ಈ ಬಾರಿಯ ಓಣಂ ಹಾಗೂ ಬಕ್ರೀದ್ ಆಚರಣೆ ಕೇರಳಕ್ಕೆ ಮಾರಕವಾಗಿ ಪರಿಣಮಿಸಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರವನ್ನು ದಾಟಿದೆ. ಓಣಂ ಆಚರಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಯ ಪಾಲನೆಯನ್ನು ಜನರು ಮರೆತಿದ್ದು ಈ ಅವಾಂತರಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಬುಧವಾರದಂದು ಕೇರಳದಲ್ಲಿ 31,445 ಹೊಸ ಕೋವಿಡ್ ಪ್ರಕರಣಗಳ ದಾಖಲಾಗಿವೆ. ಇದರೊಂದಿಗೆ ರಾಜ್ಯ ಕೋವಿಡ್ ಪಾಸಿಟಿವಿಟಿ ರೇಟ್ ಕೂಡಾ ಬೃಹತ್ ಏರಿಕೆ ಕಂಡು 19%ಕ್ಕೆ ಬಮದು ನಿಂತಿದೆ. ಕಳೆದ ಬಾರಿ ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂವತ್ತು ಸಾವಿರದ ಗಡಿ ದಾಟಿದ್ದು ಮೇ 20ರಂದು. ಅಂದು 30,491 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.
ದೇಶದೆಲ್ಲೆಡೆ ಕೋವಿಡ್ ಎರಡನೇ ಅಲೆಯು ತಗ್ಗಿದ್ದರೂ, ಕೇರಳದಲ್ಲಿ ಮಾತ್ರ ಇನ್ನೂ ಮುಂದುವರೆಯುತ್ತಲೇ ಇದೆ. ಮೊದಲು ಈ ಬೆಳವಣಿಗೆಗೆ ರಾಜ್ಯದ ಆರೋಗ್ಯ ಮಂತ್ರಿಯಾಗಿರುವ ವೀಣಾ ಜಾರ್ಜ್ ಅವರು ಸ್ಪಷ್ಟೀಕರಣವನ್ನು ನೀಡುವ ಪ್ರಯತ್ನಪಟ್ಟಿದ್ದರಾದರೂ, ಈಗ ಮಾತ್ರ ಪರಿಸ್ಥಿತಿ ಕೈ ಮೀರುವ ಹಂತವನ್ನು ತಲುಪಿದೆ.

ಕೇರಳದ ಒಟ್ಟು ಸೋಂಕಿತರ ಸಂಖ್ಯೆ 38,83,429ಕ್ಕೆ ತಲುಪಿದೆ. ಇದರಿಂದಾಗಿ ಆತಂಕಕ್ಕೆ ಒಳಗಾಗಿರುವ ಸರ್ಕಾರ, ಕೋವಿಡ್ ಪರೀಕ್ಷೆಯನ್ನು ರಾಜ್ಯದಾದ್ಯಂತ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇದರಿಂದಾಗಿ ಕೋವಿಡ್ ಪ್ರಸರಣವನ್ನು ತಡೆಯುವುದು ಸುಲಭ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 27ರಂದು ಆಚರಿಸಲಾಗಿದ್ದ ಬಕ್ರೀದ್ ಹಬ್ಬದ ಬಳಿಕ ಕೇರಳದಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ತೀವ್ರವಾಗಿದೆ. ಬಕ್ರೀದ್ ಆಚರಣೆಯ ಬಳಿಕ ಪ್ರತಿದಿನವು ಕನಿಷ್ಟ 20 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣಗಳ ಸಂಖ್ಯೆ ಓಣಂ ಹಬ್ಬದ ಬಳಿಕ ಹೊಸ ದಾಖಲೆಯನ್ನೇ ನಿರ್ಮಿಸಿದೆ.
ಸದ್ಯಕ್ಕೆ ಕೇರಳದಲ್ಲಿ 1,70,292 ಪ್ರಕರಣಗಳು ಸಕ್ರಿಯವಾಗಿವೆ. ಪ್ರತಿ ದಿನವೂ ಒಮದು ಲಕ್ಷಕ್ಕೂ ಅಧಿಕ ಜನರ ಸ್ವಾಬ್ ಟೆಸ್ಟ್ ನಡೆಸಲಾಗುತ್ತಿದೆ. ಎರ್ನಾಕುಲಂ, ತ್ರಿಶ್ಶೂರ್, ಮಲಪ್ಪುರಂ, ಪಾಲಕ್ಕಾಡ್, ಕೋಝಿಕ್ಕೋಡ್, ಕೊಲ್ಲಂ, ಕೊಟ್ಟಾಯಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯನ್ನು ಕಾಣುತ್ತಿದೆ.
ಈ ಕಾರಣದಿಂದ ಹಬ್ಬದ ಆಚರಣೆಗಳು ಸಾಧ್ಯವಾದಷ್ಟು ಸರಳವಾಗಿ ಇರಬೇಕು ಎಂದು ರಾಜ್ಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸರಣಿ ಹಬ್ಬಗಳು ಬರಲಿದ್ದು, ಇದರಿಂದ ಮುರನೇ ಅಲೆಯ ತೀವ್ರತೆ ದೇಶದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.