ಕಳೆದ ಒಂದುವರೆ ವರ್ಷದಿಂದ ಜನರು ಕರೋನಾದ ಕರಿನೆರಳಲ್ಲೇ ಬದುಕುತ್ತಿದ್ದಾರೆ. ಇದೀಗ ರಾಜ್ಯದ ಜನರಿಗೆ ತಜ್ಞರ ಸಮಿತಿಯು 3ನೇ ಅಲೆಯ ಬಗ್ಗೆ ಗೊಂದಲದಲ್ಲಿ ಸಿಲುಕಿದ ಜನತೆಗೆ ಕೊಂಚ ನಿರಾಳ ಎನಿಸುವ ಸುದ್ದಿಯೊಂದು ನೀಡಿದೆ. ಕೋವಿಡ್ 3ನೇ ಅಲೆ ತೀವ್ರತೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ತಜ್ಞರ ಸಮಿತಿ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತಗ್ಗಿ ದೇವಾಲಯ, ಶಾಲಾ-ಕಾಲೇಜು, ಚಿತ್ರಮಂದಿರಗಳು, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಉತ್ಸವಗಳಿಗೆ ಸರ್ಕಾರ ಅನುಮತಿ ಕೊಟ್ಟ ಮೇಲೆ ತಜ್ಞರ ಈ ವರದಿ ರಾಜ್ಯದ ಜನರಿಗೆ ಹೊಸ ಹುರುಪನ್ನು ತಂದಿದೆ.
ಕೋವಿಡ್ ಮೊದಲ ಹಾಗು ಎರಡನೇ ಅಲೆಯ ತೀವ್ರತೆ, ಸೋಂಕಿನ ಪ್ರಮಾಣ, ಸಾವಿನ ಸಂಖ್ಯೆಗಳನ್ನು ಆಧರಿಸಿ ಈ ಹಿಂದೆ ತಜ್ಞರು ಹಾಗು ವೈದ್ಯರು ನೀಡಿದ ವರದಿ ಆಧರಿಸಿ ಸಂಭಾವ್ಯ 3ನೇ ಅಲೆ ಅಕ್ಟೋಬರ್-ನವೆಂಬರ್‌ನಲ್ಲಿ ಸಂಭವಿಸಬಹುದು ಎಂದು ತಜ್ಷರ ಸಮಿತಿ ಎಚ್ಚರಿಕೆಯನ್ನು ನೀಡಿತ್ತು.
ಅಕ್ಟೋಬರ್ ತಿಂಗಳ ಮಧ್ಯಭಾಗದವರೆಗೆ ನಡೆದ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮತ್ತು ಇತರೆ ಅಧ್ಯನಗಳಿಂದ 3ನೇ ಅಲೆ ಹೆಚ್ಚು ಪರಿಣಾಮವನ್ನ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಯನ್ನು ನೀಡಲಾಗುತ್ತಿರುವ ಕಾರಣ ಸೋಂಕಿನ ತೀವ್ರತೆ ತಗ್ಗಿದೆ ಮತ್ತು ಹೊಸ ಪ್ರಭೇದಗಳ ಉಗಮಕ್ಕೆ ತಡೆ ನೀಡಿದಂತಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಭೇದಗಳು ಭಾರತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ತಜ್ಞರ ಸಮಿತಿ ಹೇಳಿದೆ.
ಒಂದು ವೇಳೆ ಹೊಸ ರೂಪಾಂತರಿಗಳು ಕಂಡು ಬಂದಲ್ಲಿ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ನಷ್ಟು ತೀವ್ರತೆಯನ್ನು ಹೊಂದಿರುವುದಿಲ್ಲ ಎಂದು ಸಮಿತಿ ತಿಳಿಸಿದೆ.
ಆಗಷ್ಟನಲ್ಲಿ ನಡೆದ ಸೆರೋ ಸರ್ವೇಯಲ್ಲಿ ಬೆಂಗಳೂರಿನಲ್ಲಿ ಶೇಕಡ 80%ರಷ್ಟು ರಾಜ್ಯಾದ್ಯಂತ ಶೇಕಡ 65%ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದು ಶೇಕಡ 80%ರಷ್ಟು ಮಂದಿ ಕೊವಿಡ್ ಸೋಂಕಿಗೆ ತುತ್ತಾಗಿ ಅಥವಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ತಜ್ಞರ ಸಮಿತಿ ತಿಳಿಸಿದೆ. ಹಾಗಾಗಿ ರಾಜ್ಯ ಹಾಗು ಕೇಂದ್ರ ಸರ್ಕಾರ ಸಂಭಾವ್ಯ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಆದಷ್ಟು ಬೇಗ ಮಕ್ಕಳಿಗು ಲಸಿಕೆ ನೀಡಲು ಶುರು ಮಾಡವ ಕಡೆ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಕೋವಿಡ್ ಮೂರನೇ ಅಲೆ ಬಂದರು ಯಾವುದೇ ಪರಿಣಾಮ ಮತ್ತು ಅದರ ತೀವ್ರತೆ ಕಡಿಮೆ ಎಂದಾಕ್ಷಣ ಜನರು ಮೈಮರೆಯಬಾರದು. ಜನರು ಮೊದಲನೇ ಹಾಗು ಎರಡನೇ ಅಲೆ ಸಂದರ್ಭ ಮಾಡಿದ ತಪ್ಪು ಮತ್ತೊಮ್ಮೆ ಮರುಕಳಿಸಿದರೆ ಮೂರನೇ ಅಲೆ ಯಾವಾಗ ಬೇಕಾದರು ಬರಬಹುದು ಎಂದು ತಜ್ಞರ ಸಮಿತಿ ಎಚ್ಚರಿಸಿದೆ.
ಜನರು ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಪಾಲಿಸಬೇಕು. ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆಯುತ್ತಿರಬೇಕು ಮತ್ತು ಸರ್ಕಾರ ರೂಪಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.