
ಬೆಂಗಳೂರಿನಲ್ಲಿ ನಡೆದ CSK Vs RCB ಪಂದ್ಯದಲ್ಲಿ RCB ಜಯಭೇರಿ ಬಾರಿಸಿದೆ. ಪ್ಲೇಆಫ್‌ಗೆ ಪ್ರವೇಶ ಪಡೆಯಲು 18 ರನ್‌ಗಳಿಂದ ಗೆಲ್ಲಬೇಕು ಅನ್ನೋ ಗುರಿ ಜೊತೆಗೆ ಆಟವಾಡಿದ RCB ಹುಡುಗರು, ಚೆನ್ನೈ ಸೂಪರ್ ಕಿಂಗ್ಸ್ ಸೊಕ್ಕು ಮುರಿದು ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಎರಡೂ ತಂಡಗಳು ಘಟಾನುಘಟಿಗಳು ಆಗಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ಆರ್‌ಸಿಬಿ ಎದುರು ಗೆದ್ದು ಬೀಗುವ ವಿಶ್ವಾಸದಲ್ಲಿತ್ತು. ತವರಿನ ಅಂಗಳದಲ್ಲಿ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಭಿಮಾನಿಗಳು ತಲೆ ತಗ್ಗಿಸುವಂತೆ ಮಾಡಲಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಟಗರು ಗುಮ್ಮಿದ ರೀತಿ ಗುಮ್ಮಿದ್ದಾರೆ.

ಕ್ರೀಡೆ ಅಂದ ಮೇಲೆ ಸೋಲು ಗೆಲುವು ಸಹಜ. ಆರ್‌ಸಿಬಿ ಹೊಂದಿರುವಷ್ಟು ಅಭಿಮಾನಿ ಬಳಗವನ್ನು ಇಲ್ಲೀವರೆಗೂ ಯಾವುದೇ ತಂಡ ಕೂಡ ಹೊಂದಿಲ್ಲ. ಆದರೂ ಇಲ್ಲೀವರೆಗೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿದಿಲ್ಲ ಅನ್ನೋದು ಅಷ್ಟೇ ಕಹಿ ಸತ್ಯ. ಆದರೆ ಈ ಬಾರಿ ಮೊದಲಿಗೆ ಸೋಲುಗಳ ಸರಮಾಲೆ ಜೊತೆಗೆ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ಪುಟಿದೆದ್ದು ರಣರೋಚಕವಾಗಿ ಗೆದ್ದು ಪ್ಲೇಆಫ್ ಪ್ರವೇಶ ಮಾಡಿದ್ದು, ಫೈನಲ್ ಪ್ರವೇಶ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಬಲಿಷ್ಟ ತಂಡ ಸಿಎಸ್‌ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಅಧ್ಯಾಯ ಆರಂಭ ಆಗಿದೆ.

ಐಪಿಎಲ್ ಆರಂಭಕ್ಕೂ ಮುನ್ನವೇ ಇದೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯ ಕೊಟ್ಟ ಮಾತಿನಂತೆ ಆರ್‌ಸಿಬಿ ಬೆಂಗಳೂರು ತಂಡದಲ್ಲಿ ಈಗ ಹೊಸ ಅಧ್ಯಾಯ ಶುರುವಾಗಿದೆ.. 219 ರನ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯ್ತು. ಅಂದರೆ 18 ರನ್‌ಗಳಿಂದ ಗೆಲುವು ದಾಖಲಿಸಿ ಪ್ಲೇಆಫ್ ಪ್ರವೇಶ ಮಾಡಬೇಕಿದ್ದ ಆರ್‌ಸಿಬಿ ಟೀಂ 27 ರನ್‌ಗಳಿಂದ ಜಯ ದಾಖಲಿಸುವ ಮೂಲಕ ನಿರಾಯಾಸವಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಗಿತ ಮಾಡಿತು. ಅಂದರೆ ಸೋಲುತ್ತದೆ ಎಂದುಕೊಂಡ ಟೀಂ ಜಯಭೇರಿ ದಾಖಲಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಸಾಕ್ಷಿಯಾದ್ರು.

ದೇಶದಲ್ಲಿ ಜೂನ್ 4ರಂದು ಲೋಕಸಭಾ ಫಲಿತಾಂಶ ಹೊರ ಬೀಳಲಿದ್ದು, ಆರ್‌ಸಿಬಿ – ಚೆನ್ನೈ ಪಂದ್ಯದ ರೀತಿಯಲ್ಲೇ ಲೋಕಸಭಾ ಚುನಾವಣೆ ರಣರೋಚಕವಾಗಿ ಇರಲಿದೆ ಎನ್ನುವ ಅಂಕಿ ಅಂಶಗಳು ಈಗಾಗಲೇ ಓಡಾಡುವುದಕ್ಕೆ ಶುರುವಾಗಿವೆ. ದೇಶದಲ್ಲಿ ಎನ್‌ಡಿಎ ಮೈತ್ರಿ ಕೂಡ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣಿಸುತ್ತಿದೆ. ಜನರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ ಎನ್ನುವ ಮಾತುಗಳ ನಡುವೆ, ಬೆಂಗಳೂರಿನಲ್ಲಿ ಪಂದ್ಯ ನೋಡಿ ಸಿಎಂ ಸಿದ್ದರಾಮಯ್ಯ ಆರ್‌ಸಿಬಿ ಟೀಂಗೆ ಚಿಯರ್ಸ್ ಮಾಡಿದ್ದಾರೆ. ರಾಜಕಾರಣದಲ್ಲೂ ಪ್ರಧಾನಿ ಮೋದಿಗೆ ನೇರ ಪ್ರಶ್ನೆಗಳಿಂದ ಎದುರಿಸುವ ಧೈರ್ಯ ಹೊಂದಿರುವ ಸಿದ್ದರಾಮಯ್ಯ ಟಗರು ರೀತಿ ಗುಮ್ಮುವುದು ಸತ್ಯವೇ ಸರಿ.











