• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮನದ ಮಾತುಗಳು ಸಾಕಾಗಿದೆ. ನಮ್ಮ ಮನದಲ್ಲೂ ಮಾತುಗಳಿವೆ. ಆಲಿಸಲು ಸಾಧ್ಯವೇ.. ?

ನಾ ದಿವಾಕರ by ನಾ ದಿವಾಕರ
April 28, 2021
in ಅಭಿಮತ
0
ಮನದ ಮಾತುಗಳು ಸಾಕಾಗಿದೆ. ನಮ್ಮ ಮನದಲ್ಲೂ ಮಾತುಗಳಿವೆ. ಆಲಿಸಲು ಸಾಧ್ಯವೇ.. ?
Share on WhatsAppShare on FacebookShare on Telegram

ADVERTISEMENT

ನಮ್ಮ ದೇಶದ ಮುಖ್ಯ ಸಮಸ್ಯೆ ಎಂದರೆ ನಮ್ಮಲ್ಲಿ ಮಾತು ಹೆಚ್ಚು ಕ್ರಿಯೆ ಕಡಿಮೆ. ಹಸಿದವರಿಗೆ ಉಪನ್ಯಾಸ ಮಾಡುವುದರಲ್ಲಿ ನಮ್ಮದು ಎತ್ತಿದ ಕೈ. 70 ವರ್ಷಗಳಿಂದ ಮಾತನಾಡುತ್ತಲೇ ಇದ್ದೇವೆ. ಮಂಡಲ ಪಂಚಾಯತ್ ಹಂತದಿಂದ ಸಂಸತ್ತಿನವರೆಗೆ ಜನಪ್ರತಿನಿಧಿಗಳು ಮಾತುಗಳಲ್ಲೇ ಸ್ವರ್ಗ ಸೃಷ್ಟಿಸುತ್ತಲೇ ಇದ್ದಾರೆ. ಬಡತನ ನಿರ್ಮೂಲನೆಯಿಂದ ಹಿಡಿದು ಎಲ್ಲರಿಗೂ ಸೂರು, ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ, ಎಲ್ಲರಿಗೂ ಕುಡಿಯುವ ನೀರು, ಹೀಗೆ ಮಾತಿನಲ್ಲೇ ಎಲ್ಲವನ್ನೂ ಸಾಧಿಸಿಬಿಟ್ಟಿದ್ದೇವೆ. ಸಾಧನೆ ಶೂನ್ಯವೇನಲ್ಲ ಆದರೆ ಕಣ್ಣಿಗೆ ಕಾಣುವುದಷ್ಟೇ ಸಾಧನೆಯಲ್ಲ.

ನಮ್ಮಲ್ಲಿರುವ ಕೊರತೆ ಎಂದರೆ ನಮ್ಮ ದೃಷ್ಟಿಯ ವ್ಯಾಪ್ತಿಯನ್ನೂ ದಾಟಿದ ವಾಸ್ತವ ಜಗತ್ತು ಒಂದಿದೆ ಎಂದು ಅರ್ಥವಾಗುವುದೇ ಇಲ್ಲ. ಬಹುಮಹಡಿ ಸಮುಚ್ಚಯಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಭೂಮಿಯನ್ನು ಅಗೆದು ಸ್ತಂಭಗಳನ್ನು ನಿರ್ಮಿಸುವಾಗ ತಗಡಿನ ಗೋಡೆಗಳನ್ನು ಅಡ್ಡಲಾಗಿ ಇಡಲಾಗುತ್ತದೆ. ಅತ್ತ ಬದಿಯಲ್ಲಿ ಏನು ನಡೆಯುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. ದಿನ ಕಳೆದಂತೆ ಸದ್ದಿಲ್ಲದೆಯೇ ಒಂದು ಐಷಾರಾಮಿ ಕಟ್ಟಡ ಗಗನದೆತ್ತರಕ್ಕೆ ನಿಂತಿರುತ್ತದೆ. ಈ ಕಟ್ಟಡದ ಆಧುನಿಕ ವಿನ್ಯಾಸ, ನಳನಳಿಸುವ ಗಾಜಿನ ಗೋಡೆಗಳು ಮತ್ತು ಕಣ್ಣಿಗೆ ರಾಚುವಂತಹ ಸುಂದರ ಸ್ಥಾವರ ನಮಗೆ ಕಂಡುಬರುತ್ತದೆ.

ಈ ತಗಡಿನ ಅಡ್ಡಗೋಡೆಯ ಹಿಂದೆ ಒಬ್ಬ ಶ್ರೀಮಂತನ ಪಾಲಿಗೆ ಭವಿಷ್ಯದ ಮೂರು ಪೀಳಿಗೆಗೆ ಆಗುವಷ್ಟು ಸಂಪತ್ತು ಸೃಷ್ಟಿಯಾಗುತ್ತಿರುತ್ತದೆ.  ತನ್ನೆಲ್ಲಾ ಅಕ್ರಮ ಸಕ್ರಮ ದುಡಿಮೆಯ ಲಾಭವನ್ನು ಇಲ್ಲಿ ವ್ಯಯಿಸಿ ಮತ್ತಷ್ಟು ಲಾಭ ಗಳಿಸುವ ಒಂದು ಉದ್ದಿಮೆಯನ್ನೋ ಅಥವಾ ಗೂಡುಗಳನ್ನೋ ನಿರ್ಮಿಸಿ ಮತ್ತೊಂದು ಹೊಸ ಲೋಕದ ನಿರ್ಮಾಣಕ್ಕೆ ನೀಲನಕ್ಷೆಯನ್ನು ತಯಾರಿಸುತ್ತಿರುತ್ತಾನೆ. ಇದೇ ವೇಳೆ ಈ ಸ್ಥಾವರನ್ನು ನಿರ್ಮಿಸಲು ಬೆವರು ಸುರಿಸುತ್ತಲೇ ಒಂದು ಅಸಹಾಯಕ ಗುಂಪು ತನ್ನ ನಿತ್ಯ ಬದುಕನ್ನು ಕಟ್ಟಿಕೊಳ್ಳುತ್ತಾ, ನಿರ್ಮಾಣ ಪೂರ್ಣಗೊಂಡ ನಂತರ ಮತ್ತೆಲ್ಲಿ ನೆಲೆ ಕಾಣುವುದು ಎಂಬ ಚಿಂತೆಯಲ್ಲಿ ದಿನ ಕಳೆಯುತ್ತಿರುತ್ತದೆ.

ಭೂಗರ್ಭದಿಂದ ಆಕಾಶದೆತ್ತರಕ್ಕೆ ಶ್ರೀಮಂತಿಕೆಯ ವೈಭವವನ್ನು ನಿರ್ಮಿಸುವ ಈ ದುಡಿಮೆಗಾರರು, ತಗಡಿನ ಅಡ್ಡಗೋಡೆಗಳಂತೆಯೇ ಸದ್ದಿಲ್ಲದೆ ನಿರ್ಗಮಿಸಿರುತ್ತಾರೆ. ಅಗೋಚರವಾಗಿಯೇ ಮತ್ತೊಂದು ಸ್ಥಾವರ ನಿರ್ಮಾಣಕ್ಕೆ ಅಡಿಗಲ್ಲುಗಳಾಗಿ ಚಲಿಸಿರುತ್ತಾರೆ. ನಮಗೆ ಈ ದುಡಿಮೆಗಾರರ ಬದುಕು ಗೋಚರಿಸುವುದು ಲಾಕ್ ಡೌನ್ ಆದಾಗ ಮಾತ್ರ. ಈ ಕಾರಣಕ್ಕಾದರೂ ಕೋವಿದ್ 19ಗೆ ನಾವು ಚಿರಋಣಿಗಳಾಗಿರಬೇಕು. ಇಂತಹ ಬೃಹತ್ ಸ್ಥಾವರಗಳನ್ನು ಆಕ್ರಮಿಸುವವರಿಗಿಂತಲೂ ನೋಡಿ ಸಂಭ್ರಮಿಸುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಏಕೆಂದರೆ ಈ ಸ್ಥಾವರಗಳು ನಮ್ಮ ಜಂಗಮಸ್ವರೂಪಿ ಆಲೋಚನೆಗಳನ್ನು ಭ್ರಮಾಲೋಕಕ್ಕೆ ಕರೆದೊಯ್ಯುತ್ತವೆ. ಅಜ್ಜನ ಕಾಲದ ಶಿಥಿಲ ಕಟ್ಟಡವೊಂದರ ಜಾಗದಲ್ಲಿ ಭವಿಷ್ಯದ ಅದ್ಭುತ ಲೋಕವೊಂದು ತೆರೆದುಕೊಂಡಿರುತ್ತದೆ. ಇದನ್ನು ನಾವು ಅಭಿವೃದ್ಧಿಯ ಸಂಕೇತವೆಂದೋ, ಪ್ರಗತಿಯ ದ್ಯೋತಕವೆಂದೋ ಅಥವಾ ನಮ್ಮ ಮುನ್ನಡೆಯ ಸೂಚಕವಾಗಿಯೋ ಕಾಣುತ್ತಾ  ನವ ಸಮಾಜದ ಹರಿಕಾರರಾಗಿ ಸಂಭ್ರಮಿಸುತ್ತಿರುತ್ತೇವೆ. ಹಳತನ್ನು ಹುಗಿದು ಹೊಸತು ಅರಳುವಂತೆ ಮಾಡುವುದೇ ಮಾನವನ ಪ್ರಗತಿಗೆ ಕನ್ನಡಿಯಾಗಿಬಿಡುತ್ತದೆ.

ಈ ಕನ್ನಡಿಯಲ್ಲಿ ಕಾಣುವ ಬಿಂಬ ವಾಸ್ತವ ಜಗತ್ತನ್ನು ಮರೆಮಾಚುತ್ತಲೇ ಹಿಂಬದಿಯ ವಂಚಕ ಸಾಮ್ರಾಜ್ಯವನ್ನು ಸಂರಕ್ಷಿಸುತ್ತದೆ.  ಭಾರತವನ್ನು ವಿಶ್ವಗುರುವನ್ನಾಗಿ ಕಾಣುವ ಹೊಸ ಪೀಳಿಗೆಗೆ ಈ ಗಾಜಿನ ಹಿಂದಿರುವ ಒಂದು ಪ್ರಪಂಚ ಕಾಣುವುದೇ ಇಲ್ಲ. ಕಾರಣ, ನಮಗೆ ಕೇಳಿಬರುತ್ತಿರುವ ಮನದ ಮಾತುಗಳು ಒಂದು ಭ್ರಮಾಲೋಕವನ್ನು ಸೃಷ್ಟಿಸಿರುತ್ತವೆ. ಈ ಮನದ ಮಾತುಗಳಲ್ಲಿ ಅಡಗಿರುವ ಅಸತ್ಯಗಳು ಕನ್ನಡಿಯೊಳಗಿನ ಬಿಂಬದಂತೆ (ಗಂಟಿನಂತೆ) ಕೈಗೆಟುಕದೆಯೂ ಎಟುಕುವಂತೆ ಕಾಣುವ ಹುಳಿ ದ್ರಾಕ್ಷಿಯಂತೆ ಆಕರ್ಷಿಸುತ್ತದೆ. ಈ ದ್ರಾಕ್ಷಿಯನ್ನು ಪಡೆಯುವ ಹಂಬಲದಲ್ಲೇ ದೇಶದ ಹಿತವಲಯದ ಬೃಹತ್ ಸಮೂಹ ಭಟ್ಟಂಗಿಗಳ ಸಾಮ್ರಾಜ್ಯವನ್ನೇ ನಿರ್ಮಿಸಿಬಿಟ್ಟಿದೆ. ಈ ಸಾಮ್ರಾಜ್ಯದಲ್ಲಿ ಹಾಡಹಗಲ  ಕಗ್ಗೊಲೆ ಸಹಜ ಸಾವು ಎನಿಸುತ್ತದೆ, ಚಿತ್ರಹಿಂಸೆ ಅನಿವಾರ್ಯ ತ್ಯಾಗ ಎನಿಸುತ್ತದೆ, ದೌರ್ಜನ್ಯ ಅತ್ಯಾಚಾರಗಳು ನಗಣ್ಯವಾಗಿಬಿಡುತ್ತವೆ. ಸಾವು, ಸಹಜವಾಗಲೀ ಅಸಹಜವಾಗಲೀ, ಸದಾ ಸಹನೀಯವಾಗಿಬಿಡುತ್ತದೆ. ಕೆಲವೊಮ್ಮೆ ಸಂಭ್ರಮದ ವಸ್ತುವಾಗಿಬಿಡುತ್ತದೆ.

ಈ ಸನ್ನಿವೇಶದ ನಡುವೆಯೇ ಕೊರೋನಾ ಮತ್ತೊಮ್ಮೆ ಜನಸಾಮಾನ್ಯರನ್ನು ಬಾಧಿಸುತ್ತಿದೆ. ಯುದ್ಧಕಾಲದಲ್ಲಿ ಕಾಣುವಂತಹ ಹೃದಯವಿದ್ರಾವಕ ದೃಶ್ಯಗಳು ದೇಶದ ರಾಜಧಾನಿಯಲ್ಲೇ ಕಾಣುತ್ತಿವೆ.  ಹೆಣಗಳ ಸಾಮೂಹಿಕ ದಹನದ ದೃಶ್ಯಗಳು ಪ್ರಜ್ಞಾವಂತರ ಅಂತಃಸಾಕ್ಷಿಯನ್ನು ಪ್ರಕ್ಷುಬ್ಧಗೊಳಿಸುತ್ತಿವೆ. #ಆತ್ಮನಿರ್ಭರ ಭಾರತದಲ್ಲಿ ಮಾನವನ ಉಸಿರಾಟಕ್ಕೆ ಅವಶ್ಯವಾದ ಆಮ್ಲಜನಕದ ಕೊರತೆ ಉಂಟಾಗಿರುವುದು ವಿಡಂಬನೆಯೋ ದುರಂತವೋ, ಕೊರೋನಾ ಪೀಡಿತರು ಆಮ್ಲಜನಕಕ್ಕಾಗಿ ಪರದಾಡುತ್ತಿರುವುದಂತೂ ವಾಸ್ತವ. ಕೃತಕ ಆಮ್ಲಜನಕದ ಕೊರತೆ ಭಾರತಕ್ಕೆ ಹೊಸತೇನಲ್ಲ ಆದರೆ ಈ ರೀತಿಯ ಸಾಂಕ್ರಾಮಿಕ ಹೊಸತು, ಹಾಗಾಗಿ ನಿತ್ಯ ಸಾವುಗಳು. ಈ ಸಾವುಗಳ ನಡುವೆಯೇ #ಉಸಿರಾಡಲಾಗುತ್ತಿಲ್ಲ ಎನ್ನುವ ಕ್ಷೀಣ ದನಿಗಳು ಕೇಳಿಬರುತ್ತಿವೆ. ದುಡಿಮೆಯ ಕೈಗಳನ್ನು ಕಳೆದುಕೊಳ್ಳುತ್ತಿರುವ ಲಕ್ಷಾಂತರ ಕುಟುಂಬಗಳು ಹೀಗೆಯೇ ಉಸಿರುಕಟ್ಟಿ ಬದುಕುತ್ತಿವೆ.

ಸಾವಿನ ಸಂಖ್ಯೆ ದಾಖಲಾಗುವುದು ಚಿತೆಗಳಲ್ಲಿ, ಹಾಳೆಗಳ ಮೇಲಲ್ಲ ಎನ್ನುವ ಕನಿಷ್ಟ ಪ್ರಜ್ಞೆಯನ್ನೂ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಆಮ್ಲಜನಕದ ಕೊರತೆಯ ಬಗ್ಗೆ ಮಾತನಾಡಿದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳುತ್ತಾರೆ. ತಮ್ಮ ರಾಜ್ಯದಲ್ಲಿ ಎಷ್ಟು ಪ್ರಮಾಣದ ಜನತೆಯ ಬಳಿ ಆಸ್ತಿ ಎನ್ನುವುದೇ ಇಲ್ಲ ಎಂದು ಈ ಜನಪ್ರತಿನಿಧಿಗೆ ತಿಳಿದಿದೆಯೋ ಇಲ್ಲವೋ ಅನುಮಾನ. ಏಕೆಂದರೆ ಇವರಿಗೆ ಬಡಬಗ್ಗರ ಹುಟ್ಟು ಮತ್ತು ಸಾವು ಎರಡೂ ನಗಣ್ಯ. ಸಮಾಧಿಗಳು ಇವರನ್ನು ವಿಚಲಿತಗೊಳಿಸುವುದಿಲ್ಲ, ಚಿತೆಗಳು ಕಾವು ಇವರ ಚರ್ಮವನ್ನು ಬಿಸಿ ಮಾಡುವುದಿಲ್ಲ. ತಣ್ಣನೆಯ ಕ್ರೌರ್ಯ ಹಾಸುಹೊಕ್ಕಾಗಿರುವ ದೃಢಕಾಯದ ನಾಯಕರು !

ದೆಹಲಿಯಲ್ಲಿ ಕೋವಿಡ್ 19 ಸಾವಿನ ಸರಪಳಿಯನ್ನೇ ನಿರ್ಮಿಸುತ್ತಿದೆ. ದೆಹಲಿಯ ಪಕ್ಕದಲ್ಲೇ ಸಾವಿರಾರು, ಲಕ್ಷ ಸಂಖ್ಯೆಯ ರೈತರು ಮುಷ್ಕರ ನಿರತರಾಗಿದ್ದಾರೆ. ಒಮ್ಮೆ ಈ ರೈತ ಸಮುದಾಯದ ನಡುವೆ ಸೋಂಕು ತಗುಲಿದರೆ ಆಗುವ ಅನಾಹುತ ಊಹಿಸಲಸಾಧ್ಯ. ಈ ಹೊತ್ತಿನಲ್ಲಾದರೂ ರೈತರ ಬಳಿ ಮಾತನಾಡಿ, ಕೃಷಿ ಮಸೂದೆಗಳನ್ನು ಹಿಂಪಡೆಯುವ ಆಶ್ವಾಸನೆ ನೀಡಿ ಅವರನ್ನು ಸ್ವಂತ ಊರುಗಳಿಗೆ ಕಳುಹಿಸುವ ಮಾನವೀಯತೆ ಆಳುವವರಲ್ಲಿ ಇರಬೇಕಲ್ಲವೇ ? ಒಂದು ವೈರಾಣು ಈ ಆಳುವ ವರ್ಗಗಳ ಎಲ್ಲ ಶಕುನಿ ತಂತ್ರಗಳನ್ನೂ ಲಾಕ್ ಡೌನ್ ಮಾಡಿ ಹೂತುಹಾಕಿದೆಯಲ್ಲವೇ ? ಒಂದು ವೇಳೆ ರೈತರ ನಡುವಿನಿಂದ ಕೊರೋನಾ ಸೋಂಕು ಹರಡಿದರೆ ಅಲ್ಲಿ “ ಖಲಿಸ್ತಾನಿ ವೈರಸ್ ” ಸೃಷ್ಟಿ ಮಾಡಲು ಸುದ್ದಿಮನೆಗಳು, ಭಟ್ಟಂಗಿ ಮಾಧ್ಯಮಗಳು ಸಿದ್ಧತೆ ನಡೆಸಿರಬಹುದು. ಇದೊಂದು ರೀತಿಯ ತಣ್ಣನೆಯ ಕ್ರೌರ್ಯ.

ಈ ಕ್ರೌರ್ಯ, ನಿಷ್ಕ್ರಿಯತೆ, ನಿರ್ಲಜ್ಜತೆ, ನಿರ್ದಯಿ ನಡವಳಿಕೆಯ ನಡುವೆಯೇ ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದೆ. ಲಸಿಕೆಯ ಮೂಲಕ ವೈರಾಣುವನ್ನು ನಿಯಂತ್ರಿಸುವುದಕ್ಕಿಂತಲೂ ಹೆಚ್ಚಾಗಿ, ಲಸಿಕೆಯ ಅಸ್ತ್ರವನ್ನೇ ಬಳಸಿಕೊಂಡು ಅಧಿಕಾರ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳುವ ಮಟ್ಟಿಗೆ ನಮ್ಮ ದೇಶದ ಆಡಳಿತ ವ್ಯವಸ್ಥೆ ನಿರ್ದಯಿಯಾಗಿದೆ. ಕಳೆದ ವರ್ಷದ ಕೊರೋನಾ ಸಂದರ್ಭದಲ್ಲಿ “ ಜೀವನ ಮತ್ತು ಜೀವನೋಪಾಯ ”ದ ಬಗ್ಗೆ ಆಕರ್ಷಣೀಯವಾದ ಮಾತುಗಳು ಕೇಳಿಬಂದವು. ಎರಡೂ ವಿನಾಶದಂಚಿಗೆ ತಲುಪಿದವು. ಈ ಬಾರಿ    “ ನಿಮ್ಮ ಜೀವನ ನಿಮ್ಮ ಕೈಯ್ಯಲ್ಲಿ ” ಘೋಷಣೆ ಮೊಳಗುತ್ತಿದೆ. ಮನದ ಮಾತುಗಳೇನೋ ಸರಿ, ಯಾರ ಮನದ ಮಾತುಗಳು, ಯಾವ ಜನರ ಮನವ ತಟ್ಟುವ ಮಾತುಗಳು ? ಕಾರ್ಪೋರೇಟ್ ಜಗತ್ತು ಸಂಭ್ರಮಿಸುತ್ತದೆ.

ತಿಂಗಳಿಗೊಮ್ಮೆ ಮನದ ಮಾತುಗಳನ್ನಾಡುವ ಮುನ್ನ ಮಂಜಿನ ಪರದೆಯನ್ನು ಪಕ್ಕಕ್ಕೆ ಸರಿಸುವ ಆಲೋಚನೆ ಒಮ್ಮೆಯಾದರೂ ಸುಳಿದಿದೆಯೇ ? ಪ್ರಜಾತಂತ್ರ ವ್ಯವಸ್ಥೆಯ ಅಂತಃಸತ್ವ ಇರುವುದು ಪಾರದರ್ಶಕತೆಯಲ್ಲಿ, ಪ್ರಾಮಾಣಿಕತೆಯಲ್ಲಿ. ಈ ಎರಡೂ ಲಕ್ಷಣಗಳಿಲ್ಲದ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಟೀಕಾಕಾರರ ಬಾಯಿ ಮುಚ್ಚಿಸುವುದು, ಟ್ವಿಟರ್ ನಲ್ಲಿ ವ್ಯಕ್ತವಾಗುವ ವ್ಯತಿರಿಕ್ತ ಅಭಿಪ್ರಾಯಗಳನ್ನು ಅಳಿಸಿಹಾಕುವುದು ಪಾರದರ್ಶಕತೆಯ ಕೊರತೆಯ ಸಂಕೇತ. ಪ್ರಾಮಾಣಿಕತೆ ಇಲ್ಲದಿರುವುದರ ದ್ಯೋತಕ ಅಲ್ಲವೇ ? ಈ ದೇಶದ ಸಾರ್ವಭೌಮ ಪ್ರಜೆಗಳಾಗಿ ನಾವು ಸಾವಿನ ಲೆಕ್ಕ ಕೇಳುವುದಿಲ್ಲ. ಸಾವುಗಳಿಗೆ ಕಾರಣ ಕೇಳುತ್ತೇವೆ. ಆಡಳಿತ ಪೀಠದಲ್ಲಿ ಕುಳಿತವರಿಗೆ ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರ ಸಾವುಗಳು ಅಧಿಕಾರದ ಮೆಟ್ಟಿಲುಗಳಾಗುತ್ತವೆ. ಉರಿಯುತ್ತಿರುವ ಚಿತೆಯ ಸುತ್ತ ಕುಳಿತು ಚಳಿಯನ್ನು ಹೋಗಲಾಡಿಸುವ ವಿಕೃತ ಪರಂಪರೆಗೆ ಸಮಕಾಲೀನ ಭಾರತ ಸಾಕ್ಷಿಯಾಗಿದೆ.

ಆದರೆ ಪ್ರತಿಯೊಂದು ಅಸಹಜ ಸಾವು ಸಮಾಜದಲ್ಲಿ ತಲ್ಲಣ ಸೃಷ್ಟಿಸುತ್ತದೆ. ನಾಳೆಯಿಂದ ಲಾಕ್ ಡೌನ್ ಎಂದ ಕೂಡಲೇ ಇಂದು ಸಂತೇಪೇಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತದೆ ಅಂದರೆ ಏನರ್ಥ ? ನಮ್ಮಲ್ಲಿ ಬಹುಪಾಲು ಜನ ತಮ್ಮ ನಿತ್ಯಾವಶ್ಯಕ ಪದಾರ್ಥಗಳನ್ನು ಶೇಖರಿಸುವುದಿಲ್ಲ. ಅವಶ್ಯಕತೆ ಇದ್ದಷ್ಟೇ ಖರೀದಿಸುತ್ತಾರೆ ಎಂದರ್ಥ ಅಲ್ಲವೇ ? ಅಂದರೆ ಅವರ ಖರೀದಿಯ ಸಾಮರ್ಥ್ಯ ಅಷ್ಟೇ ಇರುತ್ತದೆ. ಇದೇ ದುಡಿಯುವ ವರ್ಗಗಳ ಒಂದು ವರ್ಗ ತಮ್ಮ ಸ್ವಂತ ನೆಲೆಯನ್ನು ಅರಸಿ ಗುಳೆ ಹೋಗುತ್ತಾರೆ. ಅಂದರೆ ಅವರ ನಗರವಾಸ ಕೇವಲ ದುಡಿಮೆಗಾಗಿ ಮಾತ್ರ, ಬದುಕಿಗಾಗಿ ಅಲ್ಲ. ಬದುಕು ಮತ್ತೆಲ್ಲೋ ಇರುತ್ತದೆ. ಈ ಸೂಕ್ಷ್ಮವನ್ನು ನಮ್ಮ ಜನಪ್ರತಿನಿಧಿಗೆ ಅರ್ಥಮಾಡಿಸಲು ಕೊರೋನಾ ನೆರವಾಗಿದೆ. ಆದರೆ ಅರ್ಥಮಾಡಿಕೊಂಡಿದ್ದಾರೆಯೇ ? ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು.

#ಆತ್ಮನಿರ್ಭರ ಭಾರತ ಇಂದು ಕೈಚಾಚಿ ನಿಂತಿದೆ. ವಿಶ್ವ ಸಮುದಾಯ ಭಾರತದ ನೆರವಿಗೆ ಧಾವಿಸಿದೆ. ಕೋವಿಡ್ 19 ಕಳೆದ ಒಂದೂವರೆ ವರ್ಷದಿಂದ ಭಾರತವನ್ನು ಬಾಧಿಸುತ್ತಿದೆ. ಇಂದಿಗೂ ನಮ್ಮಲ್ಲಿ ಒಂದು ಸ್ಪಷ್ಟ ರಾಷ್ಟ್ರೀಯ ಆರೋಗ್ಯ ನೀತಿಯನ್ನು ರೂಪಿಸಲಾಗಿಲ್ಲ. ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸುವ ಆಲೋಚನೆಯೂ ಸುಳಿದಿಲ್ಲ. ಸಾರ್ವತ್ರಿಕ ಆರೋಗ್ಯ ಪಾಲನೆಯ ಬಗ್ಗೆ ಯೋಚಿಸುವ ವ್ಯವಧಾನವೇ ಇಲ್ಲ. ಏಕೆಂದರೆ ಹೀಗೆ ಘೋಷಿಸಿಬಿಟ್ಟರೆ ಹೊರೆಯಾಗಿಬಿಡುತ್ತದೆ, ಹೊಣೆಗಾರಿಕೆ ಹೆಚ್ಚಾಗಿಬಿಡುತ್ತದೆ. ಮೇಲಾಗಿ ಖಾಸಗಿ ಬಂಡವಾಳಿಗರ ಬೃಹತ್ ಸಮೂಹವೊಂದು ಅಧಿಕಾರದ ಮೆಟ್ಟಿಲುಗಳ ಎರಡೂ ಬದಿಯಲ್ಲಿ ಕುಳಿತುಬಿಟ್ಟಿವೆ. ಮುಖ್ಯಮಂತ್ರಿಗಳು, ಸಚಿವರು ಕೊರೋನಾ ಪೀಡಿತರ ಚಿಕಿತ್ಸೆಗೆ ನೆರವಾಗಲು ಖಾಸಗಿ ಆಸ್ಪತ್ರೆಗಳ ಮುಂದೆ ಅಂಗಲಾಚಿ ನಿಲ್ಲುವಂತಹ ಪರಿಸ್ಥಿತಿಗೆ ತಲುಪಿದ್ದೇವೆ. ಇಲ್ಲಿ ಯಾರ ಆತ್ಮ ನಿರ್ಭರವಾಗಿದೆ ?

“ ಕನಿಷ್ಟ ಸರ್ಕಾರ ಗರಿಷ್ಟ ಆಡಳಿತ ” ಎನ್ನುವ ಘೋಷಣೆ ಇಂದು ಅಪಹಾಸ್ಯಕ್ಕೀಡಾಗಿದೆ. ಗರಿಷ್ಟ ಮಟ್ಟ ತಲುಪಿರುವುದು ಭ್ರಷ್ಟಾಚಾರ, ಲೂಟಿ, ಶೋಷಣೆ ಮತ್ತು ಜನಸಾಮಾನ್ಯರ ಅಸಹಾಯಕತೆ. ಪಾರದರ್ಶಕತೆ ಇಲ್ಲದ ಆಡಳಿತ ವ್ಯವಸ್ಥೆಯಲ್ಲಿ ಗರಿಷ್ಟ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವೂ ಇಲ್ಲ. ಭಾರತದ ಜನಪ್ರತಿನಿಧಿಗಳು ಎಂತಹ ಹೊಣೆಗೇಡಿಗಳು ಎನ್ನುವುದನ್ನು ಒಂದು ವೈರಾಣು ನಿರೂಪಿಸಿದೆ. ಸರ್ಕಾರ ಈಗ ಆಕ್ಸಿಜನ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆದೇಶಿಸುವುದು, ಲಸಿಕೆಯನ್ನು ರಫ್ತು ಮಾಡಿಕೊಳ್ಳಲು ವಿದೇಶಗಳ ಮುಂದೆ ಕೈಚಾಚುವುದು ಮತ್ತು ಆಸ್ಪತ್ರೆಗಳನ್ನು ಸಿದ್ಧಪಡಿಸುವುದನ್ನು ನೋಡಿದರೆ,  ಕೋವಿದ್ 19 ಸಾಂಕ್ರಾಮಿಕ ಈ ವರ್ಷವೇ ಭಾರತವನ್ನು ಪ್ರವೇಶಿಸಿದೆ ಎನ್ನುವಂತೆ ತೋರುತ್ತದೆ. ಇದಕ್ಕಿಂತಲೂ ಬೇಜವಾಬ್ದಾರಿತನವನ್ನು ಮತ್ತೆಲ್ಲಿ ಕಾಣಲು ಸಾಧ್ಯ ? ಇದನ್ನೇ ಗರಿಷ್ಟ ಆಡಳಿತ ಎಂದು ಭಾವಿಸೋಣವೇ ?

ಸೂಕ್ಷ್ಮತೆ ಮತ್ತು ಸಂವೇದನೆ ಇಲ್ಲದ ಒಂದು ವ್ಯವಸ್ಥೆಯಲ್ಲಿ ಮಾತ್ರವೇ ಇಂತಹ ದಾರುಣ ದೃಶ್ಯಗಳನ್ನು ಕಾಣಲು ಸಾಧ್ಯ.  ಸುದ್ದಿಮನೆಗಳಲ್ಲಿ ಬಿತ್ತರಿಸುವ ದೃಶ್ಯಗಳು ಉತ್ಪ್ರೇಕ್ಷಿತವೇ ಇರಬಹುದು ಆದರೆ ಅದು ವಾಸ್ತವಕ್ಕೆ ಹತ್ತಿರವಾಗಿವೆ. #ಆತ್ಮನಿರ್ಭರಭಾರತ ಪ್ರಾಮಾಣಿಕವಾಗಿದ್ದರೆ ಎಲ್ಲ ರಾಜ್ಯ ಸರ್ಕಾರಗಳಿಗೂ ಕೋವಿದ್ 19 ಕುರಿತ ಸತ್ಯಾಂಶಗಳನ್ನು ಅಧಿಕೃತವಾಗಿ ಪ್ರಕಟಿಸುವಂತೆ ಆದೇಶಿಸಬೇಕಲ್ಲವೇ ? ಪಿಎಂ ಕೇರ್ ಫಂಡ್ ಎಂಬ ಸಾರ್ವಜನಿಕ ಸ್ವತ್ತನ್ನು ಗೋಪ್ಯವಾಗಿರಿಸುವಂತಹ ವಿಕೃತ ಭ್ರಷ್ಟ ವ್ಯವಸ್ಥೆಯಲ್ಲಿ ನಾವು ಗರಿಷ್ಟ ಆಡಳಿತ, ಪಾರದರ್ಶಕತೆಯನ್ನು ನಿರೀಕ್ಷಿಸುತ್ತಿದ್ದೇವೆ. ಸಾವಿನ ಸಂಖ್ಯೆಯನ್ನು ಗೋಪ್ಯವಾಗಿರಿಸುವುದು ಸುಲಭ ಆದರೆ ಹೆಣಗಳ ರಾಶಿಯನ್ನು ಬಚ್ಚಿಡಲಾಗುವುದಿಲ್ಲ, ಅಲ್ಲವೇ ನಾಯಕರೇ ?

ಇಂದು ನಾಳೆಗಳನ್ನು ಎಣಿಸುತ್ತಿರುವ ಅಸಹಾಯಕ ನಾಗರಿಕರಿಗೆ ತಾವು ಪಡೆಯುವ ಕೋವಿದ್ ಲಸಿಕೆ ಜೀವ ಉಳಿಸುವುದೋ ಇಲ್ಲವೋ ಎನ್ನುವ ಆತಂಕವಷ್ಟೇ ಇರುತ್ತದೆ. ಸಕಾಲದಲ್ಲಿ ಲಸಿಕೆಯನ್ನು ಒದಗಿಸಲು ಸರ್ಕಾರ ವಿಫಲವಾಗಿದೆ. ಕಳೆದ ನವಂಬರ್ ತಿಂಗಳಲ್ಲೇ  ತಜ್ಞರ ಸಮಿತಿ ನೀಡಿದ್ದ ಶಿಫಾರಸುಗಳನ್ನು, ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸಲಾಗಿದೆ. ಜೀವ ಉಳಿಸಿಕೊಳ್ಳಲೂ ಹೆಣಗಾಡಬೇಕಿದೆ ಮತ್ತೊಂದೆಡೆ ಅಳಿದ ಜೀವದ ಅಂತ್ಯಕ್ರಿಯೆಗೂ ಪರದಾಡಬೇಕಿದೆ. ಈ ಪರಿಸ್ಥಿತಿಗೆ  ಯಾರು ಕಾರಣ ? ಮನದ ಮಾತುಗಳಲ್ಲಿ ಈ ಪ್ರಶ್ನೆಗೆ ಉತ್ತರ ದೊರೆತಾಗ ಮಾತ್ರ ಆ ಮಾತುಗಳು ಅರ್ಥಪೂರ್ಣವೆನಿಸುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಎಷ್ಟು ಶಿಸ್ತು ಬದ್ಧತೆಯಿಂದ ಕಾರ್ಯಪಡೆಗಳನ್ನು ಸಿದ್ಧಪಡಿಸಲಾಗುತ್ತದೆ. ಇದೇ ಕಾರ್ಯಕ್ಷಮತೆಯನ್ನು ಆರೋಗ್ಯ ವ್ಯವಸ್ಥೆಯ ಸುಧಾರಣೆಯಲ್ಲಿ ತೋರಿದರೆ ಭಾರತ ಸ್ವರ್ಗವಾಗುತ್ತದೆ. ಪೊಲೀಸರ ಲಾಠಿ ಈ ದೇಶದ ಬಡವರ ಮೇಲೆ ಮಾತ್ರ ಪ್ರಯೋಗವಾಗುತ್ತದೆ. ಐಷಾರಾಮಿ ಆಸ್ಪತ್ರೆಗಳನ್ನು ನಿರ್ಮಿಸಿ ಆರೋಗ್ಯವನ್ನು ಷಾಪಿಂಗ್ ಮಾಲ್‍ಗಳ ಅಟ್ಟಣಿಗೆಯ ಮೇಲಿರುವ ವಸ್ತುಗಳಂತೆ ಬಿಕರಿ ಮಾಡುತ್ತಿರುವ ಬಂಡವಾಳಿಗರಿಗೆ ಲಾಠಿ ಬೀಸುವ ಆತ್ಮಸ್ಥೈರ್ಯವನ್ನು #ಆತ್ಮನಿರ್ಭರ ಭಾರತ ಕಳೆದುಕೊಂಡಿದೆ. ಇಂದು ಭಾರತದ ಶೋಷಿತ ಸಮುದಾಯಗಳು ಆರೋಗ್ಯವನ್ನು ಖರೀದಿಸಬೇಕಿದೆ. ಶಿಕ್ಷಣವನ್ನು ಖರೀದಿಸಬೇಕಿದೆ. ಆಮ್ಲಜನಕವನ್ನೂ ಖರೀದಿಸಬೇಕಿದೆ. ಕೊನೆಗೆ ಅಂತ್ಯಕ್ರಿಯೆಗೆ ಚಿತೆಯನ್ನೂ ಖರೀದಿಸುವ ಹಂತಕ್ಕೆ ಬಂದು ನಿಂತಿದ್ದೇವೆ.

ಈ ದಾರುಣ ಪರಿಸ್ಥಿತಿಯ ನಡುವೆ ನಾವು ಯಾರ ಮನದ ಮಾತುಗಳಿಗಾಗಿ ಹಂಬಲಿಸಲು ಸಾಧ್ಯ ? ಇವು ನಮ್ಮ ಮನದ ಮಾತುಗಳಲ್ಲ. ಅದು ಉಡುಗಿಹೋಗಿದೆ. ಉಸಿರಾಡಲಾಗುತ್ತಿಲ್ಲ ಎಂದು ಅಂಗಲಾಚಿದ ಫ್ಲಾಯ್ಡ್ ನೆನಪಾಗುತ್ತಾನೆ. ಎತ್ತ ನೋಡಿದರೂ ಫ್ಲಾಯ್ಡ್ ಗಳೇ ಕಾಣುತ್ತಿದ್ದಾರೆ. ಇವರ ಮನದಲ್ಲಿ ಕೆಲವು ಮಾತುಗಳಿವೆ. ಈ ಮನದ ಮಾತುಗಳನ್ನು ಯಾರಲ್ಲಿ ಹೇಳಿಕೊಳ್ಳುವುದು ? ಗುಪ್ತವಾಹಿನಿಯಂತೆ ಹರಿಯುತ್ತಿರುವ ಈ ಮಾತುಗಳನ್ನು ಆಲಿಸುವ ಒಂದು ದೊಡ್ಡ ಕಿವಿ ಬೇಕಿದೆ. #ಆತ್ಮನಿರ್ಭರ ಭಾರತ ತನ್ನ ಶ್ರವಣ ಶಕ್ತಿಯನ್ನು ಕಳೆದುಕೊಂಡಿದೆ. ಈ ಭಾರತದ ಪ್ರಜೆಗಳಿಗೆ ಮಾಸ್ಕ್ ತೊಡಿಸಲಾಗಿದೆ. ಅಂತರಂಗದ ಕ್ಷೀಣ ದನಿಗಳು ಚಿತೆಗಳ ಸುತ್ತಲೂ ಕಾಣುತ್ತಿವೆ.

Previous Post

ಕೋವಿಡ್‌ ಸಂಕಷ್ಟ: ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದು ಸಲಹೆ ನೀಡಿದ ಸಿದ್ಧರಾಮಯ್ಯ

Next Post

ಆಮ್ಲಜನಕ ಘಟಕ ಸ್ಥಾಪನೆಗೆ ಪಿಎಂ ಕೇರ್ಸ್ ಹಣ: ಸತ್ಯವೆಷ್ಟು? ಸುಳ್ಳೆಷ್ಟು?

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಆಮ್ಲಜನಕ ಘಟಕ ಸ್ಥಾಪನೆಗೆ ಪಿಎಂ ಕೇರ್ಸ್ ಹಣ:  ಸತ್ಯವೆಷ್ಟು? ಸುಳ್ಳೆಷ್ಟು?

ಆಮ್ಲಜನಕ ಘಟಕ ಸ್ಥಾಪನೆಗೆ ಪಿಎಂ ಕೇರ್ಸ್ ಹಣ: ಸತ್ಯವೆಷ್ಟು? ಸುಳ್ಳೆಷ್ಟು?

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada