ಲಸಿಕೆ ಬಗ್ಗೆ ಕರ್ನಾಟಕ ಸರ್ಕಾರದಿಂದ ಯಾವುದೇ ವಿಚಾರಗಳು ಕೇಳಿ ಬರುತ್ತಿಲ್ಲ. ಸರ್ಕಾರ ಯಾವಾಗ ಮತ್ತು ಎಷ್ಟು ಜನರಿಗೆ ಲಸಿಕೆ ಹಾಕಲು ನಿರ್ಧರಿಸಿದೆ ಎಂಬುವುದು ಕೂಡ ತಿಳಿಯುತ್ತಿಲ್ಲ. ಆಮೆಗತಿಯ ಸರ್ಕಾರದ ಆಡಳಿತವನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಸರ್ಕಾರವಿನ್ನು ಇದೆಯೇ ಎನಿಸುತ್ತಿದೆ? ಎಂದು ವಿರೋಧ ಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ನಡೆಯನ್ನು ಟೀಕಿಸಿದೆ.
ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ’ ಕರೋನಾ ಕಾಲಘಟ್ಟವನ್ನು ಉಭಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ. ಈ ಹೆಣದ ಮೇಲಿನ ಹಣಕ್ಕಾಗಿಯೇ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿರುವುದು ಪಿಎಂ ಕೇರ್ಸ್‌ನಿಂದ ಹಿಡಿದು ಔಷಧ ಕಾಳಸಂತೆ, ಲಸಿಕೆ ಬ್ಲಾಕಿಂಗ್‌ವರೆಗೂ ಚಾಚಿವೆ ಇವರ ಬಾಚಿ ತಿನ್ನುವ ಕೈಗಳು ಎಂದು ದೂರಿದೆ.
ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು ₹900 ರಿಂದ ₹1200ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದವರು ಶಾಮೀಲಾಗಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು. ಪ್ರಕರಣದ ಬಗ್ಗೆ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರವು ಲಸಿಕೆ ವಿತರಣೆಯಲ್ಲಿ ಶೇ.95ರಷ್ಟು ವಿಫಲವಾಗಿದೆ. ಕೇವಲ ಶೇ.5ರಷ್ಟು ಅರ್ಹರು ಮಾತ್ರ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಯೋಗ್ಯವಾದದ್ದು ನಮಗೆ ಬೇಡವೆ? ಎಂದು ರಾಜ್ಯದ ಜನರಲ್ಲಿ ನಾನು ಕೇಳಬಯಸುತ್ತೇನೆ ಎಂದಿದ್ದಾರೆ.