ಮೇ 1 ರಿಂದ ಮೂರನೇ ಹಂತದ ಕರೋನ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ವಿರೋಧ ಪಕ್ಷಗಳು ಮತ್ತು ತಜ್ಞರು ಕಳೆದ ಹಲವು ದಿನಗಳಿಂದ ಇದನ್ನು ಒತ್ತಾಯಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮುಕ್ತ ಮಾರುಕಟ್ಟೆಗೆ ಕರೋನ ಲಸಿಕೆ
ವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಶೇ 50 ರಷ್ಟು ಡೋಸ್ ಗಳನ್ನು ಪೂರೈಕೆ ಮಾಡಬೇಕು. ಇನ್ನುಳಿದ ಶೇ 50 ರಷ್ಟು ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಕೊಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೇ 1 ಮೊದಲು ರಾಜ್ಯ ಸರ್ಕಾರಗಳಿಗೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವ ಶೇ 50 ರಷ್ಟು ಪೂರೈಕೆಗೆ ತಯಾರಕರು ಮುಂಗಡ ದರ ಘೋಷಣೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ತಿಳಿಸಿದೆ.
ಹೀಗೆ ನಿಗದಿ ಮಾಡುವ ಬೆಲೆಯ ಆಧಾರದ ಮೇಲೆ, ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇನ್ನೂ ಮುಂತಾದ ಕ್ಷೇತ್ರದವರು ಉತ್ಪಾದಕರಿಂದ ಲಸಿಕೆ ಡೋಸ್ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
‘ಭಾರತವು ಹೆಚ್ಚು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಗತ್ಯವಿರುವಷ್ಟು ಲಸಿಕೆ ತಯಾರಿಸಲು ದೇಶದ ಬೇರೆ ಬೇರೆ ಕಂಪನಿಗಳಿಗೆ ಕೇಂದ್ರ ಸರ್ಕಾರವು ನೆರವು ನೀಡಬೇಕು. ಬೇರೆ ಲಸಿಕೆಗಳ ಬಳಕೆ ಮತ್ತು ತಯಾರಿಕೆಗೆ ಅನುಮತಿ ನೀಡಬೇಕು. ಲಸಿಕೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿ. ಆಗ ಶಕ್ತರು ಲಸಿಕೆ ಖರೀದಿಸಿ, ಹಾಕಿಸಿಕೊಳ್ಳುತ್ತಾರೆ. ಶಕ್ತರಲ್ಲದವರ ಕಡೆ ಸರ್ಕಾರ ಗಮನ ನೀಡಬಹುದು’ ಎಂದು ಅನೇಕ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಈಗ ಕರೋನಾ ಲಸಿಕೆ ಮುಕ್ತ ಮಾರುಕಟ್ಟೆಗೆ ಬಂದಿದೆ.