ಕಳೆದ ಕೆಲವು ತಿಂಗಳುಗಳಿಂದ ಹೊಸಬೇಡಿಕೆಗಳನ್ನು ಮುಂದಿಟ್ಟು ಪಕ್ಷವನ್ನು ಇರುಸುಮುರಿಸಿಗೆ ಒಳಗಾಗಿಸಿರುವ ಕಾಂಗ್ರೆಸ್ ಬಂಡಾಯ ನಾಯಕರು ತಮ್ಮ ಸಮಸ್ಯೆಗಳನ್ನು ಸಾರ್ವಜನಿಕರ ಮುಂದಿಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಿಂದ ನಿವೃತ್ತರಾದ ಗುಲಾಂ ನೆಬಿ ಆಜಾದ್ ಅವರಿಗೆ ಜಮ್ಮುವಿನಲ್ಲಿ ಆಯೋಜಿಸಲಾಗಿರುವ ಸನ್ಮಾನ ಸಭೆಯಲ್ಲಿ ಜಿ-23 ನಾಯಕರ ಗುಂಪು ಎಂದೇ ಕರೆಯಲ್ಪಡುವ ಬಂಡಾಯ ಕಾಂಗ್ರೆಸಿಗರ ಗುಂಪು ತನ್ನ ಅಹವಾಲು ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ‘ಬಹುಸಂಖ್ಯಾತವಾದದ’ ವಿರುದ್ಧ ಪ್ರಗತಿಪರ ಶಕ್ತಿಗಳನ್ನು ಒಟ್ಟುಗೂಡಿಸಲು ಕಾಂಗ್ರೆಸ್ ವಿಫಲವಾಗಿದೆ ಎಂಬುವುದರ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹರಿದ ಬಟ್ಟೆಗಳಂತೆ ಹಂಚಿ ಹೋಗಿರುವ ಕಾಂಗ್ರೆಸ್‌ನಂತಹ ಪ್ರಗತಿಪರ ಪಕ್ಷಗಳನ್ನು ಒಟ್ಟುಗೂಡಿಸಲು ದೇಶಾದ್ಯಂತ ಇಂತಹ ‘ರಾಜಕೀಯೇತರ ವೇದಿಕೆ’ಗಳನ್ನು ಆಯೋಜಿಸಲಾಗುವುದು ಮತ್ತು ಈ ಅಭಿಯಾನವು ಕಾಶ್ಮೀರದಿಂದ ಆರಂಭವಾಗಿ ಕನ್ಯಾಕುಮಾರಿಯವರೆಗೆ ಹಬ್ಬಲಿದೆ ಎಂದು ನಾಯಕರ ಗುಂಪು ಹೇಳಿಕೊಂಡಿದೆ. ಹರ್ಯಾಣಾದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡ ಅವರ ಭದ್ರಕೋಟೆಯಾದ ಕುರುಕ್ಷೇತ್ರದಲ್ಲಿ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮುವಿನಲ್ಲಿ ನಡೆಯುವ ಸಮಾರಂಭದಲ್ಲಿ ಆನಂದ್ ಶರ್ಮಾ, ಹೂಡಾ, ಕಪಿಲ್ ಸಿಬಲ್, ವಿವೇಕ್ ಟಂಖಾ ಮತ್ತು ಮನೀಶ್ ತಿವಾರಿ, ಮತ್ತು ಶಶಿ ತರೂರ್ ಮತ್ತು ಅಖಿಲೇಶ್ ಸಿಂಗ್ ಮುಂತಾದ ಪ್ರಮುಖರು ಭಾಗವಹಿಸುವ ಸಾಧ್ಯತೆಗಳಿವೆ.
ಈ ಬೆಳವಣಿಗೆಯು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದ್ದು, ಜೂನ್‌ನಲ್ಲಿ ಆಂತರಿಕ ಚುನಾವಣೆಗಳನ್ನು ನಡೆಸುವ ಸಿಡಬ್ಲ್ಯುಸಿ ನಿರ್ಧಾರವು ಸಾಂಸ್ಥಿಕ ಸುಧಾರಣೆಗಳಿಗಾಗಿ ಜಿ -23ರ ಬೇಡಿಕೆಯಿಂದ ಉಂಟಾದ ವಿವಾದವನ್ನು ಬಗೆಹರಿಸಿದೆ ಎಂದೇ ಇದುವರೆಗೆ ನಂಬಲಾಗಿತ್ತು.

ಗುಜರಾತ್ ನಗರ ಚುನಾವಣೆಯಲ್ಲಿನ ಸೋಲು ಮತ್ತು ಪುದುಚೇರಿ ಸರ್ಕಾರದ ಪತನವು ಬಿಜೆಪಿಗೆ ಎದುರಾಗಿ ಕಾಂಗ್ರೆಸ್‌ನ ಕಾರ್ಯತಂತ್ರವು ವಿಫಲವಾಗಿರುವುದನ್ನು ಸಾಬೀತು ಪಡಿಸುತ್ತದೆ ಎಂದು ಗುಂಪಿನ ಸದಸ್ಯರೊಬ್ಬರು ಹೇಳಿದದ್ದಾರೆ. ಪಕ್ಷದ ಪ್ರಮುಖ ಕಾರ್ಯಗಳಿಗೆ ಉಸ್ತುವಾರಿ ವಹಿಸುವ ವ್ಯವಸ್ಥಾಪಕರ ಆಯ್ಕೆಯ ಬಗ್ಗೆ ಗಂಭೀರ ಆರೋಪಗಳಿವೆ. ಡಿಎಂಕೆ ಜೊತೆಗಿನ ಮಾತುಕತೆಗೆ ಪಾಯಿಂಟ್‌ಮ್ಯಾನ್ ಆಗಿದ್ದ ಆಜಾದ್ ಅವರನ್ನೂ ಈಗ ಕಡೆಗಣಿಸಲಾಗಿದೆ. ” ನಾವು ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ತುರ್ತಿನ ಸಂದೇಶವನ್ನು ನಾವು ಪಕ್ಷಕ್ಕೆ ತಲುಪಿಸುತ್ತಿದ್ದೇವೆ” ಎಂದು ಸಂಸದರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಜಮ್ಮುವಿನ ಸಮಾವೇಶದ ನಂತರ, ಈ ನಾಯಕರು ಸಾರ್ವಜನಿಕರೊಂದಿಗೆ ತಮ್ಮ ಅಹವಾಲು ಸಲ್ಲಿಸಲಿದ್ದಾರೆ. ಇದು ಈಗಾಗಲೇ ಕಠಿಣ ಸಮಯವನ್ನು ಎದುರಿಸುತ್ತಿರುವ ಕಾಂಗ್ರೆಸ್ಸಿಗೆ ಗಂಭೀರ ಹೊಡೆತವನ್ನು ನೀಡಲಿದೆ. ಅಸ್ಸಾಂನಲ್ಲಿ ಬಿಜೆಪಿಯಿಂದ ಅಧಿಕಾರವನ್ನು ವಶಪಡಿಸಿಕೊಳ್ಳುವ ಮತ್ತು ಕೇರಳದಲ್ಲಿ ಎಡಪಂಥೀಯರ ವಿರುದ್ಧ ಜಯಗಳಿಸುವ ಅನಿವಾರ್ಯತೆ ಇರುವ ಪಕ್ಷ ಈಗ ಹೊಸ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ.
ಮೇ ತಿಂಗಳಲ್ಲಿ ಹೊರಬರಲಿರುವ ಐದು ರಾಜ್ಯಗಳ ವಿಧಾನಸಭೆ ಫಲಿತಾಂಶದಲ್ಲಿ ಈ ನಾಯಕರಯ ಹೆಚ್ಚಿನ ಪರಿಣಾಮ ಬೀರಲಿದ್ದಾರೆ ಎಂದೇ ನಂಬಲಾಗಿದೆ. ನಕಾರಾತ್ಮಕ ಫಲಿತಾಂಶವು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಮೇಲೆ ಮತ್ತಷ್ಟು ಒತ್ತಡವನ್ನು ಹೇರಲಿದೆ ಮತ್ತು ಬಂಡುಕೋರರು ಹೆಚ್ಚಿನ ಬಲವನ್ನು ಪಡೆಯಬಹುದು. “ನಮ್ಮ ಸಂಖ್ಯೆಗಳು ಹೆಚ್ಚುತ್ತಿವೆ, ಪಕ್ಷವು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಒಬ್ಬ ಬಂಡಾಯ ನಾಯಕ ಹೇಳಿದ್ದಾರೆ.











