ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿನ ಸೋಲು, ಹೆಚ್ಚುತ್ತಿರುವ ಜಿ-23 ನಾಯಕರ ಬಂಡಾಯ, ಪಕ್ಷ ಬಿಡುತ್ತಿರುವ ನಾಯಕರು, ಕೆನ್ನಾಲಿಗೆ ಚಾಚುತ್ತಿರುವ ಬಿಜೆಪಿಯ ಕೋಮು ರಾಜಕಾರಣದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಈಗ ಹೊಸದೊಂದು ತಲೆನೋವು ಶುರುವಾಗುತ್ತಿದೆ. ಮುಂಬರುವ ದ್ವೈವಾರ್ಷಿಕ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಪಕ್ಷದ ಸಂಖ್ಯೆಯು ಗಣನೀಯವಾಗಿ ಕುಸಿಯಲಿರುವುದು ಹೊಸ ರೀತಿಯ ಚಿಂತೆಗೆ ಕಾರಣವಾಗಿದೆ. ಸೀಟುಗಳ ದೃಷ್ಟಿಯಲ್ಲಿ ಮಾತ್ರವಲ್ಲ, ರಾಜ್ಯಗಳ ಪ್ರಾತಿನಿಧ್ಯದ ದೃಷ್ಟಿಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಹಳ ದೊಡ್ಡ ಹೊಡೆತವಾಗಲಿದೆ. ಏಕೆಂದರೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾತಿನಿಧ್ಯವೇ ಇಲ್ಲದಂತಾಗುತ್ತದೆ.
ಇತ್ತೀಚೆಗೆ ನಾಲ್ವರು ಸದಸ್ಯರು ನಿವೃತ್ತರಾದ ಹಿನ್ನೆಲೆಯಲ್ಲಿ ಇದೇ ಮಾರ್ಚ್ ಅಂತ್ಯಕ್ಕೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಸಂಖ್ಯೆ 33ಕ್ಕೆ ಇಳಿದಿತ್ತು. ಇದೀಗ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಒಂಭತ್ತು ಮಂದಿ ನಿವೃತ್ತರಾಗಲಿದ್ದಾರೆ. ಆಗ ನಡೆಯುವ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ 30ಕ್ಕೆ ಕುಸಿಯುತ್ತದೆ. ಇದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಇದುವರೆಗೆ ಹೊಂದಿರುವ ಅತ್ಯಂತ ಕಡಿಮೆ ಸಂಖ್ಯೆ ಎಂಬ ದಾಖಲೆಯನ್ನು ಸೃಷ್ಟಿಸುತ್ತದೆ. ತಮಿಳುನಾಡಿನಲ್ಲಿ ಆರು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು ಒಂದು ಸೀಟನ್ನು ಡಿಎಂಕೆ ತನಗೆ ನೀಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಸಂಖ್ಯೆ 31 ಆಗಬಹುದು.
ಹೀಗಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾ, ದೆಹಲಿ ಮತ್ತು ಗೋವಾದಿಂದ ಕೂಡ ರಾಜ್ಯಸಭಾ ಸದಸ್ಯರು ಇರುವುದಿಲ್ಲ. ಇದಲ್ಲದೆ ಇದೇ ಮೊದಲ ಬಾರಿಗೆ ಈಶಾನ್ಯದ ಎಂಟು ರಾಜ್ಯಗಳಿಂದ ಯಾವುದೇ ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ. ಅಲ್ಲಿಗೆ ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ 17 ರಾಜ್ಯಗಳಿಂದ ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ.
ದ್ವೈವಾರ್ಷಿಕ ಚುನಾವಣೆಯ ನಂತರ ಕಾಂಗ್ರೆಸ್ ಹೊಂದಲಿರುವ 30 ಅಥವಾ 31 ಸ್ಥಾನಗಳ ಪೈಕಿ ಅತಿ ಹೆಚ್ಚು ಪ್ರಾತಿನಿಧ್ಯ ಕಾಂಗ್ರೆಸ್ ಪಕ್ಷ ಆಡಳಿತ ಇರುವ ರಾಜಸ್ಥಾನ ಛತ್ತೀಸ್ಗಢ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಭದ್ರವಾದ ನೆಲೆ ಇರುವ ಕರ್ನಾಟಕದಿಂದ ಸಿಗಲಿದೆ. ಕರ್ನಾಟಕ ಮತ್ತು ರಾಜಸ್ಥಾನದಿಂದ ತಲಾ 5 ಸದಸ್ಯರು ಇರಲಿದ್ದಾರೆ. ಛತ್ತೀಸ್ಗಡದಿಂದ 4, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನಿಂದ ತಲಾ 3, ಪಶ್ಚಿಮ ಬಂಗಾಳ ಮತ್ತು ಹರಿಯಾಣದಿಂದ ತಲಾ ಇಬ್ಬರು ಸದಸ್ಯರು ಇರಲಿದ್ದಾರೆ. ಬಿಹಾರ, ಕೇರಳ ಮತ್ತು ಜಾರ್ಖಂಡ್ನಿಂದ ತಲಾ ಒಬ್ಬ ಸದಸ್ಯರು ಇರಲಿದ್ದಾರೆ. ಡಿಎಂಕೆ ಬೆಂಬಲಿಸಿದರೆ ತಮಿಳುನಾಡಿನಿಂದಲೂ ಒಬ್ಬರು ಸದಸ್ಯರು ಇರಲಿದ್ದಾರೆ.
ಲೋಕಸಭೆಯಲ್ಲೂ ಇದೇ ಪರಿಸ್ಥಿತಿ
ರಾಜ್ಯಸಭೆಯ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲೂ ಹರಿಯಾಣ, ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾ ಸೇರಿದಂತೆ 12 ರಾಜ್ಯಗಳಿಂದ ಪ್ರಾತಿನಿಧ್ಯ ಇಲ್ಲದಂತಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ 53 ಸದಸ್ಯರ ಪೈಕಿ 28 ಮಂದಿ ದಕ್ಷಿಣ ಭಾರತದವರು. ಕೇರಳದಿಂದ 15, ತಮಿಳುನಾಡಿನ 8, ತೆಲಂಗಾಣದಿಂದ 3 ಮತ್ತು ಕರ್ನಾಟಕ ಮತ್ತು ಪುದುಚೇರಿಯಿಂದ ತಲಾ ಒಬ್ಬರು ಇದ್ದಾರೆ. ಉತ್ತರ ಭಾರತದ ಪೈಕಿ ಪಂಜಾಬ್ ಮಾತ್ರ ಗಮನಾರ್ಹ ರೀತಿಯಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷವನ್ನು ಬೆಂಬಲಿಸಿದೆ. ಪಂಜಾಬ್ 8 ಸದಸ್ಯರನ್ನು ಲೋಕಸಭೆಗೆ ಕಳುಹಿಸಿದೆ.
ಇದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷ ಅಸ್ಸಾಂನಿಂದ ಮೂವರು ಮತ್ತು ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸಂಸದರನ್ನು ಹೊಂದಿದೆ. ಅಲ್ಲದೆ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಒಡಿಶಾ, ಗೋವಾ ಮತ್ತು ಮೇಘಾಲಯಗಳಲ್ಲಿ ತಲಾ ಓರ್ವ ಸಂಸದರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಈಗ ಪಕ್ಷದೊಳಗೆ ಆಂತರಿಕವಾದ ಚರ್ಚೆ ಶುರುವಾಗಿದೆ. ಮುಂಬರುವ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಜೊತೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೂಡ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.