
ಹಾಸನ: ಹಾಸನದಲ್ಲಿ ಸಚಿವ ಎಚ್.ಸಿ ಮಹದೇವಪ್ಪ ಮಾತನಾಡಿ, ಬಿಜೆಪಿ-ಜೆಡಿಎಸ್ ಜೊತೆಗೆ ಸ್ಪರ್ಧೆ ಮಾಡಿತ್ತು. ಸುಳ್ಳನ್ನು ಸತ್ಯ ಮಾಡಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದು, ಸರ್ಕಾರ ಅಸ್ಥಿಗೊಳಿಸಿ ಮತ್ತೊಮ್ಮೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸುವ ಉತ್ಸಾಹದಲ್ಲಿ ಇದ್ದರು. ಆದರೆ ಫಲಿತಾಂಶ ಎಲ್ಲವನ್ನೂ ಭಗ್ನ ಮಾಡಿದೆ ಎಂದಿದ್ದಾರೆ.

ಬಿಜೆಪಿ ನಾಯಕರು ಸುಳ್ಳನ್ನು ಬಿತ್ತರಿಸಿ ಸತ್ಯ ಮಾಡಲು ಹೊರಟಿದ್ರು. ಬಿಜೆಪಿ-ಜೆಡಿಎಸ್ ಅವರ ಕೀಳುಮಟ್ಟದ ನಡೆ, ಸರ್ವಾಧಿಕಾರಿ ನಡೆಯನ್ನು ರಾಜ್ಯದ ಜನರು ತಿರಸ್ಕಾರ ಮಾಡಿದ್ದಾರೆ. ಜನರು ನಮಗೆ ಬೆಂಬಲ ನೀಡಿ, ಆಶೀರ್ವಾದ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ನೇರವಾಗಿ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.
ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿರುವ ಸಚಿವರು, ಇಲ್ಲಸಲ್ಲದ ಆರೋಪ ಮಾಡಬೇಡಿ, ಪ್ರಾಮಾಣಿಕ ವ್ಯಕ್ತಿಗೆ ಮಸಿ ಬಳಿಯಬೇಡಿ. ಸಿಎಂ, ಡಿಸಿಎಂ ಎಲ್ಲರ ಪರಿಶ್ರಮದಿಂದ ಫಲಿತಾಂಶ ಬಂದಿದೆ. ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಮಾಡಲು ಅವರ ಅಭಿಮಾನಿಗಳು ಭೇಟಿ ಮಾಡಿ ಕೇಳಿದರು. ಇದು ಸರ್ಕಾರ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಎಂದಿದ್ದಾರೆ.

ಸ್ವಾಭಿಮಾನಿ ಸಂಘದ ಸದಸ್ಯರು ಸಮಾವೇಶ ಮಾಡಲು ಹೊರಟಿದ್ದಾರೆ. ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳನ್ನೊಳಗೊಂಡು ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ. ಸಾಮಾಜಿಕ ಚಳುವಳಿ ಸಂಘಟನೆಗೆ ಒತ್ತು ಕೊಡಲು ಸಮಾವೇಶ ಮಾಡುತ್ತಿದ್ದೇವೆ. ಈ ಹಿಂದೆ ಅಹಿಂದ ಸಮಾವೇಶ ಮಾಡಿದ್ದೆವು. ಅದೇ ರೀತಿ ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಂಘಟನೆಯಿಂದ ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಹದಿನಾಲ್ಕು ಬಜೆಟ್ ಕೊಟ್ಟಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಬೆಂಬಲ ಹಾಗೂ ಧನ್ಯವಾದ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರೇ ಒಂದು ಶಕ್ತಿ ಎಂದಿದ್ದಾರೆ.






