ದೇಶದ ಯುವಜನರು, ವಿಶೇಷವಾಗಿ Gen-Z ಹಾಗೂ ವಿದ್ಯಾರ್ಥಿಗಳ ಹೋರಾಟದಿಂದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಇಬ್ಭಾಗವಾಗಿದೆ. ಪಕ್ಷದ ಪ್ರಮುಖ ಕಾರ್ಯಕರ್ತ ಹಾಗೂ ಮುಖಂಡ ಮನೀಶ್ ಬ್ರಹ್ಮಭಟ್ ಅವರು ಗುರುವಾರ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (CJP-D) ಎಂಬ ಹೊಸ ಬಣವನ್ನು ಘೋಷಿಸಿದ್ದಾರೆ.ಮೂಲ ಪಕ್ಷದ ನಾಯಕತ್ವದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಬ್ರಹ್ಮಭಟ್, ಪಕ್ಷವು ಆಮ್ ಆದ್ಮಿ ಪಾರ್ಟಿ (AAP) ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಪ್ರಭಾವಕ್ಕೆ ಒಳಗಾಗಿದೆ ಎಂದು ಆರೋಪಿಸಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮನೀಶ್ ಬ್ರಹ್ಮಭಟ್ ಆರೋಪಿಸಿದ್ದಾರೆ. ಹೋರಾಟದ ಬಳಿಕ ರಚಿಸಲಾದ 12 ಸದಸ್ಯರ ರಾಷ್ಟ್ರೀಯ ತಂಡದಲ್ಲಿ AAPಗೆ ಸೇರಿದ ಎಂಟು ಮಂದಿ, ಅಭಿಜಿತ್ ದೀಪ್ಕೆ ಅವರ ಕಾಲೇಜು ಸ್ನೇಹಿತರು ಹಾಗೂ ಆಪ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ದೂರಿದ್ದಾರೆ.
ದೇಶಾದ್ಯಂತ ಹೋರಾಟದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಸ್ವಯಂಸೇವಕರು ಹಾಗೂ ಪ್ರತಿಭಟನಾಕಾರರನ್ನು ರಾಷ್ಟ್ರೀಯ ಮಟ್ಟದ ಸಂಘಟನೆಯಲ್ಲಿ ಕಡೆಗಣಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಪ್ರತಿ ರಾಜ್ಯದಿಂದ ಐವರು ಹೋರಾಟಗಾರರನ್ನು ಆಯ್ಕೆ ಮಾಡಿ ರಾಷ್ಟ್ರೀಯ ಸಮಿತಿ ರಚಿಸಬೇಕು ಎಂಬ ಸಲಹೆಯನ್ನು ಮೂಲ ನಾಯಕತ್ವ ತಿರಸ್ಕರಿಸಿದೆ ಎಂದು ಬ್ರಹ್ಮಭಟ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಸ್ವಯಂಸೇವಕರ ಸಭೆಯಲ್ಲಿ ಕಾರ್ಯಕರ್ತರ ಮೊಬೈಲ್ಗಳನ್ನು ಪಡೆದುಕೊಂಡು, ಸಂಭಾಷಣೆ ರೆಕಾರ್ಡ್ ಆಗದಂತೆ ತಡೆಯಲಾಗಿತ್ತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯೊಂದನ್ನು ವ್ಯಂಗ್ಯವಾಗಿ ಟೀಕಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಬಳಿಕ NEET ಪರೀಕ್ಷಾ ಅಕ್ರಮಗಳ ವಿರುದ್ಧ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತ್ತು.
ಈ ಚಳವಳಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಬಳಿಕ, ಅದರ ರಾಜಕೀಯ ದಿಕ್ಕು ಮತ್ತು ನಾಯಕತ್ವದ ಕುರಿತು ಸಂಘಟನೆಯೊಳಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ಬಂಡಾಯ ಬಣದ ನಾಯಕರು ಹೇಳಿದ್ದಾರೆ.

ಹೊಸ CJP-D ಬಣದ ಘೋಷಣೆ ವೇಳೆ ಮಾತನಾಡಿದ ಮನೀಶ್ ಬ್ರಹ್ಮಭಟ್, ತಮ್ಮ ಉದ್ದೇಶ ಯಾವುದೇ ಒಂದು ರಾಜಕೀಯ ಪಕ್ಷವನ್ನು ಸೋಲಿಸುವುದಲ್ಲ. ಬದಲಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಂದು ಹೇಳಿದ್ದಾರೆ.CJP-D ಸಂಘಟನೆಯಲ್ಲಿ ಪಾರದರ್ಶಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಹೊಣೆಗಾರಿಕೆಗೆ ಆದ್ಯತೆ ನೀಡಲಾಗುವುದು. ಸಂಘಟನೆಯ ಪ್ರಮುಖ ನಿರ್ಧಾರಗಳನ್ನು ಸದಸ್ಯರ ಅಭಿಪ್ರಾಯ ಪಡೆದೇ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊಸ ಬಣಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರ್ಪಡೆಯಾಗಲು ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಮತ್ತು ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಪಡೆಯುವ ವ್ಯವಸ್ಥೆ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಬ್ರಹ್ಮಭಟ್ ಹೇಳಿದ್ದಾರೆ.
ಈ ಬೆಳವಣಿಗೆಯೊಂದಿಗೆ ಯುವಜನರ ಹೋರಾಟದ ವೇದಿಕೆಯಾಗಿ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿಯೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದು, ಸಂಘಟನೆಯ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.






