ಕಾಂಗ್ರೆಸ್ ಪಕ್ಷ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಜನರನ್ನು ಸೆಳೆಯಲು ಒಂದರ ಮೇಲೆ ಒಂದರಂತೆ ಜನಾಕರ್ಷಕ ಘೋಷಣೆಗಳನ್ನು ಮಾಡುತ್ತಿದೆ. ಮೊದಲು 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿದ್ದ ಕಾಂಗ್ರೆಸ್, ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಎರಡನೇ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೂಲಕ ಘೋಷಣೆ ಮಾಡಿಸಿದೆ. ಈ ಮೂಲಕ ಪ್ರತಿಯೊಂದು ಕುಟುಂಬದ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ಹಣವನ್ನು ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ಅಂದರೆ ಪ್ರತಿಯೊಂದು ಕುಟುಂಬಕ್ಕೂ 200 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ಮಾಸಿಕ ಎರಡು ಸಾವಿರ ರೂಪಾಯಿ ಧನಸಹಾಯದ ಭರವಸೆ ನೀಡಿದೆ. ಈ ಮೂಲಕ ಮಹಿಳಾ ಮತಗಳನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ಸುಲಭ ದಾರಿ ಕಂಡು ಕೊಂಡಿದೆ.
ಈ ಬಾರಿ ಪ್ರತಿ ಸಮಾವೇಶಕ್ಕೂ ಒಂದೊಂದು ಪ್ರಣಾಳಿಕೆ ಅಂಶ..!!
ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ನಾವು ಕೈಗೊಳ್ಳುವ ಜನಪರ ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಾರಿ ವಿಭಿನ್ನವಾಗಿ ಪ್ರಣಾಳಿಕೆ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ಒಂದೊಂದು ಅಂಶವನ್ನು ಒಂದೊಂದು ಕಾರ್ಯಕ್ರಮದ ಮೂಲಕ ಘೋಷಣೆ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು ಉಳಿಕೆ ಯೋಜನೆಗಳ ಬಗ್ಗೆ ಒಂದೊಂದು ಬೃಹತ್ ಸಮಾವೇಶ ಮಾಡಿ ಘೋಷಣೆ ಮಾಡಲು ಸಿದ್ಧತೆಯಲ್ಲಿದೆ.

ಎಸ್‌ಸಿ-ಎಸ್‌ಟಿ ಸಮುದಾಯ ಸೆಳೆಯಲು ಬಂಪರ್ ಅಫರ್..!?
ಎಸ್‌ಸಿ-ಎಸ್‌ಟಿ ಸಮುದಾಯಗಳು ತಲತಲಾಂತರಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುವುದು ಇತಿಹಾಸ. ಆದರೆ ಇತ್ತೀಚಿನ ದಿನಗಳಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳೂ ಬಿಜೆಪಿ ಕಡೆಗೆ ವಾಲುತ್ತಿರುವ ಅದೆಷ್ಟೋ ಪ್ರಕರಗಳಿವೆ. ದಲಿತ ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಎಸ್‌ಸಿ ಎಸ್‌ಟಿ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ಆದರೆ ದಲಿತ ಮತಬ್ಯಾಂಕ್ ಛಿದ್ರ ಆಗದಂತೆ ತಡೆಯಲು ಕಾಂಗ್ರೆಸ್ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಜಮೀನು ರಹಿತ ದಲಿತ ಕುಟುಂಬಗಳಿಗೆ ಎರಡು ಎಕರೆ ಜಮೀನು ಕೊಟ್ಟು, ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಮೂಲಕ ಬೋರ್‌ವೆಲ್ ಕೊರೆಸಿ ಕೊಡ್ತೇವೆ ಎಂದು ಗ್ಯಾರಂಟಿ ಕೊಡಲು ಮುಂದಾಗಿದೆ. ಈ ಮೂಲಕ ಕೈತಪ್ಪಿ ಹೋಗಬಹುದಾದ ಎಸ್‌ಸಿ-ಎಸ್‌ಟಿ ಮತಗಳನ್ನು ತಮ್ಮತ್ತ ಸೆಳೆಯುವ ಕಸರತ್ತು ಮಾಡುತ್ತಿದೆ.
ಲೋಕಸಭಾ ಚುನಾವಣೆ ವೇಳೆಯೂ ಕಾಂಗ್ರೆಸ್ ಕೊಟ್ಟಿತ್ತು ಭರವಸೆ..!
ಕಳೆದ ಲೋಕಸಭಾ ಚುನಾವಣೆ ವೇಳೆ ಭಾರತೀಯ ಜನತಾ ಪಾರ್ಟಿ ದೇಶದ ಜನರಿಗೆ ಹಣ ಸಂದಾಯ ಮಾಡುವ ಭರವಸೆ ನೀಡಿತ್ತು. ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿಯಂತೆ ವಾರ್ಷಿಕ 6 ಸಾವಿರ ಹಣವನ್ನು ಸಂದಾಯ ಮಾಡುವ ಭರವಸೆ ಕೊಟ್ಟಿತ್ತು. ಇದೇ ವೇಳೆ ಕಾಂಗ್ರೆಸ್ ಪಕ್ಷ ಕೂಡ ವಾರ್ಷಿಕವಾಗಿ ಪ್ರತಿ ಬಡ ಕುಟುಂಬಕ್ಕೆ 72 ಸಾವಿರ ಹಣ ಸಂದಾಯ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಕೊಟ್ಟ ಭರವಸೆ ಎದುರು ಕಾಂಗ್ರೆಸ್ ಕೊಟ್ಟ ಭರವಸೆ ಸೋಲುಂಡಿತ್ತು. ಬಿಜೆಪಿ ಹೇಳಿದಂತೆ ವಾರ್ಷಿಕ 6 ಸಾವಿರ ಕೊಡುತ್ತಿದೆ. ಆದರೆ ಉಳಿದೆಲ್ಲಾ ಸಬ್ಸಿಡಿಗಳನ್ನು ತೆಗೆದು ಹಾಕಿರುವುದು ಜನಸಾಮಾನ್ಯರ ಕಣ್ಣು ಕೆಂಪಾಗುವಂತೆ ಮಾಡಿದೆ.
ಉಚಿತ ಯೋಜನೆ ಕೊಟ್ಟಷ್ಟು ನಂಬಿಕೆ ಹಾಳಾಗುತ್ತದೆ..!!
ಒಂದು ಪಕ್ಷ ಜನರನ್ನು ಸೆಳೆಯುವುದಕ್ಕೆ ಈ ರೀತಿಯ ಯೋಜನೆ ಜಾರಿ ಸರ್ವೇ ಸಾಮಾನ್ಯ. ಆದರೆ ಇದೇ ರೀತಿಯ ಯೋಜನೆಗಳ ಪಟ್ಟಿ ಕೊಡುತ್ತಲೇ ಹೋದಾಗ ಜನರಿಗೆ ಇದೆಲ್ಲಾ ಸಾಧ್ಯಾನಾ..? ಅನ್ನೋ ಪ್ರಶ್ನಾರ್ಥಕ ಚಿಹ್ನೆ ಹಾಕಿಕೊಳ್ತಾನೆ. ಇಷ್ಟೆಲ್ಲವನ್ನು ಕೊಟ್ಟರೆ ದೇಶ, ರಾಜ್ಯ ಅಭಿವೃದ್ಧಿ ಏನು ಮಾಡ್ತಾರೆ..? ಇವರಿಗೆ ರಾಜ್ಯ ಅಭಿವೃದ್ಧಿ ಮಾಡುವ ಚಿಂತನೆಯೇ ಇಲ್ಲ ಎನ್ನುವ ನಿರ್ಧಾರಕ್ಕೂ ಬರಬಹುದು. ತಳಮಟ್ಟದ ಸಮುದಾಯಗಳಿಗೆ, ಬಡವರ್ಗಕ್ಕೆ ಸೌಲಭ್ಯಗಳನ್ನು ಕೊಡುವುದು ತಪ್ಪೇನಿಲ್ಲ. ಆದರೂ ಕಾಂಗ್ರೆಸ್ ಈ ರೀತಿ ಘೋಷಣೆಗಳನ್ನು ಮಾಡುತ್ತಲೇ ಸಾಗಿದಾಗ ನಂಬಿಕೆಗೆ ಪೆಟ್ಟಾಗುತ್ತದೆ ಎನ್ನುವುದು ರಾಜಕೀಯ ಹಾಗು ಆರ್ಥಿಕ ವಿಶ್ಲೇಷಕರ ಮಾತು.
ಕೃಷ್ಣಮಣಿ