ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದೆ. ಇದುವರೆಗೂ 400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ವಶಕ್ಕೆ ಪಡೆದಿರುವ ತಾಲಿಬಾನ್ ಅಪ್ಘಾನಿಸ್ತಾನದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಮುಂದಾಗಿದೆ. ರಾಜಧಾನಿ ಕಾಬೂಲ್ನಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರುವ ತಾಲಿಬಾನ್ ತನ್ನ ಹಿಡಿತವನ್ನು ಸಾಧಿಸುತ್ತಾ ಹೊರಟಿದೆ. ತನ್ನ ಹಿಡಿತವನ್ನು ಸಾಧಿಸುವ ಹಂತದಲ್ಲಿ ಶಾಂತಿ ಮಾತುಕತೆ ಸಮಿತಿ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರವನ್ನು ಸಂಪೂರ್ಣವಾಗಿ ಪತನಗೊಳಿಸುವ ನಿಟ್ಟಿನಲ್ಲಿ ತಾಲಿಬಾನ್ ಹೊಸ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ. ತಾಲಿಬಾನ್ ಹೊಸ ಯೋಜನೆ ಪ್ರಕಾರ ಅಧ್ಯಕ್ಷ ಅಶ್ರಫ್ ಘನಿ ಆಡಳಿತದಿಂದ ಕೆಳಗಿಳಿಯಬೇಕಾಗುತ್ತದೆ.
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಸೇನಾಧಿಕಾರಿಗಳು, ಪ್ರತಿನಿಧಿಗಳ ಜೊತೆಗೂಡಿ ಮಧ್ಯಂತರ ಸರ್ಕಾರ ರಚಿಸುವುದಕ್ಕೆ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಸೂತ್ರವನ್ನು ರೂಪಿಸಿರುವ ತಾಲಿಬಾನ್ ಎಲ್ಲ ಪಕ್ಷಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿದೆ. ಈ ಪ್ರಸ್ತಾವನೆ ಹೀಗಿರುವಾಗಲೇ ತಾಲಿಬಾನ್ ಅಥವಾ ಅಫ್ಘಾನ್ ಸರ್ಕಾರ ಯಾವುದೇ ಪಾಲುದಾರರೊಂದಿಗೆ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಮಧ್ಯಂತರ ಸರ್ಕಾರ ರಚಿಸಲೇಬೇಕು ಎಂದು ಹೊರಟ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಪಾರುಪತ್ಯ ಮುಂದುವರಿಸಿದ್ದಾರೆ. ಅಮೆರಿಕಾ ಸೇನೆ ವಾಪಸ್ಸಾದ ನಂತರ ತಾಲಿಬಾನ್ ಉಗ್ರರು ಬಹುತೇಕ ಅಫ್ಘಾನಿಸ್ತಾನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲಿಬಾನ್ ಸಂಘಟನೆ ಮೊದಲು ಅಫ್ಘಾನಿಸ್ತಾನದ ಎರಡು ಪ್ರಮುಖ ನಗರಗಳಾದ ಕಂದಹಾರ್ ಮತ್ತು ಲಷ್ಕರ್ ಗಾಹ್ ಅನ್ನು ವಶಪಡಿಸಿಕೊಂಡಿತ್ತು. ಹೀಗೆ ಬಳಿಕ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದ ತಾಲಿಬಾನ್ ಇದುವರೆಗೂ 400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ವಶಕ್ಕೆ ಪಡೆದಿದೆ. ಹಾಗಾಗಿ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ಪತನವಾಗೋದು ಪಕ್ಕಾ ಆಗಿದೆ.

ಒಂದೆಡೆ ಶಾಂತಿ ಮಾತುಕತೆಯೇ ಬೇಡ ಎಂದ ಅಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವೆ ಅಂತರ್ಯುದ್ಧವೇ ಏರ್ಪಟ್ಟಿದೆ. ಇದರಿಂದ ನಿತ್ಯವೂ ಅಮಾಯಕ ಪ್ರಜೆಗಳ ಸಾವು ನೋವಿನ ಬಗ್ಗೆ ಸಾವಿರಾರು ವರದಿಗಳಾಗುತ್ತಿವೆ. ಇಡೀ ಅಫ್ಘಾನಿಸ್ತಾನದ ವಶಕ್ಕೆ ಮುಂದಾಗಿರುವ ತಾಲಿಬಾನಿ ಉಗ್ರರು ಅಮಾಯಕರನ್ನು ಕೊಂದು ಹಾಕುತ್ತಿದ್ದಾರೆ. ಇನ್ನೊಂದೆಡೆ ಇದಕ್ಕೆ ಹೆದರಿ ಸರ್ಕಾರದ ಪತನದ ಭೀತಿಯಲ್ಲೇ ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಖಜಕಿಸ್ತಾನ್ಗೆ ಓಡಿ ಹೋಗಿದ್ದಾರೆ. ತಾಲಿಬಾನ್ಗೆ ಅಫ್ಘಾನ್ ಪಡೆಗಳು ದೇಶದ ಮೂರನೇ ಅತೀ ದೊಡ್ಡ ನಗರವಾದ ಹೆರಾತ್ ಅನ್ನು ಬಿಟ್ಟುಕೊಟ್ಟ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ತಾಲಿಬಾನ್ ತನ್ನ ದೇಶದ ಎರಡು ನಗರಗಳನ್ನು ವಶಪಡಿಸಿಕೊಂಡಿದೆ ಎಂದು ಖುದ್ದು ಅಫ್ಘಾನ್ ಪಡೆಗಳೇ ಸ್ಪಷ್ಟಪಡಿಸಿವೆ. ತಾಲಿಬಾನ್ ಹೆರಾತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ನಿಯಂತ್ರಣ ತೆಗೆದುಕೊಂಡು ಇಡೀ ಅಪ್ಘಾನಿಸ್ತಾನ ವಶಕ್ಕೆ ಮುಂದಾಗಿದೆ.
ಇನ್ನು, ಅಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವಿನ ಸಂಘರ್ಷದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದು, ಅಫ್ಘಾನಿಸ್ತಾನದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಜನರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಗಳು ನಡೆಯುತ್ತಿವೆ. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಬೇಕಿದೆ ಎಂದು ಎಷ್ಟೇ ಹೇಳಿದರೂ ಸಂಘರ್ಷ ಮಾತ್ರ ಮುಂದುವರಿದಿದೆ.
ಇನ್ನು, ಒಂದು ತಿಂಗಳಿನಿಂದ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಸಾವಿರಾರು ಮನೆಗಳು ಸರ್ವನಾಶವಾಗಿ ಹೋಗಿವೆ. ಹತ್ತಾರು ಸಾವಿರ ಮನೆಗಳು ಅರ್ಧ ಭಾಗ ಬಿದ್ದು ಹೋಗಿವೆ. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ. ಲೆಕ್ಕವಿಲ್ಲದಷ್ಟು ನಾಗರಿಕರು ಬಡಿದಾಟದಲ್ಲಿ ಜೀವ ಕಳೆದುಕೊಂಡರು.

ಈ ಹಿಂದೆಯೇ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ವಾಷಿಂಗ್ಟನ್ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಅಮೆರಿಕಾ ಸೇನೆಯೂ ಅಫ್ಘಾನ್ ನೆಲ ತೊರೆಯುತ್ತಿದ್ದಂತೆ ತಾಲಿಬಾನ್ ಅಟ್ಟಹಾಸ ಶುರುವಾಯ್ತು. ಅಫ್ಘಾನಿಸ್ತಾನದ ಮೇಲೆ ತನ್ನ ದಾಳಿಯನ್ನು ಆರಂಭಿಸಿದ ತಾಲಿಬಾನ್ ಈಗ ಮಧ್ಯಂತರ ಸರ್ಕಾರ ರಚನೆ ಮಾಡುವ ಹಂತಕ್ಕೆ ತಲುಪಿದೆ.