ರಾಜ್ಯ ಕಾಂಗ್ರೆಸ್ (Congress) ಪಕ್ಷದ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಮೊದಲಿಗೆ ಬಳಸಲಾದ ಭಾರತದ ಮ್ಯಾಪ್ (India map) ವಿರೂಪಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಕಾಂಗ್ರೆಸ್ ನ ಈ ವರ್ತನೆ ಬಗ್ಗೆ ತೀವ್ರ ಟೀಕೆ ಕೇಳಿಬರುತ್ತಿದ್ದಂತೆ ಕಾಂಗ್ರೆಸ್ ಅಲರ್ಟ್ ಆಗಿದ್ದು ಪೋಸ್ಟ್ ಡಿಲೀಟ್ ಮಾಡಿ, ಸರಿಪಡಿಸಿದ ಪೋಸ್ಟರ್ ಹಾಕಿದೆ.
ಈ ವಿರೂಪಗೊಂಡಿದ್ದ ಭಾರತದ ನಕ್ಷೆಯಲ್ಲಿ ದೇಶದ ಭಾಗವೇ ಆಗಿರುವ ಕೆಲವು ಭಾಗಗಳನ್ನು ಕೈಬಿಡಲಾಗಿತ್ತು.ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (POK) ಮತ್ತು ಅಕ್ಸಾಯ್ ಚಿನ್ ಗಳನ್ನು ತೆಗೆದುಹಾಕಲಾಗಿದೆ. ಇದು ಪಾಕಿಸ್ತಾನದ ಅಜೆಂಡಾ ಬಿತ್ತಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಮತ್ತು ಜಮ್ಮು ಕಾಶ್ಮೀರದಲ್ಲಿ 370ನೇ ಜಾರಿಗೆ ತರಲು ಹುನ್ನಾರ ನಡೆಸಿದೆ ಎಂದು ಬಿಜೆಪಿ ಪಕ್ಷ (BJP) ಹಾಗೂ ನೆಟ್ಟಿಗರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಇದೊಂದು ಕಾಂಗ್ರೆಸ್ ಸರ್ಕಾರದ ಸಾಧನೆ ತೋರಿಸಿಕೊಳ್ಳುವ ಪೋಸ್ಟರ್ ಆಗಿದ್ದು, ಸಿಎಂ ಮತ್ತು ಡಿಸಿಎಂ ಫೋಟೋಯಿದ್ದು, ಜೊತೆಗೆ ಭಾರತದ ನಕ್ಷೆಯಿದೆ. ಈ ರೀತಿಯ ನಕ್ಷೆ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಯಾವ ಸಂದೇಶ ರವಾನಿಸುತ್ತಿದೆ ಎಂದು ಕಾಂಗ್ರೆಸ್ ಪೋಸ್ಟರ್ ವಿರುದ್ಧ ಆಕ್ರೋಶ ಹೆಚ್ಚಾಗಿದೆ.