COVID-19 ಸಾಂಕ್ರಾಮಿಕ ಮತ್ತದನ್ನು ತಡೆಯುವ ಉದ್ದೇಶದಿಂದ ಹೇರಲಾದ ಲಾಕ್ಡೌನ್ ಭಾರತದ ಅನೌಪಚಾರಿಕ ಕಾರ್ಮಿಕ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಲಸಿಕೆಯಲ್ಲಿನ ಕೊರತೆ ಮತ್ತು ಮಾರಕ ಎರಡನೇ ಅಲೆಯ ಮಧ್ಯೆ ಲಸಿಕೆ ವಿತರಿಸುವ ವ್ಯಾಪ್ತಿಯನ್ನು ವಿಸ್ತರಿಸಲು ಭಾರತ ಹೆಣಗಾಡುತ್ತಿದೆ. ಆದರೆ ವೈರಸ್ಗೆ ತಮ್ಮನ್ನು ಒಡ್ಡಿಕೊಳ್ಳುವ ಅಪಾಯದಲ್ಲಿರುವ ಮತ್ತು ಲಾಕ್ಡೌನ್ನಿಂದಾಗಿ ಜೀವನ ನಡೆಸುವುದೇ ಕಷ್ಟಕರವಾಗಿರುವ ಲಕ್ಷಾಂತರ ಅನೌಪಚಾರಿಕ ಕಾರ್ಮಿಕರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡಬೇಕಿರುವುದು ಸದ್ಯದ ತುರ್ತು.
ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಮುಂಚೂಣಿ ವಾರಿಯರ್ಗಳಿಗೆ ಲಸಿಕೆ ನೀಡಲಾಗಿತ್ತು. ಪ್ರಸ್ತುತ, ವ್ಯಾಕ್ಸಿನೇಷನ್ ಅರ್ಹತೆಯು ವಯಸ್ಸಿನ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ. ವ್ಯಾಕ್ಸಿನ್ನ ತೀವ್ರ ಕೊರತೆಯಿಂದಾಗಿ ಹೆಚ್ಚಿನ ರಾಜ್ಯಗಳು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತೆ ನೀಡುತ್ತಿವೆ. ಆದರೆ ಅತಿ ಅಗತ್ಯವಾಗಿ ಲಸಿಕೆ ನೀಡಬೇಕಿರುವ ಕಾರ್ಮಿಕರನ್ನು ವ್ಯಾಕ್ಸಿನೇಷನ್ ಡ್ರೈವ್ನಿಂದ ಹೊರಗಿಡಲಾಗಿದೆ.

ವಲಸೆ ಕಾರ್ಮಿಕರು ಸೇರಿದಂತೆ ಅಂದಾಜು 70% ರಷ್ಟು ನಗರ ಉದ್ಯೋಗಿಗಳು ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಅನಿಶ್ಚಿತ ಸ್ವರೂಪವು ಅನೌಪಚಾರಿಕ ಕಾರ್ಮಿಕರನ್ನು ಅಸುರಕ್ಷಿತ ಕೆಲಸದ ಪರಿಸ್ಥಿತಿಗಳಿಗೆ ಒಡ್ಡುತ್ತವೆ ಮತ್ತು COVID-19 ಗೆ ಒಡ್ಡಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಕಾರ್ಮಿಕರು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿನ ಸೌಲಭ್ಯದ ಕೊರತೆಗಳನ್ನು ಗಮನಿಸಿದರೆ, ಪ್ರಸರಣದ ಅಪಾಯವೂ ಹೆಚ್ಚು.
ಕ್ಷಯರೋಗದಂತಹ ಅಪಾಯಕಾರಿ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಅಥವಾ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತಹ ಅನೌಪಚಾರಿಕ ಕೆಲಸಗಾರರಿಗೆ ವೈರಸ್ ತಗುಲುವ ಸಾಧ್ಯತೆಯೂ ಹೆಚ್ಚೇ ಇದೆ. ಔಪಚಾರಿಕ ಉದ್ಯೋಗದಲ್ಲಿ ಸೋಂಕಿಗೆ ಒಳಗಾದ ಕಾರ್ಮಿಕರಿಗೆ ಲಭ್ಯವಿರುವ ವೇತನ ರಜೆ, ಸಾಮಾಜಿಕ ರಕ್ಷಣೆ ಅಥವಾ ಆರೋಗ್ಯ ಪ್ರಯೋಜನಗಳು ಅವರಿಗೆ ದೊರಕುವುದಿಲ್ಲ. ಆದರೂ ದೈನಂದಿನ ಖರ್ಚು ಭರಿಸಲಾಗದ ಕಾರಣ ಅಥವಾ ಮನೆಯಿಂದ ಕೆಲಸ ಮಾಡಲು ಸಾಧ್ಯವಾಗದ ಕಾರಣ ಅವರ ಕೆಲಸ ಮುಂದುವರಿಸುತ್ತಾರೆ.

COVID-19 ಸೋಂಕಿನಿಂದ ಲಸಿಕೆಯು ನಿರ್ಣಾಯಕ ರಕ್ಷಣೆ ನೀಡುತ್ತದೆ ಮತ್ತು ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮೂರನೆಯ ಅಲೆಯ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಆದರೆ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಅಸ್ತಿತ್ವದಲ್ಲಿರುವ ವ್ಯಾಕ್ಸಿನೇಷನ್ ಚೌಕಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಸುಲಭವಲ್ಲ.

ಮೊದಲನೆಯದಾಗಿ, ಇಡೀ ವ್ಯಾಕ್ಸಿನೇಷನ್ ಪ್ರಕ್ರಿಯೆಯು ವಯಸ್ಸಿನ ಮೇಲೆ ಆಧಾರಿತವಾಗಿದೆ ಮತ್ತು ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಇದು ಅನಕ್ಷರಸ್ಥ ಅಥವಾ ಕಡಿಮೆ ಅಕ್ಷರಾಭ್ಯಾಸ ಹೊಂದಿರುವ ಅಸಂಖ್ಯಾತ ಕಾರ್ಮಿಕರನ್ನು ಇಡೀ ವ್ಯಾಕ್ಸಿನೇಷನ್ ಪ್ರಕ್ರಿಯೆಯಿಂದಲೇ ದೂರವಿಡುತ್ತದೆ.
ಎರಡನೆಯದಾಗಿ, ಈ ಕಾರ್ಮಿಕರನ್ನು ವಿತ್ತೀಯ ಕೊರತೆ ಕಾಡುತ್ತಿದೆ. ಸಾಕಷ್ಟು ಆರ್ಥಿಕ ಚೈತನ್ಯವಿಲ್ಲದ ಈ ಮಂದಿ ಲಸಿಕೆಯನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಮೂರನೆಯದಾಗಿ ಕಾರ್ಮಿಕರಲ್ಲಿ ಮನೆ ಮಾಡಿರುವ ವ್ಯಾಕ್ಸಿನ್ ಕುರಿತಾಗಿನ ತಪ್ಪು ಕಲ್ಪನೆಗಳು. ಅನೌಪಚಾರಿಕ ಕಾರ್ಮಿಕರಲ್ಲಿ ಬಹುತೇಕರು ಅಶಿಕ್ಷಿತರು. ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳ ಬಳಕೆ ಗೊತ್ತಿಲ್ಲದಿರುವುದರಿಂದ ವ್ಯಾಕ್ಸಿನ್ನ ಪ್ರಯೋಜನಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿಯೇ ಇಲ್ಲ ಎನ್ನಬಹುದು.
ನಾಲ್ಕನೆಯದಾಗಿ, ಲಸಿಕೆಯ ಕೊಳ್ಳುವಿಕೆ ಮತ್ತು ವಿತರಣೆಯ ವೆಚ್ಚದಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಸ್ಥಳೀಯ ನಿವಾಸಿಗಳಿಗೆ ಮೊದಲ ಆದ್ಯತೆ ಎಂದು ಘೋಷಿಸಿವೆ. ಬಹುತೇಕ ಕಾರ್ಮಿಕರು ವಲಸೆ ಕಾರ್ಮಿಕರೇ ಆಗಿರುವುದರಿಂದ ಅವರಿಗೆ ಸುಲಭವಾಗಿ ಲಸಿಕೆ ಲಭ್ಯವಾಗುತ್ತಿಲ್ಲ.
2020 ರ ರಾಷ್ಟ್ರವ್ಯಾಪಿ ಲಾಕ್ಡೌನ್ನ ಅನುಭವವು ವಲಸೆ ಕಾರ್ಮಿಕರು ಯಾವುದೇ ರೀತಿಯ ಪರಿಹಾರ, ಪಡಿತರ ಅಥವಾ ನಗದು ವರ್ಗಾವಣೆಯನ್ನು ಪಡೆಯುವಲ್ಲಿ ಕೊನೆಯವರಾಗಿರುತ್ತಾರೆ ಎಂದು ಹೇಳುತ್ತದೆ. ಲಸಿಕೆಗಳ ವಿಷಯದಲ್ಲಿ ಅದೇ ಪುನರಾವರ್ತಿಸಬಾರದು. ವಲಸಿಗರು ತಾವಿರುವ ಸ್ಥಳದಲ್ಲೇ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗಬೇಕು.

ಬದಲಾದ ಕಾರ್ಮಿಕ ಮಾರುಕಟ್ಟೆಯನ್ನು ನಿಭಾಯಿಸಲು ಹೆಣಗಾಡುತ್ತಿರುವ, ಕಡಿಮೆ ಅವಕಾಶಗಳು ಮತ್ತು ಕಡಿಮೆ ವೇತನಗಳೊಂದಿಗೆ ಜೀವನ ಸಾಗಿಸುತ್ತಿರುವ ಅನೌಪಚಾರಿಕ ಕಾರ್ಮಿಕರಿಗೆ ಲಸಿಕೆ ನೀಡುವುದನ್ನು ಎಲ್ಲಾ ರಾಜ್ಯ ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಬೇಕು. ಅನೌಪಚಾರಿಕ ಕಾರ್ಮಿಕರು ಲಸಿಕೆ ಪಡೆದುಕೊಂಡಾಗ ಮಾತ್ರ ಲಸಿಕೆ ನೀಡುವಲ್ಲಿ ಆಗುತ್ತಿರುವ ತಾರತಮ್ಯ ನಿಲ್ಲಬಹುದು.
ಕೃಪೆ: ದಿ ವೈರ್