ಕೆಲವು ದಿನಗಳಿಂದ ದೇಶದಲ್ಲಿ ಕರೋನಾ ಎರಡನೇ ಅಲೆ ಹೆಚ್ಚುತ್ತಿದ್ದು ಒಂದೇ ದಿನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವುದನ್ನು ನೋಡಬಹುದು. ದೇಶಕ್ಕೆ ಕರೋನಾ ವಕ್ಕರಿಸಿ ಒಂದು ವರ್ಷ ಕಳೆದರೂ, ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಂಡಿಲ್ಲ, ಇದರಿಂದಾಗಿಯೇ ಕರೋನಾ ನಿಯಂತ್ರಣದಲ್ಲಿಡಲು ಭಾರತ ವಿಫಲವಾಗಿದೆ ಎನ್ನಬಹುದು. ಈಗ ಕರೋನಾ ಎಷ್ಟು ವೇಗವಾಗಿ ಬೆಳೆಯುತ್ತಿದೆ ಹೇಗೆಲ್ಲ ಬೆಳೆಯುತ್ತಿದೆ ಎಂಬು ನೋಡೋದಾದ್ರೆ
1. ಜವಾಬ್ದಾರಿಯಿಂದ ನಡೆಯಬೇಕಾದವರಿಂದಲೇ ಕಾನೂನು ಉಲ್ಲಂಘನೆ
ಫೆಬ್ರವರಿ ಕೊನೆಯಲ್ಲಿ ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಿಸಲಾಯಿತು. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಾದ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ಚುನಾವಣೆಗಳು ಪೂರ್ಣಗೊಂಡಿವೆ. ಕರೋನಾ ಚುನಾವಣೆಗೆ ಹೆದರುತ್ತದೆ. ಈ ಕಾರಣದಿಂದಾಗಿಯೇ ಕರೋನಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಹೋಗುವುದಿಲ್ಲ ಎಂಬ ಅನೇಕ ಟ್ರಾಲ್ಗಳು ಮತ್ತು ಜೋಕ್ಗಳು ಸಹ ಕಂಡುಬಂದವು. ಈ ಟ್ರಾಲ್ ಮತ್ತು ಜೋಕ್ಗಳು ಎಲ್ಲಾ ಕಡೆ ವೈರಲ್ ಕೂಡ ಆಗಿದ್ದವು. ಈ ಚುನಾವಣೆಗಳಿಗೆ ಚುನಾವಣಾ ಆಯೋಗ ಕೋವಿಡ್ ಪ್ರೋಟೋಕಾಲ್ಗಳನ್ನು ನೀಡಿದ್ದರು ಸಹ ಅದನ್ನು ಗಾಳಿಗೆ ತೂರಿ ಭರ್ಜರಿ ಚುನಾವಣಾ ಪ್ರಚಾರ ಮಾಡಲಾಯಿತು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ದೇಶದ ಗೃಹ ಸಚಿವ ಹಾಗೂ ಬಿಜೆಪಿಯ ಸ್ಟಾರ್ ಪ್ರಚಾರಕರಾದ ಅಮಿತ್ ಶಾ ಮತ್ತು ಇತರೆ ದೊಡ್ಡ ದೊಡ್ಡ ನಾಯಕರೆಲ್ಲ ಸೇರಿ ಭರ್ಜರಿ ಗುಂಪು ಸೇರಿಸಿ ಸಭೆ ನಡೆಸಿದನ್ನು ನೋಡಬಹುದು. ಸಭೆಯಲ್ಲಾಗಲಿ, ರ್ಯಾಲಿಯಲ್ಲಾಗಲಿ ಸಾಮಾಜಿಕ ಅಂತರ ಕಾಪಾಡೊದು ಇರಲಿ ಮಾಸ್ಕ್ ಕೂಡ ಧರಿಸದೆ ಇರುವುದು ಕಂಡುಬಂದಿತ್ತು.
ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಕರೋನಾ ಸೋಂಕು ಹೇರಳವಾಗಿ ಹಬ್ಬುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿತ್ತು. ಎಂಟು ಹಂತದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯು ಕರೋನಾದ ದೃಷ್ಟಿಯಿಂದ ದೊಡ್ಡದಾಗಿದೆ ಎಂದು ತಜ್ಞರು ಅಭಿಪ್ರಾಯವಾಗಿತ್ತು. ಚುನಾವಣಾ ರ್ಯಾಲಿಗಳಲ್ಲಿ ಜನಸಂದಣಿಯಿಂದ ಸೋಂಕು ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಆರೋಗ್ಯ ಅಧಿಕಾರಿಗಳು ಹೇಳಿದ್ದರು.
ಪಶ್ಚಿಮ ಬಂಗಾಳದ ವೈದ್ಯರ ಜಂಟಿ ವೇದಿಕೆ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿದ್ದು ಅದರಲ್ಲಿ, ಚುನಾವಣಾ ಪ್ರಚಾರದ ಸಮಯದಲ್ಲಿ ಕರೋನಾ ಶಿಷ್ಟಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಅದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ “ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಸ್ಕ್ ಧರಿಸಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಪ್ರಧಾನಿ, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳೇ ಈಗ ಕೋವಿಡ್ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದರೆ ನಾವು ಏನು ಮಾಡಬಹುದು? ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳ ರ್ಯಾಲಿಗಳಿಂದ ಹೊರಬರುತ್ತಿರುವ ಚಿತ್ರದಲ್ಲಿ (ಪೋಟೋಗಳಲ್ಲಿ) ಸ್ಟಾರ್ ಪ್ರಚಾರಕರು ಮಾಸ್ಕ್ ಹಾಕದೆ ವೇದಿಕೆಯಲ್ಲಿರುವುದನ್ನು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ ಎಂದು ಬಿಬಿಸಿಯೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ. ಅವರ ಮೇಲೆ ಯಾವುದೇ ನಿರ್ಬಂಧವಿಲ್ಲದಿದ್ದಾಗ, ಅವರ ವಿರುದ್ಧ ನಾವು ಯಾವುದೇ ಕ್ರಮ ಕೈಕೊಳ್ಳದೆ. ಕರೋನಾ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಾರ್ವಜನಿಕ ಮೇಲೆ ಹೇಗೆ ಕ್ರಮಕೈಗೊಳ್ಳುವುದು ಎಂಬುದನ್ನು ಇಲ್ಲಿ ಉಲ್ಲೇಖ ಮಾಡಿದ್ದಾರೆ.
“ಕೋವಿಡ್ ಪ್ರೋಟೋಕಾಲ್ ಅನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಇಂತಹ ನಾಯಕನನ್ನು ನಿಷೇಧಿಸಿದ್ದೇವೆ ಎಂದು ಯಾವುದೇ ಮಾಧ್ಯಮ ವರದಿ ಮಾಡಿರುವುದು ನನಗೆ ನೆನಪಿಲ್ಲ. ಚುನಾವಣೆ ಪ್ರಚಾರದಲ್ಲಿ ಕರೋನಾ ಪ್ರೊಟೊಕಾಲ್ ಅನ್ನು ಕಟ್ಟುನಿಟ್ಟಿನಿಂದ ಅನುಸರಿಸುವಂತೆ ಎಲ್ಲಾ ನಾಯಕರಿಗೆ ಚುನಾವಣಾ ಅಧಿಕಾರಿಗಳು ತಿಳಿಸಬೇಕು. ಈ ಪ್ರಕ್ರಿಯೆ ಆರಂಭದಲ್ಲಿ ಕೈಗೊಂಡಿದ್ದರೆ ಉತ್ತಮವಾಗುತ್ತಿತ್ತು ಎಂಬುದು ರಾವತ್ ಅವರ ಅಭಿಪ್ರಾಯ.
ಐದು ಸುತ್ತಿನ ಚುನಾವಣಾ ಪ್ರಚಾರದ ನಂತರ, ಈಗ ಚುನಾವಣಾ ಆಯೋಗ 7 ರಿಂದ ಬೆಳಿಗ್ಗೆ ವರೆಗೆ ಯಾವುದೇ ಪ್ರಚಾರ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ. ಈ ಸೂಚನೆ ಹೆಚ್ಚು ಪರಿಣಾಮವನ್ನು ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಹೆಚ್ಚಿನ ಪ್ರಚಾರವು ಹಗಲಿನಲ್ಲಿ ಮಾತ್ರ ನಡೆಯುವುದರಿಂದ.
2. ಹೆಚ್ಚಿನ ಜನಸಂದಣಿ ಸೇರುವ ಕುಂಭಮೇಳಕ್ಕೆ ಅವಕಾಶ ಕೊಟ್ಟಿದ್ದು ದೊಡ್ಡ ವೈಫಲ್ಯ
ಪ್ರಪಂಚದಾದ್ಯಂತ ಸಾಮಾಜಿಕ ಅಂತರ ಕಾಪಾಡಿ ಎಂಬ ಸಂದೇಶವನ್ನು ನೀಡಲಾಗುತ್ತಿದ್ದರೆ, ಹರಿದ್ವಾರ ಕುಂಭದಲ್ಲಿ ಲಕ್ಷಾಂತರ ಜನಸಂದಣಿ ಸೇರುತ್ತಿದ್ದಾರೆ. ಇಲ್ಲಿ ಭಕ್ತರನ್ನು ಮಾಸ್ಕ್ ಇಲ್ಲದೆ ನೋಡಬಹುದು. ಯಾವುದೆ ಮುನ್ನೆಚ್ಚರಿಕೆಗಳಿಲ್ಲದೆ ನಿರಾಳವಾಗಿ ಓಡಾಡುತ್ತಿರುವುದನ್ನು ನೋಡಬಹುದು. ಸ್ವತಃ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗರೇ ಮಾಸ್ಕ್ ಇಲ್ಲದೆ ಜಾತ್ರೆಯಲ್ಲಿ ಪಾಲ್ಗೊಂಡಿದನ್ನು ನೋಡಿರುವಾಗ ಇನ್ನೂ ‘ಭಕ್ತರಿಗೆ ಹೇಗೆ ಕರೋನಾ ನಿಯಮಾವಳಿಯಿಂದ ನಿರ್ಬಂಧಿಸುವುದು? ದೇವರ ಮೇಲಿನ ನಂಬಿಕೆ ಕರೋನವನ್ನು ಓಡಿಸುತ್ತದೆ ಅಥವಾ ಸೋಲಿಸುತ್ತದೆ ಎಂಬ ನಿಮ್ಮ ಮಾತನ್ನು ನಂಬುತ್ತೇವೆ. ‘ಆದರೆ ಈಗ ಸರಿ ಸುಮಾರು 600 ಸಾಧುಗಳ ಕರೋನಾ ವರದಿ ಪಾಸಿಟಿವ್ ಬಂದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 2,220 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 9 ರೋಗಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ಏನು ಹೇಳೊಣ..?
• ಕುಂಭಮೇಳಕ್ಕೆ 25 ವಿಶೇಷ ರೈಲುಗಳನ್ನು ಸ್ವತಃ ಸರ್ಕಾರವೇ ವ್ಯವಸ್ಥೆ ಮಾಡಿದೆ.
• ಏಪ್ರಿಲ್ 12 ರಂದು ಹರಿದ್ವಾರದ ಕುಂಭ ಸ್ನಾನದಲ್ಲಿ 35 ಲಕ್ಷ ಜನರು ಮತ್ತು ಏಪ್ರಿಲ್ 14 ರಂದು 13 ಲಕ್ಷ ಜನರು ಭಾಗವಹಿಸಿದ್ದರು.
• ಮುಂದಿನ ಕುಂಭ ಸ್ನಾನ ಏಪ್ರಿಲ್ 27 ರಂದು ನಡೆಯಲಿದ್ದು, ಕುಂಭಮೇಳ ಅಧಿಕೃತವಾಗಿ ಏಪ್ರಿಲ್ 30 ರಂದು ಕೊನೆಗೊಳ್ಳಲಿದೆ.
ಕುಂಭವನ್ನು ಸಾಂಕೇತಿಕವಾಗಿರಿಸಬೇಕೆಂದು ಪಿಎಂ ಮೋದಿ ಈಗ ಮನವಿ ಮಾಡಿತ್ತಿದ್ದಾರೆ. ಆದಾಗ್ಯೂ, ಈ ಮನವಿಯು ತುಂಬಾ ವಿಳಂಬವಾಗಿದಂತು ಸತ್ಯ. ಏಪ್ರಿಲ್ 12, 13 ಮತ್ತು 14 ರಂದು ಒಟ್ಟು 50 ಲಕ್ಷ ಜನರು ಕುಂಭ ಸ್ನಾನದಲ್ಲಿ ಪಾಲ್ಗೊಂಡಿದ್ದಾರೆ ಮತ್ತು ದೇಶಾದ್ಯಂತ ಕರೋನಾ ಹರಡಲು ಇದು ಬಹುಮುಖ್ಯ ಪಾತ್ರವಹಿಸಿದೆ ಎಂದರೆ ತಪ್ಪಾಗಲಾರದು.
3. ಅಗತ್ಯವಿರುವವರಿಗೆ ಸಂಜೆ ರೈಲು ಸಿಗಲಿಲ್ಲ, ಸರ್ಕಾರದ ವಿಫಲತೆ.
ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ, ದೇಶಾದ್ಯಂತದ ವಲಸೆ ಕಾರ್ಮಿಕರು ಸುಡುವ ಬಿಸಿಲಿನಲ್ಲಿ ತಮ್ಮ ಮನೆಗಳಿಗೆ ತೆರಳುವಾಗ ಸರ್ಕಾರವು ಸಮಯಕ್ಕೆ ಸರಿಯಾಗಿ ರೈಲುಗಳನ್ನು ವ್ಯವಸ್ಥೆಗೊಳಿಸಲಿಲ್ಲ, ಅದರ ನಂತರವೂ ಸಹ ವಾಹನಗಳು ಸಾಮಾನ್ಯ ಜನರಿಗೆ ತಿಂಗಳುಗಳ ಕಾಲ ಸಿಕ್ಕಲೆ ಇಲ್ಲ ಬಿಡಿ. ಆದರೆ ಯಾವಾಗ ಸರ್ಕಾರ ಬುಕಿಂಗ್ ಮಾಡಿಕೊಂಡು ನೀವು ತೆರಳಬಹುದು ಎಂದು ತಿಳಿಸಿತ್ತೊ ಕೆಲವು ರೈಲುಗಳು ಕಿಕ್ಕಿರಿದವು. ಇನ್ನೂ ಕೆಲವರಿಗೆ ಬುಕಿಂಗ್ ಹೇಗೆ ಮಾಡುವುದು ಎಂದು ತಿಳಿಯದೆ ರೈಲ್ವೆ ನಿಲ್ದಾಣದಲ್ಲೆ ಕುಳಿತಿದನ್ನು ಕಂಡಿದ್ದೇವೆ. ಇದೆಲ್ಲವೂ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಆದ ದೊಡ್ಡ ತಪ್ಪು ಎನ್ನಬಹುದು.
4. ವೈದ್ಯಕೀಯ ವ್ಯವಸ್ಥೆಗಳಲ್ಲಿ ಯಾವುದೇ ದೊಡ್ಡ ಸುಧಾರಣೆ ಕಾಣದೆ ಇರುವುದು ದೊಡ್ಡ ವೈಫಲ್ಯ
ದೇಶದಲ್ಲಿ ಮೊದಲು ಕರೋನಾ ಪ್ರಕರಣ ಪತ್ತೆಯಾಗಿ ಇಲ್ಲಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಈ ಒಂದು ವರ್ಷದಲ್ಲಿ ಕರೋನವನ್ನು ಗುಣಪಡಿಸಲು ಸಾಕಷ್ಟು ಕೆಲಸಗಳು, ಪ್ರಯೋಗಗಳು ನಡೆದಿವೆ ಆದರು ಎರಡನೇ ಅಲೆಯನ್ನು ನಾವು ಸಂಬಾಳಿಸಲಾಗುತ್ತಿಲ್ಲ ಅಂದರೆ ಏನು ಅರ್ಥ.? ಆದರೆ ಇತರ ದೇಶಗಳಲ್ಲಿ ಕರೋನಾದ ವಿವಿಧ ಅಲೆಗಳನ್ನು ನೋಡಿದ ನಂತರವೂ ಕೂಡ ಸ್ಮಾರ್ಟ್ ವ್ಯವಸ್ಥೆ ಜಾರಿಯಲ್ಲಿರಬೇಕು ಎಂಬ ಆದೇಶಿವಿದೆ. ಈತರದ ವ್ಯವಸ್ಥೆಗೆ ನಾವು ಇನ್ನೂ ದೂರದಲ್ಲಿದ್ದೇವೆ ಎನ್ನಿಸುತ್ತಿದೆ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳಿದ ದೇಶಗಳಿಂದ ಕೆಲ ಪಾಠಗಳನ್ನು (ಅನುಸರಿಸಬೇಕಾದ ಕ್ರಮವನ್ನು) ತೆಗೆದುಕೊಳ್ಳದೆ ಇಂತಹ ತಪ್ಪನ್ನು ಮಾಡಿವೆ.
ಈ ಕಾರಣದಿಂದಾಗಿ ನಾವು ಕರೋನಾ ಯುದ್ಧದಲ್ಲಿ ಹಿಂದುಳಿದಿದ್ದೇವೆ. ಇನ್ನೂ ನಮ್ಮಲ್ಲಿ ಔಷಧಿಗಳ ಕೊರತೆ ಹೋಗಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ, ವೆಂಟಿಲೇಟರ್ಗಳ ಕೊರತೆ, ಐಸಿಯು ಹಾಸಿಗೆಗಳು ಹಾಗೂ ಸಾಮಾನ್ಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ಗಳು, ಆಂಬ್ಯುಲೆನ್ಸ್ಗಳು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳ ಕೊರತೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಭಾಯಿಸಿಲ್ಲ. ಈಗ ಕರೋನಾ ಅಂಕಿಅಂಶಗಳು ಮತ್ತು ಅನೇಕ ವರದಿಗಳು ನಿಮ್ಮ ಮುಂದೆ ಇದೆ, ದೇಶದ ಅನೇಕ ರಾಜ್ಯಗಳಲ್ಲಿ, ಮೂಲಭೂತ ಅಗತ್ಯಗಳಿಗಾಗಿ ಇನ್ನೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಸ್ಪತ್ರೆಗಳು, ವೈದ್ಯರು, ದಾದಿಯರು ಮತ್ತು ತಂತ್ರಜ್ಞರ ಸಂಖ್ಯೆ ಕಡಿಮೆಯೇ ಇದೆ.
ಈ ಸಂದರ್ಭದಲ್ಲಿ, ಕ್ವಿಂಟ್ ಹಿಂದಿ ಮಾಧ್ಯಮ ಮುಂಬೈನ ಆಂತರಿಕ ಔಷಧ ತಜ್ಞ ಡಾ.ಸ್ವಪ್ನಿಲ್ ಪರಿಖ್ ಮತ್ತು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುಮಿತ್ ರೇ ಅವರೊಂದಿಗೆ ಮಾತನಾಡಿದ್ದು. ಡಾ. ಸ್ವಾಪ್ನಿಲ್ ಅವರು ಮಾತನಾಡಿ, ಹಾಸಿಗೆಗಳು ಕೊರತೆ ಇತ್ಯಾದಿಗಳ ಸಮಸ್ಯೆಗಳಿಗಿಂತ ನಿಜವಾದ ಸಮಸ್ಯೆಯೆಂದರೆ ಕರೋನಾ ವೇಗವಾಗಿ ಬೆಳೆಯುತ್ತಿರುವುದು. ವೇಗವಾಗಿ ಬೆಳೆಯುತ್ತಿರುವ ಕರೋನಾ ವೈರಸ್ ಅನ್ನು ನಾವು ನಿವಾರಿಸುವವರೆಗೆ, ಕೊರತೆಯ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ನಾವು ಈಗಾಗಲೇ ಹಾಸಿಗೆಗಳು, ಪಿಪಿಇ ಇತ್ಯಾದಿಗಳ ಪೂರೈಕೆಯನ್ನು ಹೆಚ್ಚಿಸಿದ್ದೇವೆ. ಆದರೆ ಇದು ಒಂದು ಮಿತಿಯನ್ನು ಸಹ ಹೊಂದಿದೆ ಮತ್ತು ವ್ಯವಸ್ಥೆಯ ಮೇಲಿನ ಹೊರೆ ಗಣನೀಯವಾಗಿ ಹೆಚ್ಚಾಗಿದೆ. ವೈದ್ಯಕೀಯ ವೃತ್ತಿಪರರು ತಮಗೆ ಸಾಧ್ಯವಾದದ್ದನ್ನು ಮಾಡುತ್ತಿದ್ದಾರೆ, ನಾವು ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
2020 ಒಂದು ಆರಂಭವಾಗಿತ್ತು,ಇದು ನಮಗೆ ಎಚ್ಚರಿಕೆಯ ಗಂಟೆಯಾಗಿತ್ತು. ಆದರೆ ಈಗ ಬರುತ್ತಿರುವುದು ಇನ್ನೂ ಕೆಟ್ಟದಾಗಿದೆ. ಸಾಂಕ್ರಾಮಿಕ ರೋಗ ಮುಗಿದಿದೆ ಎಂದು ಎಲ್ಲರೂ ಭಾವಿಸಿದರು. ಇದು ತಪ್ಪು ಕಲ್ಪನೆ ಮತ್ತು ಅನೇಕ ಸಾರ್ವಜನಿಕ ಆರೋಗ್ಯ ತಜ್ಞರಿಂದ ಎಚ್ಚರಿಕೆ ನೀಡಲಾಯಿತು, ಆದರೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ. ಆರೋಗ್ಯ ತಜ್ಞರ ನಿರ್ಲಕ್ಷ್ಯ ಮತ್ತು ನಾಯಕತ್ವ ವೈಫಲ್ಯ ಇಲ್ಲಿ ಎದ್ದು ಕಾಣುತ್ತದೆ ಎಂದು ತಿಳಿಸಿದ್ದಾರೆ.
ಅದೇ ಸಮಯದಲ್ಲಿ, ಡಾ. ಸುಮಿತ್ ರೇ “2020 ರ ಲಾಕ್ಡೌನ್ ಸಮಯದಲ್ಲಿ ಕರೋನಾ ಪ್ರಕರಣಗಳು ಕಡಿಮೆಯಾಗುತ್ತ ಬಂದಿತ್ತು ಆಗ ನಾವು ಸಾಮರ್ಥ್ಯವನ್ನು ಹೆಚ್ಚಿಸಬಹುದಿತ್ತು” ಎಂದು ಹೇಳುತ್ತಾರೆ. ಈಗ ಜನರ ಸಾಮೂಹಿಕ ಆಂದೋಲನ ಮತ್ತು ಸಾಮೂಹಿಕ ಕೂಟಗಳು, ವಿವಾಹಗಳು, ಕುಂಭಮೇಳ ಇತ್ಯಾದಿಗಳನ್ನು ನೋಡಿದರೆ ಆಸ್ಪತ್ರೆಗಳನ್ನು ತಕ್ಷಣವೇ COVID ಆಸ್ಪತ್ರೆಗಳಾಗಿ ಪರಿವರ್ತಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ. ”
5. ವ್ಯಾಕ್ಸಿನೇಷನ್ ನಿರೀಕ್ಷೆ ಮತ್ತು ವಿಫಲ
ಕರೋನಾ ತನ್ನ ಎರಡನೇ ಅಲೆಯು ವೇಗವಾಗಿ ಹರಡುತ್ತಿದೆ ಎಂದು ವಿಶ್ವದ ಇತರ ದೇಶಗಳಿಂದ ನೋಡಿದ ಮೇಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಈ ಎರಡನೇ ಅಲೆ ಬಹುತೇಕ ಎಲ್ಲಾ ದೇಶಗಳಲ್ಲಿ ಮೊದಲ ಅಲೆಗಿಂತ ಹೆಚ್ಚು ಮಾರಕವಾಗಿರುವುದನ್ನು ಕಾಣಬಹುದು. ಆದರೆ ಕರೋನಾದ ಎರಡನೇ ಅಲೆ ನಿಯಂತ್ರಿಸಲು ನಮ್ಮ ದೇಶದ ಸರ್ಕಾರ ಯಾವುದೇ ದೃಢವಾದ ವ್ಯವಸ್ಥೆಯನ್ನು ಹೊಂದಿಲ್ಲದೆ ಇರುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ನಮ್ಮಲ್ಲಿ ವ್ಯಾಕ್ಸಿನೇಷನ್ಗೂ ಸಹ ಒತ್ತು ನೀಡಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ, ಆದರೆ ಈ ಸರ್ಕಾರ ತುರ್ತು ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.
ಮುಂಬೈನ ಜಸ್ಲೋಕ್ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ನಿರ್ದೇಶಕ ಡಾ.ರಾಜೇಶ್ ಪರೇಖ್ ಅವರು, ಪೋಲಿಯೊ ಮತ್ತು ಸ್ಮಾಲ್ ಪೋಕ್ಸ್ ನಿವಾರಿಸಲು ಭಾರತವು ಮನೆ ಮನೆಗೆ ತೆರಳಿ ಲಸಿಕೆಗಳನ್ನು ವಿತರಿಸಿದೆ. ಕರೋನಾ ಲಸಿಕೆ ವೇಗಗೊಳಿಸಲು ರಾಜ್ಯ ಸರ್ಕಾರ ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಶೀಘ್ರದಲ್ಲೇ ಇದನ್ನು ಪ್ರಚಾರಕ್ಕೆ ತಂದು ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರ ಎರಡೂ ಇತರ ದೇಶಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
• ಡಾ. ರಾಜೇಶ್ ಪರೇಖ್ ಅವರು ‘ದಿ ಕರೋನಾ ವೈರಸ್ ಬುಕ್’ ಮತ್ತು ‘ದಿ ವ್ಯಾಕ್ಸಿನ್ ಬುಕ್’ ಎಂಬ ಸಾಂಕ್ರಾಮಿಕ ರೋಗದ ಬಗ್ಗೆ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಮೊದಲ ಪುಸ್ತಕದಲ್ಲಿ ಕರೋನಾದ ಎರಡನೆಯ ಮತ್ತು ಮೂರನೆಯ ಅಲೆಗಳ ಬಗ್ಗೆ ಬರೆದಿದ್ದಾರೆ ಮತ್ತು ನಾವು ಅದಕ್ಕೆ ಸಿದ್ಧರಾಗಿರಬೇಕು ಎಂದು ಸಹ ತಿಳಿಸಿದ್ದಾರೆ.
ಲಸಿಕೆ ಕೊರತೆ ಭಾರತವು ರಫ್ತುದಾರರಿಂದ ಆಮದುದಾರನಾಗಿದೆ
ವ್ಯಾಕ್ಸಿನೇಷನ್ ತಯಾರಿಕೆಯಲ್ಲಿ ವೇಗವಾಗಿರುವ ಅಮೆರಿಕ ಮತ್ತು ಬ್ರಿಟನ್ನಂತಹ ದೇಶಗಳಲ್ಲಿ. ಹೆಚ್ಚು ಜನಸಂಖ್ಯೆ ಇರುವ ಭಾಗಕ್ಕೆ ಹೆಚ್ಚಿನ ಲಸಿಕೆ ಹಾಕಲಾಗಿದೆ. ಕೆಲವು ವಾರಗಳಿಂದ ಇತರ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡಿದ ನಮ್ಮ ದೇಶ ಈಗ ಲಸಿಕೆ ಆಮದು ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿದೆ. TOI ಯ ವರದಿ ಪ್ರಕಾರ, ಜನವರಿ ಅಂತ್ಯ ಮತ್ತು ಮಾರ್ಚ್ ನಡುವೆ, ಭಾರತವು ಇತರ ದೇಶಗಳಿಗೆ 64 ಮಿಲಿಯನ್ ವ್ಯಾಕ್ಸಿನೇಷನ್ ಕಳುಹಿಸಿದೆ. ಆದರೆ ಈಗ ನಮ್ಮ ದೇಶದಲ್ಲೇ ಕರೋನಾ ವ್ಯಾಪಕವಾಗಿ ಹರಡುತ್ತಿದ್ದು ಲಕ್ಷಾಂತರ ಲಸಿಕೆ ಅವಶ್ಯಕತೆ ಇದೆ. ಮಿಲಿಯನ್ ಗಟ್ಟಲೆ ಲಸಿಕೆ ರಪ್ತು ಮಾಡಿದ ನಮಗೆ ಈಗ ಲಸಿಕೆ ಕೊರತೆಯಿದೆ. ಕರೋನಾ ಹರಡುತ್ತಿರುವ ಮುನ್ಸೂಚನೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಈಗ ಜನರು ಪಡಬಾರದ ಪಾಡು ಪಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಕಾರ್ಯತಂತ್ರದ ವಿಫಲವಾಗಿದೆ ಎನ್ನಬಹುದು.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಉತ್ಪಾದನೆಯನ್ನು ಹೆಚ್ಚಿಸಲು ಕೇವಲ 3 ಸಾವಿರ ಕೋಟಿಗಳನ್ನು ಬಯಸುತ್ತಿದೆ, ಆದರೆ ಅದರ ಮೇಲೆ ಯಾವುದೇ ಕ್ರಮಗಳಿಲ್ಲ. ಈಗ ನಾವು ಅನೇಕ ವಿದೇಶಿ ಲಸಿಕೆಗಳನ್ನು ಅನುಮೋದಿಸುವ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಈ ಕೆಲಸವನ್ನು ಮೊದಲೇ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
6. ವಿರೋಧ ಪಕ್ಷದವರ ಸಲಹೆ ಸ್ವೀಕರಿಸದೇ ಇರುವುದು ಸರ್ಕಾರದ ಮತ್ತೊಂದು ದೊಡ್ಡ ವೈಫಲ್ಯ
ಇಡೀ ಸಾಂಕ್ರಾಮಿಕ ಅವಧಿಯಲ್ಲಿ, ಪರಿಸ್ಥಿತಿ ದುರ್ಬಲವಾಗಿದ್ದಾಗ, ಅದು ಕ್ರಮ ತೆಗೆದುಕೊಳ್ಳುತ್ತದೆ ಎಂಬ ಸರ್ಕಾರದ ಮನೋಭಾವವನ್ನು ನೀವು ನೋಡಬಹುದು. ಮೊದಲ ಹೆಜ್ಜೆ ಇಡುವುದಿಲ್ಲ. ಕರೋನಾ ತನ್ನ ದಾರಿಯಲ್ಲಿ ಹೋದಾಗ, ಸರ್ಕಾರವು ಪ್ರತಿಕ್ರಿಯಿಸುತ್ತದೆ, ಅದನ್ನು ಮೊದಲೇ ತಡೆಹಿಡಿಯುವುದಿಲ್ಲ. ನಾವು ಬಹುಶಃ ಕಳೆದ ವರ್ಷ ಲಾಕ್ಡೌನ್ ಅನ್ನು ವಿಳಂಬಗೊಳಿಸಿದ್ದೇವೆ. ಲಾಕ್ಡೌನ್ ಹೇರಿಕೆ ಬಹುಶಃ ಪೂರ್ಣ ಸಿದ್ಧತೆಯೊಂದಿಗಿರಲಿಲ್ಲ, ಲಕ್ಷಾಂತರ ಜನರು ತೊಂದರೆಯಲ್ಲಿದ್ದರು. ಕರೋನಾ ಮೊದಲನೇ ಅಲೆ ಇದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ಎಚ್ಚರಿಸಿದ್ದರು ಆಗಲು ಅವರ ಮಾತನ್ನು ಕೇಂದ್ರದ ಅನೇಕ ಸಚಿವರು ಟೀಕಿಸಿದ್ದರು.
ಕಾಲಕ್ರಮೇಣ ಇಡೀ ದೇಶದಲ್ಲೆ ಕರೋನಾ ವ್ಯಾಪಿಸಿತು ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವಂತೆ ಕರೋನಾ ತಡೆಯುವ ದಾರಿಯನ್ನಿಡಿದರು. ಬಹುಶಃ ಕೇಂದ್ರ ಸರ್ಕಾರ ಕಳೆದ ವರ್ಷ ಲಾಕ್ಡೌನ್ ಅನ್ನು ತುಂಬಾ ವಿಳಂಬಗೊಳಿಸಿದೆ. ಪೂರ್ಣ ಸಿದ್ದತೆ ಇಲ್ಲದೆ ಲಾಕ್ಡೌನ್ ಹೇರಿ ಲಕ್ಷಾಂತರ ಜನರನ್ನು ತೊಂದರೆಗೆ ಸಿಲುಕಿಸಿದನ್ನು ಕಾಣಬಹುದು. ಮಾರ್ಚ್ 24 ರಂದು ಪ್ರಧಾನಿ ಮೋದಿ ಲಾಕ್ ಡೌನ್ ಘೋಷಿಸಿದರು. ಆದರೆ ಮಾರ್ಚ್ 13 ರಂದು ಅಂದರೆ ಕೇವಲ 9 ದಿನಗಳ ಹಿಂದೆಯಷ್ಟೇ ದೇಶವು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇಲ್ಲ ಎಂದು ಖುದ್ದು ಕೇಂದ್ರ ಆರೋಗ್ಯ ಸಚಿವಾಲಯವೇ ಹೇಳಿತ್ತು. ನಾವಿಲ್ಲಿ ಸರ್ಕಾರದ ಎರಡು ರೀತಿಯ ನಿಲುವನ್ನು ಕಾಣಬಹುದು.
ಇತ್ತೀಚಿಗೆ ಕರೊನ ಎರಡನೇ ಅಲೆ ಹೆಚ್ಚುತ್ತಿದ್ದಂತೆ ಲಸಿಕೆಗಳ ಕೊರತೆ ಉಂಟಾಗಿದೆ ಈಗ ವಿದೇಶಿ ಲಸಿಕೆಗಳಿಗೆ ತ್ವರಿತ ಅನುಮೋದನೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಈ ಅನುಮೋದನೆ ನೀಡುವ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಈ ಬೇಡಿಕೆ ಸಲ್ಲಿಸಿದನ್ನು ನಾವಿಲ್ಲಿ ಸ್ಮರಿಸಬಹುದು. ರಾಹುಲ್ ಗಾಂಧಿಯ ಈ ಬೇಡಿಕೆಯನ್ನು ಸಹ ಅನೇಕ ಕೇಂದ್ರ ಸಚಿವರು ಟೀಕಿಸಿದ್ದರು ಆದರೆ ಈಗ ಅವರು ಕೊಟ್ಟ ಸಲಹೆಯನ್ನೇ ಸ್ವೀಕರಿಸಿರುವುದು ಕಾಣಬಹುದು. ಲಸಿಕೆ ಅಲ್ಲದೆ ಆರ್ಟಿಪಿಸಿಆರ್ ಟೆಸ್ಟ್ ಕಿಟ್, ಪಿಪಿಇ ಕಿಟ್ ಗಳ ಭಾರಿ ಕೊರತೆ ಕೂಡ ಇದ್ದು ಈಗಷ್ಟೆ ಇದೆಲ್ಲವನ್ನೂ ಪರಿಹರಿಸಲು ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಆದರೆ ಈಗ ಉದ್ಭವಿಸಿರುವ ಕೊರತೆಯಿಂದಾಗಿ ಲಕ್ಷಾಂತರ ಜನರು ಸೋಂಕಿಗೆ ಒಳಗಾಗುತ್ತಾರೆ, ಸಾವಿರಾರು ಜನರು ಸಾಯುತ್ತಾರೆ ಎಂಬುದು ಅಷ್ಟೇ ಸತ್ಯ.
7. ಸಾರ್ವಜನಿಕರ ನಿರ್ಲಕ್ಷ್ಯ
ಕರೋನಾ ತಡೆಗಟ್ಟಲು ಮಾಸ್ಕ್, ಸಾಮಾಜಿಕ ಅಂತರ, ಕೈ ತೊಳೆಯುವುದು ಮತ್ತು ಜನಸಂದಣಿಯನ್ನು ತಪ್ಪಿಸುವುದು ಅತ್ಯಂತ ಮುಖ್ಯ ಎಂದು ದೇಶದ ಅನೇಕ ತಜ್ಞರು ಮತ್ತು ವೈದ್ಯರು ಹೇಳುತ್ತಿದ್ದರು ಸಹ ನಮ್ಮ ಜನರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಇದರ ಪರಿಣಾಮ ನಮ್ಮ ಕಣ್ಣಮುಂದಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ, ಸೋಂಕಿತರ ಹೆಚ್ಚಳದೊಂದಿಗೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. ನಾವು ಮತ್ತು ನಮ್ಮ ಸರ್ಕಾರಗಳು ಇನ್ನೂ ಎಚ್ಚರಗೊಳ್ಳದಿದ್ದರೆ ಮುಂದೆ ಬರುವ ಫಲಿತಾಂಶ ತುಂಬಾ ಭಯಾನಕವಾಗಬಹುದು.
ಮುಖಂಡರು ಮಾಸ್ಕ್ ಇಲ್ಲದೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದನ್ನು ನೋಡಿದ್ದೇವೆ. ಮುಖಂಡರು ತೋರುವ ನಿರ್ಲಕ್ಷ್ಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತದೆ ಅಥವಾ ಅವರ ಮನೋಭಾವ ಸಡಿಲಗೊಳ್ಳುತ್ತದೆ ಎಂದು ಡಾ. ಸ್ವಪ್ನಿಲ್ ಪರಿಖ್ ಹೇಳುತ್ತಾರೆ. ಸಾರ್ವಜನಿಕವಾಗಿ ಮುಖಂಡರು ಹೊರ ಬರುವಾಗ ಕಟ್ಟುನಿಟ್ಟಾಗಿ ಕರೋನಾ ಪ್ರೊಟೊಕಾಲ್ ಪಾಲಿಸಬೇಕು ಆಗ ಅವರನ್ನು ನೋಡಿ ಸಾರ್ವಜನಿಕರು ಅನುಸರಿಸುತ್ತಾರೆ ಎಂಬುದು ಡಾಕ್ಟರ್ ಸ್ವಪ್ನಾಲ್ ಅವರ ಮಾತಿನ ತಿರುಳು.
ಕರೋನಾ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ನಾವೆಲ್ಲರೂ ಇಂತಹ ಸಮಯದಲ್ಲಿ ಧೈರ್ಯದಿಂದ ಇರುವುದು ತುಂಬಾ ಮುಖ್ಯ. ಧೈರ್ಯದ ಜೊತೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಕೈ ಶುದ್ದವಾಗಿ ತೊಳೆದುಕೊಳ್ಳುವ ಮೂಲಕ ಕರೋನಾ ಪ್ರೊಟೊಕಾಲ್ ಪಾಲನೆ ಮಾಡಬೇಕಾದ ಸಂದರ್ಭ ಮತ್ತೆ ಎದುರಾಗಿದೆ.