ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಲಂಚ ತಾಂಡವವಾಡುತ್ತಿದೆ. ಜನ ಹತಾಶರಾಗಿದ್ದಾರೆ, ಅಸಹಾಯಕರಾಗಿದ್ದಾರೆ, ಆಕ್ರೋಶಗೊಂಡಿದ್ದಾರೆ. “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷವು ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ “ಲಂಚಮುಕ್ತ ಕರ್ನಾಟಕ” ಅಭಿಯಾನವನ್ನು ಪುನರಾರಂಭಿಸಲಿದೆ. ಬನ್ನಿ, ಬೆಂಬಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯನ್ನು ಕಟ್ಟಲು ಕೈಜೋಡಿಸಿ ಎಂದು ರಾಜ್ಯದ ಜನರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
ACB ಕುರಿತು ಸಿದ್ದರಾಮಯ್ಯ ಟ್ವೀಟ್- ರವಿ ಕೃಷ್ಣಾ ರೆಡ್ಡಿ ಪ್ರತಿಕ್ರಿಯೆ
ಮಾನ್ಯ ಸಿದ್ದರಾಮಯ್ಯನವರು ACB ಕುರಿತು ಟ್ವೀಟ್ ಮಾಡಿದ್ದಾರೆ. ACB ಕುರಿತು ಮಾತನಾಡಲು ರಾಜ್ಯದಲ್ಲಿ ಯಾರಿಗಾದರೂ ಕನಿಷ್ಠ ನೈತಿಕತೆ ಇದ್ದರೆ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾತ್ರ. ಲೋಕಾಯುಕ್ತವನ್ನು ದುರ್ಬಲಗೊಳಿಸಿ ACB ರಚನೆಮಾಡಿದ್ದು ಅವರ ದೊಡ್ಡ ಜನದ್ರೋಹಗಳಲ್ಲಿ ಒಂದು. ಅವರು ಮುಖ್ಯಮಂತ್ರಿಯಾದಾಗ ಖುಷಿ ಪಟ್ಟವರಲ್ಲಿ ನಾನೂ ಒಬ್ಬ. ಆದರೆ ಆಗಿದ್ದೇ ಬೇರೆ. ಅವರ ಇಂದಿನ ಹೇಳಿಕೆ ನೋವು, ತಿರಸ್ಕಾರ ಮತ್ತು ವಿಷಾದವನ್ನು ಹುಟ್ಟಿಸುತ್ತಿದೆ ಎಂದು ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಸುಮಾರು 150 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ACBಗೆ ವ್ಯಯಿಸಲಾಗಿದೆ. ರಾಜ್ಯದ ಜನರ ಕಷ್ಟಾರ್ಜಿತ ಹಣ ಅದು. ಹಿರಿಯ IPS ಅಧಿಕಾರಿಗಳೂ ಸೇರಿದಂತೆ ಸುಮಾರು 560 ಅಧಿಕಾರಿಗಳು ACBಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲಾ ಸೇರಿ ಕಳೆದ ಐದು ವರ್ಷದಲ್ಲಿ ಶಿಕ್ಷೆ ಕೊಡಿಸಿರುವುದು ಕೇವಲ ಮೂವರು ಭ್ರಷ್ಟರಿಗೆ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ’ಯವರ ಸುಳ್ಳು ಚುನಾವಣಾ ಆಶ್ವಾಸನೆಗಳಿಗೆ ಮತ್ತು ಜುಮ್ಲಾಗಳಿಗೆ ಮಿತಿಯೇ ಇಲ್ಲ. ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಸಂಪುಟ ಸಭೆಯಲ್ಲಿಯೆ ACBಯನ್ನು ರದ್ದು ಪಡಿಸಿ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲ ಸಾಲಿನಲ್ಲಿಯೇ ಮುದ್ರಿಸಿದ್ದರು. ಅದನ್ನು ನಂಬಿದವರು ಮೂರ್ಖರು. ಅವರು ಈಗಲೂ ಏನಾದರೂ ಮಾಡುತ್ತಾರೆ ಎಂದು ಭಾವಿಸುವವರು ಶತಮೂರ್ಖರು ಎಂದು ಕೆಆರ್‌ಎಸ್ ಪಕ್ಷದ ಕಿಡಿಕಾರಿದೆ.