ಅತ್ತ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್(Darshan), ಕತ್ತಲೆ ಕೋಣೆಯೊಳಗೆ ಜಾಮೀನಿಗಾಗಿ ಎದುರು ನೋಡುತ್ತಿದ್ದರೆ, ಇತ್ತ ಸೆರೆ ಮನೆಯಲ್ಲಿರುವ ದರ್ಶನ್ ಮೇಲೆಯೇ ಕಾಣದ ಕೈಗಳು ಷಡ್ಯಂತ್ರ ಮಾಡುತ್ತಿವೆಯಾ ಎನ್ನುವ ಅನುಮಾನ ದರ್ಶನ್ ಅಭಿಮಾನಿಗಳಿಗೆ ಮೂಡುತ್ತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಒಂದಾದ ಮೇಲೊಂದು ಘಟನೆ ನಡೆಯುತ್ತಲೇ ಇದೆ.

ಮೊದಲು ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ಫೋಟೋ ವೈರಲ್ ಆಗಿದ್ದು, ಆ ಬಳಿಕ ಬೆಂಗಳೂರಿನಿಂದ ದರ್ಶನ್ ಅನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಯಿತು. ಬಳ್ಳಾರಿ ಜೈಲಿನಲ್ಲಿ ಒದ್ದಾಡ್ತಿದ್ದ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆ ಭಾಗ್ಯ ನೀಡಿತು. ಹೊರ ಬಂದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದರ್ಶನ್ ಮತ್ತೆ ಜೈಲು ಸೇರುವಂತಾಯಿತು.

ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್ ಡಿವಿಲ್ ಸಿನಿಮಾದ ಬಾಕಿ ಉಳಿದ ಕೆಲಸಗಳನ್ನು ಮುಗಿಸಿಕೊಟ್ಟಿದ್ದರು. ಹೀಗಾಗಿ ಡೆವಿಲ್ ಚಿತ್ರತಂಡ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಿನಿಮಾ ಭರ್ಜರಿ ಬಿಡುಗಡೆಗೆ ಪ್ಲಾನ್ ಮಾಡಿದೆ. ನಾಳೆ ಅಂದರೆ ಡಿಸೆಂಬರ್ ೧೧ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಅಬ್ಬರಿಸಲಿದೆ. ಈಗಾಗಲೇ ಜನಪ್ರಿಯ ಚಿತ್ರಮಂದಿರಗಳಲ್ಲಿ ಡೆವಿಲ್ ಸ್ವಾಗತಿಸಲು ಭರ್ಜರಿ ತಯಾರಿ ಮಾಡಿದ್ದು, ದರ್ಶನ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಸಿನಿಮಾ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಡೆವಿಲ್‌ಗೆ ಸಾಥ್ ನೀಡುತ್ತಿದ್ದು, ಪತಿ ಹಾಗೂ ಸೆಲೆಬ್ರೆಟಿಗಳ ನಡುವೆ ಸೇತುವೆಯಾಗಿದ್ದಾರೆ.

ಡೆವಿಲ್ ಚಿತ್ರತಂಡದ ಪ್ರಮೋಷನ್, ಸೆಲೆಬ್ರೆಟಿಗಳ ಶತಪ್ರಯತ್ನ , ವಿಜಯಲಕ್ಷ್ಮಿ ಸಾಥ್‌ನಿಂದ ಡೆವಿಲ್ ಗೆಲುವಿನ ಭರವಸೆಯಲ್ಲಿದ್ದರೇ, ಇದೇ ಸಮಯದಲ್ಲಿ ನಟ ದರ್ಶನ್ ಹೆಸರು ಕೆಡಿಸುವ ಪ್ರಯತ್ನಗಳು ನಡೆಯಿತಾ ಎನ್ನುವ ಪ್ರಶ್ನೆ ಕೆಲ ದರ್ಶನ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕೂಡ ಇದೆ. ಕಳೆದ ಕೆಲ ದಿನಗಳಿಂದ ದರ್ಶನ್ ಜೈಲಿನಲ್ಲಿ ತಮ್ಮ ಸಹ ಕೈದಿಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನುವ ಸುದ್ದಿ ಏಕಾಏಕಿ ಹರಿದಾಡಿತ್ತು. ಈ ಸುದ್ದಿಯ ಬಗ್ಗೆ ಸ್ವತಃ ವಿಜಯಲಕ್ಷ್ಮಿ ಅವರೇ ಸ್ಪಷ್ಟನೆ ನೀಡಿದ್ದು, ನಾನೇ ಜೈಲಿಗೆ ಹೋಗಿ ಎಲ್ಲರನ್ನೂ ವಿಚಾರಿಸಿದ್ದೇನೆ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.

ಈ ಸುದ್ದಿ ತಣ್ಣಗಾಗುತ್ತಿದ್ದಂತೆ ಇದೀಗ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ ಮಾಡಿರುವ ಸುದ್ದಿ ಹೊರ ಬಿದ್ದಿದೆ. ರುಧ್ರ ಭೂಮಿ ಬಳಿ ಲೇಔಟ್ ನಿರ್ಮಾಣದ ವೇಳೆ ಸಮಾಧಿಗೆ ಧಕ್ಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೇ ದರ್ಶನ್ ಜೈಲು ಸೇರಿರುವುದರಿಂದ ಹಾಗೂ ಡೆವಿಲ್ ರಿಲೀಸ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲಿ ಇಂತಹ ಘಟನೆ ನಡೆದಿರುವುದರಿಂದ ದರ್ಶನ್ ಹೆಸರು ಹಾಳು ಮಾಡಲು ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿರಬಹುದಾ..? ಎನ್ನುವ ಅನುಮಾನವನ್ನು ದರ್ಶನ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ರೀತಿ ಕಾಣದ ಕೈಗಳು ಜೈಲಿನಲ್ಲಿರುವ ದರ್ಶನ್ ಮೇಲೆಯೇ ಷಡ್ಯಂತ್ರ ಮಾಡುತ್ತಿವೆಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.












