ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರ ಜೊತೆಗೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನೂ ನೀಡಿತ್ತು. ಪ್ರಣಾಳಿಕೆ ಜಾರಿ ಸ್ವಲ್ಪ ತಡವಾದರೂ 5 ಗ್ಯಾರಂಟಿ ಯೋಜನೆಗಳ ಜಾರಿ ಮಾಡುವುದು ತಡ ಆಗುವುದಿಲ್ಲ ಎನ್ನುವ ಭರವಸೆನ್ನು ನೀಡಿತ್ತು. ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿ ಜಾರಿ ಬಗ್ಗೆ ಹೇಳಿಕೊಂಡಿದ್ದ ಕಾಂಗ್ರೆಸ್ ಪಕ್ಷ, ಇದೀಗ ಮೊದಲ ಕ್ಯಾಬಿನೆಟ್ನಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಜನರ ಆಶಯದಂತೆ ಕೆಲಸ ಮಾಡುವ ಮುನ್ಸೂಚನೆ ನೀಡಿದೆ. ಆದರೆ ಜನರು ಗ್ಯಾರಂಟಿಗಳು ಜಾರಿ ಆಗುವುದು ಯಾವಾಗ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಅದರಲ್ಲಿ ಬಹು ಬೇಡಿಕೆಯ ಗ್ಯಾರಂಟಿ ಅಂದ್ರೆ 200 ಯೂನಿಟ್ ವಿದ್ಯುತ್ ಉಚಿತ ಹಾಗು ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ.
ಸಾರಿಗೆ ನಿಗಮಗಳ ಎಂಡಿ ಜೊತೆ ಸಾರಿಗೆ ಸಚಿವರ ಸಭೆ

ಗುರುವಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇದೀಗ ಸಾರಿಗೆ ನಿಗಮಗಳ ಸದ್ಯದ ಸ್ಥಿತಿಗತಿ ಹಾಗು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟರೆ ಆಗಬಹುದಾದ ನಷ್ಟ. ಎಲ್ಲಾ ಆಯಾಮದಿಂದಲೂ ಸಚಿವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಭೆಯಲ್ಲಿ ನಾಲ್ಕು ನಿಗಮಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ..? ಯಾವ ನಿಗಮ ಎಷ್ಟು ಆದಾಯ ಗಳಿಸುತ್ತಿವೆ..? ಎಷ್ಟು ನಷ್ಟದಲ್ಲಿವೆ? ಎನ್ನುವ ಮಾಹಿತಿ ಪಡೆದ ಬಳಿಕ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದರೆ ಪ್ರತಿ ವರ್ಷ ಅಂದಾಜು 3200 ಕೋಟಿ ಖರ್ಚು ಆಗಲಿದೆ ಎನ್ನುವ ಮಾಹಿತಿ ಪಡೆದಿದ್ದಾರೆ.
ಕೊರೊನಾ ಕಾಲದಲ್ಲಿ ಸಾರಿಗೆ ಸಂಸ್ಥೆಗಳಿಗೆ ನಷ್ಟ..


ಕೊರೊನಾ ಕಾಲದಲ್ಲಿ ಸಾರಿಗೆ ಸಂಚಾರ ಬಂದ್ ಆಗಿದ್ದರಿಂದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಸರ್ಕಾರ ಸಹಾಯಧನ ನೀಡಿದ್ರೆ ಮಹಿಳೆಯರಿಗೆ ಉಚಿತ ಸಂಚಾರದ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ಕೊರೊನಾ ಕಾಲದ ನಷ್ಟ ಸರಿದೂಗಿಸಲು ಬ್ಯಾಂಕ್ಗಳಲ್ಲಿ ಸಾಲ ಪಡೆಯಲಾಗಿದೆ. ಸಾರಿಗೆ ನಿಗಮದ ಕೆಲವು ಆಸ್ತಿಗಳನ್ನು ಅಡಮಾನ ಇಡಲಾಗಿದೆ. ಈಗಾಗಲೇ ಹಲವು ರೀತಿಯ ಪಾಸ್ಗಳಿಂದ ನಿಗಮಗಳಿಗೆ ಸಾವಿರಾರು ಕೋಟಿ ಹಣ ಬರಬೇಕಿದೆ. ನೌಕರರಿಗೆ ಸಂಬಳ ನೀಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಗ್ಯಾರಂಟಿಗಳ ಜಾರಿಗೆ ಕಸರತ್ತು ಮಾಡಿದ್ದು, ಶಕ್ತಿ ಭವನದಲ್ಲಿ ಯೋಜನಾ ವರದಿಗಳ ಮೇಲೆ ಚರ್ಚೆ ಮಾಡಲಾಗ್ತಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ ನಿರ್ಬಂಧ ಇಲ್ಲ..!

ಸಾರಿಗೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ ಬಳಿಕ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಸಭೆ ಇದೆ. ನಾಳೆ ಸಿಎಂ ಸಿದ್ದರಾಮಯ್ಯ ಫೈನಲ್ ಮಾಡ್ತಾರೆ. ಇಂದಿನ ಸಭೆಯಲ್ಲಿ ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನು ತಿಳಿಸಿದ್ದಾರೆ. ಮಹಿಳೆಯರಿಗೆ ಉಚಿತ ಸಂಚಾರ ಯೋಜನೆ ಜಾರಿ ಮಾಡೋದ್ರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ. 4 ನಿಗಮಗಳಲ್ಲಿ ಒಟ್ಟು 23,978 ವಾಹನಗಳಿವೆ. 1,04650 ಜನ ಸಿಬ್ಬಂದಿಗಳಿದ್ದಾರೆ. 4,449 ಬಸ್‌ಗಳು ಹೊಸದಾಗಿ ಸೇರ್ಪಡೆಯಾಗಲಿದೆ. 82 ಲಕ್ಷದ 51ಸಾವಿರ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಸಿದ್ಧ ಸಾರಿಗೆ ಸಂಸ್ಥೆ ಆಗಿ KSRTC , BMTC ಬೆಳೆದಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಬಸ್ ಇರಲ್ಲ. ನಾಲ್ಕು ನಿಗಮದ ಬಸ್ಗಳಲ್ಲೇ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ. ಇನ್ನು ಉಚಿತ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವ ಸಚಿವರು, ನಾಳೆ ಈ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ನಾವು ಬಿಜೆಪಿಯವರ ಹತ್ರ ಹೇಳಿಸಿಕೊಳ್ಳಬೇಕಿಲ್ಲ. ಅವರು ಪ್ರತಿಭಟನೆ ಮಾಡೋದಕ್ಕೆ ಅವಕಾಶವನ್ನೇ ನೀಡಲ್ಲ ಎಂದಿದ್ದಾರೆ.
ಕೃಷ್ಣಮಣಿ