ಬೆಂಗಳೂರು: ಶಿಡ್ಲಘಟ್ಟ(Sidlaghatta) ನಗರಸಭೆ ಪೌರಾಯುಕ್ತೆ ವಿರುದ್ಧ ಬೆದರಿಕೆ ಹಾಗೂ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ (Rajeev Gowda) ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್(Congress) ಪಕ್ಷ ಮುಂದಾಗಿದೆ. ಮಹಿಳಾ ಅಧಿಕಾರಿ ಮೇಲೆ ದರ್ಪ ತೋರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ರಾಜೀವ್ ಗೌಡರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರು ಪಕ್ಷದ ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದಾರೆ.

ಈ ಸಂಬಂಧ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಅಧಿಕೃತ ಪತ್ರ ರವಾನಿಸಲಾಗಿದ್ದು, ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಅನಿವಾರ್ಯವೆಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: GBA ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ: ಉಸ್ತುವಾರಿಯಾಗಿ ರಾಮ ಮಾಧವ್ ನೇಮಕ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿ ಮೂಲಕ ನಿಂದನೆ ಮಾಡಿದ್ದು, ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜೀವ್ ಗೌಡರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ನೋಟಿಸ್‌ಗೆ ಇದುವರೆಗೂ ಯಾವುದೇ ಉತ್ತರ ನೀಡದಿರುವುದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ನಿಯಮಾನುಸಾರ ಅಂತಿಮವಾಗಿ ಪಕ್ಷದ ಶಿಸ್ತು ಸಮಿತಿಯೇ ಅಮಾನತು ಆದೇಶ ಹೊರಡಿಸಬೇಕಾಗಿರುವುದರಿಂದ, ಶಿಸ್ತು ಸಮಿತಿಗೆ ಅಧಿಕೃತ ಶಿಫಾರಸು ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.












