ರಾಜ್ಯದಲ್ಲಿ ಪರಿಷತ್ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಗ್ರಾಮ ಪಂಚಾಯಿತಿಯ ವೋಟ್‌ಗಳೇ ಮೇಲ್ಮನೆಯ ಅಭ್ಯರ್ಥಿಗಳ ಗೆಲುವನ್ನ ನಿರ್ಧರಿಸಲಿವೆ. ಆದರೀಗ, ಈ ಮೇಲಾಟದಲ್ಲಿ ಗ್ರಾಮಪಂಚಾಯಿತಿ ಸದಸ್ಯರೇ ಕ್ಯಾಂಡಿಡೇಟ್‌ಗಳ ಕೈಗೆ ಸಿಕ್ತಿಲ್ವಂತೆ.
ಹೌದು, ಮೇಲ್ಮನೆ ಸಮರದಲ್ಲಿ ಗೆಲುವಿನ ಪತಾಕೆ ಹಾರಿಸಲು ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸ್ತಿವೆ. ಸ್ಥಳೀಯ ಸಂಸ್ಥೆಗಳ ಸದಸ್ಯರ ಬಳಿ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡ್ತಿದ್ದಾರೆ. ಆದ್ರೀಗ ಗ್ರಾಮ ಪಂಚಾಯಿತಿ ಸದಸ್ಯರ ಕಣ್ಣಾಮುಚ್ಚಾಲೆ ಆಟಕ್ಕೆ ಶಾಸಕರು ಕಂಗಾಲಾಗಿ ಹೋಗಿದ್ದಾರೆ. ಪರಿಷತ್ ಫೈಟ್ ವೇಳೆ ಗ್ರಾಮ ಪಂಚಾಯಿತಿಯ ಯಾವೊಬ್ಬ ಸದಸ್ಯರು ಪಕ್ಷಗಳ ಜೊತೆ ಗುರುತಿಸಿಕೊಳ್ತಿಲ್ವಂತೆ. ಜೊತೆಗೆ ತಾವು ಯಾರ ಪರ ಅನ್ನೋದನ್ನ ಸೀಕ್ರೆಟ್ ಆಗಿ ಮೇಂಟೈನ್ ಮಾಡ್ತಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಅಭ್ಯರ್ಥಿಗಳ ಕೈಗೆ ಗ್ರಾಮ ಪಂಚಾಯಿತಿ ಸದಸ್ಯರು ಸಿಗುತ್ತಲೇ ಇಲ್ಲ. ಪರಿಷತ್ ಚುನಾವಣೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯರಿಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ, ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಸದಸ್ಯರು ಇಚ್ಚಿಸುತ್ತಿಲ್ಲ. ಅಲ್ಲದೇ ನಾಮಪತ್ರ ಸಲ್ಲಿಕೆ, ಹಾಗೂ ಪ್ರಚಾರದ ವೇಳೆಯೂ ಕೈಗೆ ಸಿಕ್ತಿಲ್ಲ ಎನ್ನಲಾಗಿದೆ. ಯಾವುದೇ ಪಕ್ಷದ ಅಭ್ಯರ್ಥಿ ಪರ ಗುರುತಿಸಿಕೊಳ್ಳೋದು ಬೇಡ ಅನ್ನೋದು ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಆಲೋಚನೆ. ಯಾಕಂದ್ರೆ, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸ್ವಸಾಮರ್ಥ್ಯ ಬಲದಿಂದ ನಾವು ಗೆದ್ದಿದ್ದೇವೆ. ಅಲ್ಲದೇ ಯಾವುದೇ ಪಕ್ಷದ ಚಿನ್ಹೆಯಡಿ ಸದಸ್ಯರು ಆಯ್ಕೆಯಾಗಿಲ್ಲ. ಹೀಗಾಗಿ ಲಾಭವಾಗುವ ಪಕ್ಷದ ಅಭ್ಯರ್ಥಿ ಪರ ಗುರುತಿಸಿಕೊಳ್ಳಲು ಸದಸ್ಯರು ತಂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಮೇಲ್ಮನೆ ಅಭ್ಯರ್ಥಿಗಳ ಪರ ಗುರುತಿಸಿಕೊಳ್ಳದ ಪಂಚಾಯಿತಿ ಸದಸ್ಯರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಯಾಕಂದ್ರೆ, ಪರಿಷತ್ ಫೈಟ್‌ನಲ್ಲಿ ಗ್ರಾಮಪಂಚಾಯಿತಿ ಮತಗಳೇ ಗೆಲುವಿಗೆ ನಿರ್ಣಾಯಕವಾಗಿದೆ. ಹೀಗಾಗಿ ಪಂಚಾಯಿತಿ ಸದಸ್ಯರ ಮತಗಳನ್ನ ಸೆಳೆಯಲು ಪರಿಷತ್ ಅಭ್ಯರ್ಥಿಗಳು ಪರದಾಡ್ತಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರ ಮನ ಗೆದ್ದರೆ ಮೇಲ್ಮನೆಯ ಮಿನಿಫೈಟ್‌ನಲ್ಲಿ ವಿಜಯ ಸಲೀಸು ಅನ್ನೋದು ಕದನ ಕಲಿಗಳ ಲೆಕ್ಕಾಚಾರ. ಅಲ್ಲದೇ ಗ್ರಾಮಪಂಚಾಯಿತಿ ಸದಸ್ಯರ ಬಲ ಸಿಕ್ಕರೆ ವಿಧಾನ ಪರಿಷತ್ ಗೆಲುವಿನ ಹಾದಿ ಸುಗಮವಾಗಿ ಇರಲಿದೆ. ಅಲ್ಲದೇ ಈ ಬಾರಿ ಪರಿಷತ್ ಚುನಾವಣೆಯ ಮತದಾನದಿಂದ ಜಿಲ್ಲಾಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಸದಸ್ಯರು ವಂಚಿತರಾಗಿದ್ದಾರೆ. ಹೀಗಾಗಿ ಮೇಲ್ಮನೆ ಮತಬ್ಯಾಂಕ್ನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಗ್ರಾಮಪಂಚಾಯತ್ ಸದಸ್ಯರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ವಿಧಾನಪರಿಷತ್ ಚುನಾವಣೆ ಗೆಲುವಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಿದ್ದಿಗೆ ಬಿದ್ದು ಪ್ರಚಾರ ನಡೆಸ್ತಿವೆ. ಅಲ್ಲದೇ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲು ನಾನಾ ರಣನೀತಿಗಳನ್ನ ಹೆಣೆಯುತ್ತಿವೆ. ಆದ್ರೆ, ಪಕ್ಷಗಳ ಈ ಸಮರ ನೀತಿಗಳು ವರ್ಕೌಟ್ ಆಗ್ಬೇಕು ಅಂದ್ರೆ ಗ್ರಾಮಪಂಚಾಯಿತಿ ಸದಸ್ಯರ ಬಲ ಬೇರಿರೋದಂತೂ ಸತ್ಯ.