ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಷ್ಟವಾಗುವ ಸಂಗತಿ ಹಾಸ್ಯ. ಜಗತ್ತಿನ ಪ್ರತಿಯೊಬ್ಬ ಮನುಷ್ಯ ಕೂಡ ಹಾಸ್ಯಪ್ರಜ್ಞೆಇಲ್ಲದೇ ಬದುಕಲಾರ. ಅಷ್ಟರ ಮಟ್ಟಿಗೆ ನಗು ನಮ್ಮಲ್ಲಿ ಹಾಸುಹೊಕ್ಕಾಗಿದೆ. ಈ ನಗುವನ್ನೇ ಸೃಷ್ಟಿಸಲು ಸಾವಿರಾರು ಕಲಾವಿದರು ನಮ್ಮ ಸುತ್ತಲಿದ್ದಾರೆ. ಅಂಥವರಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕೂಡ ಒಬ್ಬರು.
ಬೆಂಗಳೂರಿನಲ್ಲಿ ಹಿಂದೂ ಗುಂಪುಗಳ ಬೆದರಿಕೆಯಿಂದಾಗಿ ಈ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರೂಕ್ ಹಾಗೂ ಕುನಾಲ್ ಕಮ್ರಾ ಅವರ ಕಾರ್ಯಕ್ರಮ ರದ್ದಾಗಿ ವಿವಾದ ಕೂಡ ಆಯಿತು. ಆ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಈ ಮಧ್ಯೆಯೇ ಇತ್ತ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಮಗ ಹಾಗೂ ಐಟಿ ಮತ್ತು ಕೈಗಾರಿಕಾ ಸಚಿವ ಕೆ ಟಿ ರಾಮರಾವ್ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳಿಗೆ ಬೆಂಗಳೂರು ಹೆಸರನ್ನು ಮುಂದೆ ಮಾಡುವ ಮೂಲಕ ಮುಕ್ತ ಆಹ್ವಾನ ನೀಡಿದ್ದಾರೆ.
ಈ ಕುರಿತು ರಾಮರಾವ್ ಮಾತನಾಡಿದ್ದು, “ಕಾಮಿಡಿಯನ್ ಗಳು ಹೈದರಾಬಾದ್ ಗೆ ಬನ್ನಿ, ಬೆಂಗಳೂರು ಕಾಸ್ಮೋಪಾಲಿಟಿಯನ್ ಸಿಟಿಯಲ್ಲ. ಇಲ್ಲಿಗೆ ನೀವು ಬನ್ನಿ, ನಿಮಗೆ ನಾವು ರಕ್ಷಣೆ ಕೊಡುತ್ತೇವೆ. ಹೈದರಾಬಾದ್ ಎಲ್ಲಾ ಸಂಸ್ಕೃತಿಗಳನ್ನು ಸ್ವಾಗತಿಸುವ, ಟೀಕೆಗಳನ್ನು ಸ್ವಾಗತಿಸುವ ನಿಜವಾದ ಕಾಸ್ಮೋಪಾಲಿಟನ್ ನಗರವಾಗಿದೆ,” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳ ಕಾರ್ಯಕ್ರಮ ನಕಲಿ ಹಿಂದೂಗಳ ಹಾವಳಿಯಿಂದ ರದ್ದಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆ ಹಾಳಾಯಿತು. ಈ ಮೂಲಕ ಕರ್ನಾಟಕವು ಏಕ ಸಂಸ್ಕೃತಿಯ ನೆಲೆಯಾಗುತ್ತಿದೆ ಎನ್ನುವ ಸಂದೇಶ ಕೂಡ ರಾಷ್ಟ್ರಕ್ಕೆ ತಲುಪಿತು. ಸರ್ಕಾರಗಳು ದಪ್ಪ ಚರ್ಮವನ್ನು ಹೊಂದಿದಾಗ ಯಾವ ಟೀಕೆಗಳು ಅದಕ್ಕೆ ಹತ್ತುವುದಿಲ್ಲ. ಹೀಗಾಗಿ ದಪ್ಪ ಚರ್ಮದ ಬೊಮ್ಮಾಯಿ ಸರ್ಕಾರಕ್ಕೆ ಆಗಿದ್ದು ಇದೆ. ಎಲ್ಲ ಸಂಸ್ಕೃತಿಗಳಿಗೆ ಅವಕಾಶ ಮಾಡಿಕೊಡಬೇಕಾದ ಸರ್ಕಾರ ಆ ವೇಳೆ ಕೈ ಕಟ್ಟಿ ಕುಳಿತು, ಹಿಂದೂಗಳ ಉಪಟಳಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಾಚೀಕೆಗೇಡಿನ ಸಂಗತಿ.
ಈ ಸಂಗತಿಯನ್ನೇ ಬಂಡವಾಳ ಮಾಡಕೊಂಡು ಉಳಿದ ರಾಜ್ಯಗಳು ಕರ್ನಾಟಕ ಬಹು ಸಂಸ್ಕೃತಿಯ ನಾಡಲ್ಲ ಎಂಬುದನ್ನು ಬಿಂಬಿಸಲು ಮುಂದಾಗಿವೆ. ಅದರ ಮೊದಲ ಹಂತವಾಗಿ ತೆಲಂಗಾಣ ಕಾಮಿಡಿಯನ್ ಗಳ ಕಾರ್ಯಕ್ರಮ ರದ್ದಾದ ಸಂಗತಿ ಇಟ್ಟುಕೊಂಡು ಈಗ ಮುನಾವರ್ ಫರೂಕ್ ಹಾಗೂ ಕುನಾಲ್ ಕಮ್ರಾ ಅವರಿಗೆ ತೆಲಂಗಾಣ ಮುಕ್ತ ಆಹ್ವಾನ ನೀಡಿದೆ. ಜೊತೆಗೆ ಕರ್ನಾಟಕ ಸರ್ಕಾರದ ನಡೆಯನ್ನು ಪರೋಕ್ಷವಾಗಿ ಟೀಕಿಸಿದೆ.
ಈಗಾಗಲೇ ಸುದ್ದಿಯಲ್ಲಿರುವ ಮುನಾವರ್ ಫಾರೂಕ್ ವಿರುದ್ಧ ಬಲಪಂಥೀಯ ಹಾಗೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಾಗಿ ಅವರ ಬೆಂಗಳೂರಿನ ಕಾರ್ಯಕ್ರಮ ರದ್ದಾಗಿತ್ತು. ಜೊತೆಗೆ ಕಳೆದ ತಿಂಗಳು ಮುಂಬೈನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಕೂಡ ರದ್ದಾಯಿತು.
ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ ಎಂಬ ಆರೋಪದ ಮೇಲೆ ಮುನಾವರ್ ಫಾರೂಕಿ ಒಂದು ತಿಂಗಳು ಜೈಲುವಾಸ ಕಂಡಿದ್ದಾರೆ. ನಂತರದಲ್ಲಿ ಜಾಮೀನಿನ ಮೇಲೆ ಫಾರೂಕಿ ಹೊರಬಂದಿದ್ದು, ಈತನಿಗೆ ನಿತ್ಯ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಕಾರ್ಯಕ್ರಮ ನಡೆಸಿದರೆ ಆ ಸ್ಥಳಕ್ಕೆ ಬಂದು ದಾಳಿ ನಡೆಸಲಾಗುತ್ತದೆ ಎಂದು ಕಿಡಿಗೇಡಿಗಳು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಫಾರೂಕಿ ಬೇಸರ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು.
ಒಬ್ಬ ಕಲಾವಿದನಿಗೆ ತನ್ನದೇ ಆದ ಶೈಲಿಯಲ್ಲಿ ಬದುಕುವ ಹಕ್ಕಿದೆ. ಸಂವೇದನಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ಕಲಾವಿದರು ಯಾವತ್ತಿಗೂ ತಯಾರಿರುತ್ತಾರೆ. ಹಾಗೆಯೇ ಸಮಾಜದ ಸೂಕ್ಷ್ಮತೆಗಳನ್ನು ಗಮನಿಸುವಂತಹ ಇಂಥ ವ್ಯಕ್ತಿಗಳು ಸಮಾಜದ ಗೌರವಕ್ಕೆ ಪಾತ್ರದಾರರು ಕೂಡಾ ಹೌದು. ಆದರೆ, ಸಮಾಜದಲ್ಲಿ ನಡೆಯುತ್ತಿರುವ ಆಘಾತಕಾರಿ ವಿಚಾರಗಳ ಕುರಿತಾಗಿ ಹಾಸ್ಯದ ಮೂಲಕ ತಿಳಿಯಪಡಿಸುವ ಇಂತವರಿಗೆ ಇಂದಿನ ಬೇರೆ ಬೇರೆ ಸರ್ಕಾರಗಳು ಕಡಿವಾಣ ಹಾಕಲು ಮುಂದಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದೇ ಹೇಳಬಹುದು.
ಫಾರೂಕಿ ಅವರ ಮೂರು ಪ್ರದರ್ಶನ ರದ್ದಾದ ಮೇಲೆ ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯಿಸುವಾಗ, “ದೇಶದ ಯುವಕರು ನಾವು ಯಾರಿಗೆ ಓಟ್ ಹಾಕಬೇಕು ಎಂದು ನಿರ್ಧರಿಸುತ್ತಾರೊ ಅದೇ ರೀತಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ನಿರ್ಧರಿಸಬಹುದು. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರವೂ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ನನಗೆ ಅನೇಕ ಅಡೆತಡೆಗಳನ್ನು ಬಲಪಂಥೀಯರು ಹಾಕುತ್ತಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುನಾವರ್ ಫಾರೂಕಿ ಬೆಂಗಳೂರಿಗೆ ಬಂದು ಶೋ ನಡೆಸುವುದಕ್ಕೂ ಹಿಂದೂಗಳೆಂದು ಕರೆಯಲ್ಪಡುವ ಗುಂಪುಗಳು ಅವಕಾಶ ನೀಡದೇ ಇರುವುದು ಬಲಪಂಥೀಯರ ನೀಚತನಗಳನ್ನು ಎತ್ತಿ ತೋರಿಸುವಂತಿದೆ. ಪ್ರಸಕ್ತ ದಿನಗಳಲ್ಲಿ ಆರ್ ಎಸ್ ಎಸ್, ವಿ ಎಚ್ ಪಿ, ಶ್ರೀರಾಮ ಸೇನೆ ಹಾಗೂ ಸೋ ಕಾಲ್ಡ್ ಹಿಂದೂಪರ ಸಂಘಟನೆಗಳು ಅಮಾಯಕರನ್ನು ಹೇಗೆ ಬಳಸಿಕೊಳ್ಳುತ್ತಿವೆ ಎನ್ನುವುದು ಇತ್ತೀಚಿನ ಇಂಥ ಪ್ರಕರಣಗಳಿಂದ ತಿಳಿಯುತ್ತಿದೆ.
ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ಹಲವಾರು ಧಾರ್ಮಿಕ ಆಚರಣೆಗಳಿವೆ. ಆದರೆ ಬಿಜೆಪಿ ಮಾತ್ರ ಏಕಸಂಸ್ಕೃತಿಯನ್ನು ಮಾತ್ರ ಚಲಾವಣೆಯಲ್ಲಿಡುವ ಅಜೆಂಡಾವನ್ನು ರೂಢಿಸಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿರುವ ರಾಜ್ಯಗಳಲ್ಲಿ ಅನೈತಿಕ ಚಟುವಟಿಕೆಗಳಿಂದ ಹಿಂದೂ ಎನ್ನುವ ಪದಕ್ಕೆ ಅವಮಾನಿಸುತ್ತಿದೆ. ಒಂದು ವೇಳೆ ಅದೇ ಸಂಸ್ಕೃತಿಯಲ್ಲಿರುವ ಲೋಪದೋಷಗಳನ್ನು ತೆರೆದಿಟ್ಟರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸುವ ಮಟ್ಟಿಗೆ ವಾತಾವರಣ ಬದಲಾಗಿದೆ. ಇವೆಲ್ಲವನ್ನು ಗಮನಿಸಿದಾಗ ಮನುಷ್ಯನ ಸಂವೇದನಾಶೀಲತೆಗೆ ಬೆಲೆಯೇ ಇಲ್ಲ ಎನ್ನುವುದು ಸ್ಪಷ್ಟ. ಸದ್ಯ ಒಬ್ಬ ಕಲಾವಿದನಿಗೆ ಇಂತಹ ಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಇನ್ಯಾರಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎನ್ನುವುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ.
ಒಟ್ಟಾರೆಯಾಗಿ ಕಲೆಗೆ ಸಿಗದ ಮಾನ್ಯತೆ ಧರ್ಮಗಳ ಹೆಸರಿನಲ್ಲಿ ಪುಂಡಾಟಿಕೆ ಮಾಡುತ್ತಿರುವ ಸೋ ಕಾಲ್ಡ್ ಹಿಂದೂ ಸಂಘಟಕರಿಗೆ ಸಿಗುತ್ತಿದೆ. ಈ ಮಧ್ಯೆಯೇ ಮುನಾವರ್ ಫಾರೂಕಿ ಮುಂದಿನ ತಿಂಗಳು ಕೊಲ್ಕತ್ತಾದಲ್ಲಿ ನಡೆಯುವ ಹಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಸಂತೋಷದ ಸಂಗತಿ. ಈ ಬಗ್ಗೆ ಟ್ವೀಟರ್ ಮಾಹಿತಿ ಹಂಚಿಕೊಂಡ ಇವರು, ಕೊಲ್ಕತ್ತಾದ ಧಂಧೋದಲ್ಲಿ ಜನವರಿ 16 ರಂದು ನಡೆಯಲಿರುವ ಎರಡು ಗಂಟೆಯ ಕಾಮಿಡಿ ಕಾರ್ಯಕ್ರಮಕ್ಕೆ ಟಿಕೇಟ್ ಬುಕ್ ಮಾಡಲು ಲಿಂಕ್ ಶೇರ್ ಮಾಡಿದ್ದಾರೆ.