• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಂಡವಾಳ ಮಾರುಕಟ್ಟೆಯಲ್ಲಿ ಕ್ರಿಕೆಟ್‌ ಎಂಬ ದೈತ್ಯ

ನಾ ದಿವಾಕರ by ನಾ ದಿವಾಕರ
October 25, 2023
in Top Story, ಕ್ರೀಡೆ, ದೇಶ
0
ಬಂಡವಾಳ ಮಾರುಕಟ್ಟೆಯಲ್ಲಿ ಕ್ರಿಕೆಟ್‌ ಎಂಬ ದೈತ್ಯ
Share on WhatsAppShare on FacebookShare on Telegram

ಕ್ರಿಕೆಟ್‌ ಕ್ರೀಡೆಯ ಪೊರೆ ಕಳಚಿಕೊಂಡು ಮಾರುಕಟ್ಟೆ-ರಾಷ್ಟ್ರೀಯ ಭಾವೋನ್ಮಾದದ ನೆಲೆಯಾಗಿದೆ
-ನಾ ದಿವಾಕರ

ADVERTISEMENT

ಕಳೆದ ನಾಲ್ಕು ದಶಕಗಳಲ್ಲಿ ರೂಪಾಂತರಗೊಂಡಿರುವ ಕ್ರಿಕೆಟ್‌ ಎಂಬ Gentlemanʼs Game ಈಗ ಕ್ರೀಡಾ ಸ್ಪೂರ್ತಿಗಿಂತಲೂ ಹೆಚ್ಚಾಗಿ ಪ್ರಾದೇಶಿಕ ಅಸ್ಮಿತೆ ಮತ್ತು ರಾಷ್ಟ್ರೀಯತೆಯ ಉನ್ಮಾದಗಳಿಗೆ ನೆಲೆಯಾಗಿರುವುನ್ನು ಗಮನಿಸಬಹುದು. 19ನೆಯ ಶತಮಾನದಲ್ಲಿ ಬ್ರಿಟನ್ನಿನ ಕುಲೀನ ಹಾಗೂ ಶ್ರೀಮಂತ ಕುಟುಂಬಗಳು, ರಾಜಪರಿವಾರದವರು ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ಕಂಡುಕೊಂಡ ಒಂದು ಕ್ರೀಡೆ ಇಂದು ವಿಶ್ವದಾದ್ಯಂತ ಹರಡಿದ್ದು, ಒಂದು ಕಾಲದಲ್ಲಿ ಕ್ರಿಕೆಟ್‌ ಎಂದರೆ “ ಹನ್ನೊಂದು ಮೂರ್ಖರು ಆಡುವ ಹನ್ನೊಂದು ಸಾವಿರ ಮೂರ್ಖರು ವೀಕ್ಷಿಸುವ ಕ್ರೀಡೆ ” ಎಂದು ಜಾರ್ಜ್‌ ಬರ್ನಾರ್ಡ್‌ ಷಾ ಬಣ್ಣಿಸಿದ್ದೂ ಉಂಟು. ಆದರೆ ಇಂದು ಕ್ರಿಕೆಟ್‌ ಎಂಬ ಆಟ ಮನೆಮನೆಯನ್ನೂ ಹೊಕ್ಕಿದೆ. ಒಂದು ಕ್ರಿಕೆಟ್‌ ಪಂದ್ಯ ಮಾರುಕಟ್ಟೆಗಳ ಜನಸಂದಣಿಯನ್ನೂ ಪ್ರಭಾವಿಸುವ ಮಟ್ಟಿಗೆ ಈ ಕ್ರೀಡೆ ಸಾಮಾನ್ಯ ಜನರ ನಡುವೆ ಮನೆ ಮಾಡಿದೆ.

ಭಾರತದಲ್ಲಿ ವಸಾಹತು ಕಾಲದಿಂದಲೂ ಕ್ರಿಕೆಟ್‌ ಒಂದು ಮೇಲ್‌ ಮಧ್ಯಮ ವರ್ಗದ ಕ್ರೀಡೆಯಾಗಿ ಹೊರಹೊಮ್ಮಿದ್ದರೂ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಜನರ ಕ್ರೀಡೆಯಾಗಿದೆ. ಇದಕ್ಕೆ ಕಾರಣ 1983ರ ವಿಶ್ವಕಪ್‌ ವಿಜಯ ಮತ್ತು 50-20 ಓವರ್‌ಗಳ ಅಲ್ಪಾವಧಿಯ ಪಂದ್ಯಗಳು. ಆಸ್ಟ್ರೇಲಿಯಾದ ಕೆರ್ರಿ ಪ್ಯಾಕರ್‌ ಕಂಡುಹಿಡಿದ ಈ ಕ್ಷಿಪ್ರ ಗತಿಯ ಕ್ರಿಕೆಟ್‌ ಬಹುಬೇಗನೆ ವಿಶ್ವದ ಎಲ್ಲ ಆಟಗಾರರನ್ನೂ ಆಯಸ್ಕಾಂತದಂತೆ ಸೆಳೆದುಕೊಂಡಿತ್ತು. ಆರಂಭದಲ್ಲಿ ಪ್ಯಾಕರ್‌ ಆಯೋಜಿಸಿದ ಪಂದ್ಯಾವಳಿಗಳಲ್ಲಿ ಭಾಗವಹಿಸುವವರನ್ನು ಆಯಾ ದೇಶದ ಕ್ರಿಕೆಟ್‌ ಮಂಡಳಿಗಳು ನಿಷೇಧಿಸಿದ್ದೂ ಉಂಟು. ಆದರೆ 1970ರ ನಡುವಿನ ವಿಶ್ವಕಪ್‌ ಪಂದ್ಯಾವಳಿ ಇಡೀ ಚಿತ್ರಣವನ್ನೇ ಬದಲಾಯಿಸಿತ್ತು. ಐದು ದಿನಗಳ ಟೆಸ್ಟ್‌ ಪಂದ್ಯದ ವಕ್ತಾರರೂ ಸಹ ಒಂದು ದಿನದ ಪಂದ್ಯಗಳಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ಕೌಶಲವನ್ನು ಗಳಿಸತೊಡಗಿದರು. ಈ ಪ್ರಕ್ರಿಯೆಯಲ್ಲೇ 20ನೆಯ ಶತಮಾನದ ಆರಂಭದಲ್ಲೂ ಕುಲೀನರ ʼಗಂಭೀರ ಆಟʼ ಆಗಿದ್ದ ಕ್ರಿಕೆಟ್‌ ಶತಮಾನದ ಅಂತ್ಯದ ವೇಳೆಗೆ ಮನರಂಜನೆಯಾಗಿ ರೂಪಾಂತರಗೊಂಡಿತ್ತು.

ಮಾರುಕಟ್ಟೆ ಮತ್ತು ಕ್ರೀಡೆ

ಈ ರೂಪಾಂತರ ಪ್ರಕ್ರಿಯೆಗೆ ಪೂರಕವಾಗಿ ಜಾಗತಿಕ ಮಟ್ಟದಲ್ಲೂ ಬಂಡವಾಳಶಾಹಿ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ಶಕ್ತಿಗಳು ಕ್ರಿಕೆಟ್‌ ಕ್ರೀಡೆಯನ್ನು ತಮ್ಮದಾಗಿಸಿಕೊಂಡಿದ್ದವು. ಭಾರತದಲ್ಲಿ 1990ರ ನಂತರ ನೆಲೆಯೂರಿದ ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳದ ಜಾಗತೀಕರಣವು ಕ್ರಿಕೆಟ್‌ ಕ್ರೀಡೆಯನ್ನು ಮಾರುಕಟ್ಟೆಯ ಸರಕಿನಂತೆ ಬಳಸಲಾರಂಭಿಸಿದ್ದು ಈಗ ಇತಿಹಾಸ. ಅಲ್ಲಿಯವರೆಗೂ ಒಂದು ತಂಡವನ್ನು ಪ್ರತಿನಿಧಿಸುತ್ತಿದ್ದ ಆಟಗಾರರು ಮಾರುಕಟ್ಟೆಯ ಸರಕುಗಳಿಗೆ ರಾಯಭಾರಿಗಳಾದರು. ಶ್ವೇತವಸ್ತ್ರಧಾರಿ ಟೆಸ್ಟ್‌ ಆಟಗಾರರಿಗಿಂತ ಭಿನ್ನವಾಗಿ ಏಕದಿನದ ಕ್ರೀಡಾಪಟುಗಳು ತಮ್ಮ ಸಮವಸ್ತ್ರದ ಮೂಲಕವೇ ನಡೆದಾಡುವ ಜಾಹೀರಾತು ಫಲಕಗಳಾಗಿ ಮೈದಾನದಲ್ಲಿ ವಿಜೃಂಭಿಸಲಾರಂಭಿಸಿದರು. ಮೈದಾನದಲ್ಲಿ ಧರಿಸುವ ಹೆಲ್ಮೆಟ್‌ನಿಂದ ಬೂಟಿನ ತಳದವರೆಗೂ ಔದ್ಯಮಿಕ ಮಾರುಕಟ್ಟೆಯ ಲಾಂಛನಗಳು ಆಟಗಾರರ ದೇಹಗಳ ಮೇಲೆ ರಾರಾಜಿಸಲಾರಂಭಿಸಿದವು. ಈ ಸನ್ನಿವೇಶವನ್ನು ಸಮರ್ಪಕವಾಗಿ ಬಳಸಿಕೊಂಡ ಮಾರುಕಟ್ಟೆ ಜಗತ್ತು ಕ್ರೀಡಾ ಪ್ರಪಂಚವನ್ನು ಪ್ರವೇಶಿಸಿದ್ದು ಪಂದ್ಯಾವಳಿಗಳನ್ನು ಪ್ರಾಯೋಜಿಸುವ ಮೂಲಕ. ಸಹಜವಾಗಿಯೇ ಪ್ರಾಯೋಜಿತ ತಂಡಗಳು ಪ್ರಾಯೋಜಕತ್ವದ ಮಾರುಕಟ್ಟೆಗೆ ಮೊಬೈಲ್‌ ರಾಯಭಾರಿಗಳಾದವು.

1928ರಲ್ಲಿ ವಸಾಹತು ಕಾಲದಲ್ಲೇ ಭಾರತದಲ್ಲಿ ಸ್ಥಾಪನೆಯಾದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಲಿ (ಬಿಸಿಸಿಐ) ಆಳುವ ರಾಜಕೀಯ ಪಕ್ಷಗಳಿಗೆ ಬಾಗಿಲು ತೆರೆದಿದ್ದೂ ಈ ಸನ್ನಿವೇಶದಲ್ಲೇ. ಬಿಸಿಸಿಐ ಕ್ರಿಕೆಟ್‌ ಕ್ರೀಡೆಯ ನಿರ್ವಹಣಾ ಸಂಸ್ಥೆಯಲ್ಲ, ನಿಯಂತ್ರಣ ಸಂಸ್ಥೆ ಎನ್ನುವ ಸೂಕ್ಷ್ಮ ಅಂಶವನ್ನು ಇಲ್ಲಿ ಗುರುತಿಸಬೇಕು. ವಸಾಹತು ಆಳ್ವಿಕೆಗೆ ಭಾರತದಲ್ಲಿ ಒಂದು ಕ್ರೀಡೆಯನ್ನು ನಿಯಂತ್ರಿಸುವ ಹಕ್ಕು ಮತ್ತು ಅನಿವಾರ್ಯತೆ ಇತ್ತು ಆದರೆ ಸ್ವತಂತ್ರ ಭಾರತದಲ್ಲೂ ʼ ನಿಯಂತ್ರಣ ʼವೇ ಪ್ರಧಾನವಾಗಿರಬೇಕಿರಲಿಲ್ಲ. ಒಂದು ಖಾಸಗಿ, ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಬಿಸಿಸಿಐ ವಾಸ್ತವವಾಗಿ ಕ್ರಿಕೆಟ್‌ ನಿರ್ವಹಣೆಯ ಸಂಸ್ಥೆಯಾಗಬೇಕಿತ್ತು. ಆದರೆ ನಿಯಂತ್ರಣಾಧಿಕಾರ ಇರುವುದರಿಂದ ಈ ಸಂಸ್ಥೆಯೊಡನೆ ಒಪ್ಪಂದಕ್ಕೆ ಸಹಿ ಮಾಡಿದ ಆಟಗಾರರೂ ಹಲವು ನಿರ್ಬಂಧಕ್ಕೊಳಗಾಗುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಬಿಸಿಸಿಐ ಸಂಸ್ಥೆಯ ಆಡಳಿತ ನಿರ್ವಹಣೆ ಆಡಳಿತಾರೂಢ ಪಕ್ಷಗಳ ರಾಜಕೀಯ ನೇತಾರರಿಗೆ ಮತ್ತು ಔದ್ಯಮಿಕ ದೊರೆಗಳಿಗೆ ವರ್ಗಾಯಿಸಿರುವುದು ಇಡೀ ಕ್ರೀಡೆಯ ಸ್ವರೂಪವನ್ನೇ ಬದಲಾಯಿಸಿದೆ. 1970-80ರ ದಶಕದಲ್ಲಿ ಎನ್.‌ಕೆ.ಪಿ. ಸಾಳ್ವೆ, ಶರದ್‌ ಪವಾರ್‌ ಮತ್ತು 2000ರ ನಂತರದ ಅರುಣ್‌ ಜೈಟ್ಲಿ ಅವರಿಂದ ಈಗಿನ ಜಯ್‌ ಶಾ ವರೆಗೆ ವಿಸ್ತರಿಸಿರುವ ಈ ಅಧಿಕಾರ ಕೇಂದ್ರದ ವ್ಯಾಪ್ತಿ ಹಲವು ವಿವಾದಗಳನ್ನೂ ಸೃಷ್ಟಿಸಿವೆ. ಇಂಡಿಯಾ ಸಿಮೆಂಟ್ಸ್‌ ಮಾಲೀಕರಾಗಿದ್ದ ಶ್ರೀನಿವಾಸನ್‌ ಬಿಸಿಸಿಐ ಖಜಾಂಚಿಯಾಗಿ ನಂತರ ಅಧ್ಯಕ್ಷರೂ ಆಗಿದ್ದರು. ತಮ್ಮದೇ ಉದ್ಯಮದ ಮಾರುಕಟ್ಟೆ ರಾಯಭಾರಿಯಾಗಿ ಮಹೇಂದ್ರಸಿಂಗ್‌ ಧೋನಿಯನ್ನು ಬಳಸಿಕೊಂಡಿದ್ದ ಶ್ರೀನಿವಾಸನ್‌ ಆಯ್ಕೆ ಸಮಿತಿಯಲ್ಲೂ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದು ಹಿತಾಸಕ್ತಿ ಸಂಘರ್ಷಕ್ಕೆ ನಾಂದಿ ಹಾಡಿತ್ತು.

ಬಂಡವಾಳ-ಮಾರುಕಟ್ಟೆ ಮತ್ತು ಭ್ರಷ್ಟಾಚಾರ ಇವು ಒಂದೇ ಗರ್ಭದ ಶಿಶುಗಳಾಗಿರುವುದರಿಂದ ಸಹಜವಾಗಿಯೇ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಷಿಂಗ್‌, ಐಪಿಎಲ್‌ ಹಗರಣ ಮುಂತಾದ ಭ್ರಷ್ಟಾಚಾರದ ವಿರಾಟ್‌ ಸ್ವರೂಪಕ್ಕೆ ನಾಂದಿಯಾಗಿತ್ತು. ಬಿಸಿಸಿಐ ನಿಯಂತ್ರಿಸುವವರು ಸುಲಭವಾಗಿ ವಿವಿಧ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಈ ಮಾರುಕಟ್ಟೆಯ ಪಾರಮ್ಯ ಮತ್ತು ಬಂಡವಾಳದ ಹಿಡಿತ ಒಂದು ಅಸ್ತ್ರವಾಗಿ ಪರಿಣಮಿಸಿತ್ತು. ಪೆಪ್ಸಿ-ಕೋಲಾದಿಂದ ಆರಂಭವಾದ ಪ್ರಾಯೋಜಿತ ಪಂದ್ಯಗಳು ಇಂದು ಡಿಜಿಟಲ್‌ ಯುಗದ ಫೋನ್‌ ಪೇ, ಗೂಗಲ್‌ ಪೇ ವರೆಗೂ ವಿಸ್ತರಿಸಿರುವುದು ಮಾರುಕಟ್ಟೆ ಮತ್ತು ಕ್ರೀಡೆಯ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಸೂಚಿಸುತ್ತದೆ. ಸಂವಹನ ಮಾಧ್ಯಮಗಳು ಬಂಡವಾಳ ಜಾಗತೀಕರಣ ಪ್ರಕ್ರಿಯೆಯ ಮುಖ್ಯವಾಹಕಗಳಾಗಿ ಪರಿಣಮಿಸಿದ ನಂತರ ಕ್ರಿಕೆಟ್‌ ಪಂದ್ಯಗಳನ್ನು ಪ್ರಸರಣ ಮಾಡುವ ಹಕ್ಕುಗಳೂ ಸಹ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯ ಒಂದು ಭಾಗವಾಗಿಹೋಯಿತು.

ಮನರಂಜನೆ-ವರಮಾನ ಮತ್ತು ಕ್ರಿಕೆಟ್‌

ಈ ಮಾರುಕಟ್ಟೆ ಮತ್ತು ಔದ್ಯಮಿಕ ಹಿತಾಸಕ್ತಿಯ ನಡುವೆ ಕ್ರಿಕೆಟ್‌ ಎಂಬ ಕ್ರೀಡೆ ಮನರಂಜನೆಯಾಗಿ ಪರಿವರ್ತನೆಯಾದುದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಪಾವತಿಸುವ ಒಂದು ಔದ್ಯಮಿಕ ಸಂಸ್ಥೆಯಾಗಿ ಬಿಸಿಸಿಐ ಪರಿವರ್ತನೆಯಾಯಿತು. 2022-23ರ ಅವಧಿಯಲ್ಲಿ ಬಿಸಿಸಿಐ ಆದಾಯ 6558 ಕೋಟಿ ರೂಗಳು, ಇದೇ ವೇಳೆ ಮಾಧ್ಯಮ ಪ್ರಸರಣದ ಹಕ್ಕುಗಳನ್ನು ಮಾರಾಟ ಮಾಡಿದ್ದರಿಂದ ಬಿಸಿಸಿಐಗೆ 6000 ಕೋಟಿಗೂ ಹೆಚ್ಚು ಆದಾಯ ಲಭಿಸಿದೆ. ಬಿಸಿಸಿಐ ವಾರ್ಷಿಕ ತೆರಿಗೆ ರೂಪದಲ್ಲಿ ಭಾರತ ಸರ್ಕಾರಕ್ಕೆ ಇದೇ ವರ್ಷದಲ್ಲಿ 4000 ಕೋಟಿ ರೂಗಳನ್ನು ಪಾವತಿಸಿದೆ. ಕ್ರೀಡೆಯನ್ನು ಪೋಷಿಸುವುದೆಂದರೆ ಮಾರುಕಟ್ಟೆಯನ್ನೂ ಪೋಷಿಸುವುದು ಎಂಬ ಹೊಸ ಸೂತ್ರಕ್ಕೆ ಬಿಸಿಸಿಐ ಬದ್ಧವಾಗಿರುವುದರಿಂದಲೇ ಕ್ರಿಕೆಟ್‌ನ ಗಂಧ-ಗಾಳಿ ಅರಿಯದ ವ್ಯಕ್ತಿಯೂ ಬಿಸಿಸಿಐ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ಎನ್‌ಸಿಪಿ ಪಕ್ಷದ ಶರದ್‌ ಪವಾರ್‌, ಕಾಂಗ್ರೆಸ್‌ ಪಕ್ಷದಿಂದ ದಿವಂಗತ ಮಾಧವರಾವ್‌ ಸಿಂಧಿಯಾ, ಬಿಜೆಪಿಯ ಅನುರಾಗ್‌ ಥಾಕೂರ್‌ ಈ ಪದವಿಯನ್ನು ಅಲಂಕರಿಸಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ ಶಾ ಹಾಲಿ ಕಾರ್ಯದರ್ಶಿಯಾಗಿ, ಕಾಂಗ್ರೆಸ್‌ ಪಕ್ಷದ ರಾಜೀವ್‌ ಶುಕ್ಲ ಉಪಾಧ್ಯಕ್ಷರಾಗಿ, ಬಿಜೆಪಿಯ ಆಶಿಶ್‌ ಶೇಲರ್‌ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜೀವ್‌ ಶುಕ್ಲ 2000ದಿಂದಲೂ ಬಿಸಿಸಿಐ ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಲೇ ಬಂದಿದ್ದಾರೆ.

ಈ ಬಂಡವಾಳ-ಮಾರುಕಟ್ಟೆ ಮತ್ತು ರಾಜಕಾರಣದ ನಂಟಿಗೆ ಇತ್ತೀಚೆಗೆ ಬೆಸೆದುಕೊಂಡಿರುವುದು ರಾಷ್ಟ್ರೀಯತೆಯ ಭಾವೋನ್ಮಾದ ಮತ್ತು ದೇಶಭಕ್ತಿಯ ಸಿಂಚನ. 1970-80ರಲ್ಲಿ ಭಾರತದ ಕ್ರಿಕೆಟ್‌ ತಂಡ ದೇಶವನ್ನು ಪ್ರತಿನಿಧಿಸುತ್ತಿದ್ದಾಗಲೂ, ಈ ಪ್ರಾತಿನಿಧ್ಯದ ಹಿಂದೆ ಕಾಣುತ್ತಿದ್ದುದು ಕ್ರೀಡಾ ಸ್ಫೂರ್ತಿ ಮತ್ತು ಕ್ರಿಕೆಟ್‌ ಆಟದಲ್ಲಿ ಇರಬೇಕಾದ ಕೌಶಲ, ಸಾಮರ್ಥ್ಯ ಮತ್ತು ಕಲಾತ್ಮಕತೆ. ಆಟಗಾರರು ಧರಿಸುತ್ತಿದ್ದ ದಿರಿಸು ಯಾವುದೇ ಜಾಹೀರಾತು ಪಟ್ಟಿಗಳಿಲ್ಲದೆ ಬಿಳಿಯ ಬಣ್ಣದ್ದಾಗಿರುತ್ತಿದ್ದುದರಿಂದ ಮೈದಾನದಲ್ಲಿ ಅವರ ಅಸ್ಮಿತೆ ʼಕ್ರಿಕೆಟ್‌ ಪಟುʼ ಎಂದಷ್ಟೇ ಇರುತ್ತಿತ್ತು. ಭಾರತ-ಪಾಕ್‌ ನಡುವೆ ನಡೆಯುತ್ತಿದ್ದ ಪಂದ್ಯಗಳೂ ಸಹ ಅಷ್ಟೇ ಸ್ನೇಹಭಾವದಿಂದ ಕೂಡಿರುತ್ತಿದ್ದವು. ಪಾರಂಪರಿಕ ವೈರಿಗಳು ಎಂಬ ಪರಿಭಾಷೆ ಬಹುಶಃ ಆಗ ಬಳಕೆಯಲ್ಲಿರಲಿಲ್ಲ. ಜಹೀರ್‌ ಅಬ್ಬಾಸ್-ಸುನಿಲ್‌ ಗವಾಸ್ಕರ್‌ ಕ್ರಿಕೆಟ್‌ ಎಂಬ ಸುಂದರ ಕ್ರೀಡೆಗಳ ಪ್ರತಿನಿಧಿಗಳಾಗಿ ಕ್ರಿಕೆಟ್‌ ಪ್ರೇಮಿಗಳ ಮನತಣಿಸುತ್ತಿದ್ದರು. ಜಿ.ಆರ್.‌ ವಿಶ್ವನಾಥ್‌ ಕ್ರಿಕೆಟ್‌ ಕಲಾತ್ಮಕತೆಯ ಪ್ರತೀಕವಾಗಿದ್ದರು. ಇತ್ತೀಚೆಗೆ ಮಡಿದ ಬಿಷನ್‌ಸಿಂಗ್‌ ಬೇಡಿ ಸ್ಪಿನ್‌ ಮಾಂತ್ರಿಕರಾಗಿ ಕಾಣುತ್ತಿದ್ದರು.

ಮಾರುಕಟ್ಟೆಯ ಭಾವೋನ್ಮಾದ

ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಕ್ರಿಕೆಟ್‌ ಕ್ರೀಡಾಂಗಣಗಳೇ ವಸ್ತುಶಃ ಮಾರುಕಟ್ಟೆಯ ರಾಯಭಾರಿಗಳಾಗಿ ಕಂಡುಬರುತ್ತವೆ. ಐವತ್ತು ಸಾವಿರ ಪ್ರೇಕ್ಷಕರು ನೆರೆದಿದ್ದರೆ ಶೇ 75ರಷ್ಟು ಜನರು ಭಾರತೀಯ ತಂಡದ ಸಮವಸ್ತ್ರವನ್ನೇ ಧರಿಸಿರುತ್ತಾರೆ. ಅಂದರೆ ಮಾರುಕಟ್ಟೆಯಲ್ಲಿ ಅಷ್ಟು ಪ್ರಮಾಣದ ಟೀ ಷರ್ಟ್‌, ಟೋಪಿ, ಪ್ಯಾಂಟುಗಳ ಸರಕು ಸಿದ್ಧವಾಗುತ್ತದೆ ಎಂದರ್ಥ. ಇದರೊಟ್ಟಿಗೆ ಭಾರತದ ತ್ರಿವರ್ಣ ಧ್ವಜ ಮೈಮೇಲಿನ ಹೊದಿಕೆಯಾಗಿ, ಧರಿಸುವ ಬಟ್ಟೆಯಾಗಿ ಹಾಗೂ ಹಾರಾಡುವ ಬಾವುಟವಾಗಿಯೂ ಕ್ರೀಡಾಂಗಣದಲ್ಲಿ ಮೇಳೈಸುತ್ತದೆ ಇಲ್ಲಿ ಹಾರಾಡುವ ಧ್ವಜಗಳನ್ನು ಅದಕ್ಕೆ ಸಲ್ಲಬೇಕಾದ ಗೌರವದೊಂದಿಗೆ ಕಾಪಿಟ್ಟುಕೊಳ್ಳುವರೋ ಅಥವಾ ಮೂಲೆಗೆ ತಳ್ಳುವರೋ ಎಂಬ ಪ್ರಶ್ನೆ ಕ್ಲೀಷೆ ಎನಿಸಬಹುದು, ಆದರೆ ರಾಷ್ಟ್ರ ಧ್ವಜವನ್ನು ಹೀಗೆ ಬಳಸುವುದನ್ನು ಮಾರುಕಟ್ಟೆ ಆರ್ಥಿಕತೆ ಎಷ್ಟು ಸುಲಭವಾಗಿ ತನ್ನ ವಿಸ್ತರಣೆಗೆ ಬಳಸಿಕೊಳ್ಳುತ್ತದೆ ಎನ್ನುವುದು ಗಮನಿಸಬೇಕಾದ ಅಂಶ. ಈ ಧ್ವಜದೊಂದಿಗೆ ಬೆಸೆದಿರುವ ರಾಷ್ಟ್ರೀಯತೆ ಅಥವಾ ದೇಶಭಕ್ತಿ ಮೌಖಿಕವಾಗಿಯೂ ವ್ಯಕ್ತವಾಗಬೇಕಾದ ಅನಿವಾರ್ಯತೆಯನ್ನು ದೇಶದ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿರುವುದರಿಂದ ಕ್ರೀಡಾಂಗಣದಲ್ಲಿ “ ಭಾರತ್‌ ಮಾತಾ ಕಿ ಜೈ ” ಘೋಷಣೆಗಳು ನಿರಂತರವಾಗಿ ಕೇಳಿಬರುತ್ತವೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊಳಗುವ ಈ ಘೋಷಣೆಗಳು ಅಥವಾ ಪಟಪಟಿಸುವ ಧ್ವಜಗಳು ಹಾಕಿ ಅಥವಾ ಇತರ ಯಾವುದೇ ಕ್ರೀಡೆಗಳಲ್ಲಿ ಕಾಣಲಾಗುವುದಿಲ್ಲ. ಭಾರತ-ಪಾಕ್‌ ನಡುವೆ ನಡೆಯುವ ಹಾಕಿ ಪಂದ್ಯಗಳು ಸದ್ದಿಲ್ಲದೆ ನಡೆಯುತ್ತವೆ, ಭಾರತ ಗೆದ್ದರೂ ಅದ್ಧೂರಿ ವಿಜಯೋತ್ಸವಗಳು ನಡೆಯುವುದಿಲ್ಲ, ಪಟಾಕಿಗಳು ಸಿಡಿಯುವುದಿಲ್ಲ, ಕ್ರೀಡಾಂಗಣಗಳು ಭರ್ತಿಯಾಗುವುದೂ ಇಲ್ಲ, ಅಲ್ಲಿ ಉನ್ಮಾದದ ವಾತಾವರಣವೂ ಇರುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ಹಾಕಿ ಪಂದ್ಯದಲ್ಲಿ ಭಾರತ ಗಳಿಸುವ ಗೆಲುವು ಸದ್ದಿಲ್ಲದೆ ಜಾರಿಬಿಡುತ್ತದೆ. ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿಯಲ್ಲಿ ಚಿನ್ನದ ಪದಕ ಗಳಿಸಿದ್ದೇ ಅಲ್ಲದೆ ಗುಂಪಿನ ಪಂದ್ಯದಲ್ಲಿ ಪಾಕ್‌ ವಿರುದ್ಧ 10-2ರ ಜಯ ಗಳಿಸಿತ್ತು. ಕ್ರಿಕೆಟ್‌ ಉದ್ಧೀಪನಗೊಳಿಸುವ ಭಾವೋನ್ಮಾದವನ್ನು ಹಾಕಿ ಪಂದ್ಯಗಳಲ್ಲಿ ಕಾಣಲಾಗುವುದಿಲ್ಲ ಎನ್ನುವುದು ವಾಸ್ತವ. ಮಹಿಳಾ ಕ್ರಿಕೆಟ್‌ ಪಟುಗಳ ಗೆಲುವೂ ಸಹ ಇದೇ ರೀತಿ ಸದ್ದಿಲ್ಲದೆ ನೇಪಥ್ಯಕ್ಕೆ ಜಾರಿಬಿಡುತ್ತದೆ.

ಮಾರುಕಟ್ಟೆ-ಬಂಡವಾಳ-ರಾಷ್ಟ್ರೀಯತೆಯ ಭಾವೋನ್ಮಾದ ಹಾಗೂ ಪಿತೃಪ್ರಧಾನತೆಯ ಧೋರಣೆ ಇವೆಲ್ಲವೂ ಎಂತಹ ಅವಿನಾಭಾವ ಸಂಬಂಧವನ್ನು ಹೊಂದಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಈ ಬಂಧನವನ್ನು ವಿಸ್ತರಿಸಲು ಕ್ರಿಕೆಟ್‌ ಬಳಕೆಯಾಗುತ್ತಿದೆ. ಈ ಭಾವೋನ್ಮಾದದ ನಡುವೆಯೇ ನಮ್ಮ ನಡುವಿನ ಕ್ರೀಡಾಸ್ಪೂರ್ತಿಯ ಉದಾತ್ತ ಭಾವನೆಗಳೂ ಕ್ರಮೇಣ ನಶಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಒಂದು ಕಾಲದಲ್ಲಿ ಹಗರಣಗಳಲ್ಲಿ ಸಿಲುಕಿದ್ದ ಶ್ರೀಶಾಂತ್‌ ಎಂಬ ಕ್ರಿಕೆಟಿಗ ಪಾಕ್‌ ತಂಡಕ್ಕೆ ಭಾರತಕ್ಕೆ ಬರದಿರುವಂತೆ ಕರೆ ನೀಡುವುದು ಇಂತಹ ಅಸೂಕ್ಷ್ಮತೆಗಳಿಗೆ ಸಾಕ್ಷಿ. ಅಂದರೆ ಇಂದು 22 ಯಾರ್ಡ್‌ ಅಂತರದಲ್ಲಿ ತಮ್ಮ ಕ್ರೀಡಾಕೌಶಲ ಮತ್ತು ಪ್ರತಿಭೆಯನ್ನು ಮೆರೆಯುವ ಆಟಗಾರರು ಎಷ್ಟೇ ಬದ್ಧತೆಯಿಂದ ಆಡಿದರೂ, ಇದನ್ನು ಆಸ್ವಾದಿಸುವ ಜನಸಮೂಹದ ದೃಷ್ಟಿಯಲ್ಲಿ ಇತರ ಭಾವನಾತ್ಮಕ ಅಸ್ಮಿತೆಗಳು ಮುಖ್ಯವಾಗುತ್ತವೆ. ಕ್ರಿಕೆಟ್‌ ಚೆಂಡಿನ ತೂಕ ಎಷ್ಟಿದೆ ಎಂಬ ಅರಿವು ಇಲ್ಲದಿದ್ದರೂ ಬಿಸಿಸಿಐ ಕಾರ್ಯದರ್ಶಿ ಅಥವಾ ಅಧ್ಯಕ್ಷರಾಗುವ ರಾಜಕಾರಣಿಗಳ ನಡುವೆಯೇ ಈ ಕ್ರೀಡೆಯಲ್ಲಿ ಅಂತರ್ಗತವಾಗಿರುವ ಕಲಾತ್ಮಕ ಕೌಶಲ (Artistic̲-Craftmanship) ಮತ್ತು ಕ್ರೀಡಾ ಸ್ಫೂರ್ತಿಯ ಪರಿವೆಯೇ ಇಲ್ಲದ ಲಕ್ಷಾಂತರ ಪ್ರೇಕ್ಷಕರು ಇಂದು ಈ ದೈತ್ಯ ಕ್ರೀಡೆಯನ್ನು ಬಂಡವಾಳ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿದ್ದಾರೆ.

ಹಾಗಾಗಿಯೇ ಇಂದಿನ ಕ್ರಿಕೆಟ್‌ ಸಂಕಥನದಲ್ಲಿ ಸಿಕ್ಸರ್‌ ದೊರೆ ಕ್ರಿಸ್‌ ಗೇಲ್‌, ಶತಕಗಳ ಸರದಾರ ಸಚಿನ್‌ ತೆಂಡೂಲ್ಕರ್‌, ಬಿರುಗಾಳಿ ವೇಗದ ಬೌಲರ್‌ ಬ್ರೆಟ್‌ ಲೀ ಮುಂತಾದವರ ಸಂತತಿಯೇ ಪ್ರಧಾನ ಚರ್ಚೆಗೊಳಗಾಗುತ್ತದೆ. 1960-80 ದಶಕದಲ್ಲಿ ತಮ್ಮ ಕಲಾತ್ಮಕತೆಯಿಂದಲೇ ಕ್ರೀಡೆಗೆ ಮೆರುಗು ನೀಡಿದ ಗವಾಸ್ಕರ್‌-ಗುಂಡಪ್ಪ ವಿಶ್ವನಾಥ್‌, ಸೋಬರ್ಸ್‌-ವಿವಿಯನ್‌ ರಿಚರ್ಡ್ಸ್, ಗ್ರೆಗ್‌ ಚಾಪೆಲ್‌- ಡಗ್‌ ವಾಲ್ಟರ್ಸ್ಲ್, ಜೆಫ್ರಿ ಬಾಯ್ಕಾಟ್‌, ಜಹೀರ್‌ ಅಬ್ಬಾಸ್‌, ಮಾರ್ಟಿನ್‌ ಕ್ರೋವ್‌, ಗ್ರಾಹಂ ಪೊಲಾಕ್, ಡೆನ್ನಿಸ್‌ ಲಿಲ್ಲಿ-ಥಾಮ್ಸನ್‌, ಮಾರ್ಷಲ್-ರಾಬರ್ಟ್ಸ್‌, ಚಂದ್ರು-ಪ್ರಸನ್ನ ಜೋಡಿ ಇವರಾರೂ ಸಹ ಚರ್ಚೆಗೊಳಗಾಗುವುದಿಲ್ಲ. ಈ ಬದಲಾದ ಸನ್ನಿವೇಶದಲ್ಲೇ ಕ್ರಿಕೆಟ್ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು, ರೂಪಾಂತರಗೊಂಡು ಆಧುನಿಕ ಮನರಂಜನೆಯಾಗಿ, ಮಾರುಕಟ್ಟೆಯ ವಿಸ್ತರಣೆಗಾಗಿ ಇರುವ ಒಂದು ಕ್ರೀಡೆಯಾಗಿ, ಭಾವೊನ್ಮಾದದ ಅಲೆಗಳಲ್ಲಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

ಮಾರುಕಟ್ಟೆಯ ಆಕರ್ಷಣೆ ಇಲ್ಲದೆ, ಭಾವೋನ್ಮಾದದ ಘೋಷಣೆ ಇಲ್ಲದೆ, ಬಂಡವಾಳದ ಮಧ್ಯಸ್ತಿಕೆ ಇಲ್ಲದೆ ಕ್ರಿಕೆಟ್‌ ಪಂದ್ಯವನ್ನು ನೋಡುವುದು ಹಗಲುಗನಸೇ ಸರಿ. ಕ್ರಿಕೆಟ್‌ ಒಂದು ಕ್ರೀಡೆಯಾಗಿ ಬಹುದೂರ ಸಾಗಿ ಬಂದಿದೆ. ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ಅಭಿವೃದ್ಧಿಗೆ ಅನುಗುಣವಾಗಿ ರೂಪಾಂತರ ಹೊಂದಿದೆ. ಹಾಗೆಯೇ ಮಾರುಕಟ್ಟೆಯ ಅವಶ್ಯಕತೆಗಳಿಗನುಗುಣವಾಗಿ ತನ್ನ ಕಲಾತ್ಮಕತೆಯ ಪೊರೆಯನ್ನು ಕಳಚಿಕೊಳ್ಳುತ್ತಲೇ ಬಂದಿದೆ. ಉಳಿದಿರುವುದು ಮನರಂಜನೆ-ಮಾರುಕಟ್ಟೆ ಮಾತ್ರ ಕಳೆದುಹೋಗಿರುವುದು ಕ್ರೀಡಾಸ್ಫೂರ್ತಿಯ ಔದಾತ್ಯ ಮತ್ತು ಕಲಾತ್ಮಕತೆ .
-೦-೦-೦-

Tags: Cricketcricket MatchGentlemanʼs GameSunil GavaskarZaheer Abbas
Previous Post

ಪುಲ್ವಾಮ, ಮಣಿಪುರ ಕುರಿತು ಸತ್ಯಪಾಲ್‌ ಮಲಿಕ್‌ ಜೊತೆ ಮಹತ್ವದ ಸಂವಾದ ನಡೆಸಿದ ರಾಹುಲ್‌ ಗಾಂಧಿ

Next Post

ಹುಲಿ ಉಗುರು ಕೇಸ್ : ಅರಣ್ಯಾಧಿಕಾರಿಗಳಿಂದ ನಟ ದರ್ಶನ್ ಮನೆ ಪರಿಶೀಲನೆ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಹುಲಿ ಉಗುರು ಕೇಸ್ : ಅರಣ್ಯಾಧಿಕಾರಿಗಳಿಂದ ನಟ ದರ್ಶನ್ ಮನೆ ಪರಿಶೀಲನೆ

ಹುಲಿ ಉಗುರು ಕೇಸ್ : ಅರಣ್ಯಾಧಿಕಾರಿಗಳಿಂದ ನಟ ದರ್ಶನ್ ಮನೆ ಪರಿಶೀಲನೆ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada