ಕೆಲವೊಮ್ಮೆ ಉದ್ದೇಶ ಉದಾತ್ತವಾಗಿದ್ದರೂ ಕಾಲ ಪಕ್ವವಾಗಿಲ್ಲದಿದ್ದರೆ, ಪರಿಣಾಮವೂ ಅಪಕ್ವವಾಗುತ್ತದೆ. ಕರೋನಾದ ಎರಡನೇ ಅಲೆಯೆಂಬ ಸುನಾಮಿ ಭಾರತೀಯರ ಜೀವಗಳನ್ನು ಆಪೋಷಣ ಮಾಡುತ್ತಿರುವ ಸಂದರ್ಭದಲ್ಲಿ, ದೇಶವಾಸಿಗಳಿಗೆ ನೀಡುವ ಮೊದಲೇ ಲಸಿಕೆಗಳನ್ನು ನೆರೆ ರಾಷ್ಟ್ರಗಳಿಗೆ ರಫ್ತು ಮಾಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮವು ವಿಪಕ್ಷಗಳ ಭಾರಿ ಟೀಕೆಗೆ ಗುರಿಯಾಗಿವೆ. ಮತ್ತು ಸಾರ್ವಜನಿಕರ ನಡುವೆ ಜಿಜ್ಞಾಸೆಗೂ ಕಾರಣವಾಗಿದೆ.
ದೇಶದ ಜನರು ಲಸಿಕಾ ಅಭಿಯಾನದ ಭಾಗವಾಗಿ ಲಸಿಕೆ ಹಾಕಿಸಿಕೊಳ್ಳಲು ಹೋಗಿ, ಲಸಿಕೆ ಲಭ್ಯವಿಲ್ಲದೆ ಸರಕಾರಗಳಿಗೆ ಹಿಡಿಶಾಪ ಹಾಕುತ್ತ ವಾಪಸ್ ಬರುತ್ತಿರುವ ಸನ್ನಿವೇಶದಲ್ಲಿ, ಲಸಿಕೆ ಕೊರತೆಯಿಂದಾಗಿ 18-44 ವರ್ಷದವರಿಗೆ ಹಾಕಬೇಕಿದ್ದ ಲಸಿಕಾ ಅಭಿಯಾನ ಪ್ರಕ್ರಿಯೆಯನ್ನು ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯ ಸರಕಾರಗಳು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆಪ್‍ನಾಯಕ ಮನೀಶ್ ಸಿಸೋಡಿಯಾ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿರುವುದು ಸಮಂಜಸವಾಗಿದೆ. ಕೇಂದ್ರ ಸರಕಾರವೇನಾದರೂ ಈವರೆಗೆ ರಫ‍್ತು ಮಾಡಿರುವ 6.63 ಕೋಟಿ ಲಸಿಕೆಗಳನ್ನು ಭಾರತೀಯರಿಗೇ ಮೀಸಲಿರಿಸಿ ಬಳಸಿದ್ದರೆ, ಕೋವಿಡ್ ಎರಡನೇ ಅಲೆಯ ಆಟಾಟೋಪವನ್ನು ನಿಯಂತ್ರಿಸಲು ಸಾಧ್ಯವಿತ್ತು ಎಂಬುದು ವಿಪಕ್ಷ ನಾಯಕರ ವಾದವಾಗಿದೆ.
ಕಾಂಗ್ರೆಸ್, ಆಪ್ ಸುಳ್ಳು ಹೇಳುತ್ತಿದೆ ಎಂದ ಬಿಜೆಪಿ
ಈ ಆರೋಪಗಳ ಸಂಬಂಧ ಕಾಂಗ್ರೆಸ್ ಹಾಗೂ ಆಪ್‍ಪಕ್ಷದ ನಾಯಕರು ಈ ಸಂಬಂಧ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದು, ಜಾಗತಿಕ ವಲಯದಲ್ಲಿ ಕೊಡು-ಕೊಳ್ಳು ಸಹಕಾರ ಇಂದಿನ ಅಗತ್ಯವಾಗಿದೆ. ಯಾವ ದೇಶವೂ ಈ ಜಗತ್ತಿನಲ್ಲಿ ದ್ವೀಪವಾಗಿ ಅಸ್ತಿತ್ವದಲ್ಲಿ ಇರಲಾಗದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸುದ್ದಿಗೋಷ್ಠಿ ಮಾಡಿ ಕೇಂದ್ರ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಒಟ್ಟು 5.50 ಕೋಟಿ ಲಸಿಕೆ ಡೋಸ್ ಗಳನ್ನು ವಾಣಿಜ್ಯ ವಹಿವಾಟಿನ ಭಾಗವಾಗಿ ಮತ್ತು ದೇಶದ ಎರಡು ಲಸಿಕಾ ತಯಾರಿಕಾ ಸಂಸ್ಥೆಗಳ ಪರವಾನಗಿಗೆ ಸಂಬಂಧಿಸಿದ ದಾಯಿತ್ವದ ಹಿನ್ನೆಲೆಯಲ್ಲಿ ಹೊರ ರಾಷ್ಟ್ರಗಳಿಗೆ ಕಳುಹಿಸಿಕೊಡಲಾಗಿದೆ. ಈವರೆಗೆ ರಫ‍್ತು ಮಾಡಲಾದ ಒಟ್ಟು ಲಸಿಕೆಗಳ ಪೈಕಿ 84 ಶೇಕಡಾದಷ್ಟನ್ನು ವಾಣಿಜ್ಯ ವಹಿವಾಟಿನ ಭಾಗವಾಗಿ ಕಳುಹಿಸಲಾಗಿದೆ. ಸೀರಂ ಇನಿಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್.ಐ.ಐ) ಸಂಸ್ಥೆಯು ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿದ್ದರೂ ಅದರ ಬೌದ್ಧಿಕ ಆಸ್ತಿ ಹಕ್ಕು ಇರುವುದು ಅಸ್ಟ್ರಾಜೆನೆಕಾ ಎಂಬ ವಿದೇಶಿ ಸಂಸ್ಥೆಯ ಬಳಿ. ಅದರ ಭಾಗವಾಗಿ ಎಸ್.ಐ.ಐ ಭಾರತದಲ್ಲಿ ಲಸಿಕೆ ತಯಾರಿಸುತ್ತಿದೆ. ಇನ್ನು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಅನ್ನು ಕಚ್ಚಾ ವಸ್ತುವನ್ನು ಆಮದು ಮಾಡಿಕೊಳ್ಳುವ ಸಂಬಂಧ ಬೇರೆ ದೇಶಗಳೊಂದಿಗೆ ಒಪ್ಪಂದಕ್ಕೆ ಒಳಪಟ್ಟಿದೆ. ಹೀಗಾಗಿ ಆ ಎರಡೂ ಸಂಸ್ಥೆಗಳು ವಿದೇಶಗಳ ಜತೆಗಿನ ಒಪ್ಪಂದದಂತೆ ಲಸಿಕೆಗಳನ್ನು ಕಳುಹಿಸುವುದು ಅನಿವಾರ್ಯ ಎಂದಿದ್ದಾರೆ.
ಇನ್ನು, ಹೊರ ದೇಶಗಳ ಸಹಾಯಾರ್ಥವಾಗಿ ರಫ‍್ತು ಮಾಡಲಾದ 1.07 ಕೋಟಿ ಲಸಿಕೆಗಳ ಪೈಕಿ 78.5 ಲಕ್ಷ ಲಸಿಕೆಗಳನ್ನು ದೇಶದ ನೆರೆಹೊರೆಯ ಏಳು ದೇಶಗಳಿಗೆ ಕಳುಹಿಸಲಾಗಿದೆ. ನೆರೆಹೊರೆಯವರು ಸುರಕ್ಷಿತವಾಗಿರುವುದು ಭಾರತಕ್ಕೂ ಒಳ್ಳೆಯದು ಎಂದು ಹೇಳಿರುವ ಪಾತ್ರಾ ಹೇಳಿದ್ದಾರೆ.
ಲಸಿಕೆ ತಯಾರಿಕೆ ಸೂತ್ರ ಎಲ್ಲರಿಗೂ ಹಂಚಿ ಎಂದಿದ್ದ ಕೇಜ್ರಿವಾಲ್
ಕೇವಲ ಎರಡು ಸಂಸ್ಥೆಗಳು ಆಹೋರಾತ್ರಿ ಕಷ್ಟಪಟ್ಟರೂ ದೇಶದ ಅಗತ್ಯ ಪೂರೈಸುವಷ್ಟು ಕೋವಿಡ್ ಲಸಿಕೆಗಳನ್ನು ಉತ್ಪಾದಿಸಲಾಗದು. ಎಲ್ಲರಿಗೂ ತುರ್ತಾಗಿ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕಿರುವುದರಿಂದ ಕೋವಿಡ್ ಲಸಿಕೆ ತಯಾರಿಕೆ ಸೂತ್ರಗಳನ್ನು ದೇಶದ ಇತರೆ ಔಷಧ ತಯಾರಿಕಾ ಸಂಸ್ಥೆಗಳಿಗೂ ನೀಡಿ ಲಸಿಕೆಗಳನ್ನು ಉತ್ಪಾದಿಸುವುದು ಸೂಕ್ತ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದ್ದಿಗೋಷ್ಠಿ ನಡೆಸಿ ಸಲಹೆ ನೀಡಿದ್ದರು.
ಈ ಸಲಹೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಎಸ್.ಐ.ಐ ತಯಾರಿಸುತ್ತಿರುವ ಕೋವಿಶೀಲ್ಡ್ ನ ಸೂತ್ರದ ಬೌದ್ಧಿಕ ಹಕ್ಕು ಅಸ್ಟ್ರಾಜೆನೆಕಾ ಎಂಬ ವಿದೇಶಿ ಸಂಸ್ಥೆಯದ್ದಾಗಿದೆ. ಅದರ ಮೇಲೆ ಕೇಂದ್ರಕ್ಕೆ ಹಕ್ಕಿಲ್ಲ. ಅದರ ಲಸಿಕೆಯ ಸೂತ್ರವನ್ನು ಯಾರಿಗೂ ಹಂಚಿಕೊಳ್ಳಲಾಗದು. ಇನ್ನು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಅತ್ಯಂತ ಉನ್ನತ ಮಟ್ಟದ ಜೈವಿಕ ಸುರಕ್ಷತೆ ಅಗತ್ಯವಿದೆ. ಈ ಸಾಮರ್ಥ್ಯ ದೇಶದ ಕೆಲವೇ ಸಂಸ್ಥೆಗಳಲ್ಲಿದ್ದು, ಅವುಗಳ ಜತೆ ಸಾರ್ವಜನಿಕ ವಲಯದ ಸಂಸ್ಥೆಗಳ ಜತೆಗೂ ಕೇಂದ್ರ ಸರಕಾರ ಮಾತುಕತೆ ನಡೆಸುತ್ತಿದೆ ಎಂದು ಪಾತ್ರಾ ಹೇಳಿದ್ದಾರೆ.
ಭಾರತಕ್ಕೆ ಪ್ರವಚನ ಕೊಡಬೇಡಿ ಎಂದ ಫ್ರಾನ್ಸ್ ಅಧ್ಯಕ್ಷ
ಅಚ್ಚರಿಯ ನಡೆಯೊಂದರಲ್ಲಿ ಭಾರತದ ಲಸಿಕಾ ನೀತಿಯನ್ನು ಫ್ರಾನ್ಸ್ ಸರಕಾರ ಬೆಂಬಲಿಸಿದೆ. “ಲಸಿಕೆಗಳನ್ನು ಪೂರೈಸುವ ಬಗ್ಗೆ ಭಾರತಕ್ಕೆ ಯಾರೂ ಪ್ರವಚನ ನೀಡುವ ಅಗತ್ಯವಿಲ್ಲ. ಆ ದೇಶ ಮಾನವೀಯತೆ ಕಾರಣಕ್ಕೆ ಲಸಿಕೆಗಳನ್ನು ರಫ್ತು ಮಾಡಿದೆ. ಆ ದೇಶದ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ನಾವು ಆ ದೇಶದೊಂದಿಗೆ ಇದ್ದೇವೆ ಎಂದು ಭಾರತ ಸರಕಾರದ ನಡೆಯನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಸಮರ್ಥಿಸಿದ್ದಾರೆ.
ಕೋವಿಡ್ 19 ಲಸಿಕೆಗಳ ಕೊರತೆ ಹಾಗೂ ಅದರ ನಿರ್ವಹಣೆ ಸಂಬಂಧ ದೇಶ, ವಿದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮ್ಯಾಕ್ರನ್, ಕೋವಿಡ್ ಎರಡನೇ ಅಲೆಯನ್ನು ಸಶಕ್ತವಾಗಿ ಎದುರಿಸುವ ಭಾರತದ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.
ದೇಶದಲ್ಲೇ ಕರೋನಾ ಉಲ್ಬಣಿಸಿದ್ದರಿಂದ ‘ವಿಶ್ವಗುರು’ವಿಗೆ ಕುತ್ತು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ “ವಿಶ್ವ ಗುರು” ಪರಿಕಲ್ಪನೆಯ ಆಧಾರದಲ್ಲಿ 90ಕ್ಕೂ ಅಧಿಕ ಬಡ ದೇಶಗಳಿಗೆ ಕೋವ್ಯಾಕ್ಸಿನ್ ರಫ್ತು ಮಾಡಿ ಅಲ್ಲಿನ ಪ್ರಜೆಗಳಿಗೆ ಅನುಕೂಲ ಮಾಡಿಕೊಡುವ ಗುರಿ ಇಟ್ಟುಕೊಂಡಿತ್ತು. ತನ್ನ ದೇಶದವರಿಗಿನ್ನೂ ಸಂಪೂರ್ಣವಾಗಿ ಲಸಿಕೆ ಹಾಕದಿದ್ದರೂ ಬಡ ರಾಷ್ಟ್ರಗಳಿಗೆ ಲಸಿಕೆಗಳನ್ನು ರಫ್ತು ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟ್ರೆಡೋಸ್ ಘೆಬ್ರೆಯೆಸಸ್ ಹಾಗೂ ವಿಶ್ವ ಕ್ರಿಕೆಟ್‍ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ರಿಂದ ಹಿಡಿದು ಆಂಟಿಗುವ ಹಾಗೂ ಬರ್ಬುಡಾದ ಪ್ರಧಾನ ಮಂತ್ರಿ ಗಸ್ಟೊನ್ ಬ್ರೌನ್ ವರೆಗೆ ಹಲವರು, “ಬಹುಶಃ ಯಾವುದೇ ದೇಶದ ಜಾಗತಿಕ ನಾಯಕರಿಗ ಹೋಲಿಸಿದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉದಾರತೆ, ದಯಾಪರತೆ, ಕರುಣಾಮಯಿ ಗುಣ ಬಹಳ ಮಹತ್ವದ್ದು” ಎಂದು ಬಣ್ಣಿಸಿದ್ದರು. ಬ್ರೆಜಿಲ್ ನ ಅಧ್ಯಕ್ಷರಂತೂ, ರಾಮಾಯಣದಲ್ಲಿ ಹನುಮಂತನು ಹಿಮಾಲಯದಿಂದ ಲಂಕೆಗೆ ಸಂಜೀವಿನಿ ಔಷಧವನ್ನು ತಂದ ಸನ್ನಿವೇಶಕ್ಕೆ ಹೋಲಿಸಿ, ತಮ್ಮ ದೇಶಕ್ಕೆ ಭಾರತದಿಂದ ಬಂದ ಲಸಿಕೆಗಳಿಗೆ ಪುರಾಣದ ಪರಿಕಲ್ಪನೆ ನೀಡಿದ್ದರು. ಆಗ ಬಿಜೆಪಿ ನಾಯಕರು, ನರೇಂದ್ರ ಮೋದಿ ಅವರು ದೇಶವನ್ನು ‘ವಿಶ್ವಗುರು’ ಸ್ಥಾನಕ್ಕೇರಿಸಿದ್ದಾರೆ ಎಂದೆಲ್ಲ ಹೊಗಳಿದ್ದರು.
ಆದರೆ ಮಾರ್ಚ್‍ತಿಂಗಳಲ್ಲಿ ಕೋವಿಡ್ 19 ರ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಿದ್ದರಿಂದ, ಔಷಧ, ಆಮ್ಲಜನಕದ, ವೆಂಟಿಲೇಟರ್, ಬೆಡ್ ಗಳ ಕೊರತೆಯಿಂದಾಗಿ ಜನರು ಸಾಯತೊಡಗಿದರು. ಇಂಥ ಸನ್ನಿವೇಶದಲ್ಲೂ ದೇಶದ ಜನರಿಗೆ ನೀಡಬೇಕಾದ ಲಸಿಕೆಗಳನ್ನು ರಫ್ತು ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಭಾರಿ ಆಕ್ಷೇಪಗಳು ಕೇಳಿಬರತೊಡಗಿತ್ತು. ದೇಶದಲ್ಲಿನ ಕೊರೋನಾ ಪರಿಸ್ಥಿತಿಯನ್ನು ಆದ್ಯತೆ ಮೇರೆಗೆ ಮೊದಲಿಗೆ ನಿರ್ವಹಿಸುವ ಅನಿವಾರ್ಯತೆಗೆ ಒಳಗಾದ ಕೇಂದ್ರ ಸರಕಾರ, ಬೇರೆ ದೇಶಗಳಿಗೆ ಕೊರೋನಾ ಲಸಿಕೆ ರಫ‍್ತು ಮಾಡಲೇಬೇಕಾಯಿತು. ಇದರಿಂದ 2021 ರ ಅಂತ್ಯದೊಳಗೆ ತಮ್ಮ ಜನಸಂಖ್ಯೆಯ 30-35% ಜನರಿಗೆ ಲಸಿಕೆ ಹಾಕಿಸುವ ಆಫ್ರಿಕನ್ ಒಕ್ಕೂಟದ ಗುರಿ ಸಾಧನೆ ಸಂಭನೀಯತೆ ಕುಸಿದು ಹೋಯಿತು. ಅಲ್ಲದೆ ಒಪ್ಪಂದದಂತೆ ಸೀರಂ ಇನಿಸ್ಟಿಟ್ಯೂಟ್ ಬ್ರಿಟನ್‍ಗೆ ಕಳುಹಿಸಬೇಕಿದ್ದ 50 ಲಕ್ಷ ಲಸಿಕೆಗಳಿಗೆ ತಡೆಯೊಡ್ಡಿದ್ದು, ಆ ದೇಶದ ಲಸಿಕೆ ಅಭಿಯಾನಕ್ಕೆ ಹಿನ್ನಡೆ ಉಂಟು ಮಾಡಿತ್ತು.
ಇದೆಲ್ಲದರ ನಡುವೆ ಮೋದಿ ಸರಕಾರದ ರಫ್ತು ನೀತಿಯ ಬಗ್ಗೆ ದೇಶ, ವಿದೇಶಗಳಲ್ಲಿ ಟೀಕೆಗಳ ಸುರಿಮಳೆಯಾಗತೊಡಗಿತ್ತು. ಬೇರೆ ದೇಶಗಳಿಗೆ ಸಹಾಯ ಮಾಡಿ ‘ವಿಶ್ವಗುರು’ ಆಗುವ ಆಶಯಕ್ಕೂ ಇದರಿಂದ ಕುತ್ತು ಉಂಟಾಗಿದೆ. ಇತ್ತ ವಿದೇಶಗಳಿಗೆ ಕೋವಿಡ್ ಲಸಿಕೆ ರಫ್ತು ಮಾಡುತ್ತಿರುವುದರ ಬಗೆಗೂ ಕೇಂದ್ರ ಸರಕಾರ ಯೂ ಟರ್ನ್ ಹೊಡೆಯುತ್ತಿದೆ.