ಬೆಂಗಳೂರು: ಪೆಟ್ರೋಲ್ ಬಂಕ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ (Ethanol) ಮಿಶ್ರಣ ಮಾಡುತ್ತಿರುವುದನ್ನು ಖಂಡಿಸಿ, ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ (Congress) ವತಿಯಿಂದ ಮಂತ್ರಿ ಮಾಲ್ (Mantri Mall) ಸಮೀಪದ ನಟರಾಜ್ ಚಿತ್ರಮಂದಿರದ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ಬೃಹತ್ ಪ್ರತಿಭಟನೆ (Protest) ನಡೆಯಿತು.

ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜೆ. ಸರವಣನ್ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಲ್ಯಾಬ್ ಪರೀಕ್ಷೆಯಲ್ಲಿ ಬಯಲಾಯ್ತು ಅಕ್ರಮ
ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ರಿಜ್ವಾನ್ ಅರ್ಷದ್ ಅವರ ಮಾರ್ಗದರ್ಶನದಲ್ಲಿ ರಾಜ್ಯದ 7 ಜಿಲ್ಲೆಗಳ ವ್ಯಾಪ್ತಿಯ ಸುಮಾರು 60 ಪೆಟ್ರೋಲ್ ಬಂಕ್ಗಳಿಂದ ಇಂಧನದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಸರ್ಕಾರದ ಅಧಿಕೃತ ನಿಯಮಾವಳಿಗಳನ್ನು ಗಾಳಿಗೆ ತೂರಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿರುವುದು ಸಾಬೀತಾಗಿದೆ. ಈ ನಿಖರ ವರದಿಯೊಂದಿಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೂ ಯಾವುದೇ ಸ್ಪಷ್ಟ ಉತ್ತರ ನೀಡದೆ ಮೌನ ವಹಿಸಿರುವುದು ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿ ಎಂದು ಮುಖಂಡರು ಆರೋಪಿಸಿದರು.

ವಾಹನ ಸವಾರರ ಹಿತರಕ್ಷಣೆಗೆ ಮೂರು ಪ್ರಮುಖ ಬೇಡಿಕೆಗಳು
ಪೆಟ್ರೋಲ್ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯುತ್ತಿದ್ದು, ಎಂಜಿನ್ ದೋಷಗಳಿಂದಾಗಿ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಎಥೆನಾಲ್ ಮಿಶ್ರಣದ ನೈಜ ಸತ್ಯವನ್ನು ದೇಶದ ಜನತೆಗೆ ಬಹಿರಂಗಪಡಿಸಬೇಕು. ಅಲ್ಲದೆ, ಇದರಿಂದ ತೊಂದರೆಗೊಳಗಾದ ವಾಹನ ಮಾಲೀಕರಿಗೆ ವಿಮಾ ಕಂಪನಿಗಳ ಮುಖಾಂತರ ಅಥವಾ ನೇರವಾಗಿ ಕೇಂದ್ರ ಸರ್ಕಾರವೇ ಸೂಕ್ತ ಪರಿಹಾರವನ್ನು ಒದಗಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ಜನರಿಗೆ ವಂಚಿಸುತ್ತಿರುವ ತೈಲ ಕಂಪನಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪೊಲೀಸರಿಂದ ಪ್ರತಿಭಟನಾಕಾರರ ವಶ
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಧರಣಿನಿರತರನ್ನು ವಶಕ್ಕೆ ಪಡೆದರು. ಈ ಹೋರಾಟದಲ್ಲಿ ಪಿಸಿಸಿ ಸದಸ್ಯರಾದ ಬಿ.ಆರ್. ರಘುನಾಥ್, ಬ್ಲಾಕ್ ಅಧ್ಯಕ್ಷರುಗಳಾದ ಲಕ್ಷ್ಮೀಪತಿ, ವಿನಾಯಕ್, ಸುರೇಶ್ ಬಾಬು ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಸ್ಟಿಂಗ್ ಆಪರೇಷನ್ ಪ್ರಕರಣ : ಸಿಸಿಬಿ ಸೈಬರ್ ಕ್ರೈಂ ಪೊಲೀಸರ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ







