ಕೇಂದ್ರ ಬಿಜೆಪಿ ಸರ್ಕಾರದ ಕೋವಿಡ್ ನಿರ್ವಹಣೆ ಮತ್ತು ಲಸಿಕೆ ಕಾರ್ಯಕ್ರಮದ ವಿಷಯದಲ್ಲಿ ಹಂತ ಹಂತದ ವೈಫಲ್ಯಗಳನ್ನು ಬಯಲಿಗೆಳೆಯುತ್ತಿರುವ ಸುಪ್ರೀಂಕೋರ್ಟ್, ಬುಧವಾರ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಎತ್ತಿದ್ದು, ಕಳೆದ ಬಜೆಟ್ನಲ್ಲಿ ಲಸಿಕೆ ಕಾರ್ಯಕ್ರಮಕ್ಕಾಗಿಯೇ ಮೀಸಲಿಟ್ಟಿದ್ದ ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಳಸಿ 18-44 ವರ್ಷ ವಯೋಮಾನದವರಿಗೂ ಉಚಿತ ಲಸಿಕೆ ನೀಡುವುದು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ.
ಆ ಮೂಲಕ ಲಸಿಕೆ ವಿಷಯದಲ್ಲಿ ಅನುಸರಿಸುತ್ತಿರುವ ದ್ವಿಮುಖ ನೀತಿಯನ್ನು ನ್ಯಾಯಾಲಯ ಎತ್ತಿ ತೋರಿಸುವ ಮೂಲಕ, ಪ್ರಧಾನಿ ಮೋದಿಯವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೋವಿಡ್ ಮೊದಲ ಅಲೆಯ ವೇಳೆ ಬರೋಬ್ಬರಿ 20 ಲಕ್ಷ ಕೋಟಿ ಆತ್ಮನಿರ್ಭರ ಭಾರತ ಪ್ಯಾಕೇಜ್ ಎಂದು ಘೋಷಣೆ ಮಾಡಿ, ದೇಶದ ಯಾವ ವ್ಯಕ್ತಿಗೂ ನಯಾಪೈಸೆ ಪ್ರಯೋಜನ ತಲುಪದೆ ತೀರಾ ಅಪಹಾಸ್ಯಕ್ಕೀಡಾಗಿದ್ದ ಮೋದಿಯವರ ಸರ್ಕಾರ, ಬಳಿಕ ಕಳೆದ ಬಜೆಟ್ ನಲ್ಲಿ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿಯೂ, ಅದಕ್ಕಾಗಿ ಬರೋಬ್ಬರಿ 35 ಸಾವಿರ ಕೋಟಿ ರೂ. ಅನುದಾನದ ತೆಗೆದಿರಿಸುವುದಾಗಿಯೂ ಹೇಳಿತ್ತು. ಆತ್ಮನಿರ್ಭರ ಪ್ಯಾಕೇಜ್ ನಂತೆಯೇ ಈ ಲಸಿಕೆ ಅನುದಾನ ಕೂಡ ಸರ್ಕಾರದ ಜುಮ್ಲಾಗಳ ಸಾಲಿನ ಮತ್ತೊಂದು ಸೇರ್ಪಡೆ ಎಂಬ ಮಾತುಗಳು ಆಗಲೇ ಕೇಳಿಬಂದಿದ್ದವು.
ಇದೀಗ ಸರ್ವೋಚ್ಛ ನ್ಯಾಯಾಲಯ ಕೂಡ ದೇಶದ ಜನರ ಅಂತಹ ಅನುಮಾನ ಮತ್ತು ಪ್ರಶ್ನೆಗಳಿಗೆ ದನಿಯಾಗಿದ್ದು, ಜನರ ಪರವಾಗಿ ಸರ್ಕಾರದ ಮುಂದೆ ಪ್ರಶ್ನೆ ಇಟ್ಟಿದೆ.
ಕಳೆದ ಫೆಬ್ರವರಿಯಲ್ಲಿ ಲಸಿಕೆಗಾಗಿ ಮೀಸಲಿಟ್ಟಿರುವ 35 ಸಾವಿರ ಕೋಟಿ ಹಣವನ್ನು ಈವರೆಗೆ ಹೇಗೆ ಕರ್ಚು ಮಾಡಲಾಗಿದೆ? ಎಂಬ ಬಗ್ಗೆ ವಿವರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿರುವ ನ್ಯಾ. ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು, ಇದೇ ಅನುದಾನವನ್ನು ಬಳಸಿಕೊಂಡು ದೇಶದ 18-44 ವಯೋಮಾನದ ಗುಂಪಿನವರಿಗೂ ಉಚಿತವಾಗಿ ಲಸಿಕೆ ನೀಡುವುದು ಸಾಧ್ಯವಿಲ್ಲವೆ? ಎಂದೂ ಕೇಳಿದೆ.
ಕೋವಿಡ್ ವಿಷಯದಲ್ಲಿ ಪ್ರಧಾನಿ ಮೋದಿ ಸರ್ಕಾರ, ಆಮ್ಲಜನಕ, ಆಸ್ಪತ್ರೆ ಹಾಸಿಗೆ, ಆಂಬ್ಯುಲೆನ್ಸ್, ಸ್ಮಶಾನದಲ್ಲಿ ಶವಸಂಸ್ಕಾರ,.. ಹೀಗೆ ಪ್ರತಿ ಹಂತದಲ್ಲೂ ಎಡವಿ, ದೇಶದಲ್ಲಿ ಸಾವಿನ ಮೆರವಣಿಗೆಯೇ ಆರಂಭವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡು, ವಿಚಾರಣೆ ನಡೆಸಿ ಪರಿಸ್ಥಿತಿ ನಿಭಾಯಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಿತ್ತು. ಜೊತೆಗೆ ಕೋವಿಡ್ ಚಿಕಿತ್ಸೆ, ಲಾಕ್ ಡೌನ್ ಮತ್ತು ಲಸಿಕೆ ಮತ್ತಿತರ ವಿಷಯಗಳನ್ನೂ ತನ್ನ ವಿಚಾರಣೆಯ ವ್ಯಾಪ್ತಿಗೆ ಸೇರಿಸಿಕೊಂಡು ದಿನಂಪ್ರತಿ ವಿಚಾರಣೆ ನಡೆಸಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿದೆ. ಆ ವಿಚಾರಣೆಯ ಮುಂದುವರಿದ ಭಾಗವಾಗಿ ಬುಧವಾರ ಪೀಠವು ಈ ಪ್ರಶ್ನೆಗಳನ್ನು ಕೇಳಿದೆ.

ಪ್ರಮುಖವಾಗಿ ಲಸಿಕೆ ದರದ ವಿಷಯದಲ್ಲಿ ಕೇಂದ್ರ ಸರ್ಕಾರದ ದ್ವಿಮುಖ ನೀತಿ, 18-44 ವಯೋಮಾನದವರಿಗೆ ಉಚಿತ ಲಸಿಕೆ ನೀಡದೆ, ಆ ಹೊಣೆಗಾರಿಕೆಯನ್ನು ರಾಜ್ಯ ಗಳಿಗೆ ವರ್ಗಾಯಿಸುವ ಮೂಲಕ ರಾಜ್ಯಗಳ ಮೇಲೆ ಸಂವಿಧಾನದ 14ನೇ ಪರಿಚ್ಛೇಧಕ್ಕೆ ವಿರುದ್ಧವಾಗಿ ಸಂಕಷ್ಟದ ಹೊತ್ತಲ್ಲಿ ಹಣಕಾಸು ಹೊರೆ ಹಾಕಿರುವುದು ಮುಂತಾದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಪೀಠವು, ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ, ತನ್ನ ಈ ಪ್ರಶ್ನೆಗಳಿಗೆ ಸೂಕ್ತ ವಿವರ ಮತ್ತು ದಾಖಲೆಗಳೊಂದಿಗೆ ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಲಾಗಿದೆ.
ಒಟ್ಟಾರೆ, ಸುಪ್ರೀಂಕೋರ್ಟಿನ ಈ ಸೂಚನೆಗಳು ಪ್ರಧಾನಿ ಮೋದಿಯವರ ‘ಉದಾರ ಲಸಿಕಾ ನೀತಿ’ಯು ನಿಜವಾಗಿಯೂ ಎಷ್ಟು ಉದಾರ ಮತ್ತು ಎಷ್ಟು ಜನಪರ ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದ್ದು, ಈವರೆಗೆ ಬಹುತೇಕ ಗೌಪ್ಯವಾಗಿಯೇ ಇರುವ ಲಸಿಕೆ ತಯಾರಿಕಾ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯವಹಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗಲು ಇಂಬು ನೀಡಿದೆ.












