್ಯರ್ಥಿ ಆಗಿದ್ದ ಕಾಪು ಸಿದ್ದಲಿಂಗಸ್ವಾಮಿಗೆ 54,744 ಮತಗಳು ಬಂದಿದ್ದವು. ಎದುರಾಳಿ ಆಗಿದ್ದ ಸಿದ್ದರಾಮಯ್ಯ 84,385 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಅದೇ ಬಿಜೆಪಿ ಅಬ್ಯರ್ಥಿ ಮಹೇಂದ್ರ ಎಸ್.ಡಿ ಕೇವಲ 1,070 ಮತಗಳನ್ನು ಪಡೆದಿದ್ದರು. ಅದೇ ರೀತಿ 2018ರಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ 96,435 ಮತಗಳನ್ನು ಪಡೆದಿದ್ದರೆ ಬಿಜೆಪಿಯ ತೋಟದಪ್ಪ ಬಸವರಾಜು 37,819 ಮತಗಳನ್ನು ಪಡೆದು ಸೋಲುಂಡಿದ್ದರು. ಅಂದರೆ ಬಿ.ಎಸ್ ಯಡಿಯೂರಪ್ಪ ಮಗನ ಭವಿಷ್ಯಕ್ಕಾಗಿ ಆದರೂ ಅಬ್ಬರದ ಪ್ರಚಾರ ಮಾಡ್ತಾರೆ. ಆಗ ಎದುರಾಳಿ ಪಕ್ಷದ ಸಿದ್ದರಾಮಯ್ಯ ಅವರನ್ನು ಮಣಿಸಬಹುದು. ಒಂದು ವೇಳೆ ಸಿದ್ದರಾಮಯ್ಯ ಹಠಕ್ಕೆ ಬಿದ್ದು ಕ್ಷೇತ್ರದಲ್ಲೇ ಮೊಕ್ಕಾ ಹೂಡಿ ಗೆದ್ದರೂ ಬಿಜೆಪಿ ಪಕ್ಷಕ್ಕೆ ನಷ್ಟವೇನಿಲ್ಲ. ಸಿದ್ದರಾಮಯ್ಯ ರಾಜ್ಯದ ಇತರ ಕಡೆ ಪ್ರಚಾರ ಮಾಡುವುದನ್ನು ತಡೆದಂತಾಗಲಿದೆ ಎನ್ನುವುದು ಈ ಲೆಕ್ಕಾಚಾರದ ಹಿಂದಿದೆ ಎನ್ನಲಾಗ್ತಿದೆ. ಆದರೆ ಅಡುಗೆ ಮನೆಯಲ್ಲಿ ಟಿಕೆಟ್ ಹಂಚಿಕೆ ಆಗಲ್ಲ, ಯಡಿಯೂರಪ್ಪನ ಮಗ ಅನ್ನೋ ಕಾರಣಕ್ಕೆ ನಾವು ಟಿಕೆಟ್ ನೀಡಲ್ಲ ಎಂದಿದ್ದ ರವಿ ಮತ್ತೆ ಮತ್ತೆ ಮುಗ್ಗರಿಸುತ್ತಿರುವುದು ಮಾತ್ರ ವಿಪರ್ಯಾಸ.
ಕೃಷ್ಣಮಣಿ