ಬಾಲಿವುಡ್ನ ಹಲವು ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಮುಂಬೈನ ಕರ್ಜಾತ್ನಲ್ಲಿರುವ ಅವರ ಎನ್ಡಿ ಸ್ಟುಡಿಯೋದಲ್ಲಿ ಬುಧವಾರ (ಆಗಸ್ಟ್ 2) ಮೃತದೇಹ ಪತ್ತೆಯಾಗಿದೆ.
ಲಗಾನ್ ಮತ್ತು ಜೋಧಾ ಅಕ್ಟರ್ನಲ್ಲಿನ ಕೆಲಸಕ್ಕಾಗಿ ನಿತಿನ್ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು. 58 ವರ್ಷದ ನಿತಿನ್ ಅವರು ತಮ್ಮ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನಿತಿನ್ ದೇಸಾಯಿ ಅವರ ಮೃತದೇಹ ಕರ್ಜಾತ್ನಲ್ಲಿರುವ ಅವರ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಯ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಕೌಸಲ್ಯ ಸುಪ್ರಜಾ ರಾಮ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ ಲವ್ ಮಾಕ್ಟೇಲ್ ಜೋಡಿ!
ನಿತಿನ್ ಅವರು ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಅನುಭವಿ ಚಿತ್ರ ನಿರ್ದೇಶಕರಾದ ಅಶುತೋಷ್ ಗೋವಾರಿಕ, ವಿಧು ವಿನೋದ್ ಚೋಪ್ರಾ, ರಾಜ್ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ನಾಲಿ ಅವರೊಂದಿಗೆ ಕೆಲಸ ಮಾಡಿದ್ದರು. ಆರಂಭದಲ್ಲಿ ನಿತಿನ್ ಅವರು ಟಿವಿ ಧಾರಾವಾಹಿಗಳಿಗೆ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಹಮ್ ದಿಲ್ ದೇ ಚುಕೆ ಸನಮ್ (1999) ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಲಗಾನ್ (2001) ದೇವದಾಸ್ (2002), ಸ್ವದೇಶ್ (2004), ಜೋಧಾ ಅಕ್ಬರ್ (2008) ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010) ನಂತಹ ಐಕಾನಿಕ್ ಬಾಲಿವುಡ್ ಚಲನಚಿತ್ರಗಳ ಸೆಟ್ಗಳ ಹಿಂದೆ ಅವರ ಕೈಚಳಕ ಅಡಗಿತ್ತು.
ಕಲಾ ನಿರ್ದೇಶಕರಾಗಿ ನಿತಿನ್ ದೇಸಾಯಿ ಅವರು ಕೆಲಸ ಮಾಡಿದ ಕೊನೆಯ ಚಿತ್ರ 2019ರಲ್ಲಿ ಬಿಡುಗಡೆಯಾದ ಪಾಣಿಪತ್. ಈ ಚಿತ್ರವನ್ನು ಅಶುತೋಷ್ ಗೋವಾರಿಕ ನಿರ್ದೇಶಿಸಿದ್ದರು.