ರಾಜ್ಯದಲ್ಲಿ ಕರೋನಾ ಸೋಂಕು ಉಲ್ಬಣಗೊಂಡು ಅತಿರೇಕದ ಮಟ್ಟ ತಲುಪಿದ ನಂತರ ಎಚ್ಚೆತ್ತುಕೊಂಡ ಸರ್ಕಾರ ಕೊನೆಗೂ ಲಾಕ್ಡೌನ್ ಮೊರೆ ಹೋಗಿತ್ತು. ಕರೋನಾ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಲಾಕ್ಡೌನ್’ನ ಮುಖ್ಯ ಉದ್ದೇಶ. ಆದರೆ, ಇಷ್ಟನ್ನು ಸಾಧಿಸಿದರೆ ಮಾತ್ರ ಕರೋನಾ ಎರಡನೇ ಅಲೆಯನ್ನು ಜಯಿಸಿದಂತೆಯೇ? ಲಾಕ್ಡೌನ್ ನಿಯಮಗಳನ್ನು ಸಡಿಲಿಸಲು ರಾಜ್ಯದಲ್ಲಿ ಇದು ಸಕಾಲವೇ? ಇಲ್ಲವೆನ್ನುತ್ತವೆ, ಮೇ ತಿಂಗಳಲ್ಲಿ ದಾಖಲಾದ ಕೋವಿಡ್ ಅಂಕಿ ಅಂಶಗಳು.
ಸದ್ಯದ ಮಟ್ಟಿಗೆ ಜೂನ್ 7ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ಇರಲಿದೆ. ಆದರೆ, ಈಗಿರುವ ಅಂಕಿ ಅಂಶಗಳನ್ನು ಗಮನಿಸಿದಾಗ ಶೀಘ್ರದಲ್ಲಿ ಲಾಕ್ಡೌನ್ ಸಡಿಲಿಸುವುದು ಮುಂಬರುವ ಆಪತ್ತನ್ನು ಮೈಮೇಲೆ ಎಳೆದುಕೊಂಡಂತೆ ಆಗಲಿದೆ. ಪ್ರತಿದಿನ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ, ಕೋವಿಡ್ ಸಾವುಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.
ಮೇ ಆರಂಭದ ದಿನಗಳಲ್ಲಿ ಸತತವಾಗಿ 50,000 ಹೊಸ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದ್ದವು. ಈಗ ಆ ಸಂಖ್ಯೆ 15,000ಕ್ಕೆ ಇಳಿದಿದೆ. ಇದು ಅಲ್ಪಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ. ಲಾಕ್ಡೌನ್ ಸಡಿಲಿಸಲು ಇರುವ ನಿಯಮಗಳಲ್ಲಿ ಪ್ರಮುಖವಾಗಿರುವುದು, ಪಾಸಿಟಿವಿಟಿ ರೇಟ್ ಅನ್ನು ಶೇಕಡಾ 5ಕ್ಕೆ ಇಳಿಸುವುದು. ನೂರು ಜನರಿಗೆ ಪರೀಕ್ಷೆ ನಡೆಸಿದಾಗ ಐವರಲ್ಲಿ ಮಾತ್ರ ಸೋಂಕು ಕಂಡುಬಂದರೆ ಮಾತ್ರ ಲಾಕ್ಡೌನ್ ಸಡಿಲಿಸಬಹುದು ಎಂದು ಕೋವಿಡ್ ತಾಂತ್ರಿಕ ಸಮಿತಿ ಸಲಹೆ ನೀಡಿದೆ.
ಈ ಸಲಹೆಯ ಪ್ರಕಾರ ನೋಡುವುದಾದರೆ, ಈಗಲೂ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಶೇ. 10 ಪಾಸಿಟಿವಿಟಿ ರೇಟ್ ಇದೆ. ಸುಮಾರು ಹತ್ತು ಜಿಲ್ಲೆಗಳಲ್ಲಿ ಇದು 20%ದಷ್ಟಿದೆ. ಕಳೆದ ಏಳು ದಿನಗಳ ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ 14%.
ಆದರೆ, ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಕೋವಿಡ್ ಸಾವಿನ ಪ್ರಮಾಣ. ಮೇ 31ರ ವೇಳೆಗೆ ಕರ್ನಾಟಕದ ಕೋವಿಡ್ ಸಾವಿನ ಪ್ರಮಾಣ 3.24%. ಸುಮಾರು 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.1ಕ್ಕಿಂತಲೂ ಹೆಚ್ಚಿದೆ. ಏಪ್ರಿಲ್ ಮತ್ತು ಮೇ ತಿಂಗಳ ಸಾವಿನ ಪ್ರಮಾಣವನ್ನು ನಾವು ತಾಳೆ ಹಾಕಿ ನೋಡಿದರೆ, ಏಪ್ರಿಲ್ ನಲ್ಲಿ 3,209 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿದ್ದವು. ಈ ಸಂಖ್ಯೆ ಮೇ ತಿಂಗಳಲ್ಲಿ ನಾಲ್ಕುಪಟ್ಟು ಏರಿಕೆ ಕಂಡು 13,760ಕ್ಕೆ ತಲುಪಿತ್ತು. ಬೆಂಗಳೂರು ಒಂದರಲ್ಲೇ, 7,085 ಸಾವುಗಳು ದಾಖಲಾಗಿವೆ. ಏಪ್ರಿಲ್’ನಲ್ಲಿ ಈ ಸಂಖ್ಯೆ 1,907 ಇತ್ತು. ಅಂದರೆ ಸಾವಿನ ಸಂಖ್ಯೆಯಲ್ಲಿ ಆರು ಪಟ್ಟು ಹೆಚ್ಚಳವಾಗಿದೆ. ಈವರೆಗಿನ ಒಟ್ಟು ಸಾವಿನ ಸಂಖ್ಯೆಯ ಶೇಕಡಾವಾರು ನೋಡುವುದಾದರೆ, ಮೇ ತಿಂಗಳಲ್ಲಿ ಮಾತ್ರ ಸಂಭವಿಸಿದ ಸಾವುಗಳು, ರಾಜ್ಯದ ಒಟ್ಟು ಸಾವಿನ ಸಂಖ್ಯೆ ಶೇ. 57ರಷ್ಟಿದ್ದರೆ, ಬೆಂಗಳೂರಿನ ಒಟ್ಟು ಕೋವಿಡ್ ಸಾವುಗಳ ಶೇ. 66ರಷ್ಟಿದೆ. ಈ ಸಂಖ್ಯೆಗಳು ನಿಜಕ್ಕೂ ಎದೆ ನಡುಗಿಸುತ್ತವೆ.

ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಏಕಾಏಕಿ ಕಡಿಮೆಯಾಗಿತ್ತು. ಕಡಿಮೆ ಕೋವಿಡ್ ಪರೀಕ್ಷೆಗಳನ್ನು ಮಾಡಿದ ಕಾರಣಕ್ಕೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು ಎಂಬ ಗುಮಾನಿಯೂ ವ್ಯಕ್ತವಾಗಿತ್ತು. ಪಾಸಿಟಿವಿಟಿ ರೇಟ್ ಕಡಿಮೆಗೊಳಿಸಿ ಲಾಕ್ಡೌನ್ ತೆರವುಗೊಳಿಸಲು ಆತುರತೆಯನ್ನು ತೋರುತ್ತಿರುವ ಸರ್ಕಾರ ಕೋವಿಡ್ ಸಾವುಗಳ ಸಂಖ್ಯೆಯ ಮೇಲೆ ಏಕೆ ಗಮನ ಹರಿಸುತ್ತಿಲ್ಲ? ಪಾಸಿಟಿವಿಟಿ ರೇಟ್ ಕಡಿಮೆಗೊಳಿಸಿ ಲಾಕ್ಡೌನ್ ತೆರವುಗೊಳಿಸುವ ನಿರ್ಧಾರವನ್ನು ಕೈಗೊಂಡರೂ, ಮುಂಬರುವ ಅನಾಹುತಕ್ಕೆ ಯಾರು ಹೊಣೆಗಾರರು? ಈಗಾಗಲೇ ಹೇಳಿದಂತೆ, ಜನರು ಬೇಜವಾಬ್ದಾರಿಯಿಂದ ವರ್ತಿಸಿ ಮತ್ತೆ ಸೋಂಕು ಉಲ್ಬಣಗೊಳ್ಳುವಂತೆ ಮಾಡಿದ್ದಾರೆ ಎಂದು ಸಬೂಬು ಹೇಳಿ ಕೈತೊಳೆದುಕೊಳ್ಳುವ ಆಲೋಚನೆಯೇ?
ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿಯವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಲಾಕ್ಡೌನ್ ತೆರವುಗೊಳಿಸಿ ಕಠಿಣ ನಿಯಮಗಳನ್ನು ಮಾತ್ರ ಜಾರಿಗೊಳಿಸಬೇಕು ಎಂದಿದ್ದಾರೆ. ಹಲವು ಇತರ ಸಚಿವರು ಲಾಕ್ಡೌನ್ ಮುಂದುವರೆಸಿದರೆ ಸೂಕ್ತ ಎಂದು ಹೇಳಿದ್ದಾರೆ. ಸಿಎಂ ಮತ್ತು ಆರೋಗ್ಯ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಸೂಚನೆಗಳನ್ನು ಅವಲೋಕಿಸಿ ತೀರ್ಮಾಣ ಕೈಗೊಳ್ಳಲಾಗುವುದು ಎಂದಿದ್ದಾರೆ. ಹಾಗಾದರೆ, ಈ ಸರ್ಕಾರದ ಸಚಿವ ಸಂಪುಟದಲ್ಲಿಯೇ ಒಮ್ಮತವಿಲ್ಲವೇ? ಸ್ವ ಮತ್ತು ಸ್ವಜನರ ಹಿತಾಸಕ್ತಿಗಾಗಿ, ರಾಜ್ಯದ ಜನರನ್ನೇ ಕೊವಿಡ್’ಗೆ ಆಹುತಿಯಾಗಿ ನಿಡುವ ಪ್ರಯತ್ನವನ್ನು ಸರ್ಕಾರ ಮಾಡಬಾರದು.
ಕೋವಿಡ್ ಪ್ರಕರಣ ಹಾಗೂ ಸಾವಿನ ಪ್ರಕರಣಗಳ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರು, ನಮ್ಮ ಆದ್ಯತೆ ಆರೋಗ್ಯ, ಜೀವ ಮತ್ತು ಜೀವನ ಎಂದಿದ್ದಾರೆ.
“ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.5ರಷ್ಟು, ಪ್ರತಿದಿನದ ಕೋವಿಡ್ ಪ್ರಕರಣಗಳ ಸಂಖ್ಯೆ 5000 ಕ್ಕಿಂತಲೂ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇ. 1ರಷ್ಟು ಇಳಿಕೆಯಾಗುವವರೆಗೆ ಲಾಕ್ಡೌನ್ ತೆರವು ಮಾಡುವುದು ಕಷ್ಟಸಾಧ್ಯ,” ಎಂದಿದ್ದಾರೆ.
ಇದರೊಂದಿಗೆ ಹೆಚ್ಚಿನ ಪಾಸಿಟಿವಿಟಿ ರೇಟ್ ಹೊಂದಿರುವ ಜಿಲ್ಲೆಗಳಾದ ಮೈಸೂರು, ಹಾಸನ ಮತ್ತು ತುಮಕೂರುಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಕುರಿತಾಗಿಯೂ ಮಾಹಿತಿ ನೀಡಿದ್ದಾರೆ.

ಆದರೆ, ಕೋವಿಡ್ ಪರೀಕ್ಷೆಗಳ ಹಿಂದಿನ ಅಸಲೀಯತ್ತು ಹಾಗೂ ಕೋವಿಡ್ ಅಂಕಿ ಅಂಶಗಳಲ್ಲಿನ ಪಾರದರ್ಶಕತೆಯ ಮೇಲೆ ಎದ್ದಿರುವ ಪ್ರಶ್ನೆ ಇನ್ನೂ ಹಾಗೆಯೇ ಇದೆ. ಸರ್ಕಾರ ನೀಡುವ ಅಂಕಿಅಂಶಗಳು, ತಮಗೆ ಸಾಧಕವಾಗುವಂತೆ ತಿರುಚಿದ್ದರೆ, ಮತ್ತೆ ಅದರಿಂದ ಪರಿತಪಿಸುವುದು ಸಾಮಾನ್ಯ ಜನರು.
ಇಂತಹ ಅನಾಹುತಕ್ಕೆ ಕೈಹಾಕುವುದರಿಂದ ಸರ್ಕಾರ ಹಿಂಜರಿಯಲೇ ಬೇಕು. ಅನ್ಲಾಕ್ ಮಾಡಲು ಆತುರತೆ ತೋರುವುದನ್ನು ಬಿಟ್ಟು, ಪಾರದರ್ಶಕವಾದ ಕೋವಿಡ್ ಅಂಕಿಅಂಶಗಳನ್ನು ಸರ್ಕಾರ ಜನರ ಮುಂದಿಡಬೇಕು. ಈ ಸೋಂಕಿನ ಭೀಕರತೆಯನ್ನು ಮರೆಮಾಚಿ ಕೇವಲ ಲಾಭದ ಮುಖ ನೋಡಿ ಅನ್ಲಾಕ್ ಮಾಡಲು ಮುಂದಾದರೆ, ಇದರ ಪರಿಣಾಮ ನಿಜಕ್ಕೂ ಘೋರವಾಗಿರಲಿದೆ.