ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ಸ್ನೇಹಿತ ವೈಶಾಕ್ ಎಂಬಾತನನ್ನ HAL ಪೊಲೀಸರು ಬಂಧಿಸಿದ್ದಾರೆ.
ಜ. 24ರಂದು ಉದ್ಯಮಿ ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಪರೋಕ್ಷವಾಗ ನಟಿ ಜತೆ ಇರುವ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬೇಕು. ನನಗೆ 6 ಕೋಟಿ ರೂ. ಹಣ ಕೊಡಬೇಕು ಎಂದು ಉಲ್ಲೇಖಿಸಲಾಗಿತ್ತು. ಈ ಸಂಬಂಧ ಅರವಿಂದ್ ರೆಡ್ಡಿ HAL ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೊರಿಯರ್ ಮೂಲಕ ಬಂದಿದ್ದ ಪತ್ರದ ಬೆನ್ನು ಬಿದ್ದಿದ್ದರು. ಈ ವೇಳೆ ಪತ್ರ ಜಯನಗರದಿಂದ ಬಂದಿರುವುದು ಪತ್ತೆಯಾಗಿದೆ. ಬಳಿಕ ಪತ್ರ ಕಳಿಸಿದ್ದು ಯಾರು ಎಂದು ಪರಿಶೀಲಿಸಿದಾಗ ನಟಿಯ ಸ್ನೇಹಿತ ವೈಶಾಕ್ ಎಂಬುದು ಗೊತ್ತಾಗಿದ್ದು, ಆತನನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಸ್ಯಾಂಡಲ್ ವುಡ್ ನಟಿಯೊಬ್ಬರು ಅರವಿಂದ್ ರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ಗೊವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ರೆಡ್ಡಿಯನ್ನ ಬಂಧಿಸಲಾಗಿತ್ತು.






