ತಂಪು ಪಾನೀಯಗಳು, ಚಿಪ್ಸ್ ಮತ್ತು ಕುಕೀಗಳಂತಹ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಜನರು ಇಂತಹ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವವರಿಗಿಂತ ಬುದ್ಧಿಮಾಂದ್ಯರಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನವು ಹೇಳುತ್ತದೆ.
ವ್ಯಕ್ತಿಯೊಬ್ಬರ ಆಹಾರ ಕ್ರಮದಲ್ಲಿ ಸಂಸ್ಕರಿಸಿದ (ultra processed)ಆಹಾರಗಳಿಗಿಂತ ಸಂಸ್ಕರಿಸದ ಅಥವಾ ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇರಿಸುವುದು ಹೆಚ್ಚು ಆರೋಗ್ಯದಾಯಕ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಸ್ಕರಿಸಲ್ಪಟ್ಟ ಆಹಾರಗಳು ಬುದ್ಧಿಮಾಂದ್ಯತೆಯನ್ನು ಉಂಟುಮಾಡುತ್ತವೆ ಎಂದು ಅಧ್ಯಯನವು ಸಾಬೀತುಪಡಿಸುವುದಿಲ್ಲ. ಆದರೆ ಅಂತಹ ಒಂದು ಸಾಧ್ಯತೆಯನ್ನು ಇದು ತೋರಿಸುತ್ತದೆ.
ಅಲ್ಟ್ರಾ ಪ್ರೊಸೆಸ್‌ಡ್ ಆಹಾರಗಳಲ್ಲಿ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪು ಕಂಡುಬರುತ್ತವೆ ಮತ್ತು ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಮತ್ತು ಫೈಬರ್ ಕಡಿಮೆ ಇರುತ್ತದೆ. ತಂಪು ಪಾನೀಯಗಳು, ಉಪ್ಪು ಮತ್ತು ಸಕ್ಕರೆ ತಿಂಡಿಗಳು, ಐಸ್ ಕ್ರೀಮ್, ಸಾಸ್‌ಗಳು, ಡೀಪ್-ಫ್ರೈಡ್ ಚಿಕನ್, ಯೋಗರ್ಟ್, ಕೆಚಪ್, ಮಯನೈಸ್, ಪ್ಯಾಕ್ ಮಾಡಿದ ಬ್ರೆಡ್‌ಗಳು ಮತ್ತು ಫ್ಲೇವರ್‌ಡ್ ಧಾನ್ಯಗಳನ್ನು ಹೆಚ್ಚಾಗಿ ಸಂಸ್ಕರಿಸಲಾಗುತ್ತದೆ.
ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ಆಗಿರುವ Neurology®ಯ ಆನ್‌ಲೈನ್ ಸಂಚಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು ಈ ರೀತಿ ಸಂಸ್ಕರಿಸಿದ ಆಹಾರಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಅಲ್ಲದೆ ಆರೋಗ್ಯಕರ ಆಯ್ಕೆಗಳೊಂದಿಗೆ ಅವುಗಳನ್ನು ಬದಲಿಸುವುದರಿಂದ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಲೂಬಜುದು ಎಂದು ಅಧ್ಯಯನ ಹೇಳುತ್ತದೆ.
“ಅಲ್ಟ್ರಾ-ಪ್ರೊಸೆಸ್ಸ್‌ಡ್ ಆಹಾರಗಳು ಅನುಕೂಲಕರ ಮತ್ತು ರುಚಿಕರವಾಗಿರುತ್ತವೆ, ಆದರೆ ಅವು ವ್ಯಕ್ತಿಯ ಆಹಾರದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ” ಎಂದು ಚೀನಾದ ಟಿಯಾಂಜಿನ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಯೂ ಆಗಿರುವ ಈ ಅಧ್ಯಯನ ಲೇಖಕರಾಗಿರುವ ಹುಪಿಂಗ್ ಲಿ ಹೇಳಿದ್ದಾರೆ. “ಈ ಆಹಾರಗಳು ಫುಡ್ ಅಡಿಟಿವ್‌ಗಳನ್ನು ಹೊಂದಿರಬಹುದು ಅಥವಾ ಪ್ಯಾಕೇಜಿಂಗ್ ಮಾಲಿಕ್ಯೂಲ್‌ಗಳನ್ನು ಒಳಗೊಂಡಿರಬಹುದು ಅಥವಾ ಅತಿ ಹೆಚ್ಚಿನ ತಾಪದಲ್ಲಿ ಸಂಸ್ಕರಣೆಗೊಂಡಿರಬಹುದು, ಇವೆಲ್ಲವೂ ಚಿಂತನೆ ಮತ್ತು ಸ್ಮರಣೆಯ ಕೌಶಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ಇತರ ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಧ್ಯಯನಕ್ಕಾಗಿ, ಸಂಶೋಧಕರು UK ಬಯೋಬ್ಯಾಂಕ್‌ನಿಂದ 72,083 ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಭಾಗವಹಿಸಿದವರು 55 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಅಧ್ಯಯನದ ಪ್ರಾರಂಭದಲ್ಲಿ ಯಾವುದೇ ಬುದ್ಧಿಮಾಂದ್ಯತೆಯನ್ನು ಹೊಂದಿದವರಾಗಿರಲಿಲ್ಲ. ಅವರನ್ನು ಸರಾಸರಿ 10 ವರ್ಷಗಳ ಕಾಲ ಪರೀಕ್ಷಿಸಲಾಗಿದೆ. ಈ ಅಧ್ಯಯನದ ಅಂತ್ಯದ ವೇಳೆಗೆ, 518 ಜನರು ಬುದ್ಧಿಮಾಂದ್ಯತೆಗೆ ಒಳಗಾಗಿದ್ದಾರೆ.
ಅಧ್ಯಯನದ ಸಮಯದಲ್ಲಿ, ಅದರಲ್ಲಿ ಭಾಗವಹಿಸುವವರು ಹಿಂದಿನ ದಿನ ಏನನ್ನು ತಿನ್ನುತ್ತಿದ್ದರು ಮತ್ತು ಕುಡಿಯುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿತ್ತು. ನಂತರ ಸಂಶೋಧಕರು ಈ ಸಂಶೋಧನೆಯಲ್ಲಿ ಭಾಗಿಯಾದವರನ್ನು ಕಡಿಮೆ ಪ್ರಮಾಣದಲ್ಲಿ ಸಂಸ್ಕರಿತ ಆಹಾರಗಳನ್ನು ಸೇವಿಸುವುದರಿಂದ ಅತ್ಯಧಿಕ ಪ್ರಮಾಣದಲ್ಲಿ ಸೇವಿಸುವ ಆಧಾರದ ಮೇಲೆ ನಾಲ್ಕು ಸಮಾನ ಗುಂಪುಗಳಾಗಿ ವಿಂಗಡಿಸಿದ್ದಾರೆ.
ಸರಾಸರಿಯಾಗಿ, ಕಡಿಮೆ ಗುಂಪಿನ ಜನರ ದೈನಂದಿನ ಆಹಾರದಲ್ಲಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಪಾಲು 9% ಅಥವಾ ದಿನಕ್ಕೆ ಸರಾಸರಿ 225 ಗ್ರಾಂ ರಷ್ಟಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಗುಂಪಿನಲ್ಲಿರುವ ಜನರ ಆಹಾರದಲ್ಲಿ ಇವುಗಳ ಪಾಲು 28% ಅಥವಾ ದಿನಕ್ಕೆ ಸರಾಸರಿ 814 ಗ್ರಾಂ. ಪಿಜ್ಜಾ ಅಥವಾ ಫಿಶ್ ಸ್ಟಿಕ್‌ಗಳಂತಹ ಐಟಂಗಳ ಒಂದು ಸೇವೆಯು 150 ಗ್ರಾಂಗಳಿಗೆ ಸಮನಾಗಿರುತ್ತದೆ. ಹೆಚ್ಚಿನ ಸಂಸ್ಕರಿಸಿದ ಆಹಾರ ಸೇವನೆಗೆ ಕೊಡುಗೆ ನೀಡುವ ಮುಖ್ಯ ಆಹಾರಗಳೆಂದರೆ ಪಾನೀಯಗಳು, ನಂತರ ಸಕ್ಕರೆ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಹಾಲಿನ ಉತ್ಪನ್ನಗಳು.
ಸಂಶೋಧನೆಯಲ್ಲಿ ಭಾಗಿಯಾದವರಲ್ಲಿ ಮಾಡಲಾದ ನಾಲ್ಕು ಗುಂಪುಗಳಲ್ಲಿ ಅತಿ ಕಡಿಮೆ ಸೇವಿಸುವವರ ಗುಂಪಿನಲ್ಲಿರುವ 18,021 ಜನರಲ್ಲಿ 105 ಜನರು ಬುದ್ಧಿಮಾಂದ್ಯರಾದರೆ ಆದರೆ ಅತಿ ಹೆಚ್ಚು ಸೇವಿಸುತ್ತಿದ್ದ ಗುಂಪಿನಲ್ಲಿರುವ 18,021 ಜನರಲ್ಲಿ 150 ಜನರು ಬುದ್ಧಿಮಾಂದ್ಯತೆಗೆ ಒಳಗಾಗಿದ್ದರು.
ವಯಸ್ಸು, ಲಿಂಗ, ಬುದ್ಧಿಮಾಂದ್ಯತೆಯ ಕುಟುಂಬದ ಇತಿಹಾಸ ಮತ್ತು ಹೃದ್ರೋಗ ಮತ್ತು ಬುದ್ಧಿಮಾಂದ್ಯತೆಯ ಅಪಾಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳನ್ನು ಪರಿಗಣಿಸಿದ ನಂತರ, ಅಲ್ಟ್ರಾ-ಪ್ರೊಸೆಸ್ಸ್‌ಡ್ ಆಹಾರಗಳ ದೈನಂದಿನ ಸೇವನೆಯಲ್ಲಿ ಪ್ರತಿ 10% ಹೆಚ್ಚಳಕ್ಕೆ, ಜನರು ಬುದ್ಧಿಮಾಂದ್ಯತೆಯ ಅಪಾಯವನ್ನು 25% ಹೆಚ್ಚು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. .
ಒಬ್ಬ ವ್ಯಕ್ತಿಯು 10% ಸಂಸ್ಕರಿಸಿದ ಆಹಾರಗಳಿಗೆ ಬದಲಾಗಿ ತಾಜಾ ಹಣ್ಣುಗಳು, ತರಕಾರಿಗಳು, ಕಾಳುಗಳು, ಹಾಲು ಮತ್ತು ಮಾಂಸದಂತಹ ಸಂಸ್ಕರಿಸದ ಅಥವಾ ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸಿದರೆ ಏನಾಗುತ್ತದೆ ಎಂದು ಅಂದಾಜು ಮಾಡಲು ಸಹ ಸಂಶೋಧಕರು ಅಧ್ಯಯನದ ಡೇಟಾವನ್ನು ಬಳಸಿಕೊಂಡಿದ್ದು ಅಂತಹ ಪರ್ಯಾಯವು ಬುದ್ಧಿಮಾಂದ್ಯತೆಯ ಸಾಧ್ಯತೆಯನ್ನು 19% ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಹುಪಿಂಗ್ ಲಿ “ಆಹಾರದಲ್ಲಿನ ಸಣ್ಣ ಮತ್ತು ನಿರ್ವಹಿಸಬಹುದಾದ ಬದಲಾವಣೆಗಳು ವ್ಯಕ್ತಿಯ ಬುದ್ಧಿಮಾಂದ್ಯತೆಯ ಅಪಾಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಸಾಬೀತಾಗಿರುವುದು ಮಾನವನ ಆರೋಗ್ಯದ ದೃಷ್ಟಿಯಿಂದ ಉತ್ತೇಜನಕಾರಿಯಾಗಿದೆ” ಎಂದಿದ್ದಾರೆ.