2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಶತಾಯಗತಾಯ ಜೆಡಿಎಸ್ ಮತ್ತು ಬಿಜೆಪಿಯನ್ನು ಸೋಲಿಸಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲೇಬೇಕು ಎಂದು ಕಾಂಗ್ರೆಸ್ ಪ್ಲಾನ್ ಮಾಡಿದೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಮೂಲಕ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸಬೇಕು. ಸಾಧ್ಯವಾದಷ್ಟು ಯುವಕರನ್ನು ಗುರುತಿಸಿ ಬೆಳೆಸುವುದು, ಜನರೊಂದಿಗೆ ಹೆಚ್ಚೆಚ್ಚು ಸಂಪರ್ಕ ಸಾಧಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಜನ ವಿರೋಧಿ ನಡೆಗಳನ್ನು ಆಳವಡಿಸಿದೆ. ಕೊರೋನಾ ಸಂದರ್ಭದಲ್ಲಂತೂ ಸರಿಯಾಗಿ ನಿರ್ವಹಣೆ ಮಾಡಲಾಗದೆ ಜನರಿಂದ ಛೀಮಾರಿ ಹಾಕಿಸಿಕೊಂಡಿದೆ. ಹಾಗಾಗಿ ಮುಂದಿನ ಬಾರಿ ಕಾಂಗ್ರೆಸ್ ಗೆಲ್ಲಲು ಅವಕಾಶ ಇದೆ. ನಮ್ಮ ಸ್ವಂತ ಬಲದಿಂದ 2023ರಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇವೆ. ಈಗಲಿಂದಲೇ ಪಕ್ಷದ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಮುಂದಾಗಿದ್ದೇವೆ. ಪ್ರತಿಯೊಬ್ಬರನ್ನು ತೃಪ್ತಿಪಡಿಸಲು ಕಾರ್ಯಕ್ರಮವನ್ನು ಜಾರಿಗೆ ತರಲಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಒಬ್ಬರು ಹೇಳಿದ್ದಾರೆ.
ಪ್ರತಿ ಚುನಾವಣೆಯಲ್ಲೂ 50 ಲಕ್ಷಕ್ಕೂ ಅಧಿಕ ಮುಸಲ್ಮಾನರು ಸಾಮಾನ್ಯವಾಗಿ ಕಾಂಗ್ರೆಸ್ ಗೆಮತ ಚಲಾಯಿಸುತ್ತಾರೆ. 2018ರಲ್ಲಿ ನಮಗೆ ಮುಸಲ್ಮಾನರು ಮತ ಹಾಕಲಿಲ್ಲ. ಬದಲಾಗಿ ಜೆಡಿಎಸ್ ಗೆ ಬೆಂಬಲಿಸಿದರು. ಹಿಂದಿನಂತೆ 2018ರಲ್ಲಿ ನಮ್ಮನ್ನು ಬೆಂಬಲಿಸಿದ್ದರೆ ಇನ್ನಷ್ಟು ಸೀಟುಗಳನ್ನು ಗೆಲ್ಲುತ್ತಿದ್ದೆವು. ಮುಸ್ಲಿಮರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಾವು ಮೂರನೇ ಸ್ಥಾನಕ್ಕೆ ಬಂದೆವು. ಇದಕ್ಕೆ ನಮ್ಮ ನಾಯಕರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಆದರೀಗ, ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದು ಪಕ್ಕಾ ಎಂದು ಗೊತ್ತಾಗಿದೆ. ಹಾಗಾಗಿ ಯುವ ನಾಯಕರನ್ನು ಗುರುತಿಸಿ ಪ್ರೋತ್ಸಾಹ ನೀಡಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಉತ್ತೇಜನ ನೀಡುತ್ತೇವೆ. ಇವರ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
ಹೌದು, ಸರ್ಕಾರದ ವರ್ಚಸ್ಸು ವೃದ್ಧಿಯ ಗುರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಕಾಂಗ್ರೆಸ್ ನಾಯಕರ ಮುಂದಿನ ಟಾರ್ಗೆಟ್ ಎನ್ನಲಾಗಿದೆ. ಅಗ್ರೆಸ್ಸಿವ್ ಇಮೇಜ್ ಬೆಳಸಿಕೊಳ್ಳಲು ಸರ್ಕಸ್ ಮಾಡುತ್ತಿರುವ ಸಿಎಂ ಬೊಮ್ಮಾಯಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಹೇಳಲಾಗಿದೆ.
ಸಿಎಂ ಬೊಮ್ಮಾಯಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ರೂಪಿಸಿದ ಅಸ್ತ್ರಗಳು ಏನೇನು?
1. ನೀಡಿದ ಗಡುವು ಮುಗಿಯುತ್ತಿದ್ದಂತೆಯೇ ಕೊರೋನಾ ನಿರ್ವಹಣೆಯಲ್ಲಿ ವಿಫಲ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಲಸಿಕೆ ಹಂಚಿಕೆಯಲ್ಲೂ ಮೋಸ, ರೈತರ ಸಮಸ್ಯೆ ಹೀಗೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಬೊಮ್ಮಾಯಿ ವಿರುದ್ಧ ಸರಣಿ ಹೋರಾಟ ರೂಪಿಸುವುದು.
2. ಬೊಮ್ಮಾಯಿ ಸ್ವತಂತ್ರ ಮುಖ್ಯಮಂತ್ರಿಯಲ್ಲ. ಬದಲಿಗೆ ವಲಸಿಗ ಮಂತ್ರಿಗಳ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಂಘಪರಿವಾರ, ಬಿಜೆಪಿ ಹೈಕಮಾಂಡ್ ಹೇಳಿದಂತೆ ನಡೆಸುಕೊಳ್ಳುವ ಕೈಗೊಂಬೆ. ಹೀಗೆಂದು ಜನರಿಗೆ ಪದೇ ಪದೇ ಹೇಳುವ ಮೂಲಕ ತಾನು ಕಟ್ಟಿಕೊಳ್ಳಲು ಹೊರಟ ಅಗ್ರೆಸ್ಸಿವ್ ಇಮೇಜ್ ಹಾಳು ಮಾಡುವುದು
3. ಯಡಿಯೂರಪ್ಪ ಹಾದಿಯಲ್ಲೇ ನಾನು ಸಾಗುವೆ ಎನ್ನುತ್ತ ಬೊಮ್ಮಾಯಿ ಲಿಂಗಾಯತ ಸಮುದಾಯದ ಮತಗಳ ಓಲೈಕೆಗೆ ಮುಂದಾಗಿದ್ದಾರೆ. ಇವರು ಬಿ.ಎಸ್ ಯಡಿಯೂರಪ್ಪನಂತೆಯೇ ಒಬ್ಬ ಭ್ರಷ್ಟ ಎಂದು ಇಮೇಜ್ ಕಟ್ಟಿ ಪ್ರಚಾರ ಮಾಡುವುದು. ಒಂದು ವೇಳೆ ಯಾವುದಾದರೂ ಭ್ರಷ್ಟಚಾರದ ಕೇಸಿನಲ್ಲಿ ಸಿಲುಕಿಕೊಂಡರೆ ಹೋರಾಟಕ್ಕೆ ಸಜ್ಜಾಗುವುದು.
4. ಮುಂಬರುವ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಹಲವು ವೈಪಲ್ಯಗಳ ಮುಂದಿಟ್ಟು ಸರಣಿ ಹೋರಾಟ ಮಾಡುವುದು. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯನ್ನು ಸದನದ ಚಕ್ರವ್ಯೂಹದೊಳಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸುವುದು.
5. ತನ್ನ ಮಂತ್ರಿ ಮಂಡಲದಲ್ಲಿ ಭ್ರಷ್ಟಚಾರ ಆರೋಪವೊತ್ತ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಪೈಕಿ ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ವಜಾಗೊಳಿಸಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಗಳನ್ನೇ ಮುಂದುವರಿಸಿರುವ ಸರ್ಕಾರದ ಭಂಡತನವನ್ನೇ ಅಸ್ತ್ರ ಮಾಡಿಕೊಳ್ಳುವುದು. ಇದಕ್ಕಾಗಿ ಸದನದೊಳಗೆ ಪ್ರಬಲ ಹೋರಾಟ ನಡೆಸುವುದು ಕಾಂಗ್ರೆಸ್ಸಿನವರ ಪ್ಲಾನ್.