ಬೆಂಗಳೂರು: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮೂರರಲ್ಲಿ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಎರಡರಲ್ಲಿ ಜಯ ಸಾಧಿಸಿವೆ.
ಕಾಂಗ್ರೆಸ್ ಒಂದು ಸ್ಥಾನದಿಂದ ಮೂರು ಸ್ಥಾನಕ್ಕೆ ತನ್ನ ಬಲ ಹೆಚ್ಚಿಸಿಕೊಂಡಿದೆ. ಬಿಜೆಪಿ ಮೂರು ಸ್ಥಾನಗಳಲ್ಲಿ ಎರಡು ಸ್ಥಾನ ಕಳೆದುಕೊಂಡಿದ್ದು, ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ 75 ಜನ ಸದಸ್ಯರಿರುವ ಮೇಲ್ಮನೆಯಲ್ಲಿ ಕಾಂಗ್ರೆಸ್ – 34, ಬಿಜೆಪಿ – 30, ಜೆಡಿಎಸ್ – 8, ಪಕ್ಷೇತರ – 1, ಖಾಲಿ – 1, ಸಭಾಪತಿ – 1 ಇದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಹಾಗೂ ಪದವೀಧರ-ಶಿಕ್ಷಕ ಕ್ಷೇತ್ರದ ಆರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ.
ಹೀಗಾಗಿ ಪರಿಷತ್ ನಲ್ಲಿ ಕಾಂಗ್ರೆಸ್ ಬಲ 34ಕ್ಕೆ ಏರಿಕೆಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಬಲ 38 ಆಗಿದೆ. ಹೀಗಾಗಿ ಬಿಜೆಪಿಗೆ ಸಭಾಪತಿ ಸ್ಥಾನಕ್ಕೆ ಯಾವುದೇ ತೊಂದರೆ ಇಲ್ಲ. ಈ ಮೂಲಕ ಸಭಾಪತಿ ಸ್ಥಾನ ಕಳೆದುಕೊಳ್ಳುವ ಭಯದಲ್ಲಿದ್ದ ಬಿಜೆಪಿ ನಿಟ್ಟುಸಿರು ಬಿಟ್ಟಿದೆ.
ಲೋಕಸಭೆಗೆ ಪ್ರವೇಶಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ತೆರವಿನಿಂದ ಖಾಲಿಯಾಗುವ ಸ್ಥಾನಕ್ಕೆ ಅಧಿಸೂಚನೆ ಪ್ರಕಟಿಸಬೇಕಾಗಿದೆ. ಅಕ್ಟೋಬರ್ ತಿಂಗಳಲ್ಲಿ ಎರಡು ಸ್ಥಾನ ಖಾಲಿಯಾಗಲಿದ್ದು, ನಂತರ ಕಾಂಗ್ರೆಸ್ ಗೆ ಬಹುಮತ ಸಿಗುವ ಸಾಧ್ಯತೆ ಇದೆ.