ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ರವರ ಅವಧಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ನಿರ್ದೇಶಕರ ನೇಮಕ ಮಾಡಲು ರಾಜ್ಯ ಸರ್ಕಾರ ಆದೇಶ ಹೊಡಿಸಿದ ಬೆನ್ನಲ್ಲೇ ಡಾ.ಮಂಜುನಾಥ್ರನ್ನೇ ಮುಂದುವರಿಸುವಂತೆ ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಸಿಎಂ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇತ್ತ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಮಂಜುನಾಥ್ ಅವರನ್ನೇ ಮುಂದುವರೆಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಕಾರ್ಯನಿರ್ವಾಹಿಸಿದ ಡಾ. ಮಂಜುನಾಥ್ ಅವರು ಇದೇ ಜುಲೈ 19 ರಂದು ನಿವೃತ್ತಿಯಾಗುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆಯಂತೆ. ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ, “ಶ್ರೀ ಜಯದೇವ ಹೃದ್ರೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಯಾದ ನಾವುಗಳು ಈ ಮೂಲಕ ಕೋರುವುದೇನೆಂದರೆ, ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ರವರ ಸೇವೆಯು ದಿನಾಂಕ: 19-07-2022ಕ್ಕೆ ಅಂತಿಮಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಅಪಾರವಾದ ನೋವನ್ನುಂಟುಮಾಡಿದೆ. ನಮ್ಮ ನಿರ್ದೇಶಕರ ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯುತ್ತಿರುವ ಸಂಸ್ಥೆಯ ಸಿಬ್ಬಂದಿ ಹಾಗೂ ಲಕ್ಷಾಂತರ ಬಡ ಹೃದ್ರೋಗಿಗಳಿಗೆ ಈ ವಿಷಯವು ಅತ್ಯಂತ ಖೇದ್ಯವುಂಟುಮಾಡಿದೆ.
ಆದ್ದರಿಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ ಯಾವುದೇ ಸಂಸ್ಥೆಯ ಮುಖ್ಯಸ್ಠರು 70 ವರ್ಷಗಳವರೆಗೆ ಸೇವೆಯನ್ನು ನಿರ್ವಹಿಸಬಹುದು. ಅದರಂತೆ ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ವರ್ಷಗಳವರೆಗೆ ಆಡಳಿತ ನಿರ್ವಹಿಸುವ ನಾಯಕತ್ವ ಗುಣವಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಅಧೋಗತಿಯಲ್ಲಿ ಮುಳುಗುತ್ತಿದ್ದ ಜಯದೇವ ಆಸ್ಪತ್ರೆಯನ್ನು ಕೈಹಿಡಿದೆತ್ತಿದ್ದಾರೆ ಎಂದು ಬರೆದಿದ್ದಾರೆ.
ಡಾ. ಮಂಜುನಾಥ್ ನಿರ್ದೆಶಕ ಹುದ್ದೆಯಲ್ಲಿ ಮುಂದೆವರಿಕೆಗೆ ಅಡ್ಡಿ :
ಡಾ.ಮಂಜುನಾಥ್ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರಿಕೆಗೆ ಕೆಲ ಸಚಿವರ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.
ನಿರ್ದೇಶಕ ಸೇವೆಯಲ್ಲಿ ಮಂಜುನಾಥ್ ಅವರನ್ನು ಮುಂದುವರೆಸದಿದ್ದರೆ ಜಯದೇವ ಒಪಿಡಿ ಬಂದ್!:
ಡಾ.ಮಂಜುನಾಥ್ರವರ ಸೇವೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದರೆ, ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಒಪಿಡಿಯನ್ನು ಬಂದ್ ಮಾಡುವ ಸಾಧ್ಯತೆ ಇದೆ.
ಡಾ. ಮಂಜುನಾಥ್ ಅವರ ಕಿರು ನೋಟ
ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಅವರ ವೈದ್ಯಕೀಯ ಸೇವೆಯಲ್ಲಿ 5,27,437 ಹೊರ ರೋಗಿಗಳನ್ನು ನೋಡಿದ್ದಾರೆ. 53,806 ರಲ್ಲಿ – 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ. 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ ಇದು ದೇಶದಲ್ಲೇ ಹೆಚ್ಚು. 15,000 ಆಂಜಿಯೋಪ್ಲ್ಯಾಸ್ಟಿಗಳು ಇದು ಕೂಡ ದೇಶದಲ್ಲಿಯೆ ಹೆಚ್ಚು. 3,00,054 ಎಕೋ – ಕಾರ್ಡಿಯೋಗ್ರಾಮ್ಗಳು. ಇದು ಜಗತ್ತಿನಲ್ಲಿ ಅತಿ ಹೆಚ್ಚು ಆಗಿದೆ. ಇವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.