ಕಲಬುರಗಿ: ನೀರು ಇಲ್ಲದೇ ಇದ್ರೆ ಕುಡಿಯಲು ನೀರು ಸಿಗುತ್ತಾ, ಆಗ ಸರ್ಕಾರ ಇರುತ್ತಾ? ಎಂದು ಖಾರವಾಗಿ ಪ್ರಶ್ನಿಸಿರುವ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಈ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ತಮ್ಮ ವಾದ ಮಂಡಿಸಲು ಸರ್ಕಾರ ವಿಫಲವಾಗಿದೆ, ಹವಾಮಾನ ಇಲಾಖೆ ವರದಿ ನೀಡಿದಾಗಲೇ ಪ್ರಾಧಿಕಾರದ ಮುಂದೆ ಸರ್ಕಾರ ಹೋಗಬೇಕಿತ್ತು. ಸಂಕಷ್ಟ ಸೂತ್ರ ರೂಪಿಸುವಂತೆ ಮನವಿ ಮಾಡಬೇಕಿತ್ತು. ಯಾವ ಆದೇಶ ಇಲ್ಲದೇ ಇದ್ದಾಗಲೇ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಸ್ಟಾಲೀನ್ ಜೊತೆ ಸೇರಿ ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ನೀರು ಬಿಟ್ಟಿದ್ದಾರೆಂದು ದೂರಿದರು.
ಸ್ಟಾಲಿನ್ ಜೊತೆ ಮಾತಾಡಿಕೊಂಡು ಸರ್ಕಾರ ಮೊದಲೇ ನೀರು ಬಿಟ್ಟಿದೆ, ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ, ಜೆಡಿಎಸ್ ಮತ್ತು ಬಿಜೆಪಿಯವರು ವೈರಿಗಳಾಗಿಯೇ ಇರಬೇಕು ಅಂತ ಕಾಂಗ್ರೆಸ್ ಆಸೆ ಪಟ್ಟಿತ್ತು. ಆದ್ರೆ ಮೈತ್ರಿಯಿಂದ ಇದೀಗ ಅವರಿಗೆ ಆತಂಕ ಎದುರಾಗಿದೆ ಎಂದು ಹೇಳಿದ್ದಾರೆ.