ಶಿಕಾರಿಪುರ:ಮಾ.೨೮: ಶಿಕಾರಿಪುರದಲ್ಲಿ ಯಡಿಯೂರಪ್ಪ ಮೇಲೆ ಬಂಜಾರ ಪ್ರತಿಭಟನಾಕಾರರಿಂದ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇಲ್ಲ. ಅವರಲ್ಲಿ ಎಲ್ಲಾ ಪಕ್ಷದವರೂ ಇದ್ದರು. ತಹಸೀಲ್ದಾರ್ ಮನವಿಗೆ ಸ್ಪಂದಿಸದ ಕಾರಣ ಯಡಿಯೂರಪ್ಪ ಮನೆಯತ್ತ ಧಾವಿಸಿದ್ದರು. ಅಲ್ಲಿ ನಡೆದ ಘಟನೆಗಳಿಗೆ ಪೊಲೀಸರ ಅಸಹಾಯಕಾರ ಕಾರಣ ಎಂದು ಶಿಕಾರಿಪುರದ ಕಾಂಗ್ರೆಸ್ ಮುಖಂಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಸ್ಪಷ್ಟೀಕರಣ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕೆಳಗೆ ಮೀಸಲಾತಿ ಘೋಷಣ ಮಾಡಿದ ಸಂದರ್ಭದಲ್ಲಿ ಬಂಜಾರ ಭೋವಿ, ಕೊರಚ, ಕೊರಮ ಸಮಾಜ ಮೀಸಲು ಕಡಿತಗೊಳಿಸಿದ್ದರು. ಇದರಿಂದ ಬೇಸರಗೊಂಡ ಸಮುದಾಯಗಳು ಸಾಂಕೇತಿಕವಾಗಿ ಧರಣಿ ಮಾಡಲು ಆಯೋಜಿಸಿದ್ಸರು. ಹಾಗೂ ತಹಶೀಲ್ದಾರ್ ಗೆ ಮನವಿ ಮಾಡುವ ಮೂಲಕ ತಮ್ಮ ಹಕ್ಕುಗಳ ರಕ್ಷಣೆಗೆ ಪಣ ತೊಟ್ಟಿದ್ದರು. ಬಿಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಷ್ಟೇ ಅಲ್ಲ ತಾಲೂಕಿನ ಶಾಸಕರೂ ಹೌದು. ಅವರ ಮಗ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ. ಅಪ್ಪ-ಮಗನ ಮೂಲಕ ಸಿಎಂಗೆ ಮನವಿ ನೀಡಿದರೆ ಸಮುದಾಯಕ್ಕಿರುವ ಮೀಸಲು ಹಕ್ಕುರಕ್ಷಣೆ ಮಾಡಬಹುದು ಎಂಬ ಉದ್ದೇಶ ಪ್ರತಿಭಟನಾಕಾರರಿಗಿತ್ತು.

ಸುಮಾರು ನಾಲ್ಕರಿಂದ ಐದು ಸಾವಿರ ಜನ ಸೇರಿದ್ದರು. ಸೌಜನ್ಯದಿಂದಲೇ ಎಲ್ಲರೂ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಆದರೆ ಪೊಲೀಸರು ಪ್ರತಿಭಟನಾನಿರತರಿಗೆ ಯಾವುದೇ ಸಹಾಯ ಮಾಡಲಿಲ್ಲ. ತಹಸೀಲ್ದಾರ್ ಸ್ಪಂದಿಸಲಿಲ್ಲ. ಹಾಗಾಗಿ ಯಡಿಯೂರಪ್ಪ ಅಥವಾ ರಾಘವೇಂದ್ರ ಮನೆಯಲ್ಲಿದ್ದರೆ ಅವರಿಗೇ ಮನವಿ ನೀಡಬಹುದೆಂದು, ಯಡಿಯೂರಪ್ಪ ನಿವಾಸದತ್ತ ಧಾವಿಸಿದರು. ಆಗ ಪೊಲೀಸರು ಪ್ರತಿಭಟನಾ ನಿರತರನ್ನ ತಡೆದು ಬ್ಯಾರಿಕೇಡ್ ಹಾಕಿದರು. ತಾಲೂಕಿನ ದಂಡಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭದಲ್ಲಿ ಅವರೂ ಸಿಗಲಿಲ್ಲ. ಶಾಸಕರಿಗಾದರೂ ಮನವಿ ನೀಡೋಣ ಎಂದು ಹೋದಾಗ ಅದಕ್ಕೂ ಬಿಡಲಿಲ್ಲ ಎಂದಾಗ ಪ್ರತಿಭಟನಾಕಾರರು ಉದ್ರಿಕ್ತರಾದರು. ಇವರಲ್ಲಿ ಸಾಕಷ್ಟು ಮಹಿಳೆಯರೂ ಇದ್ದರು. ಮಹಿಳೆಯರನ್ನ ಮುಂದೆ ಬಿಟ್ಟರೆ ಮನವಿ ನೀಡಬಹುದು ಎಂಬ ಉದ್ದೇಶ ಪ್ರತಿಭಟನಾಕಾರರಿಗಿತ್ತು. ಆದರೆ ಪೋಲೀಸರು ಮಹಿಳಾ ಸಿಬ್ಬಂದಿಯಿಲ್ಲದೇ ಅವರ ಮೇಲೂ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸಾವಿರಾರು ಜನ ಸೇರಿದಂತಹ ಪ್ರತಿಭಟನೆಯಲ್ಲಿ ಮಹಿಳೆಯರ ಮೇಲೂ ಕೂಡ ದಾಳಿ ಮಾಡಲಾಗಿದೆ. ಪೊಲೀಸರು ಲಾಟಿ ಚಾರ್ಜ್ ಮಾಡಿದ್ದಾರೆ. ಹಾಗಾಗಿ ಪ್ರತಿಭಟನಾಕಾರರು ಕೆರಳಿ ಕಾನೂನು ಕೈಗೆ ತೆಗೆದುಕೊಂಡರು. ಎಲ್ಲೂ ಕೂಡ ಈ ತರದ ಘಟನೆಗಳು ನಡೆಯಬಾರದು. ಮಾಜಿ ಸಿಎಂ ಯಡಿಯೂರಪ್ಪ ಇರಬಹುದು, ಯಾವುದೇ ಶಾಸಕನ ಮನೆ ಇರಬಹುದು, ಅವರ ಮನೆ ಮೇಲೆ ಕಲ್ಲುತೂರಾಟಗಳು ನಡೆಯಬಾರದು. ಆದರೆ ಕೆಲ ಘಟನೆಗಳನ್ನು ನಿಯಂತ್ರಣ ಮಾಡುವುದು ಕಷ್ಟ. ಆದರೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂದು ಹೇಳಿರುವುದು ದುರಾದೃಷ್ಟಕರ. ಇದು ಶುದ್ಧ ಸುಳ್ಳು ಏಕೆಂದರೆ ಮೀಸಲಾತಿ ಹೋರಾಟ ನಿರತ ಪ್ರತಿಭಟನಾಕಾರರಲ್ಲಿ ಎಲ್ಲಾ ಪಕ್ಷದವರು ಇದ್ದರು. ಯಾರೂ ಕೂಡ ಒಂದು ಪಕ್ಷಕ್ಕೆ ಸೀಮಿತ ರಾಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಮುಖಕ್ಕೆ ಮಸಿ ಬೆಳೆಯುವ ಕೆಲಸವನ್ನು ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ನಾವು ಪ್ರಚೋದನೆ ಮಾಡಿಲ್ಲ ರಾಜ್ಯಾದ್ಯಂತ ಬಂಜಾರ ಸಮುದಾಯದ ಪ್ರತಿಭಟನೆ ಆರಂಭವಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಹಸ್ತಕ್ಷೇಪ ಇಲ್ಲ. ಹಿಂದೆ ಕಾಂಗ್ರೆಸ್ ಪಕ್ಷ ಬಂಜಾರ ಸಮುದಾಯ ಸೇರಿ ಎಲ್ಲರಿಗೂ ಸಮಾನ ಮೀಸಲಾತಿ ನೀಡಿತ್ತು. ಈಗ ಬಿಜೆಪಿ ಸರ್ಕಾರದ ವಿರುದ್ಧ ಸಮಾಜ ಸಿಡಿದಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದರು.

ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿ ಪ್ರತಿಭಟನಾಕಾರರ ಮೇಲೆ ಯಾವುದೇ ಕ್ರಮಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರಂತೆ. ಆದರೆ ಇಲ್ಲಿ ನಡೆಯುತ್ತಿರುವ ವಾಸ್ತವವೇ ಬೇರೆ. ಅವರು ಬಾಯಲ್ಲಿ ಹೇಳಿದ್ದೇ ಒಂದು ಇಲ್ಲಿ ನಡೆಯುತ್ತಿರುವುದೇ ಇನ್ನೊಂದು. ಮೂವರು ಹೋರಾಟಗಾರರನ್ನು ಅರೆಸ್ಟ್ ಮಾಡಿ ನಾಲ್ಕು ಎಫ್ಐಆರ್ ಹಾಕಿ ಹಲವು ಜನರನ್ನ ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ಬಹಳ ಜನ ಅಮಾಯಕರಿದ್ದಾರೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಕುಟುಂಬದಿಂದಲೂ ಈ ತರದ ದೌರ್ಜನ್ಯಗಳು ನಡೆದಿವೆ. 1972-78ರಲ್ಲಿ ಎರಡು ಸಲ ಶಿಕಾರಿಪುರ ಶಾಸಕರಾಗಿದ್ದ ಪರಿಶಿಷ್ಟ ಜಾತಿಯ ಕೆ.ಯಂಕಟಪ್ಪ, ಗುಂಡೂರಾವ್ ಸಿಎಂ ಆದಾಗ ತೋಟಗಾರಿಕೆ ಹಾಗೂ ಬಂದಿಖಾನೆ ಸಚಿವರಾಗಿದ್ದರು. ಅಂದು ಇವರ ಮನೆ ಮೇಲೆ ಪುಂಡರು ದಾಳಿ ಮಾಡಿದರು. ಈ ಘಟನೆ ಹಿಂದೆ ಕುಟುಂಬದ ಯಡಿಯೂರಪ್ಪ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ನಂತರ ಯಡಿಯೂರಪ್ಪ ಗೆಲ್ಲುತ್ತಾ ಬಂದರು. ಈಗ ಅವೇ ಘಟನೆಗಳು ಮರುಕಳಿಸುತ್ತಿವೆ ಎಂದು ನಾಗರಾಜ್ ಗೌಡ ಇತಿಹಾಸ ನೆನಪಿಸಿದರು.