ಹಾಸನ : ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಮ್ಮ ವರ್ಗಾವಣೆ ತಪ್ಪಿಸಿಕೊಳ್ಳಲು ಲಂಚ ನೀಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಅಬಕಾರಿ (Excise) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ (Shivalinge Gowda) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವವರ ಮೇಲೆ ಇಂತಹ ಗಂಭೀರ ಆರೋಪ ಮಾಡುವ ಮುನ್ನ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಗಳನ್ನು ನೀಡುವ ಜವಾಬ್ದಾರಿ ಇರಬೇಕು ಎಂದು ಎಚ್ಚರಿಸಿರುವ ಅವರು, ಆರೋಪ ಸಾಬೀತುಪಡಿಸದಿದ್ದರೆ ಬಹಿರಂಗ ಕ್ಷಮೆಯಾಚಿಸಬೇಕೆಂದು (Public Apology) ಸವಾಲು ಹಾಕಿದ್ದಾರೆ.
ಯಾರೋ ನಡೆಸಿದ್ದಾರೆ ಎನ್ನಲಾದ ವಾಟ್ಸಾಪ್ ಸಂಭಾಷಣೆಯ ಆಧಾರದ ಮೇಲೆ ಹಣದ ವಹಿವಾಟು ನಡೆದಿದೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಸಚಿವರು ಕಿಡಿಕಾರಿದ್ದಾರೆ. ಕೇವಲ ಹೆಸರು ಪ್ರಸ್ತಾಪವಾದ ಮಾತ್ರಕ್ಕೆ ಭ್ರಷ್ಟಾಚಾರ ಸಾಬೀತಾಗುವುದಿಲ್ಲ ಎಂದಿರುವ ಅವರು, ಆ ಸಂಭಾಷಣೆಯ ನೈಜತೆ ಪರಿಶೀಲನೆಗೆ ಒಳಪಡಬೇಕು ಮತ್ತು ಹಣ ನೀಡಿದ್ದಕ್ಕೆ ನೇರ ಸಾಕ್ಷ್ಯಾಧಾರಗಳಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದಿಟ್ಟು ಸತ್ಯವನ್ನು ಬಹಿರಂಗಪಡಿಸಲಿ ಎಂದು ತಾಕೀತು ಮಾಡಿದ್ದಾರೆ.
ಹಾಸನಾಂಬಾ ದೇವಿಯ ದರ್ಶನ ಪಡೆದ ಪವಿತ್ರ ಸನ್ನಿಧಿಯಲ್ಲೇ ಇಂತಹ ಸುಳ್ಳು ಆರೋಪಗಳನ್ನು ಮಾಡಿರುವುದು ದುರದೃಷ್ಟಕರ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ದೇವಸ್ಥಾನದ ಆವರಣವನ್ನು ರಾಜಕೀಯ ಅಪಪ್ರಚಾರದ ವೇದಿಕೆಯನ್ನಾಗಿ ಬಳಸಬಾರದು ಎಂದು ಎಚ್ಚರಿಸಿರುವ ಅವರು, ಉತ್ಸವದ ನಿರ್ವಹಣೆಯಲ್ಲಿ ಒಂದೇ ಒಂದು ಪೈಸೆಯ ಲೋಪವೂ ಆಗಲು ಬಿಡುವುದಿಲ್ಲವೆಂದು ದೇವಿಯ ಪಾದ ಮುಟ್ಟಿ ಆಣೆ ಮಾಡಲು ಸಿದ್ಧ ಎಂದಿದ್ದಾರೆ.
ಹಾಸನಾಂಬಾ ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ ತಾವು ಕಳೆದ 20 ದಿನಗಳಿಂದ ಮನೆಗೂ ತೆರಳದೆ ಹಾಸನದಲ್ಲೇ ಉಳಿದು ಹಗಲು–ರಾತ್ರಿ ಶ್ರಮಿಸುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಸಂಸದರೊಂದಿಗೆ ಸೇರಿ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದೇ ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಂದರಲ್ಲೂ ಅನಗತ್ಯವಾಗಿ ಮೊಸರಿನಲ್ಲಿ ಕಲ್ಲು ಹುಡುಕುವ ಚಾಳಿಯನ್ನು ಬಿಡಬೇಕು ಎಂದು ಕುಮಾರಸ್ವಾಮಿಯವರಿಗೆ ಸಲಹೆ ನೀಡಿರುವ ಸಚಿವರು, ಆಡಳಿತದಲ್ಲಿ ಲೋಪಗಳಿದ್ದರೆ ದಾಖಲೆ ಸಮೇತ ಪ್ರಶ್ನಿಸಿದರೆ ಉತ್ತರಿಸಲು ಸಿದ್ಧ ಎಂದಿದ್ದಾರೆ. ಯಾವುದೇ ಆಧಾರವಿಲ್ಲದೆ ಜಿಲ್ಲಾಧಿಕಾರಿ ಹಾಗೂ ತಮ್ಮ ಗೌರವಕ್ಕೆ ಕಳಂಕ ತರುವುದನ್ನು ಸಹಿಸುವುದಿಲ್ಲ ಎಂದಿರುವ ಅವರು, ಆರೋಪಗಳನ್ನು ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ಹೇಳಿಕೆ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
79 ವರ್ಷಗಳ ಬಳಿಕ ಲಾಹೋರ್ನ ಐತಿಹಾಸಿಕ ಗುರುದ್ವಾರ ಪುನರಾರಂಭ: ಸಿಖ್ ಸಮುದಾಯದ ಪ್ರಾರ್ಥನೆಗೆ ಮುಕ್ತ






