75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ʻಐಡಿಯಾ ಆಫ್ ಇಂಡಿಯಾʼ ಎಂಬ ಘೋಷವಾಕ್ಯದೊಂದಿಗೆ ಒಂದು ವರ್ಷ ಕಾಲ ನಡೆಯಲಿರುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದು, ʻಸ್ವಾತಂತ್ರ್ಯ ಸಂಗ್ರಾಮದ ನೈಜ ಇತಿಹಾಸʼವನ್ನು ಜನರಿಗೆ ಪರಿಚಯಿಸಲಿದೆ.
1964ರಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅಸ್ತಿತ್ವಕ್ಕೆ ಬಂದ ಬಳಿಕ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸುವುದು ಕಡ್ಡಾಯ ಎಂಬ ನಿಯಮವನ್ನು ಅಳವಡಿಸಿಕೊಂಡಿರಲಿಲ್ಲ. ಅದಾಗ್ಯೂ ಕೆಲ ಕಮ್ಯೂನಿಸ್ಟ್ ನಾಯಕರು ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸಿ ಆಚರಿಸಿದ್ದೂ ಇದೆ.
ಆದರೆ ಇದೀಗ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತಮ್ಮ ಕಾರ್ಯಕರ್ತರಿಗೆ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಕಟ್ಟಪ್ಟಣೆ ಹೊರಡಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರ ತ್ಯಾಗವನ್ನು ಹಾಗೂ ಬಲಿದಾನವನ್ನು ಜನರಿಗೆ ಮನವರಿಕೆ ಮಾಡುವ ʻಸ್ವಾತಂತ್ರ್ಯ ಸಂಗ್ರಾಮದ ನೈಜ ಇತಿಹಾಸʼ ಕಾರ್ಯಕ್ರಮವನ್ನು ನಡೆಸಲು ಸೂಚನೆ ಕೊಟ್ಟಿದೆ.

CPI (M) ಕೇಂದ್ರೀಯ ಸಮಿತಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬ್ರಿಟೀಷರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಹೇಗೆ ಕೈ ಜೋಡಿಸಿತ್ತು ಮತ್ತು ಅಸಲಿಗೆ ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್ ಕೊಡುಗೆ ಏನು.? ಹಾಗೂ ಜ್ಯಾತ್ಯಾತೀತ ಸಿದ್ದಾಂತಕ್ಕೆ ಸಂಘ ಎಷ್ಟು ಮಾರಕ ಎಂಬಿತ್ಯಾದಿ ವಿಷಯಗಳನ್ನು ತಿಳಿಸುವ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದೆ.
ಈ ವಿಷಯವಾಗಿ ರಾಷ್ಟ್ರೀಯ ಮಾದ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ CPI (M)ನ ಪೊಲಿಟ್ ಬ್ಯೂರೋ ಸದಸ್ಯ ನಿಲೋತ್ಪಾಲ್ ಬಸು, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಈ 75 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ʻಭಾರತವೆಂಬ ಪರಿಕಲ್ಪನೆʼ ಅಪಾಯದಲ್ಲಿದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ ಈ ವರ್ಷದಿಂದ ಕಮ್ಯೂನಿಸ್ಟ್ ಪಕ್ಷ ವಿನೂತನವಾದ ಹಾಗೂ ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ಘೋಷಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಅಸಲಿ ಕತೆಗಳನ್ನು ಜನರ ಮುಂದೆ ಬಿಚ್ಚಿಡಲಿದ್ದೇವೆ ಎಂದು ಪ್ರತ್ರಿಕ್ರಿಯೆ ಕೊಟ್ಟಿದ್ದಾರೆ. ಇದೇ ವೇಳೆ 1964ರಲ್ಲಿ CPI (M) ಪಕ್ಷ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅಧಿಕೃತವಾಗಿ ಆದೇಶ ಹೊರಡಿಸಿದೆ ಎಂಬುವುದು ಗಮನಾರ್ಹ.
CPI(M) ʻದೇಶಭಕ್ತಿಯ ಮುಖವಾಡʼ ಧರಿಸಲು ಹೊರಟಿದೆ : ಬಿಜೆಪಿ ಲೇವಡಿ
ಇನ್ನು CPI (M)ನ ಈ ನಿರ್ಧಾರದ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ಕಮ್ಯೂನಿಸ್ಟರು ತಮ್ಮ ರಾಜಕೀಯ ಅಸ್ತಿತ್ವತಕ್ಕೆ ಬೇಕಾಗಿ ದೇಶಭಕ್ತಿಯ ಮುಖವಾಡ ಧರಿಸಲು ಮುಂದಾಗಿದೆ ಎಂದು ಲೇವಡಿ ಮಾಡಿದೆ. ಪಶ್ವಿಮ ಬಂಗಾಳದಲ್ಲಿ 34 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಕ್ಕೆ ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಧಕ್ಕಿರುವುದು ಕೇವಲ ಶೇಕಡಾ 5ರಷ್ಟು ಮತಗಳು ಮಾತ್ರ. ಹೀಗಾಗಿ ಕಮ್ಯೂನಿಸ್ಟರಿಗೆ ಅಸ್ತಿತ್ವದ ಪ್ರಶ್ನೆ ಹುಟ್ಟಿಕೊಂಡಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಇಂಥಾ ಕ್ರಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಬಿಜೆಪಿ ಕುಟುಕಿದೆ.

CPI(M) ರೂಪುಗೊಂಡು ಇದೇ ಮೊದಲ ಬಾರಿಗೆ ಕಮ್ಯೂನಿಸ್ಟರು ನೈಜ ಭಾರತೀಯರಾಗಲು ಹೊರಟಿದ್ದಾರೆ. ಮೋದಿ, ಕಮ್ಯೂನಿಸ್ಟರೆನ್ನಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ, ಒಂದು ವರ್ಷಗಳ ಕಾಲ ಸ್ವಾತಂತ್ರ್ಯದ ಇತಿಹಾಸದ ಬಗ್ಗೆ ಕಾರ್ಯಕ್ರಮವನ್ನು ಮಾಡುವಂತೆ ಮಾಡಿದ್ದಾರೆ ಎಂಬುವುದೇ ಖುಷಿ ಎಂದು ಸಂಸದ ಹಾಗೂ ಪಶ್ಚಿಮ ಬಂಗಾಳ ಬಿಜೆಪಿಯ ಅಧ್ಯಕ್ಷ ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಈ ಬಗ್ಗೆ ಪ. ಬಂಗಾಳದ ತ್ರಿಣಮೂಲ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಕಮ್ಯೂನಿಸ್ಟರ ಈ ನಿರ್ಧಾರ ʻತಡವಾಗಿ ಮೂಡಿದ ಅರಿವುʼ. ಪಶ್ಚಿಮ ಬಂಗಾಳದಲ್ಲಿ ಶೂನ್ಯಕ್ಕಿಳಿದ ಮೇಲೆ ಅವರಿಗೆ ತ್ರಿವರ್ಣ ಧ್ವಜದ ಮಹತ್ವ ಗೊತ್ತಾಗಿದೆ. ಕಮ್ಯೂನಿಸ್ಟರು ಬಂಗಾಳದ ಯಾವ ಐಕಾನ್‌ಗಳನ್ನೂ ಗೌರವಿಸಲಿಲ್ಲ. ಈಗಲಾದರೂ ಅವರಿಗೆ ಅವರ ತಪ್ಪು ಮನವರಿಕೆಯಾಗಿದೆ ಎಂದು ಭಾವಿಸುತ್ತೇನೆ. ಹೀಗಾಗಿ ಅವರ ಈ ಕಾರ್ಯಕ್ರಮ ಹಾಗೂ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಅವರು ಕಮ್ಯೂನಿಸ್ಟ್ ಕ್ರಾಂತಿ ಗೀತೆಗಳನ್ನಷ್ಟೇ ಗೌರವಿಸುತ್ತಾರೆ. ಇನ್ಮುಂದೆ ಯಾದರೂ ರಾಷ್ಟ್ರಗೀತೆಯನ್ನು ಗೌರವಿಸುವುದನ್ನು ಕಲಿಯಲಿ ಎಂದು ಹೇಳಿದ್ದಾರೆ.
ಕಮ್ಯೂನಿಸ್ಟರು ತಮ್ಮ ಸೈದ್ಥಾಂತಿಕ ನಿಲುವುಗಳನ್ನು ಬದಲಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ತಮ್ಮ ಅಂಧ ರಾಜಕೀಯ ತತ್ವಗಳಿಂದ ಜನರಿಂದ ದೂರ ಉಳಿಯುತ್ತಿದ್ದಾರೆ. ಈಗ ಈ ಮೂಲಕ ಮತ್ತೆ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಕಮ್ಯೂನಿಸ್ಟರ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಿರಿಯ ಪತ್ರಕರ್ತ ಕಂಚನ್ ಗುಪ್ತಾ, ದೇಶದಲ್ಲಿ ಕಮ್ಯೂನಿಸ್ಟ್‌ವಾದ ನಿಷ್ಕ್ರೀಯಗೊಂಡಿದೆ. ಹೀಗಾಗಿ ತಮ್ಮ ಪುರಾಣ ಸಿದ್ಧಾಂತಗಳಿಗೆ ಮೇಲಿಂದ ಮೇಲಕ್ಕೆ ತಿದ್ದುಪಡಿ ಮಾಡಿ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ʻʻಅವರು ಯಾವ ಭಾರತದ ಪರಿಕಲ್ಪನೆ ಬಗ್ಗೆ ಮಾತನಾಡುತ್ತಿದ್ದಾರೆ.?ʼʼ ಎಂಬ ರವೀಂದ್ರನಾಥ್ ಟ್ಯಾಗೋರ್‌ರ ಹೇಳಿಕೆ ಪ್ರಸ್ತಾಪಿಸುತ್ತಾ ಭಾರತೀಯ ಕಮ್ಯೂನಿಸ್ಟರ ಈ ನಡೆ ಬಗ್ಗೆ ಟೀಕಿಸಿದರು. ರಾಜಕೀಯ, ಸಾಮಾಜಿಕ, ಆರ್ಥಿಕ.. ಹೀಗೆ ಭಾರತದ ಪರಿಕಲ್ಪನೆ ಹಲವು ಸ್ಥರಗಳನ್ನು ಹೊಂದಿದೆ. ಇದ್ಯಾವುದನ್ನು ಒಪ್ಪಿಕೊಳ್ಳದ ಭಾರತೀಯ ಕಮ್ಯೂನಿಸ್ಟರು ರವೀಂದ್ರನಾಥ್ ಟ್ಯಾಗೋರ್‌ರನ್ನು ʻಭೂರ್ಷ್ವಾ ಸಾಹಿತಿʼ ಎಂದು ಕರೆದಿದ್ದರು ಎಂದು ಹೇಳಿದರು.
ಅದೇನೆ ಇದ್ದರೂ, ನಿಲೋತ್ಪಾಲ್ ಬಸು, RSS ಹಾಗೂ ಬಿಜೆಪಿ ರೀತಿಯಲ್ಲಿ CPI(M) ಯಾವತ್ತೂ ದೇಶದ ತ್ರಿವರ್ಣ ಧ್ವಜವನ್ನು ಅವಹೇಳನೆ ಮಾಡಿಲ್ಲ. ಮಾದ್ಯಮಗಳು ಹಾಗೂ ರಾಜಕೀಯ ಪಕ್ಷಗಳು ಒಗ್ಗೂಡಿ ಕಮ್ಯೂನಿಸ್ಟರ ಮೇಳೆ ಇಂಥಾ ಭಾವನೆ ಮೂಡುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ RSS ಕೊಡುಗೆ ಶೂನ್ಯ : CPI(M)
ಇನ್ನು ಮಾಜಿ ಸಂಸದ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಮೊಹಮ್ಮದ್ ಸಲೀಂ, ದೇಶ ಸ್ವತಂತ್ರಗೊಳ್ಳುವುದರಲ್ಲಿ ಕಮ್ಯೂನಿಸ್ಟರ ಪಾತ್ರ ದೊಡ್ಡದಿದೆ. ಹೀಗಾಗಿ ಸ್ವಾತಂತ್ರ್ಯ ಸಂಗ್ರಾಮದ ನೈಜ ಇತಿಹಾಸವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ನಂತರ ಮಾತು ಮುಂದುವರೆಸಿದ ಸಲೀಂ RSS ಹಾಗೂ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬ್ರಿಟೀಷರೊಂದಿಗೆ ಕೈ ಜೋಡಿ ಸ್ವಾತಂತ್ರ್ಯ ಚಳವಳಿಯನ್ನು ಸಂಘಪರಿವಾರ ವಿರೋಧಿಸಿತ್ತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರ ಕೊಡುಗೆ ಶೂನ್ಯ. ಆದರೆ ಕಮ್ಯೂನಿಸ್ಟರು ಸ್ವಾತಂತ್ರ್ಯ ಹೋರಾಟದ ಜೊತೆಗೆ ಸಮಾಜದಲ್ಲಿದ್ದ ಶ್ರೇಣಿ ಪದ್ದತಿಯ ವಿರುದ್ಧ ಹೋರಾಡಿದೆ. ಸಮ ಸಮಾಜವನ್ನು ಕಟ್ಟಲು ಹೋರಾಟ ಮಾಡಿದೆ. ಆದರೆ ದುರಾದೃಷ್ಟವೆಂದರೆ ಅಂದು ಸ್ವಾತಂತ್ರ್ಯವನ್ನು ವಿರೋಧಿಸಿದ್ದ RSS ಕೈಯಲ್ಲಿಂದು ದೇಶದ ಅಧಿಕಾರವಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ CPI(M) ಸಂವಾದವನ್ನು ಏರ್ಪಡಿಸಲಿದೆ. ಮತ್ತು ಸ್ವಾತಂತ್ರ್ಯ ಹೋರಾಟದ ಕುರಿತಾದ ವಿಷಯಗಳ ಮೇಲಿನ ಸಾಹಿತ್ಯ ಓದು ಹಾಗೂ ಭಾಷಣಗಳನ್ನೂ ನೀಡಲಿದೆ. ಜೊತೆಗೆ ಇಡೀ ದೇಶದಾದ್ಯಂತ ಈ ಕಾರ್ಯಕ್ರಮ ನಡೆಯಲಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತಮ್ಮ ಪತ್ರಿಕಾ ಬಿಡುಗಡೆಯಲ್ಲಿ ತಿಳಿಸಿದೆ.










