ರಾಜ್ಯದಲ್ಲಿ ಒಂದು ಕಡೆ, ಕರೋನಾ ಎರಡನೇ ಅಲೆಯ ಸಾವು ನೋವಿನ ನಡುವೆ, ಜನರ ನೋವಿಗೆ ಸ್ಪಂದಿಸಬೇಕಾದ ಆಡಳಿತಾರೂಢ ಸರ್ಕಾರ, ಅದರ ಬದಲಾಗಿ ನಾಯಕತ್ವ ಬದಲಾವಣೆಯ ಸರ್ಕಸ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಮತ್ತು ಆಡಳಿತ ಪಕ್ಷ ಹೊಣೆಗೇಡಿತವನ್ನು ತರಾಟೆಗೆ ತೆಗೆದುಕೊಳ್ಳಬೇಕಾದ, ಜನಪರ ದನಿ ಎತ್ತಬೇಕಾದ ಕಾಂಗ್ರೆಸ್ ಕೂಡ ತನ್ನ ಹೊಣೆಗಾರಿಕೆ ಮರೆತು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಯುವ ಬಗ್ಗೆ ತಲೆಕೆಡಿಸಿಕೊಂಡಿದೆ.
ಆಡಳಿತರೂಢ ಬಿಜೆಪಿ ಪಾಳೆಯದಲ್ಲಿ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾಯಿಸಬೇಕು ಎಂಬ ಕೂಗು ಜೋರಾಗಿ, ಅದು ದೆಹಲಿಗೆ ತಲುಪಿ, ದೆಹಲಿಯ ವರಿಷ್ಠರು ಪಕ್ಷದ ರಾಜ್ಯ ಉಸ್ತುವಾರಿ ಕಾರ್ಯದರ್ಶಿಯನ್ನೇ ಖುದ್ದು ಬೆಂಗಳೂರಿಗೆ ಕಳಿಸಿ, ಮೂರು ದಿನಗಳ ಆಹೋರಾತ್ರಿ ಸಭೆ, ಸಮಾಲೋಚನೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಿ ವಾಪಸ್ ದೆಹಲಿಗೆ ತೆರಳಿದ್ದಾರೆ. ಅಷ್ಟೆಲ್ಲಾ ಆದ ಬಳಿಕವೂ ನಾಯಕತ್ವ ಬದಲಾವಣೆ, ಗುಂಪುಗಾರಿಕೆ, ಬಣ ರಾಜಕಾರಣದ ವಿಷಯದಲ್ಲಿ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ.
ರಾಜ್ಯದ ಜನತೆ ಕೋವಿಡ್ ಸಾವು ನೋವಿನ ನಡುವೆ, ಲಾಕ್ ಡೌನ್ ಸೃಷ್ಟಿಸಿದ ಉದ್ಯೋಗವಿಲ್ಲದ, ದುಡಿಮೆ ಇಲ್ಲದ ಸಂಕಷ್ಟದ ನಡುವೆ ಹೈರಾಣಾಗುತ್ತಿರುವಾಗ, ಲಸಿಕೆ ಕೊರತೆ, ಕೋವಿಡ್ ಸೋಂಕಿತರ ಆರೈಕೆ, ಚಿಕಿತ್ಸೆಯ ವಿಷಯದಲ್ಲಿ ತಿಂಗಳುಗಳ ಬಳಿಕವೂ ಮುಂದುವರಿದಿರುವ ಸಾಕಷ್ಟು ಸಮಸ್ಯೆಗಳ ನಡುವೆ ಬೇಯುತ್ತಿರುವಾಗ, ಜನರ ಸಂಕಷ್ಟ ದೂರ ಮಾಡುವ, ವ್ಯವಸ್ಥೆಯ ಕೊರತೆಗಳನ್ನು ಸರಿಪಡಿಸಿ ಜೀವ ಉಳಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಹೊತ್ತಲ್ಲಿ ಆಡಳಿತ ಪಕ್ಷವೊಂದು ಹೀಗೆ ಎಲ್ಲಾ ಮರೆತು, ಮತಹಾಕಿದ ಜನರನ್ನೇ ಕಡೆಗಾಣಿಸಿ ಕುರ್ಚಿ ಕದನದಲ್ಲಿ ಮುಳುಗಿರುವ ಸಂಗತಿ ದೇಶಾದ್ಯಂತ ವ್ಯಾಪಕ ಟೀಕೆಗೆ, ಆಕ್ರೋಶಕ್ಕೆ ಕಾರಣವಾಗಿದೆ.

ಇಂತಹ ಹೊತ್ತಲ್ಲಿ, ಆಡಳಿತ ಪಕ್ಷದ ಮೂತಿಗೆ ತಿವಿದು ಬುದ್ದಿ ಹೇಳಿ, ನಾಚಿಕೆಗೇಡಿನ ಕುರ್ಚಿ ಕದನ ಬಿಟ್ಟು ಜನರ ಕಷ್ಟದ ಕಡೆ ಗಮನ ಕೊಡಿ ಎಂದು ಜನಪರವಾಗಿ ದನಿ ಎತ್ತಬೇಕಾದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಸಿನ ನಾಯಕರು, ಎರಡು ವರ್ಷದ ಬಳಿಕ, ಚುನಾವಣೆ ಬಂದು, ಆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದು, ಅಧಿಕಾರ ಹಿಡಿಯುವ ಮಟ್ಟಿನ ಸ್ಥಾನ ಗಳಿಸಿದಾಗ ಚರ್ಚಿಸಬೇಕಾದ ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯವನ್ನು ಈಗ ಎತ್ತಿಕೊಂಡು ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ! ಆ ಮೂಲಕ ಜನರನ್ನು ಮರೆತು ಅಧಿಕಾರ ಮತ್ತು ಕುರ್ಚಿಯ ವಿಷಯದಲ್ಲಿ ಮೈಮರೆಯುವ ವಿಷಯದಲ್ಲಿ ಬಿಜೆಪಿಗಿಂತ ತಾವೇನೂ ಭಿನ್ನವಲ್ಲ ಎಂಬುದನ್ನು ರಾಜ್ಯ ಕಾಂಗ್ರೆಸ್ ಸಾಬೀತು ಮಾಡುತ್ತಿದೆ.
ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಜಮೀರ್ ಅಹಮದ್ ಖಾನ್, ತಮ್ಮ ಎಂದಿನ ಚಾಳಿಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಾಚಾಮಗೋಚರ ಹೊಗಳುವ ಭರದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂಬ ಹೇಳಿಕೆ ನೀಡಿದ್ದರು. ಸಹಜವಾಗೇ ಈ ಹೇಳಿಕೆ ಕಾಂಗ್ರೆಸ್ಸಿನ ಸಿದ್ದರಾಮಯ್ಯ ವಿರೋಧಿ ಪಾಳೆಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಂಪ್ರದಾಯವಿದೆ. ಹಾಗಾಗಿ ಯಾರೂ ಇಂತಹ ಹೇಳಿಕೆಗಳನ್ನು ನೀಡಬಾರದು. ಹದ್ದುಬಸ್ತಿನಲ್ಲಿರಬೇಕು ಎಂದು ಎಚ್ಚರಿಕೆ ನೀಡಿದ್ದರು.

ಆದರೆ, ಸ್ವತಃ ಕೆಪಿಸಿಸಿ ಅಧ್ಯಕ್ಷರ ಅಂತಹ ಎಚ್ಚರಿಕೆಯನ್ನೂ ಗಾಳಿಗೆ ತೂರಿದ ಜಮೀರ್ ಮತ್ತೆ, “ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬುದು ಪಕ್ಷದ ಅಭಿಪ್ರಾಯವಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯದ ಜನತೆಯ ಭಾವನೆಯನ್ನು ನಾನು ಹೇಳಿದ್ದೇನೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಾನು ಅಥವಾ ಡಿ.ಕೆ.ಶಿವಕುಮಾರ್ ನಿರ್ಧಾರ ಮಾಡಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ ರಾಜ್ಯದ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾನು ಹೇಳಿದ್ದೇನೆ ಅಷ್ಟೇ” ಎನ್ನುವ ಮೂಲಕ ತಮ್ಮ ಹೇಳಿಕೆಗೆ ಕಟ್ಟುಬಿದ್ದಿದ್ದರು. ಅದರ ಬೆನ್ನಲ್ಲೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಕೂಡ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಕೇವಲ ಶಾಸಕ ಜಮೀರ್ ಮಾತಲ್ಲ. ಅದು ಕಾಂಗ್ರೆಸ್ ಮುಖಂಡರ ಮತ್ತು ರಾಜ್ಯದ ಜನತೆಯ ಆಶಯ ಎಂದು ಹಿಟ್ನಾಳ್ ಹೇಳುವ ಮೂಲಕ, ಜಮೀರ್ ಎತ್ತಿದ್ದ ಮುಖ್ಯಮಂತ್ರಿ ಚರ್ಚೆಯನ್ನು ಇನ್ನಷ್ಟು ಬೆಳೆಸಿದ್ದರು.
ಜಮೀರ್ ಮತ್ತು ಹಿಟ್ನಾಳ್ ಅವರ ಮಾತುಗಳು ಎಷ್ಟರಮಟ್ಟಿಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು ಎಂದರೆ; ಸ್ವತಃ ಕೆಪಿಸಿಸಿ ಅಧ್ಯಕ್ಷರು ಸಿಡಿಮಿಡಿಗೊಂಡು, ಜಮೀರ್ ಅವರನ್ನು ಕರೆಸಿ ವಿಚಾರಿಸಿರುವುದಾಗಿ ಹೇಳಿದ್ದರು. ಆದರೆ, ಹಾಗೆ ತಮ್ಮನ್ನು ಕರೆಸಿ ವಿಚಾರಿಸಿ, ಎಚ್ಚರಿಕೆ ನೀಡಿರುವ ವಿಷಯವನ್ನು ಜಮೀರ್ ಮಾತ್ರ ಅಲ್ಲಗಳೆದಿದ್ದಾರೆ.

ಈ ನಡುವೆ, ಪಕ್ಷದ ಹೈಕಮಾಂಡ್ ಸೋಮವಾರ ಪಕ್ಷದ ಎಲ್ಲಾ ನಾಯಕರಿಗೆ ಮತ್ತು ಶಾಸಕರಿಗೆ ಕಟ್ಟೆಚ್ಚರದ ಸೂಚನೆ ರವಾನಿಸಿದ್ದು, ಮುಂದಿನ ಮುಖ್ಯಮಂತ್ರಿಯ ಕುರಿತು ಯಾವುದೇ ನಾಯಕರು ಹೇಳಿಕೆ ನೀಡಬಾರದು.ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಕಾಂಗ್ರೆಸ್ ಶಾಸಕರಿಗೆ ಮತ್ತು ಎಲ್ಲಾ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿರುವ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಂದೆ ಸಿಎಂ ಯಾರಾಗಬೇಕೆಂದು ಅಂದಿನ ಶಾಸಕರು ನಿರ್ಧರಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನ ಮುಂದಿನ ಸಿಎಂ ಅಭ್ಯರ್ಥಿಯ ಬಗ್ಗೆ ಯಾವುದೇ ಹೇಳಿಕೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಸಿಎಂ ಕುರಿತ ಚರ್ಚೆಗೆ ವಿರಾಮ ಹಾಕುವ ಯತ್ನ ಹೈಕಮಾಂಡ್ ಕಡೆಯಿಂದ ನಡೆದಿದೆ.
ಆದರೆ, ಹೈಕಮಾಂಡ್ ಹೇಳಿಕೆ ಹೊರಬೀಳುವ ಹೊತ್ತಿಗಾಗಲೇ ಈ ಮೂರ್ನಾಲ್ಕು ದಿನಗಳಲ್ಲಿ ಜಮೀರ್ ಮತ್ತು ಹಿಟ್ನಾಳ್ ಅವರ ಹೇಳಿಕೆಗಳು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಂದಿನ ಮುಖ್ಯಮಂತ್ರಿ ಕುರ್ಚಿಗಾಗಿ ಈಗಾಗಲೇ ತೆರೆಮರೆಯ ಸಮರ ಆರಂಭವಾಗಿದೆ. ಪಕ್ಷದ ಅಧ್ಯಕ್ಷರಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅತಿ ಹೆಚ್ಚು ಸ್ಥಾನದ ಮೂಲಕ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಪ್ರಬಲ ಪ್ರತಿಪಕ್ಷವಾಗಿ, ಸಕ್ರಿಯ ಹೋರಾಟ, ಜನಪರ ದನಿಯಾಗಿ ಕೆಲಸ ಮಾಡುವ ತಂತ್ರಗಾರಿಕೆ ಹೆಣೆಯುವುದಕ್ಕೆ ಆದ್ಯತೆ ನೀಡುವ ಬದಲು, ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಸಿಎಂ ಗಾದಿಗೆ ರೇಸಿನಲ್ಲಿರುವ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಡಾ ಎಂ ಬಿ ಪಾಟೀಲ್ ಮತ್ತಿತರರನ್ನು ಹೇಗಾದರೂ ಬದಿಗೆ ಸರಿಸಿ, ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ತಾವೇ ಎಂದು ಘೋಷಿಸಿಕೊಂಡು ಚುನಾವಣೆಗೆ ಹೋಗಬೇಕು ಎಂಬುದು ಡಿ ಕೆ ಶಿವಕುಮಾರ್ ಯೋಜನೆ.
ಆದರೆ, ಅದಕ್ಕೆ ಪ್ರತಿಯಾಗಿ ಮತ್ತೊಂದು ಅವಧಿಗೆ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯೊಂದಿಗೆ ಸಿದ್ದರಾಮಯ್ಯ ಕೂಡ ಸಾಕಷ್ಟು ತಂತ್ರ ಹೆಣೆಯುತ್ತಿದ್ದಾರೆ. ಅದರಲ್ಲೂ ಅವರಿಗಿಂತ ಈ ವಿಷಯದಲ್ಲಿ ಅವರ ಹಿಂಬಾಲಕರು ಹೆಚ್ಚು ಉತ್ಸುಕರಾಗಿದ್ದಾರೆ. ಹಾಗಾಗಿ ಡಿ ಕೆ ಶಿವಕುಮಾರ್ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಪ್ರಯತ್ನಗಳು ಬಿರುಸುಗೊಂಡಿವೆ. ಆದರೆ, ಅಂತಹ ವಿಷಯವನ್ನು ಬಹಿರಂಗವಾಗಿ ಚರ್ಚಿಸಲು ಇದು ಸಕಾಲವಲ್ಲ ಎಂಬುದು ಸಿದ್ದರಾಮಯ್ಯ ಅಭಿಪ್ರಾಯ.
ಹಾಗೆಂದೇ ಅವರು, ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ವಿಷಯ ಚರ್ಚೆಗೆ ಇದು ಸಕಾಲವಲ್ಲ. ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನೆಲ್ಲೂ ಹೇಳಿಲ್ಲ. ನಮ್ಮಲ್ಲಿ ಯಾವುದೇ ಬಣ ಇಲ್ಲ, ಇರುವುದು ಒಂದೇ ಬಣ. ಡಿಕೆಶಿ ಬಣವೂ ಇಲ್ಲ, ಸಿದ್ದರಾಮಯ್ಯ ಬಣವೂ ಇಲ್ಲ. ನಮ್ಮಲ್ಲಿರುವುದು ಒಂದೇ ಬಣ, ಅದು ಅಖಿಲ ಭಾರತ ಕಾಂಗ್ರೆಸ್ ಬಣ ಎಂದಿದ್ದಾರೆ.

ಈ ನಡುವೆ, ಜಮೀರ್ ಮತ್ತು ಹಿಟ್ನಾಳ್ ಹೇಳಿಕೆಗಳು, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅವರ ಪ್ರತಿಕ್ರಿಯಗಳ ನಡುವೆಯೇ, ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅದರ ಬೆನ್ನಲ್ಲೇ ಇದೀಗ ಪಕ್ಷದ ಹೈಕಮಾಂಡ್ ನಿಂದ ಸಿಎಂ ವಿಷಯದಲ್ಲಿ ಯಾವುದೇ ಹೇಳಿಕೆ ನೀಡದಂತೆ ಖಡಕ್ ಎಚ್ಚರಿಕೆ ದೆಹಲಿಯಿಂದ ಬಂದಿದೆ.
ಆದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆ, ಕಾಂಗ್ರೆಸ್ ಪಕ್ಷ ಯಾವ ವಿಶ್ವಾಸದ ಮೇಲೆ ಎರಡು ವರ್ಷಗಳ ಮುನ್ನವೇ ಸಿಎಂ ಅಭ್ಯರ್ಥಿಯ ಚರ್ಚೆಯನ್ನು ಆರಂಭಿಸಿದೆ ಎಂಬುದು. ರಾಜ್ಯ ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳು, ಕೇಳಿಬರುತ್ತಿರುವ ಭಾರೀ ಭ್ರಷ್ಟಾಚಾರ, ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೀಗೆ, ಪರಿಶ್ರಮವೇ ಇಲ್ಲದೆ ಅಧಿಕಾರದ ಹಗಲುಗನಸು ಕಾಣತೊಡಗಿದೆಯೇ? 2009-2013ರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ, ಅಧಿಕಾರ ದುರುಪಯೋಗ, ಗುಂಪುಗಾರಿಕೆ, ಬಣ ರಾಜಕಾರಣದಂತಹ ಕಾರಣಗಳಿಂದಾಗಿಯೇ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿರುವಾಗಲೇ ಅಕ್ರಮ ಹಗರಣದ ಆರೋಪ ಹೊತ್ತು ಜೈಲಿಗೆ ಹೋಗಿದ್ದರು. ಬಿಜೆಪಿಯ ಅಂತಹ ನಾಚಿಕೆಗೇಡಿನ ಆಡಳಿತದಿಂದ ರೋಸಿ ಹೋಗಿದ್ದ ರಾಜ್ಯದ ಜನತೆ 2013ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ ಲಾಭ ಕಾಂಗ್ರೆಸ್ಸಿಗೆ ವರವಾಗಿತ್ತು. ಹಾಗಾಗಿ ಪಕ್ಷ ಅನಾಯಾಸವಾಗಿ ಅಧಿಕಾರಕ್ಕೆ ಬಂದಿತ್ತು ಮತ್ತು ಸಿದ್ದರಾಮಯ್ಯ ಸಿಎಂ ಆಗಿದ್ದರು.
ಇದೀಗ ಮತ್ತೆ ಯಡಿಯೂರಪ್ಪ ಆಡಳಿತ ಸಾಗುತ್ತಿರುವ ರೀತಿ ಗಮನಿಸಿದರೆ, ಮತ್ತೆ ಹಿಂದಿನ ಹಾದಿಯಲ್ಲೇ ಸಾಗುತ್ತಿರುವಂತಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳ ಆರೋಪವನ್ನು ಯಡಿಯೂರಪ್ಪ ವಿರುದ್ಧ ಅವರ ಸ್ವಪಕ್ಷೀಯರೇ ಮಾಡುತ್ತಿದ್ಧಾರೆ. ದಿನಕ್ಕೊಂದು ಹಗರಣಗಳು ಬಯಲಾಗತೊಡಗಿವೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಮತ್ತೊಮ್ಮೆ ಜೈಲಿಗೆ ಹೋಗಲಿದ್ದಾರೆ ಎಂದೂ ಬಿಜೆಪಿಯ ನಾಯಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ.

ಬಿಜೆಪಿಯ ಈ ಬೆಳವಣಿಗೆಗಳು, ಕಳೆದ ಎರಡು ವರ್ಷಗಳಿಂದ; ತೀರಾ ಕಳೆದ ವಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ರಾಜ್ಯವ್ಯಾಪಿ ಹೋರಾಟ ಬಿಟ್ಟರೆ, ಬಹುತೇಕ ನಿಷ್ಕ್ರಿಯವಾಗಿದ್ದ ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಹುಮ್ಮಸ್ಸು ಮೂಡಿಸಿದಂತಿದೆ. ಹಾಗಾಗಿಯೇ ದಿಢೀರನೇ ಸಿಎಂ ಸ್ಥಾನದ ಚರ್ಚೆ ಆರಂಭವಾಗಿದೆ. ಆದರೆ, ಕಾಂಗ್ರೆಸ್ ನೆನಪಿಡಬೇಕಾದುದು, ಕನಿಷ್ಠ ಮುಂದಿನ ಎರಡು ವರ್ಷ ಆಡಳಿತ ಸರ್ಕಾರದ ಲೋಪಗಳು, ಅಕ್ರಮಗಳು, ಜನವಿರೋಧಿ ನೀತಿ-ನಿಲುವುಗಳನ್ನು ಜನರ ಮುಂದಿಟ್ಟು ಹೋರಾಟ ರೂಪಿಸುವುದು ಹೇಗೆ ಎಂಬುದನ್ನು. ಆ ಮೂಲಕ ರಾಜ್ಯದ ಜನರ ವಿಶ್ವಾಸ ಗಳಿಸುವುದನ್ನು.
ಆದರೆ, ಬಿಜೆಪಿಗೆ ಪ್ರತಿಪಕ್ಷವಾಗಿ ಕಾಂಗ್ರೆಸ್ಸಿನ ಆಡಳಿತದ ವಿರುದ್ಧ ಹೋರಾಡುವಷ್ಟು ಅನುಭವವಾಗಲೀ, ಬದ್ಧತೆಯಾಗಲೀ ಸ್ವತಃ ಆಡಳಿತ ನಡೆಸಲು ಇಲ್ಲ. ಹಾಗೇ ಸದಾ ಅಧಿಕಾರದಲ್ಲಿ ಅಧಿಕಾರ ಚಲಾಯಿಸುವುದನ್ನು ಕಲಿತಿರುವ ಕಾಂಗ್ರೆಸ್ಸಿಗೆ ಸಕ್ರಿಯ ಪ್ರತಿಪಕ್ಷವಾಗಿ ಜನಪರ ದನಿ ಎತ್ತುವುದು ಗೊತ್ತಿಲ್ಲ ಎಂಬ ಮಾತಿನಂತೆ, ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ಅಧಿಕಾರದ ಕುರ್ಚಿಯ ಕನಸೇ ವಿನಃ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಈ ಸಿಎಂ ಅಭ್ಯರ್ಥಿ ವಿವಾದ ಅತ್ಯುತ್ತಮ ನಿದರ್ಶನ.











