ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರಿ 6 ತಿಂಗಳು ಆಗುತ್ತಿದೆ. ಅಧಿಕಾರ ಹಂಚಿಕೆ ವೇಳೆಯಲ್ಲೇ ಶುರುವಾಗಿದ್ದ ಡಿ.ಕೆ ಶಿವಕುಮಾರ್, ಡಿಸಿಎಂ ಆಗಿ ಅಧಿಕಾರ ಹಿಡಿದರೂ ಕಿರಿಕಿರಿ ಮುಂದುವರಿದಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಸುವ್ಯವಸ್ಥೆ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದರೂ ಡಿ.ಕೆ ಶಿವಕುಮಾರ್ ಬೆಂಬಲಿಗರು ಮಾತ್ರ ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗುತ್ತೆ ಅನ್ನೋ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳುತ್ತಲೇ ಇದ್ದಾರೆ. ಹೀಗಾಗಿ ಇದನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಇನ್ಮುಂದೆ ಶಾಸಕರೇ ಆಗಿರಲಿ ಅಥವಾ ಸಚಿವರೇ ಆಗಿರಲಿ ಯಾರೊಬ್ಬರೂ ಇನ್ಮುಂದೆ ಮಾತನಾಡಬೇಡಿ ಎಂದಿದ್ದಾರೆ.
ದುಬೈ ಪ್ರವಾಸ.. ಸಿಎಂ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ
ಬೆಳಗಾವಿ ನಾಯಕ ಸತೀಶ್ ಜಾರಕಿಹೊಳಿ ತಂಡ ದುಬೈ ಪ್ರವಾಸ ಹಾಗು ಎರಡೂ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರದ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ರಣದೀಪ್ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಸುರ್ಜೇವಾಲ ಸಚಿವರಾಗಲಿ, ಶಾಸಕರಾಗಲಿ ಇನ್ಮುಂದೆ ಪಕ್ಷದ ಶಿಸ್ತನ್ನು ಮೀರಿ ಯಾವುದೇ ಹೇಳಿಕೆ ನೀಡಬಾರದು. ಇಲ್ಲದಿದ್ದರೇ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಬಣ ರಾಜಕೀಯವನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ವಿರುದ್ಧ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗು ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ವೇಳೆ ಇದ್ದ ಒಗ್ಗಟ್ಟು ಹಳಿ ತಪ್ಪಿದ್ಯಾಕೆ..?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವಾಗ ನಿಮ್ಮಲ್ಲಿದ್ದ ಒಗ್ಗಟ್ಟು ಈಗ ಯಾಕಿಲ್ಲ..? ಪಕ್ಷ ಅಧಿಕಾರಕ್ಕೆ ಬಂದು ಕೇವಲ 6 ತಿಂಗಳಲ್ಲೇ ಹೀಗಾದ್ರೆ ಮುಂದೆ ಏನು ಗತಿ..? ಲೋಕಸಭಾ ಚುನಾವಣೆ ಹತ್ತಿರ ಇರೋದನ್ನ ಮರೆತ್ತಿದ್ದೀರಾ..? ಅಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಪ್ರಶ್ನಿಸಿದ್ದಾರೆ. ಇಬ್ಬರು ಮನಸ್ಸು ಮಾಡಿದ್ರೆ ಆರಂಭದಲ್ಲೇ ಶಾಸಕರು ಹಾಗು ಸಚಿವರ ಹೇಳಿಕೆಗಳಿಗೆ ಕಡಿವಾಣ ಹಾಕಬಹುದಿತ್ತು. ಪಕ್ಷಕ್ಕೆ ಇಷ್ಟು ದೊಡ್ಡ ಮಟ್ಟದ ಡ್ಯಾಮೇಜ್ ಆಗುತ್ತಿರಲಿಲ್ಲ. ಪವರ್ ಶೇರಿಂಗ್ ವಿಚಾರದ ಬಗ್ಗೆ ನಿಮಗೆ ನಾವು ಮಾತು ಕೊಟ್ಟಿದ್ದೇವೆ. ಅದನ್ನ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರೈಮಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ.
ಕಾಂಗ್ರೆಸ್ ಹುಳುಕು ಮುಚ್ಚಲು ಬಂದರೂ ಕಮಲ ಕೆಂಗಣ್ಣು..
ಕಾಂಗ್ರೆಸ್‌ನಲ್ಲಿ ಶುರುವಾಗಿದ್ದ ಕಿತಾಪತಿಯನ್ನು ಸರಿ ಮಾಡಲು ದೆಹಲಿಯಿಂದ ಕೆ.ಸಿ ವೇಣುಗೋಪಾಲ್ ಹಾಗು ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬಂದಿರುವುದನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡಿದ್ದು, ಪಂಚ ರಾಜ್ಯಕ್ಕೆ ಹಣ ಸರಬರಾಜು ಮಾಡಿಸಲು ಬಂದಿದ್ದಾರೆ ಅಂತ ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆರೋಪಿಸಿದ್ದಾರೆ. ಐಟಿ ರೇಡ್‌ನಿಂದ ಸಿಕ್ಕಿರುವ ಹಣ ಯಾರದ್ದು ಎಂದು, ಈ ಇಬ್ಬರು ಬಹಿರಂಗ ಪಡಿಸಬೇಕು ಅಂತ ಆಗ್ರಹಿಸಿದ್ರು. ಇನ್ನು ಎಐಸಿಸಿ ನಾಯಕರ ರಾಜ್ಯ ಭೇಟಿಗೆ ಪ್ರತಿಪಕ್ಷ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಕುಚುಕು ಕಲೆಕ್ಷನ್ ಏಜೆಂಟ್ಸ್ ಅಂತ ಫೋಸ್ಟರ್ ಮಾಡಿದ್ದಾರೆ. ತನ್ನೆಲ್ಲಾ ಖರ್ಚುಗಳಿಗೂ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ ಎಂಬುದನ್ನು ಕಾಂಗ್ರೆಸ್ಸೇ ಪದೇಪದೆ ಸಾಬೀತುಪಡಿಸುತ್ತಿದೆ ಎಂದು ಟೀಕಿಸಿದೆ.











