ದೆಹಲಿ ರಾಜ್ಯಕ್ಕೆ ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು ಮಂಗಳವಾರ (ಆಗಸ್ಟ್ 1) ತೆರಳಿದ್ದು ವರಿಷ್ಠರ ಜತೆಗಿನ ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ವೇಳೆ ಹಲವು ಮಹತ್ವದ ವಿಷಯಗಳು ಚರ್ಚೆಯಾಗಿವೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್ ಹೈಕಮಾಂಡ್ ಸಭೆ ಮುಂಬರುವ ಲೋಕಸಭೆ ಚುನಾವಣೆಯ ಎದುರಿಸಲು ಕಾರ್ಯತಂತ್ರ ರೂಪಿಸಲು ಸಂಬಂಧಿಸಿತ್ತು ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದುತ್ವ ವಿಚಾರವನ್ನು ಮುನ್ನಲೆಗೆ ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿರುವ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಹೈಕಮಾಂಡ್ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಸಣ್ಣ ಸಣ್ಣ ಸಮುದಾಯಗಳನ್ನು ಗುರಿಯಾಗಿಸಿ, ಅವರಲ್ಲಿ ಕಾಂಗ್ರೆಸ್ ಬಗ್ಗೆ ಭರವಸೆ ಮೂಡುವಂತೆ ತಂತ್ರಗಾರಿಕೆ ರೂಪಿಸಲು ಚರ್ಚೆ ನಡೆಲಾಗಿದೆ.
ದೆಹಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್ನ 37 ನಾಯಕರೊಂದಿಗೆ ನಡೆದ ಲೋಕಸಭೆ ಚುನಾವಣೆ ಕುರಿತ ಚಿಂತನಾ ಸಭೆಯಲ್ಲಿ ಈ ಚರ್ಚೆಯಾಗಿದೆ. ಬಿಜೆಪಿಯ ಹಿಂದುತ್ವದ ಅಜೆಂಡಾ ಚುನಾವಣೆ ಗೆಲ್ಲಲು ಮಾತ್ರ. ಸಣ್ಣ ಸಮುದಾಯಗಳು ಈಗಲೂ ಸಂಕಷ್ಟದಲ್ಲಿದ್ದು, ಈ ಸಮುದಾಯಗಳ ಯುವಕರ ಭವಿಷ್ಯ ಹಾಗೂ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳಲು ಕಾರ್ಯಕ್ರಮ ರೂಪಿಸಬೇಕು ಎಂದು ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದ್ದಾರೆ.
ಲಕ್ಷ್ಮಣ ಸವದಿ ಅವರ ಈ ಅಭಿಪ್ರಾಯಕ್ಕೆ ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದರು. ಹೀಗಾಗಿ ನಿರ್ಲಕ್ಷಿತ, ಶೋಷಿತ ಸಮುದಾಯಗಳತ್ತ ದೃಷ್ಟಿ ನೆಡಲು ಉದ್ದೇಶಿಸಲಾಗಿದೆ. ಬಿಜೆಪಿಯ ಕೋಮುವಾದಕ್ಕೆ ಸಣ್ಣ ಜಾತಿಗಳ ಅಭಿವೃದ್ಧಿಯ ಪ್ರತಿವಾದ ನಮ್ಮದಾಗಿರಬೇಕು ಎನ್ನುವ ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲಿ ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ 15-20 ಸೀಟುಗಳನ್ನು ಗೆಲ್ಲಲೇಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ನಾಯಕರು ಸಮ್ಮತಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿಕೊಳ್ಳದಂತೆ ಎಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಜನರಲ್ಲಿ ಅಭಿಪ್ರಾಯ ಬರುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ರಾಹುಲ್ ಅವರು ರಾಜ್ಯದ ಕಾಂಗ್ರೆಸ್ ನಾಯಕರ ಅಸಮಾಧಾನ ಶಮನದ ಕುರಿತೂ ಮಾತನಾಡಿದ್ದಾರೆ. ಆಂತರಿಕ ಸಮಸ್ಯೆಗಳನ್ನು ಬಹಿರಂಗಪಡಿಸಬೇಡಿ. ಎಲ್ಲವನ್ನೂ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬಾಲಿವುಡ್ ಪ್ರಸಿದ್ಧ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮೃತದೇಹ ಪತ್ತೆ ; ಆತ್ಮಹತ್ಯೆ ಶಂಕೆ
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮತ ಗಳಿಕೆಯನ್ನು ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ಶೇ.43 ರಷ್ಟು ಕಾಂಗ್ರೆಸ್ ಮತಗಳಿಕೆಯಾಗಿದೆ. ಇದನ್ನು ಲೋಕಸಭೆ ಚುನಾವಣೆಗೂ ಮುಂದುವರಿಸಿಕೊಂಡು ಹೋಗಬೇಕು ಎಂದು ಹಿರಿಯ ನಾಯಕರು ರಾಜ್ಯ ನಾಯಕರು ಕಿವಿಮಾತು ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರತಿ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾವೇಶ ನಡೆಸಬೇಕು. ಆ ಮೂಲಕ ಫಲಾನುಭವಿಗಳಲ್ಲಿ ಸರ್ಕಾರದ ಬಗ್ಗೆ ತೃಪ್ತಿಕರ ಭಾವನೆ ಗಟ್ಟಿಗೊಳಿಸಬೇಕು. ಗ್ಯಾರೆಂಟಿ ಯೋಜನೆ ಯಾರೂ ವಿರೋಧಿಸುತ್ತಿಲ್ಲ. ಅದರಿಂದ ಸಮನ್ವಯ ಸಾಧಿಸಲು ಸಮಾವೇಶ ಅಗತ್ಯವಾಗಿದೆ ಎಂದು ಸಭೆಯಲ್ಲಿ ರ್ಚಚಿಸಲಾಗಿದೆ ಎಂದು ಹೇಳಲಾಗಿದೆ.