ವಾಟ್ಸಾಪ್ ಸಂದೇಶಗಳು ಸೋರಿಕೆಯಾದ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಕಷ್ಟದ ದಿನಗಳು ಮುಗಿದ ಹಾಗೆ ಕಾಣುತ್ತಿಲ್ಲ. ವಾಟ್ಸಾಪ್ ಸಂದೇಶಗಳಲ್ಲಿ ಪ್ರಮುಖ ಮಿಲಿಟರಿ ಮಾಹಿತಿಗಳು ಅರ್ನಾಬ್ ಅವರಿಗೆ ಲಭ್ಯವಾಗಿರುವ ಕುರಿತು ಸಂಸತ್ತಿನಲ್ಲಿ ಕೂಡಾ ಚರ್ಚೆಗಳು ನಡೆಯುವ ಸಂಭವವಿದೆ. ಮಾತ್ರವಲ್ಲದೇ, ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ ಈ ವಿವಾದದ ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳೂ ಇವೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ಈ ಬಾರಿಯ ಸಂಸತ್ತಿನಲ್ಲಿ ಅರ್ನಾಬ್ ಗೋಸ್ವಾಮಿ ಸಂದೇಶ ಸೋರಿಕೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಲಿದೆ ಎದು ವರದಿಯಾಗಿದೆ. ಕೃಷಿ ಕಾಯ್ದೆ, ಕೋವಿಡ್ನ ಅಸಮರ್ಪಕ ನಿರ್ವಹಣೆಯ ಜೊತೆಗೆ ಅರ್ನಾಬ್ ವಿಚಾರವೂ ಕೇಂದ್ರಕ್ಕೆ ಮುಳುವಾಗಲಿದೆ. ಈ ಎಲ್ಲದರ ನಡುವೆ ಬಜೆಟ್ ಮಂಡನೆಯೂ ಆಗಲಿರುವುದರಿಂದ ಈ ಬಾರಿಯ ಸಂಸತ್ ಅಧಿವೇಶನ ನಿಜಕ್ಕೂ ಕುತೂಹಲ ಮೂಡಿಸಿದೆ.
ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬೇರೆಯವರಿಗೆ ರಾಷ್ಟ್ರೀಯತೆಯ ಪಾಠ ಹೇಳುವ ಜನರು ಈಗ ಬೆತ್ತಲಾಗಿ ನಿಂತಿದ್ದಾರೆ, ಎಂದು ಹೇಳಿದ್ದಾರೆ.
ಇದೇ ಸಭೆಯಲ್ಲಿ ಅರ್ನಾಬ್ ವಿವಾದದ ಕುರಿತು ಸಮರ್ಪಕ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡಿ ರಾಷ್ಟ್ರೀಯ ಭದ್ರತೆಯ ವಿಚಾರಗಳು ಹೇಗೆ ಸೋರಿಕೆಯಾದವು ಎಂಬುದನ್ನು ತನಿಖೆಗೆ ಒಳಪಡಿಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಗಿದೆ.