ಭಾರತದ್ದೇ ಸ್ವಂತ ಲಸಿಕೆ “ಕೊವ್ಯಾಕ್ಸೀನ್” ಕುರಿತು ಈಗ ನೀರವ ಮೌನ ಯಾಕೆ ಅಚ್ಚರಿ ತರಿಸುತ್ತಿಲ್ಲ?
ಆಕ್ಸ್‌ಫರ್ಡ್ ವಿವಿ ಸಂಶೋಧಿಸಿದ ಕೋವಿಶೀಲ್ಡ್‌ಗೆ FDA ಲಸಿಕೆ ಪಾಸ್‌ಪೋರ್ಟ್ ಸಿಕ್ಕಿತು. ಭಾರತದ ಭಾರತ್ ಬಯೋಟೆಕ್ ಸಂಶೋಧಿಸಿದ “ಕೊವ್ಯಾಕ್ಸೀನ್”ಗೆ ಯಾಕಿಲ್ಲ? ನಮ್ಮ ಕನ್ನಡದ ಮಾಧ್ಯಮಗಳಿಗಾಗಲೀ, ಜನಸಾಮಾನ್ಯರಿಗಾಗಲೀ ಈ ಪ್ರಶ್ನೆಗಳು ಯಾಕೆ ಏಳುತ್ತಿಲ್ಲ? ಎದ್ದರೂ ಬಾಯಿ ಬಿಡುತ್ತಿಲ್ಲ ಏಕೆ?
ಇಲ್ಲಿಯ ತನಕ ಅಂದಾಜು ಎರಡು ಕೋಟಿ ಲಸಿಕೆಯನ್ನು ಸಂಸ್ಥೆಯ ಸರ್ಕಾರಕ್ಕೆ ಒದಗಿಸಿದ್ದು, ಅವುಗಳಲ್ಲಿ ಎಷ್ಟು ಬಳಕೆ ಆಗಿದೆ ಎಂಬುದು ಸ್ಪಷ್ಟವಿಲ್ಲ. ಈ ಕೊವ್ಯಾಕ್ಸೀನ್ ಲಸಿಕೆ ಪಡೆದವರು ಈಗ ವಿದೇಶಕ್ಕೆ ಹೋಗಬೇಕೆಂದಾದರೆ ಅವರ ಕತೆ ಏನು? ಅವರು ಮತ್ತೆ ಕೋವಿಶೀಲ್ಡ್ ತೆಗೆದುಕೊಳ್ಳಬೇಕೇ? ಯಾವುದೂ ಸ್ಪಷ್ಟ ಇಲ್ಲ. ಗಟ್ಟಿ ಹೇಳಬೇಕೆಂದರೆ “ಕೊವ್ಯಾಕ್ಸೀನ್” ಕುರಿತು ಮಾತನಾಡಬೇಕಾದವರು ಯಾರೂ ಮಾತನಾಡುತ್ತಿಲ್ಲ… ನಿಗೂಢ ಮೌನ! ಯಾಕೆ?
ಏನಾಗಿತ್ತು?
2021 ಜನವರಿಯಲ್ಲಿ ಆಗಿನ್ನೂ ಎರಡನೇ ಹಂತದ ಸಂಶೋಧನೆಯಲ್ಲಿದ್ದ “ಕೊವ್ಯಾಕ್ಸೀನ್” ಲಸಿಕೆಯನ್ನು ಭಾರತ ಸರ್ಕಾರ (DCGI) “ಗಂಭೀರ ಸನ್ನಿವೇಶದಲ್ಲಿ ಜೀವಗಳನ್ನುಳಿಸುವ ಕಾರಣಕ್ಕೆ” ತುರ್ತು ಬಳಕೆಗಾಗಿ ಅನುಮೋದನೆ ನೀಡಿದಾಗಲೇ, ಸಂಶೋಧನಾ ಪ್ರಕ್ರಿಯೆ ಪೂರ್ಣಗೊಳ್ಳದೇ ಗಡಿಬಿಡಿ ಮಾಡಲಾಗಿದೆ ಎಂದು ಹಲವು ಹುಬ್ಬುಗಳು ಮೇಲೇರಿದ್ದವು. ಸರ್ಕಾರ ಅದನ್ನೆಲ್ಲ ನಿರ್ಲಕ್ಷಿಸಿ, ಈ ವ್ಯಾಕ್ಸೀನ್ 81% ಪರಿಣಾಮಕಾರಿ ಎಂದು ಘೋಷಿಸಿ, ಆತ್ಮನಿರ್ಭರ ಲಸಿಕೆಯ ಟೀಕಾ ಉತ್ಸವಕ್ಕೆ ಕರೆ ನೀಡಿತ್ತು. ಲಕ್ಷಾಂತರ ಮಂದಿ ಕೊವ್ಯಾಕ್ಸೀನ್ ಪಡೆದರು.
ಆದರೆ, ಯಾವಾಗ ಜಾಗತಿಕವಾಗಿ ಮಾನ್ಯತೆ ಪಡೆದ (ಅಂದರೆ 60 ದೇಶಗಳಲ್ಲಿ ಬಳಕೆಗೆ ಈ ಮಾನ್ಯತೆ ಅಗತ್ಯ) ಅಮೆರಿಕದ FDA ಎದುರು ಈ ಲಸಿಕೆಯನ್ನು “ತುರ್ತು ಬಳಕೆಗೆ ಅನುಮೋದನೆಗಾಗಿ” ಇರಿಸಿ, FDA ಅದನ್ನು ಅಗತ್ಯ ದತ್ತಾಂಶಗಳಿಲ್ಲ ಎಂಬ ಕಾರಣಕ್ಕಾಗಿ ನಿರಾಕರಿಸಿತೋ, ಅಲ್ಲಿಂದೀಚೆಗೆ ಎಲ್ಲ ಕಡೆ ಕೊವ್ಯಾಕ್ಸೀನ್ ಬಗ್ಗೆ ನಿಗೂಢ ಮೌನ ಆವರಿಸಿದೆ. ಅದನ್ನು ಪಡೆದವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಭಾರತ್ ಬಯೋಟೆಕ್, ಈಗ ತನ್ನ ಮೂರನೇ-ನಾಲ್ಕನೇ ಹಂತದ ಸಂಶೋಧನೆಯ ವಿವರಗಳನ್ನು FDAಗೆ ಒದಗಿಸುವ ಪ್ರಕ್ರಿಯೆಯಲ್ಲಿದೆ. ಈ ಕೆಲಸವನ್ನು ಅವರ ಅಮೆರಿಕನ್ ಪಾಲುದಾರ ಸಂಸ್ಥೆ ಒಕ್ಯುಜೆನ್ ನಿರ್ವಹಿಸುತ್ತಿದೆ. ಜುಲೈ ತಿಂಗಳಲ್ಲಿ ಈ ಸಂಶೋಧನಾ ಡೇಟಾಗಳನ್ನು FDAಗೆ ಸಲ್ಲಿಸುವುದಾಗಿ ಮತ್ತು ವೈಜ್ಞಾನಿಕ ಜರ್ನಲ್‌ಗಳಲ್ಲಿ ವಿಮರ್ಶೆಗೆ ಬಹಿರಂಗಪಡಿಸುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಈ ಹಂತದಲ್ಲಿ ಲಸಿಕೆ 78% ಪರಿಣಾಮಕಾರಿ ಎಂದು ಅದು ಹೇಳಿಕೊಂಡಿದೆ. ಈ ಪ್ರಕ್ರಿಯೆ ಮುಗಿದು, FDA ಅನುಮೋದನೆ ಸಿಗುವ ತನಕ ಕೊವ್ಯಾಕ್ಸೀನ್ ಪಡೆದವರಿಗೆ 60 ಪ್ರಮುಖ ದೇಶಗಳ ವ್ಯಾಕ್ಸೀನ್ ಪಾಸ್‌ಪೋರ್ಟ್ ಇಲ್ಲ. ಪಿಲಿಫೈನ್ಸ್, ಇರಾನ್, ನೇಪಾಳ, ಗಯಾನ, ಪರುಗ್ವೆ, ಮೆಕ್ಸಿಕೊದಂತಹ 16 ಸಣ್ಣಪುಟ್ಟ-ಬಡ ದೇಶಗಳು ವ್ಯಾಕ್ಸೀನ್ ಮಾರುಕಟ್ಟೆಯ ಪರಿಸ್ಥಿತಿ ಮತ್ತು ವೈಯಕ್ತಿಕ ನೆಲೆಯಲ್ಲಿ ಈ ವ್ಯಾಕ್ಸೀನಿಗೆ ಅನುಮತಿ ನೀಡಿವೆ.
ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸದೇ ಮಾಡಿಕೊಂಡ ಈ ಸರ್ಕಾರಿ ಗಡಿಬಿಡಿ, ಈಗ ಸದ್ಯಕ್ಕೆ, ಉಗುಳಲೂ ಆಗದ ನುಂಗಲೂ ಆಗದ ತುತ್ತಾಗಿ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಂತಿದೆ. ಹೆಚ್ಚಿನಂಶ ಸೆಪ್ಟಂಬರ್ ಹೊತ್ತಿಗೆ ಇದು ಉಗುಳುವುದೋ-ನುಂಗುವುದೋ ನಿರ್ಧಾರ ಆದೀತು.