ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಬಹುದಾದ ಸಂಭವನೀಯ ದಾಳಿ, ನಂತರದಲ್ಲಿ ನ್ಯಾಟೋ ದೇಶಗಳು ರಷ್ಯದ ವಿರುದ್ಧ ನಡೆಸಬಹುದಾದ ಪ್ರತಿದಾಳಿ ಊಹೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬಿರುಗಾಳಿ ಎದ್ದಿದೆ. ಕಚ್ಚಾ ತೈಲ ದರ ಏಳು ವರ್ಷಗಳ ಗರಿಷ್ಠಮಟ್ಟಕ್ಕೆ ಏರಿದ್ದು, ಶೀರ್ಘದಲ್ಲೇ ಶತಕ ದಾಟುವ ಸಾಧ್ಯತೆ ಇದೆ.
ಈ ಬೆಳವಣಿಗೆ ತೈಲೋತ್ಪನ್ನ ರಾಷ್ಟ್ರಗಳಿಗೆ ಸಂತಸದ ಸುದ್ದಿಯಾಗಿರಬಹುದು. ಆದರೆ, ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಆರ್ಥಿಕತೆ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ. ಭಾರತ ಶೇ.86ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಅತಿ ಹೆಚ್ಚಿನ ಒತ್ತಡ ಎದುರಿಸುವ ಮೊದಲ ರಾಷ್ಟ್ರವಾಗಲಿದೆ. ನೇರವಾಗಿ ಹೇಳಬೇಕೆಂದರೆ ಭಾರತದ ಜನರು ಕಚ್ಚಾ ತೈಲ ಏರಿಕೆಯ ಹೊರೆಯನ್ನು ಭರಿಸಲು ಸಿದ್ಧವಾಗಬೇಕಿದೆ.
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಕಳೆದ ನೂರು ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ನರೇಂದ್ರ ಮೋದಿ ಸರ್ಕಾರ ತಟಸ್ಥವಾಗಿ ಇಟ್ಟಿದೆ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುವ ಮೋದಿ ಸರ್ಕಾರ, ಚುನಾವಣೆ ಮುಗಿದ ನಂತರ ನೂರು ದಿನಗಳಲ್ಲಾದ ನಷ್ಟವನ್ನು ಹತ್ತಾರು ದಿನಗಳಲ್ಲೇ ತುಂಬಿಕೊಳ್ಳಲಿದೆ.

ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಇದ್ದಾಗಲೇ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಿತ್ತು. ಅಂದರೆ, ಪೆಟ್ರೋಲ್ ಅಷ್ಟೇ ಅಲ್ಲಾ ಡಿಸೇಲ್ ಕೂಡಾ ಶತಕದ ಗಡಿ ದಾಟಿತ್ತು. ಚುನಾವಣೆ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ತಾನೇ ಹೇರಿದ್ದ ಸುಂಕವನ್ನು ಕೊಂಚ ಕಡಿತ ಮಾಡಿತ್ತು. ನಂತರ ದರ ಏರಿಕೆ ಮಾಡದೆ ತಟಸ್ಥವಾಗಿರುವಂತೆ ನೋಡಿಕೊಂಡಿದೆ.
ಮಾರ್ಚ್ 10 ರಂದು ಐದೂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬರಲಿದೆ. ಫಲಿತಾಂಶ ಮೋದಿ ಸರ್ಕಾರದ ಪರವಾಗಿ ಬರಲಿ ವಿರುದ್ಧವಾಗಿ ಬರಲಿ, ಪೆಟ್ರೋಲ್ ಡಿಸೇಲ್ ದರ ಭಾರಿ ಪ್ರಮಾಣದಲ್ಲಿ ಏರುವುದಂತೂ ಗ್ಯಾರಂಟಿ.
ಏಕೆಂದರೆ, ಅಷ್ಟೊತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಶತಕದ ಗಟಿ ದಾಟುವ ಸಾಧ್ಯತೆ ಇದೆ. ಕಳೆದ ವರ್ಷವಿಡಿ 60- 65 ಡಾಲರ್ ಆಜುಬಾಜಿನಲ್ಲಿದ್ದ ಕಚ್ಚಾ ತೈಲದರವು, ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸುವ ಸಲುವಾಗಿ ಗಡಿಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದ ನಂತರ ತೈಲದರ ತ್ವರಿತವಾಗಿ ಜಿಗಿದಿದೆ.
ಕಳೆದ ಮೂರು ತಿಂಗಳಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಪ್ರಸ್ತುತ ಪ್ರತಿ ಬ್ಯಾರೆಲ್ ಬ್ರೆಂಟ್ ಕ್ರೂಡ್ 96.50 ಡಾಲರ್ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ (ಡಬ್ಲ್ಯೂಟಿಐ) 95 ಡಾಲರ್ ಆಜುಬಾಜಿನಲ್ಲಿ ವಹಿವಾಟುಗುತ್ತಿವೆ. ನಿತ್ಯದ ಏರಿಳಿಕೆ ಒಂದೆರಡು ಡಾಲರ್ ಗಳಷ್ಟಿರುತ್ತದೆ. ಆದರೆ, ಇದು ಇಳಿಜಾರಿನಲ್ಲಿ ಸಾಗದೇ ಏರುಹಾದಿಯಲ್ಲೇ ಜಿಗಿಯುತ್ತಿದೆ. ಈ ತ್ವರಿತ ಜಿಗಿತದಿಂದಾಗಿ ಶೀಘ್ರವೇ ಕಚ್ಚಾ ತೈಲ 100 ಡಾಲರ್ ಗಡಿ ದಾಟುತ್ತದೆಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಮಾರ್ಚ್ 10ರ ನಂತರ ಏನೇನಾಗಲಿದೆ?
ದೇಶೀಯ ಮಾರುಕಟ್ಟೆಯಲ್ಲಿ ತೀವ್ರ ಪ್ರಮಾಣದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಲಿದೆ. ಅದರ ಪರಿಣಾಮವಾಗಿ ಸರಕು ಸಾಗಣೆ ಸೇರಿದಂತೆ ಪೂರಕವಾದ ಸೇವೆಗಳ ದರವೂ ಏರಲಿದೆ. ಅಡುಗೆ ಅನಿಲ ದರವೂ ಜಿಗಿಯಲಿದೆ. ಹೋಟೆಲ್ ಗಳಲ್ಲಿ ತಿಂಡಿ ತಿನಿಸು, ಕಾಫಿ ಟೀ ಇತ್ಯಾದಿ ದರಗಳೂ ಏರಬಹುದು. ಇದರಿಂದ ಜನಸಾಮಾನ್ಯ ಮೇಲೆ ಭಾರಿ ಹೊರೆ ಬೀಳಲಿದೆ. ಹಣದುಬ್ಬರ ತ್ವರಿತವಾಗಿ ಜಿಗಿಯಲಿದ್ದು, ಅದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರ ಏರಿಸುವ ಸಾಧ್ಯತೆ ಇದೆ.

ಇಷ್ಟಾದರೂ ಜನರು ದರ ಏರಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬಹುದು ಎಂದು ನಿರೀಕ್ಷೆ ಮಾಡುವಂತಿಲ್ಲ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹತ್ತಾರು ಮಾರ್ಗಗಳನ್ನು ಮೋದಿ ಸರ್ಕಾರ ಕಂಡುಕೊಂಡಿದೆ. ಈಗ ಕರ್ನಾಟಕದಲ್ಲಿ ಹಿಜಾಬಿಗೆ ಪ್ರತಿಯಾಗಿ ಕೆಸರಿ ಶಾಲನ್ನು ತಂದು ಇಡೀ ಶೈಕ್ಷಣಿಕ ಪರಿಸರವನ್ನೇ ಹಾಳುಮಾಡುತ್ತಿರುವಂತೆ, ಜನರ ಭಾವನೆಗಳನ್ನು ಕೆರಳಿಸುವ ಮತ್ತಷ್ಟು ವಿವಾದಗಳ ಹುಟ್ಟಿಕೊಳ್ಳಲಿವೆ. ಮೂರ್ಖಮಾಧ್ಯಮಗಳೂ ಅವುಗಳ ಬೆನ್ನ ಹಿಂದೆ ಬಿದ್ದು, ವಾಸ್ತವಿಕತೆಯನ್ನೇ ಮರೆತು ವರದಿ ಮಾಡುತ್ತವೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಏರುತ್ತಲೇ ಇರುತ್ತದೆ!