ಕರ್ನಾಟಕದಲ್ಲಿ ಮಳೆ ಕೈಕೊಟ್ಟಿದೆ. ಜಲಾಶಯಗಳು ಭರ್ತಿಯಾಗಿಲ್ಲ. ರೈತರು ಬೆಳೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಶೇಕಡ 70 ರಷ್ಟು ಪ್ರದೇಶವನ್ನು ಬರಪೀಡಿತ ಎಂದು ಘೋಷಣೆ ಮಾಡಿ ಆಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಿಂದ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡುತ್ತಿರುವುದು ಕಾಂಗ್ರೆಸ್ ಪಾಲಿಗೆ ಸಂಕಷ್ಟ ಕಡಿಮೆ ತಂದೊಡ್ಡುವ ಆತಂಕ ಮನೆ ಮಾಡಿದೆ. ಸೋಮವಾರ ತಮಿಳುನಾಡಿನ ಪರವಾಗಿ ಆದೇಶ ನೀಡಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿದೆ. ಈ ಸೂಚನೆಯನ್ನು ಒಂದು ವೇಳೆ ಪಾಲನೆ ಮಾಡಿದರೆ ಕರ್ನಾಟಕದ ಕಿರೀಟ ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ.

ಜನಮನ್ನಣೆಯಲ್ಲಿ ಗೆದ್ದು ಬೀಗುವ ಹುಮ್ಮಸ್ಸಿಗೆ ಕಾವೇರಿ ಕಂಟಕ..
ಕರ್ನಾಟಕದಲ್ಲಿ ಈಗಾಗಲೇ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ಜನರು ಬೆಂಬಲಿಸುವ ವಿಶ್ವಾಸದಲ್ಲಿದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ 20 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಬಗ್ಗೆ ನಾಯಕರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಾಲಿಗೆ ಕಾವೇರಿ ನದಿ ವಿವಾದ ಕಂಟಕವಾಗಿ ಪರಿಣಮಿಸುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಖ್ಯಾತಿಗೆ ಕಪ್ಪು ಮಸಿ ಬಳಿಯುತ್ತಿದೆ ಮಳೆ ಮತ್ತು ಕಾವೇರಿ ನದಿ ನೀರು. ಸೆಪ್ಟೆಂಬರ್ ಬಳಿಕ ಶುರುವಾಗುವ ಹಿಂಗಾರು ಮಾರುತಗಳು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನು ಸುರಿಸಿ ಜಲಾಶಯಗಳು ಭರ್ತಿ ಆಗುವಂತೆ ಮಾಡಿದರೆ ಮಾತ್ರ ಕಾಂಗ್ರೆಸ್ ಕಂಟಕದಿಂದ ಪಾರಾಗಬಹುದು. ಇಲ್ಲದಿದ್ದರೆ ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಸಂಕಷ್ಟ ನೀಡುವುದು ಗ್ಯಾರಂಟಿ ಎನ್ನುವಂತಾಗಿದೆ.

ಹಳೇ ಮೈಸೂರು ಭಾಗದಲ್ಲಿ ಕಾವೇರಿ ಭಾವನಾತ್ಮಕ ವಿಚಾರ..
ಕೊಡಗು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಕಾವೇರಿ ಭಾವನಾತ್ಮಕ ವಿಚಾರ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ಪ್ರತಿಯೊಬ್ಬರು ಕಾವೇರಿ ನದಿ ನೀರಿನಿಂದ ಕೃಷಿ ಚಟುವಟಿಕೆ ಮಾಡದೆ ಇರಬಹುದು. ಆದರೆ ಕಾವೇರಿ ನದಿ ನೀರನ್ನು ಪರೋಕ್ಷವಾಗಿ ಆದರು ಬಳಸುತ್ತಾರೆ. ಕಾವೇರಿ ನದಿಯನ್ನು ಭಾವನಾತ್ಮಕವಾಗಿ ಪ್ರೀತಿಸುತ್ತಾರೆ. ಆದರೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದಂತೆ ಕೆ.ಆರ್.ಎಸ್ ಜಲಾಶಯದ ಬಾಗಿಲು ತೆರೆದು ನೀರು ಬಿಡುತ್ತಲೇ ಇದ್ದರೆ ಕರ್ನಾಟಕದ ಅದರಲ್ಲೂ ಹಳೇ ಮೈಸೂರು ಭಾಗದ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳು ಇರುತ್ತವೆ. ಕಾಂಗ್ರೆಸ್ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ಸರಿಯಾಗಿ ವಾದ ಮಂಡಿಸಿ, ಸದ್ಯದ ಪರಿಸ್ಥಿತಿಯನ್ನು ಮನಗಾಣುವಂತೆ ಮಾಡುವಲ್ಲಿ ವಿಫಲವಾಯಿತು ಅನ್ನೋ ಆರೋಪ ಈಗಾಗಲೇ ಶುರುವಾಗಿದೆ. ತಮಿಳುನಾಡಿನ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ ಬಳಿಕ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಎದುರು ಹೋಗಿತ್ತು. ಮೊದಲು ನಮ್ಮ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳುವ ಕೆಲಸ ಮಾಡಲಿಲ್ಲ ಎನ್ನುವುದು ವಿರೋಧ ಪಕ್ಷಗಳ ಆರೋಪವೂ ಹೌದು.

ಕಾಂಗ್ರೆಸ್ ಮೇಲೆ ಆರೋಪಕ್ಕೆ ಸಾಕ್ಷಿಯಾದ ಹೊಂದಾಣಿಕೆ ರಾಜಕೀಯ..
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಉರುಳಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, 25ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಇಂಡಿಯಾ ಅನ್ನೋ ಒಕ್ಕೂಟವನ್ನು ಸ್ಥಾಪಿಸಿಕೊಂಡಿದೆ. ಇಂಡಿಯಾ ಒಕ್ಕೂಟದ ಭಾಗವಾಗಿ ತಮಿಳುನಾಡಿನ ಡಿಎಂಕೆ ಪಕ್ಷ ಕೂಡ ಸೇರಿಕೊಂಡಿದೆ. ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾರಣಕ್ಕೇ ಕಾವೇರಿ ನೀರು ಬಿಡಲಾಗ್ತಿದೆ ಅನ್ನೋ ಆರೋಪವೂ ಇದೆ. ಕಾನೂನು ಪ್ರಕಾರ ಈಗಾಗಲೇ ಸುಪ್ರೀಂಕೋರ್ಟ್ ಆದೇಶದ ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಆಗಿದೆ. ನೀರಿನ ಹಂಚಿಕೆ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಸಂಕಷ್ಟ ಸೂತ್ರ ರಚನೆ ಮಾಡಿ ಆಗಿದೆ. ಅದರಂತೆ ನೀರು ಬಿಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಕರ್ನಾಟಕದಲ್ಲೇ ಮಳೆ ಇಲ್ಲದೆ ಜಲಾಶಯಗಳು ಭರ್ತಿ ಆಗದೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಆತಂಕ ಎದುರಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕಾದ ಕೆಲಸ ರಾಜ್ಯ ಸರ್ಕಾರದ್ದೇ ಹೊರತು ಬೇರೆ ಯಾರದ್ದು ಅಲ್ಲ. ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಈ ಹಿಂದೆ ಒಮ್ಮೆ ರೈತರು ಪ್ರತಿಭಟನೆ ಮಾಡುವ ಬದಲು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿ ನೀರು ಹೋಗದಂತೆ ತಡೆಯಲಿ ಎಂದಿದ್ದರು. ಆ ಬಳಿಕ ಮೇಕೆದಾಟು ಹೋರಾಟಕ್ಕೆ ಸಾಥ್ ಕೊಡದ ರೈತರು ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಇದೀಗ ಎಲ್ಲವೂ ಕಾಂಗ್ರೆಸ್ ಪಾಲಿಗೆ ತಿರುಗುಬಾಣ ಆಗುವ ಸಾಧ್ಯತೆಗಳಿವೆ.

ಕೃಷ್ಣಮಣಿ